ಬೆಂಗಳೂರು: ದಲಿತ ಉಪಪಂಗಡಳಿಗೆ ಒಳಮೀಸಲಾತಿ ಕಲ್ಪಿಸುವ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನ ಮಾಡುವ ಕುರಿತು ಟ್ವೀಟ್ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಇದೀಗ ಇಕ್ಕಟ್ಟಿಗೆ ಸಿಲುಕಿದ್ದಾರೆ. ಆಯೋಗದ ವರದಿಯನ್ನು ಜಾರಿ ಮಾಡುವ ಕುರಿತು ಹೋರಾಟ ಮಾಡುತ್ತಿದ್ದವರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದನ್ನು ಸಿದ್ದರಾಮಯ್ಯ ಟೀಕಿಸಿದ್ದು, ಇದಕ್ಕೆ ಬಿಜೆಪಿ ಪ್ರತ್ಯುತ್ತರ ನೀಡಿದೆ.
ಸದಾಶಿವ ಆಯೋಗದ ವರದಿಯನ್ನು ಜಾರಿ ಮಡುವಂತೆ ಫ್ರೀಡಂ ಪಾರ್ಕ್ ಬಳಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಪೊಲೀಸರು ಭಾನುವಾರ ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದ್ದರು. ಇದರ ಕುರಿತು ಟ್ವೀಟ್ ಮಾಡಿದ್ದ ಸಿದ್ದರಾಮಯ್ಯ ಸರ್ಕಾರವನ್ನು ಟೀಕಿಸಿದ್ದರು.
“ಬೆಂಗಳೂರಿನಲ್ಲಿ ಒಳ ಮೀಸಲಾತಿಗಾಗಿ ಒತ್ತಾಯಿಸಿ ಹೋರಾಟ ನಡೆಸುತ್ತಿರುವವರನ್ನು ರಾಜ್ಯ ಬಿಜೆಪಿ ಸರ್ಕಾರ ಬಂಧಿಸಿರುವುದು ಅತ್ಯಂತ ಖಂಡನೀಯ. ತಕ್ಷಣ ಅವರನ್ನು ಬಿಡುಗಡೆಗೊಳಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸುತ್ತೇನೆ.”
“ರಾಜ್ಯ ಸರ್ಕಾರ ಒಂದೋ ಹೋರಾಟಗಾರರ ನ್ಯಾಯಬದ್ಧ ಬೇಡಿಕೆಯನ್ನು ಈಡೇರಿಸಬೇಕು, ಇಲ್ಲವಾದರೆ ಕನಿಷ್ಠ ಅವರನ್ನು ಮಾತುಕತೆಗಾದರೂ ಆಹ್ವಾನಿಸಬೇಕಾಗಿತ್ತು. ಇದ್ಯಾವುದನ್ನು ಮಾಡದೆ ಹೋರಾಟಗಾರರನ್ನು ಪೊಲೀಸರ ಮೂಲಕ ಹಣಿಯಲು ನಡೆಸಿದ ಪ್ರಯತ್ನ ಪ್ರಜಾಪ್ರಭುತ್ವ ವಿರೋಧಿಯಾದುದು. ಒಳಮೀಸಲಾತಿ ಜಾರಿಗೆ ಶಿಫಾರಸು ಮಾಡಿರುವ ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರುತ್ತೇವೆ ಎಂದು ಅಧಿಕಾರಕ್ಕೆ ಬಂದಿರುವ ರಾಜ್ಯದ ಬಿಜೆಪಿ ಸರ್ಕಾರ, ಈಗ ಹೋರಾಟಗಾರರನ್ನೇ ಬಂಧಿಸಲು ಹೊರಟಿರುವುದು ವಿಷಾದನೀಯ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ಪಡೆದು ನ್ಯಾ.ಎ.ಜೆ.ಸದಾಶಿವ ಆಯೋಗ ವರದಿ ಜಾರಿಗಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದರು.”
ವರದಿ ಸಲ್ಲಿಕೆಯಾಗಿದ್ದ ಯಾವಾಗ?
ಒಳಮೀಸಲಾತಿಯನ್ನು ಕಲ್ಪಿಸಬೇಕು ಎಂಬ ಕಾರಣಕ್ಕೆ ನ್ಯಾ. ಎ.ಜೆ. ಸದಾಶಿವ ಆಯೋಗವನ್ನು 2005ರಲ್ಲಿ ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್-ಜೆಡಿಎಸ್ ಸರ್ಕಾರ ರಚಿಸಿತು. ವಿವಿಧ ಕಾರಣಕ್ಕೆ ವಿಳಂಬವಾದ ಸಮಿತಿ ಕಾರ್ಯ, ಕೊನೆಗೆ ೨೦೧೨ರಲ್ಲಿ ಡಿ.ವಿ. ಸದಾನಂದ ಗೌಡ ಸಿಎಂ ಆಗಿದ್ದ ಅವಧಿಯಲ್ಲಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಕೆ ಮಾಡಿತು.
2014ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪೂರ್ಣ ಐದು ವರ್ಷ ಅಧಿಕಾರದಲ್ಲಿತ್ತು. ಕಾಂಗ್ರೆಸ್‌ಗೆ ಮುಖ್ಯವಾಗಿ ಎಸ್‌ಸಿ ಬಲಗೈ ಸಮುದಾಯದ ಹೆಚ್ಚು ಬೆಂಬಲವಿದೆ. ಪಕ್ಷದಲ್ಲಿ ಬಲಗೈ ಸಮುದಾಯದ ನಾಯಕರು ಪ್ರಮುಖ ಸ್ಥಾನದಲ್ಲಿದ್ದಾರೆ. ಸಿದ್ದರಾಮಯ್ಯ ಅವಧಿಯಲ್ಲೂ ವರದಿಯನ್ನು ಅನುಷ್ಠಾನಗೊಳಿಸುವ ಅಥವಾ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಕಾರ್ಯ ಆಗಿರಲಿಲ್ಲ. ಇದೇ ವಿಚಾರವನ್ನು ಮುಂದಿಟ್ಟುಕೊಂಡಿರುವ ಬಿಜೆಪಿ ಇದೀಗ ಸಿದ್ದರಾಮಯ್ಯ ವಿರುದ್ಧ ತಿರುಗಿಬಿದ್ದಿದೆ.
