ಬೆಂಗಳೂರು: ಕಾಂಗ್ರೆಸ್‌ನವರ ಭ್ರಷ್ಟಾಚಾರ, ಒಳಜಗಳ, ಜಾತೀಯತೆ ಸೇರಿದಂತೆ ಎಲ್ಲ ಸಂಗತಿಗಳಿಂದ ಜನರು ಬೇಸತ್ತಿದ್ದಾರೆ. ಕಾಂಗ್ರೆಸ್‌ನವರು ಜಾತಿ ಹಿಂದೆ ಹೋಗುತ್ತಾರೆ. ಆದರೆ, ನಾವು ಬಿಜೆಪಿಯವರು ಎಂದೂ ಸಹ ಜಾತಿ ಹಿಂದೆ ಹೋದವರಲ್ಲ. ಆಗ ಚುನಾವಣೆ ಭಾಷಣದಲ್ಲಿ ಡಿ.ಕೆ. ಶಿವಕುಮಾರ್ (DK Shivakumar) ಮಾತನಾಡುತ್ತಾ, ಒಕ್ಕಲಿಗರೆಲ್ಲರೂ ನನ್ನ ಬೆನ್ನ ಹಿಂದೆ ನಿಲ್ಲಿ. ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿದ್ದರು. ಸಿದ್ದರಾಮಯ್ಯ (CM Siddaramaiah) ಅವರು ನನ್ನ ಹಿಂದೆ ಕುರುಬರೆಲ್ಲರೂ ನಿಂತುಕೊಳ್ಳಿ. ನಾನು ಸಿಎಂ ಆಗುತ್ತೇನೆ ಎಂದು ಹೇಳುತ್ತಾರೆ. ಹಾಗಾದರೆ ಜಾತಿವಾದಿಗಳು ಯಾರು? ಬಿಜೆಪಿಯವರು ಹೇಳುವುದು “ಭಾರತ್ ಮಾತಾಕಿ ಜೈ” ಎಂಬ ಸಾಲನ್ನು ಮಾತ್ರವೇ ಹೇಳುತ್ತೇವೆ ಎಂದು ಮಾಜಿ ಡಿಸಿಎಂ, ಬಿಜೆಪಿ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ (KS Eshwarappa) ಅವರು ಪವರ್ ಪಾಯಿಂಟ್ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಹೇಳಿದರು.
ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ “ಪವರ್ ಪಾಯಿಂಟ್ ವಿತ್ ಎಚ್‌ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಕೆ.ಎಸ್. ಈಶ್ವರಪ್ಪ, ಬಿಜೆಪಿ ಈ ನೆಲಕ್ಕೆ ಕೊಡುವ ಗೌರವ ನೋಡಿ ಜನ ನಮ್ಮನ್ನು ಆರಿಸುತ್ತಿದ್ದಾರೆ. ಹಾಗಾಗಿಯೇ ನರೇಂದ್ರ ಮೋದಿ ಅವರನ್ನು ಎರಡು ಬಾರಿ ಪ್ರಧಾನಿಯನ್ನಾಗಿ ಮಾಡಿದರು. ಈಗ ಮೂರನೇ ಬಾರಿಯೂ ಅವರನ್ನೇ ಪ್ರಧಾನಿ ಮಾಡಲು ಉತ್ಸುಕರಾಗಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: Power Point with HPK : ಈ ರಾಜ್ಯ ಸರ್ಕಾರ ಎಷ್ಟು ದಿನ ಇರುತ್ತೋ ಗೊತ್ತಿಲ್ಲ; ಕೆ.ಎಸ್. ಈಶ್ವರಪ್ಪ
ಇನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ 28 ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಇಲ್ಲದ ಕಡೆಯಲ್ಲಿಯೂ ನಾವು ಗೆದ್ದುಕೊಂಡು ಬಂದಿದ್ದೇವೆ. ಏಕೆ ಜನರು ನಮಗೆ ಮತ ಹಾಕಿದರು? ರಾಷ್ಟ್ರೀಯ ವಿಚಾರಗಳಿಗೆ ಬೆಲೆ ಕೊಡುತ್ತದೆ ಎಂಬ ಕಾರಣಕ್ಕಾಗಿದೆ. ನಾವು 25 ಕ್ಷೇತ್ರದಲ್ಲಿ ಗೆಲ್ಲಲು ಕಾರಣವೆಂದರೆ, ಕಾಂಗ್ರೆಸ್‌ನವರಂತೆ ನಾವು ಬುರುಡೆ ಬಿಟ್ಟುಕೊಂಡು ಹೋಗಲಿಲ್ಲ ಎಂದು ಕೆ.ಎಸ್. ಈಶ್ವರಪ್ಪ ಹೇಳಿದರು.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ವೈಫಲ್ಯ ಕಂಡಿದೆ. ಇದರಿಂದ 10-15 ಪರ್ಸೆಂಟ್ ಜನರಿಗೆ ಮಾತ್ರ ಉಪಯೋಗ ಆಗಿರಬಹುದು. ಹೀಗಾಗಿ ಕಾಂಗ್ರೆಸ್ ಪಕ್ಷದ ವಿರುದ್ಧ ಜನ ಮತ ಹಾಕುತ್ತಾರೆ ಎಂದು ಕೆ.ಎಸ್. ಈಶ್ವರಪ್ಪ ತಿಳಿಸಿದರು.
