ಬೆಂಗಳೂರು: ಬಹುನಿರೀಕ್ಷಿತ, ಬಹು ವಿವಾದಿತ ಜಾತಿ ಗಣತಿ ವರದಿಯನ್ನು (Caste Census report) ಕೊನೆಗೂ ರಾಜ್ಯ ಸರ್ಕಾರ ಸ್ವೀಕಾರ ಮಾಡಿದೆ. ಬೇಕು, ಬೇಡಗಳ ಮಧ್ಯೆಯೇ ಸಿಎಂ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಆಯೋಗದ (Backward Classes Commission) ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರಿಂದ ಸ್ವೀಕಾರ ಮಾಡಿದ್ದಾರೆ. ಆದರೆ, ಕಾಂಗ್ರೆಸ್‌ನ ಕೆಲ ಸಚಿವರು, ಶಾಸಕರಿಂದಲೇ ಇದಕ್ಕೆ ವಿರೋಧ ವ್ಯಕ್ತವಾಗಿದ್ದರಿಂದ ಸಿಎಂ ಸಿದ್ದರಾಮಯ್ಯ ಅವರು ಜೇನುಗೂಡಿಗೆ ಕೈಹಾಕಿದರೇ ಎಂಬ ಚರ್ಚೆಗಳೂ ಪ್ರಾರಂಭವಾಗಿವೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಇದು ಹಿಂದುಳಿದ ವರ್ಗಗಳ ಆಯೋಗ ಸಿದ್ಧ ಮಾಡಿದ ವರದಿಯಾಗಿದೆ. ವೈಜ್ಞಾನಿಕವಾಗಿಯೇ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ವರದಿ ಕುರಿತಾದ ವಿವಾದ ಹಾಗೂ ಆಕ್ಷೇಪಗಳಿಗೆ ನಾನು ಉತ್ತರ ನೀಡುವುದಿಲ್ಲ. ಅದು ಸರ್ಕಾರಕ್ಕೆ ಬಿಟ್ಟ ವಿಚಾರವಾಗಿದೆ ಎಂದು ಹೇಳಿದ್ದಾರೆ.
ವರದಿಯಲ್ಲಿ ಎಲ್ಲರ ಸಹಿ ಇದೆ
2014-15ರಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಶಿಕ್ಷಕರು ಹಾಗೂ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ಮಾಡಲಾಗಿತ್ತು. ತಾಂತ್ರಿಕ ಸಮಸ್ಯೆಯಿಂದಾಗಿ ವರದಿ ನೀಡಲಾಗಿರಲಿಲ್ಲ. ಸಿಎಂ ಸಿದ್ದರಾಮಯ್ಯ ಅವರಿಗೆ ವರದಿ ನೀಡಲಾಗಿದೆ. ವರದಿಯ ಪ್ರಮುಖ ಅಂಶವನ್ನು ಹೇಳಲಾಗಿಲ್ಲ. ಸರ್ಕಾರ ಈ ವರದಿಯನ್ನು ಕ್ಯಾಬಿನೆಟ್ ಮುಂದೆ ತರಲಿದೆ. ಇನ್ನು ಇದರ ಬಗ್ಗೆ ಸರ್ಕಾರ ತೀರ್ಮಾನ ಮಾಡಲಿದೆ. ವರದಿಯ ಒಂದೆರಡು ಅಂಶಗಳು ಲೀಕ್ ಆಗಿವೆ ಎಂದು ಜಯಪ್ರಕಾಶ್ ಹೆಗ್ಡೆ ಒಪ್ಪಿಕೊಂಡಿದ್ದಾರೆ. ಅಲ್ಲದೆ, ವರದಿಯಲ್ಲಿ ಎಲ್ಲರ ಸಹಿ ಇದೆ ಎಂದು ಹೇಳಿದ್ದಾರೆ.
ಹಾಲಿ ವರದಿಯಲ್ಲೇನಿದೆ?
ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರ ಹೇಳಿಕೆ ಅನುಸಾರ ಇದು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಸಮಗ್ರ ವರದಿಯಾಗಿದೆ. ಅಲ್ಲದೆ, ಜಾತಿವಾರು ಜನಸಂಖ್ಯೆ ವಿವರವನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ.
ವರದಿಯಲ್ಲಿನ ಪ್ರಮುಖ ಅಂಶಗಳು
- ಜಾತಿವರ್ಗಗಳ ಪ್ರಮುಖ ಲಕ್ಷಣಗಳು ( ಎಸ್‌ಸಿ, ಎಸ್‌ಟಿ ಹೊರತುಪಡಿಸಿ)
- ಜಾತಿವರ್ಗಗಳ ಪ್ರಮುಖ ಲಕ್ಷಣಗಳು ( ಎಸ್‌ಸಿ ಸಂಪುಟ ೧)
- ಜಾತಿ ವರ್ಗಗಳ ಪ್ರಮುಖ ಲಕ್ಷಣಗಳು ( ಎಸ್‌ಟಿ ಸಂಪುಟ ೧)
- ವಿಧಾನಸಭಾ ಕ್ಷೇತ್ರವಾರು ಜಾತಿವಾರು ಅಂಕಿ ಅಂಶಗಳು
- ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2015ರ ದತ್ತಾಂಶದ ವರದಿ 2024
ಒಟ್ಟು 13 ಪ್ರತಿಗಳ ಸಮಗ್ರ ಸಂಪುಟ ವರದಿ ಇದಾಗಿದೆ. ಶೀಲ್ಡ್ ಬ್ಯಾಕ್ಸ್‌ನಲ್ಲಿ ವರದಿ ಪ್ರತಿಯನ್ನು ತರಲಾಗಿತ್ತು. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹಾಗೂ ಆಯೋಗದ ಸದಸ್ಯರು ವರದಿ ಸಲ್ಲಿಕೆ ಮಾಡಿದ್ದಾರೆ.
1) ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2015 ಸಮಗ್ರ ರಾಜ್ಯ ವರದಿ
2) ಜಾತಿವಾರು ಜನಸಂಖ್ಯೆ ವಿವರ – ೧ ಸಂಪುಟ
3) ಜಾತಿ / ವರ್ಗಗಳ ಲಕ್ಷಣಗಳು( ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನ ಹೊರತು ಪಡಿಸಿ)
4) ಜಾತಿ / ವರ್ಗಗಳ ಪ್ರಮುಖ ಲಕ್ಷಣಗಳು ( ಪರಿಶಿಷ್ಟ ಜಾತಿಗಳು)
5) ಜಾತಿ ವರ್ಗಗಳ ಪ್ರಮುಖ ಲಕ್ಷಣಗಳು ( ಪರಿಶಿಷ್ಟ ಪಂಗಡಗಳು)
6) ವಿಧಾನಸಭಾ ಕ್ಷೇತ್ರಗಳ ಜಾತಿವಾರು ಅಂಕಿ ಅಂಶಗಳು (ಎರಡು ಸಿಡಿಗಳು)
7) ಸಾಮಾಜಿಕ ಮತ್ತು ಶೈಕ್ಷಣಿಕ ಸಂಸ್ಥೆ 2015 ರ ದತ್ತಾಂಶಗಳ ಅಧ್ಯಯನ ವರದಿ 2024
ಏನಿದು ಕಾಂತರಾಜು ವರದಿ?