ಬಿಜೆಪಿ ವಾಗ್ದಾಳಿ
ಈ ಕುರಿತು ಫೇಸ್‌ಬುಕ್ ಪೋಸ್ಟ್ ಮಾಡಿರುವ ಬಿಜೆಪಿ, “ಸಿದ್ದರಾಮಯ್ಯರವರು ಐದು ವರ್ಷ ಅಧಿಕಾರದಲ್ಲಿದ್ದಾಗಲೇ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಬಂದಿತ್ತು. ಆಗ ವರದಿ ಜಾರಿ ಮಾಡುವ ಬಗ್ಗೆ ಆಲೋಚಿಸದ ಪ್ರತಿಪಕ್ಷದ ನಾಯಕರು, ಮುಂದಿನ ಬಾರಿ ಅಧಿಕಾರಕ್ಕೆ ಬಂದರೆ ನ್ಯಾ. ಸದಾಶಿವ ಆಯೋಗದ ವರದಿ ಜಾರಿಗೊಳಿಸುವ ಮಾತನಾಡುತ್ತಿರುವುದು ಹಾಸ್ಯಾಸ್ಪದ”
“ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗಲೇ ಮಾದಿಗ ಸಮುದಾಯ ದೊಡ್ಡ ಸಮಾವೇಶವನ್ನು ಮಾಡಿ, ಆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ನ್ಯಾ. ಸದಾಶಿವ ಆಯೋಗದ ವರದಿ ಜಾರಿ ಮಾಡುವ ಘೋಷಣೆ ಮಾಡುತ್ತಾರೆಂಬ ದಲಿತರ ನಿರೀಕ್ಷೆಯನ್ನು ಹುಸಿ ಮಾಡಿ, ದಲಿತರ ಹೆಸರಲ್ಲಿ ಅಧಿಕಾರ ಅನುಭವಿಸಿದ್ದು ಮರೆತು ಹೋಯಿತಾ? ಈಗ ಸಿದ್ದರಾಮಯ್ಯನವರು ಮತ್ತೆ ದಲಿತರಿಗೆ ನ್ಯಾ. ಸದಾಶಿವ ಆಯೋಗದ ವರದಿ ಜಾರಿ ಮಾಡುವ ಸುಳ್ಳು ಭರವಸೆ ನೀಡುತ್ತಿದ್ದು, ದಲಿತರ ಮೂಗಿಗೆ ತುಪ್ಪ ಸವರುವ ನಿಮ್ಮ ಸುಳ್ಳು ಭರವಸೆಯನ್ನು ಯಾವ ದಲಿತರು ನಂಬುವ ಸ್ಥಿತಿಯಲ್ಲಿಲ್ಲ.”
“ಅಧಿಕಾರ ಇದ್ದಾಗ ಸಿದ್ದರಾಮಯ್ಯ ದಲಿತರ ಯಾವ ಬೇಡಿಕೆನೂ ಈಡೇರಿಸಿಲ್ಲ. ಹಾಗೇ ಅವರಿಂದ ತುಳಿತಕ್ಕೆ ಒಳಗಾದ ದಲಿತ ನಾಯಕರ ಪಟ್ಟಿಗೂ ಕೊನೆಯಿಲ್ಲ. ಮಲ್ಲಿಕಾರ್ಜುನ ಖರ್ಗೆ, ಡಾ. ಜಿ. ಪರಮೇಶ್ವರ್, ಮೋಟಮ್ಮ, ಶ್ರೀನಿವಾಸ್ ಪ್ರಸಾದ್ ಅವರು ತುಳಿತಕ್ಕೆ ಒಳಗಾಗಿದ್ದಾರೆ. ಸಿದ್ದರಾಮಯ್ಯ ಅವರ ದಲಿತಪರ ಪ್ರೀತಿ ಯಾವತ್ತಿಗೂ ತೋರ್ಪಡಿಕೆಗೆ ಅಷ್ಟೇ. ಸಿದ್ದರಾಮಯ್ಯ ಅವರ ತೋರ್ಪಡಿಕೆಯ “ಅಹಿಂದ” ಹೋರಾಟದ ನಾಟಕದಲ್ಲಿ ಈಗ ದಲಿತರು ಇಲ್ಲ, ಹಿಂದುಳಿದವರೂ ಇಲ್ಲ. ಅವರ ವಕಾಲತ್ತೇನಿದ್ದರೂ ಒಂದು ಸಮುದಾಯದ ಪರ ಮಾತ್ರ. ಹಿಂದುಳಿದ ಹಾಗೂ ದಲಿತ ವರ್ಗಕ್ಕೆ ಸಿದ್ದರಾಮಯ್ಯ ಅವರಿಂದ ಯಾವತ್ತಿಗೂ ಸಿಗುವುದು ಕುತಂತ್ರದ ಒಳ ಏಟು ಮಾತ್ರ ಎಂದು ಟೀಕಿಸಿದೆ.
ಇದನ್ನೂ ಓದಿ | ಸದಾಶಿವ ಅಯೋಗದ ವರದಿ ಜಾರಿಗೆ ಒತ್ತಾಯ