ಕಾಂಗ್ರೆಸ್‌ನವರು ಖಾಲಿ ಡಬ್ಬ ಇದ್ದಂತೆ
ಕಾಂಗ್ರೆಸ್‌ನವರು ಖಾಲಿ ಡಬ್ಬ ಇದ್ದಂತೆ, ಸ್ವಲ್ಪ ಹೊಡೆದರೂ ಭಾರಿ ಶಬ್ದ ಬರುತ್ತದೆ. ಇನ್ನು ಆಗ ಕಾಂಗ್ರೆಸ್‌ನಿಂದ ಒಬ್ಬನೇ ಒಬ್ಬ ಶಾಸಕನೂ ಪಕ್ಷ ಬಿಟ್ಟು ಬಿಜೆಪಿ ಸೇರಲ್ಲ ಎಂದು ಹೇಳಿದರು. ಕೊನೆಗೆ ಆ ಪಕ್ಷದಿಂದ 17 ಶಾಸಕರು ಬರಲಿಲ್ಲವೇ? ಇದಾದ ಮೇಲೆ ಕಾಂಗ್ರೆಸ್ ತೊರೆದು ಬಿಜೆಪಿ ಹೋದ ಒಬ್ಬರೇ ಒಬ್ಬರನ್ನೂ ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಳ್ಳುವುದಿಲ್ಲ. ಇದು ಸೂರ್ಯ – ಚಂದ್ರ ಇರುವಷ್ಟೇ ಸತ್ಯ ಎಂದು ಹೇಳಿದರು. ಈಗ ಅವರನ್ನು ವಾಪಸ್ ಕರೆಸಿಕೊಳ್ಳಲು ಕೈ ಕಾಲು ಹಿಡಿಯುತ್ತಿದ್ದಾರೆ ಎಂದು ಕೆ.ಎಸ್. ಈಶ್ವರಪ್ಪ ಹೇಳಿದರು.
ಬಿಜೆಪಿ ಶಾಸಕರಾದ ಎಸ್.ಟಿ. ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಅವರು ಕಾಂಗ್ರೆಸ್ ಸೇರಿಲ್ಲ. ಆ ಪಕ್ಷದ ನಾಯಕರ ಜತೆ ಊಟ ಮಾಡಿದರೆ ಅಲ್ಲಿಗೆ ಹೋದ ಲೆಕ್ಕವೇ ಎಂದು ಕೆ.ಎಸ್. ಈಶ್ವರಪ್ಪ ಪ್ರಶ್ನೆ ಮಾಡಿದರು.
