Site icon Vistara News

ʼನಾನು ಚಾಮರಾಜಪೇಟೆ ಅಳಿಯʼ: ಚುನಾವಣೆ ಸ್ಪರ್ಧೆಯ ಮುನ್ಸೂಚನೆ ಕೊಟ್ಟ ಸಿದ್ದರಾಮಯ್ಯ

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಎಲ್ಲಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಕುತೂಹಲ ಇರುವಂತೆಯೇ, ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಸ್ಪರ್ಧೆ ಮಾಡಬಹುದು ಎಂಬ ಮುನ್ಸೂಚನೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ.

ವಿಧಾನಸೌಧದಲ್ಲಿ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿದರು. ಚಾಮರಾಜಪೇಟೆಯಲ್ಲಿ ಸ್ಪರ್ಧಿಸುವುದಕ್ಕೆ ಜಮೀರ್ ಅಹ್ಮದ್‌ ಸ್ಥಾನ ಬಿಟ್ಟುಕೊಡುವ ವಿಚಾರದಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅದು ನಮ್ಮ ಅವರದ್ದು ಚಾಮರಾಜಪೇಟೆ. ನಾನು ಮದುವೆಯಾಗಿರೋದು ಅಲ್ಲಿಯೇ. ನಾನು ಚಾಮರಾಜಪೇಟೆ ಅಳಿಯ. ಅದಕ್ಕಾಗಿ ಅಲ್ಲಿ ಸ್ಪರ್ಧಿಸಲು ಹೇಳುತ್ತಿದ್ದಾರೆ. ಆದರೆ ಅಂತಿಮ ತೀರ್ಮಾನ ಮಾಡಬೇಕಾದ್ದು ಹೈಕಮ‍ಾಂಡ್ ಎಂದು ಹೇಳಿದರು.

ಕೋಲಾರದಲ್ಲಿ ಸ್ಪರ್ಧೆ ಮಾಡುವ ಇಂಗಿತವನ್ನು ವ್ಯಕ್ತಪಡಿಸಿ ಅಲ್ಲಿಗೆ ಇತ್ತೀಚೆಗೆ ಸಿದ್ದರಾಮಯ್ಯ ತೆರಳಿದ್ದರು. ಆದರೆ ಸ್ಥಳೀಯ ಮುಖಂಡರಲ್ಲಿರುವ ಭಿನ್ನಮತ ದಿನೇದಿನೆ ಉಲ್ಬಣವಾಗುತ್ತಿದ್ದು, ಕೋಲಾರದಿಂದ ಸ್ಪರ್ಧಿಸಿದರೆ ಗೆಲ್ಲಲು ಸಾಕಷ್ಟು ಹೆಣಗಾಡಬೇಕಾಗುತ್ತದೆ. ಆಗ ಬೇರೆ ಕಡೆಗಳಲ್ಲಿ ಪ್ರವಾಸ ಮಾಡಿ ತಮ್ಮ ಆಪ್ತರನ್ನು ಗೆಲ್ಲಿಸಿಕೊಂಡುಬರುವುದು ಕಷ್ಟ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಬೇರೆ ಕ್ಷೇತ್ರಗಳ ಹುಡುಕಾಟ ಅನಿವಾರ್ಯವಾಗಿದೆ.

ರೌಡಿ ಶೀಟರ್‌ಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಕುರಿತು ಪ್ರತಿಕ್ರಿಯಿಸಿ, ಏನು ಉದ್ದೇಶ? ಬಿಜೆಪಿ, ಆರ್‌ಎಸ್‌ಎಸ್‌ನವರ ಸಂಸ್ಕೃತಿಯೇ ಅದು‌‌. ಅವರ ಸಂಸ್ಕೃತಿಯೇ ರೌಡಿ ಸಂಸ್ಕೃತಿ. ಸುಮ್ಮನೆ ಆಚಾರ ವಿಚಾರ ಅಂತ ಹೇಳುತ್ತಾರೆ. ಆದರೆ ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ ಎಂದರು.

ಗುಜರಾತ್‌, ಹಿಮಾಚಲ ಎಕ್ಸಿಟ್ ಪೋಲ್‌ನಲ್ಲಿ ಬಿಜೆಪಿಗೆ ಮುನ್ನಡೆ ಕುರಿತು ಪ್ರತಿಕ್ರಿಯಿಸಿ, 8 ನೇ ತಾರೀಖು ಫಲಿತಾಂಶ ಬರಲಿ ನೋಡೋಣ. ಹಿಮಾಚಲ ಪ್ರದೇಶದಲ್ಲಿ ಕೆಲವು ಮಾಧ್ಯಮಗಳು ಕಾಂಗ್ರೆಸ್ ಮುಂದಿವೆ ಅಂತ ಹೇಳಿವೆ. ಹಿಮಾಚಲ ಪ್ರದೇಶದಲ್ಲಿ ಬಿರುಸಿನ ಪೈಪೋಟಿ ಇದೆ. ಗುಜರಾತ್ ನಲ್ಲಿ ಬಿಜೆಪಿ ಮುಂದಿವೆ ಕೆಲವು ಮಾಧ್ಯಮಗಳು ಹೇಳಿವೆ. ಯಾವುದೇ ಚುನಾವಣೆಯಲ್ಲಿ ಜನ ಕೊಟ್ಟ ತೀರ್ಪನ್ನು ನಾವು ತಲೆ ಭಾಗಿ ಒಪ್ಪಿಕೊಳ್ಳಬೇಕು ಎಂದರು.

ಗುಜರಾತ್ ಫಲಿತಾಂಶ ಕರ್ನಾಟಕದ ದಿಕ್ಸೂಚಿ ಎಂದು ಬಿಜೆಪಿ ಹೇಳಿಕೆ ವಿಚಾರದಲ್ಲಿ ಪ್ರತಿಕ್ರಿಯಿಸಿ, ಪಂಜಾಬ್ ಯಾಕೆ ಆಗಲಿಲ್ಲ ದಿಕ್ಸೂಚಿ ಕೇಳಿ ಅವರನ್ನು. ಒಂದು ರಾಜ್ಯದ ಚುನಾವಣೆ ಇನ್ನೊಂದು ರಾಜ್ಯಕ್ಕೆ ಸಂಬಂಧವಿಲ್ಲ. ಅಲ್ಲಿನ ಸಮಸ್ಯೆ ಅಲ್ಲಿನ ರಾಜಕೀಯ, ಅಲ್ಲಿನ ಆಡಳಿತ,ಜನರ ಭಾವನೆ, ಬೇರೆಯದ್ದೇ ಇರುತ್ತದೆ ಎಂದರು.

ಆಮ್ ಆದ್ಮಿ ಪಾರ್ಟಿ ಕಾಂಗ್ರೆಸ್ ಮತಗಳನ್ನು ಪಡೆಯುತ್ತಿದೆಯೇ ಎಂಬ ಕುರಿತು, ಹೌದು ಆಮ್ ಆದ್ಮಿ ಪಾರ್ಟಿ ಈಟಿಂಗ್ ದಿ ಕಾಂಗ್ರೆಸ್ ವೋಟ್ಸ್ ಎಂದರು.

ಇದನ್ನೂ ಓದಿ | ಕೋಲಾರ ಕಾಂಗ್ರೆಸ್‌ನಲ್ಲಿ ಕೋಲಾಹಲ: ಸಿದ್ದರಾಮಯ್ಯ ಸ್ಪರ್ಧೆ ಕುರಿತು ಮುನಿಯಪ್ಪ ಎದುರೇ ಜಟಾಪಟಿ

Exit mobile version