2013ರಿಂದ 2018ರವರೆಗೆ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು 2014 -15ರಲ್ಲಿ ನಮ್ಮ ಸರ್ಕಾರ ಜಾತಿ ಸಮೀಕ್ಷೆ ಮತ್ತು ಸಾಮಾಜಿಕ ಆರ್ಥಿಕ ಸಮೀಕ್ಷೆ ಮಾಡಲು ಕಾಂತರಾಜು ನೇತೃತ್ವದ ಆಯೋಗವನ್ನು ರಚನೆ ಮಾಡಿತ್ತು. ಆದರೆ, ಆ ಸರ್ಕಾರದ ಅವಧಿ ಮುಗಿಯುವ ವೇಳೆಗೆ ವರದಿ ಸಿದ್ಧವಾಗಿರಲಿಲ್ಲ. ಬಳಿಕ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂತು. 2018ರ ಕೊನೇ ಭಾಗದಲ್ಲಿ ಕಾಂತರಾಜು ನೇತೃತ್ವದ ಸಮಿತಿಯು ಜಾತಿ ಗಣತಿ ವರದಿಯನ್ನು ಸಿದ್ಧಪಡಿಸಿತ್ತು. 2019ರಲ್ಲಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ (Congress – JDS alliance) ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಈ ವರದಿಯನ್ನು ಅಂಗೀಕರಿಸಲು ಒಪ್ಪಿರಲಿಲ್ಲ. ಅಂದು ಹಿಂದುಳಿದ ವರ್ಗಗಳ ಸಚಿವರಾಗಿದ್ದ ಪುಟ್ಟರಂಗಶೆಟ್ಟಿ ಅವರಿಗೆ ಕರೆ ಮಾಡಿದ್ದ ಕುಮಾರಸ್ವಾಮಿ, ಆ ವಿಷಯವನ್ನು ಕ್ಯಾಬಿನೆಟ್‌ಗೆ ಚರ್ಚೆಗೆ ತರದಂತೆ ಸೂಚಿಸಿದ್ದರು. ಹಾಗಾಗಿ ಆ ವರದಿ ಹಾಗೆಯೇ ಉಳಿಯಿತು. ನಂತರ ಬಂದ ಮುಖ್ಯಮಂತ್ರಿಗಳ್ಯಾರೂ ಸಹ ಈ ಜಾತಿಗಣತಿ ವರದಿಯನ್ನು ಪಡೆಯಲು ಮುಂದೆ ಬರಲಿಲ್ಲ. ಈಗ ಸಿಎಂ ಸಿದ್ದರಾಮಯ್ಯ ಅವರೇ ಈ ವರದಿಯನ್ನು ಸ್ವೀಕಾರ ಮಾಡಿದ್ದಾರೆ.
ಇದನ್ನೂ ಓದಿ: Sedition case: ರಾಜ್ಯಪಾಲರ ಅಂಗಳಕ್ಕೆ ‘ಪಾಕಿಸ್ತಾನ್ ಜಿಂದಾಬಾದ್’ ಕದನ; ಸರ್ಕಾರ ವಜಾಕ್ಕೆ ಬಿಜೆಪಿ ಆಗ್ರಹ
ಶಾಮನೂರು ಶಿವಶಂಕರಪ್ಪ ನಡೆ ಏನು?
ಜಾತಿ ಗಣತಿ ವರದಿ ಸ್ವೀಕಾರದ ಬಗ್ಗೆ ಶಾಮನೂರು ಶಿವಶಂಕರಪ್ಪ ಸೇರಿ ಲಿಂಗಾಯತ ಸಮುದಾಯದ ನಾಯಕರು ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದರು. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಹ ವಿರೋಧವನ್ನು ದಾಖಲಿಸಿದ್ದರು. ಆದರೆ, ಅಹಿಂದ ವರ್ಗಗಳಿಂದ ಜಾತಿ ಗಣತಿ ವರದಿ ಸ್ವೀಕಾರ ಮಾಡಲು ಒತ್ತಡ ಇತ್ತು. ಶತಾಯಗತಾಯ ವರದಿಯನ್ನು ಸ್ವೀಕಾರ ಮಾಡಿಯೇ ಸಿದ್ಧ ಎಂದು ಹೇಳಿದ್ದ ಸಿಎಂ ಸಿದ್ದರಾಮಯ್ಯ ಕೊನೆಗೂ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ಆದರೆ, ಮುಂದೆ ಶಾಮನೂರು ನಡೆ ಏನೆಂಬುದು ಕುತೂಹಲಕ್ಕೆ ಕಾರಣವಾಗಿದೆ.