ರಾಜಕಾರಣ ಇರುವವರೆಗೂ ಪಕ್ಷಾಂತರ ಇದ್ದಿದ್ದೇ. ಇದನ್ನು ಯಾವುದೇ ಕಾರಣಕ್ಕೂ ತಪ್ಪಿಸಲು ಆಗುವುದಿಲ್ಲ. ನಾವು ಇಡೀ ದೇಶದಲ್ಲಿ ಆಡಳಿತ ನಡೆಸಬೇಕು ಎಂಬ ಉದ್ದೇಶವನ್ನು ಹೊಂದಿದ್ದೇವೆ. ನಮ್ಮ ಸಿದ್ಧಾಂತವನ್ನು ಒಪ್ಪಿ ಕಮ್ಯುನಿಷ್ಟ್‌ನವರೂ ಸಹ ಬಂದಿದ್ದಾರೆ. ಒಮ್ಮೆ ನಮ್ಮ ಪಕ್ಷಕ್ಕೆ ಬಂದವರು ವಾಪಸ್ ಹೋಗುವುದು ಬಹಳ ಕಡಿಮೆ. ನಮ್ಮ ಪಕ್ಷಕ್ಕೆ ಬಂದವರಿಗೆ ಭಾರತೀಯತೆ, ಸಂಸ್ಕೃತಿಯನ್ನು ಜೀರ್ಣ ಮಾಡಿಸಲು ಪ್ರಯತ್ನ ಪಡುತ್ತೇವೆ. ಜೀರ್ಣ ಮಾಡಿಕೊಳ್ಳಲು ಆಗದೇ ಬೇರೆ ಪಕ್ಷಕ್ಕೆ ಹೋಗುವವರು ಚರಂಡಿಯಲ್ಲಿ ವಾಂತಿ ಮಾಡಿಕೊಳ್ಳುತ್ತಾರೆ ಎಂದು ಕೆ.ಎಸ್. ಈಶ್ವರಪ್ಪ ಹೇಳಿದರು.
ಲೋಕಸಭಾ ಚುನಾವಣೆವರೆಗೆ ಸರ್ಕಾರ ಇರಲ್ಲ
ಬಿ.ಕೆ. ಹರಿಪ್ರಸಾದ್, ಬಸವರಾಜ ರಾಯರೆಡ್ಡಿ ಅವರು ತಮ್ಮದೇ ಪಕ್ಷದವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಸಚಿವ ಕೆ.ಎಚ್. ಮುನಿಯಪ್ಪ ಅವರು, ಕಿರಿಯರಿಗೆ ಹಿರಿಯರು ಅವಕಾಶ ಮಾಡಿಕೊಡಬೇಕು ಎಂದು ಹೇಳಿದ್ದಾರೆ. ಅವರದೇ ಪಕ್ಷದಲ್ಲಿ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಲೋಕಸಭಾ ಚುನಾವಣೆವರೆಗೆ ಈ ಪಕ್ಷ ಇರುತ್ತದೆಯೇ ಎಂಬ ಪ್ರಶ್ನೆ ಮೂಡಿದೆ ಎಂದು ಕೆ.ಎಸ್. ಈಶ್ವರಪ್ಪ ತಿಳಿಸಿದರು.
ಇದನ್ನೂ ಓದಿ: Power Point with HPK : ನಾನು ಸಂಘ ಪರಿವಾರಕ್ಕೆ ಸೇರದೇ ಇದ್ದಿದ್ದರೆ ಬೀಡಿ ಸೇದಿಕೊಂಡು ಎಲ್ಲೋ ಇರುತ್ತಿದ್ದೆ: ಈಶ್ವರಪ್ಪ
ಬಿಜೆಪಿ ಸೋಲಿಗೆ ನೂರು ಕಾರಣ ಇದೆ
ಈ ಬಾರಿ ಬಿಜೆಪಿ ಸೋಲಿಗೆ ನೂರು ಕಾರಣ ಇದೆ. ನಮ್ಮದು ಕಾಂಗ್ರೆಸ್ ರೀತಿಯ ಸಂಸ್ಕೃತಿ ಅಲ್ಲ. ಅಲ್ಲಿ ಗೆದ್ದರೆ ಸೋನಿಯಾ ಗಾಂಧಿಯವರ ಹೆಸರು ಮುನ್ನೆಲೆಗೆ ಬರುತ್ತದೆ. ಅದೇ ಸೋತರೆ ಪಕ್ಷದ ಯಾವುದೋ ಬಡಪಾಯಿ ತಲೆಗೆ ಕಟ್ಟಲಾಗುತ್ತದೆ. ಇಲ್ಲವೇ ಪಕ್ಷದ ರಾಜ್ಯಾಧ್ಯಕ್ಷರ ರಾಜೀನಾಮೆಯನ್ನು ಪಡೆಯುತ್ತಾರೆ. ನಮ್ಮ ಬಿಜೆಪಿಯಲ್ಲಿ ಆ ರೀತಿ ಮಾಡುವುದಿಲ್ಲ ಎಂದು ಕೆ.ಎಸ್. ಈಶ್ವರಪ್ಪ ಹೇಳಿದರು.