Site icon Vistara News

HD Kumaraswamy: ಕಾಂಗ್ರೆಸ್‌ ಮತದಿಂದ ಸುಮಲತಾರನ್ನು ಗೆಲ್ಲಿಸಿದ ಕಲಿಯುಗದ ಶಕುನಿ ಸಿದ್ದರಾಮಯ್ಯ: ಎಚ್‌ಡಿಕೆ ಆಕ್ರೋಶ

Siddaramaiah is Kaliyuga Shakuni who defeated Nikhil says HD Kumaraswamy

ಬೆಂಗಳೂರು: ಮಂಡ್ಯದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಗ್ಯಾರಂಟಿ ಯೋಜನೆ (Congress Guarantee Scheme) ಯಶಸ್ಸಿನ ಕಾರ್ಯಕ್ರಮ ನಡೆಸಿದ್ದರ ಬಗ್ಗೆ ಕೆಂಡವಾಗಿರುವ ಮಾಜಿ ಸಿಎಂ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ (HD Kumaraswamy), ಸುಳ್ಳುರಾಮಯ್ಯ ಅವರು ಸತ್ಯವನ್ನು ಕಕ್ಕಿದ್ದಾರೆ ಎಂದು ಹೇಳಿದ್ದಾರೆ. ಸುಮಲತಾ ಅಂಬರೀಶ್‌ (Sumalatha Ambareesh) ಬಿಜೆಪಿಯಿಂದ ಗೆದ್ದಿದ್ದಲ್ಲ.. ಕಾಂಗ್ರೆಸ್‌ ವೋಟುಗಳಿಂದಲೇ ಗೆದ್ದಿದ್ದು ಆಯಮ್ಮ..!! ಎಂದು ಹೇಳುವ ಮೂಲಕ ನೀವೇ ಸತ್ಯವನ್ನು ಒಪ್ಪಿಕೊಂಡಿದ್ದೀರಿ ಎಂದು ಎಚ್‌ಡಿಕೆ ಕಿಡಿಕಾರಿದ್ದಾರೆ.

ಮಂಡ್ಯದಲ್ಲಿ ನಡೆದ ಕಾಂಗ್ರೆಸ್‌ ಗ್ಯಾರಂಟಿ ಸಮಾವೇಶದ ಬಗ್ಗೆ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಆಕ್ರೋಶ ಹೊರಹಾಕಿದ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ, ಸಿಎಂ ಸಿದ್ದರಾಮಯ್ಯ ಅವರನ್ನು ಕಲಿಯುಗದ ಶಕುನಿ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಎಚ್‌.ಡಿ. ಕುಮಾರಸ್ವಾಮಿ ಟ್ವೀಟ್‌ನಲ್ಲೇನಿದೆ?

ಮಂಡ್ಯ ಜಿಲ್ಲೆಯ ಗ್ಯಾರಂಟಿಗಳ 2ನೇ ಸಮಾವೇಶದಲ್ಲಿ ಅಲವತ್ತುಕೊಂಡ ಸಿಎಂ ಸಿದ್ದರಾಮಯ್ಯನವರೇ.. ಕೊನೆಗೂ ಸತ್ಯ ನುಡಿದಿದ್ದೀರಿ! ಸುಳ್ಳುರಾಮಯ್ಯ ಬಿರುದಾಂಕಿತರಾದ ನೀವು, ಕೊನೆಗೂ ಸತ್ಯ ಕಕ್ಕಿದ್ದೀರಿ! ಸುಳ್ಳುರಾಮಯ್ಯನೆಂಬ ಕುಖ್ಯಾತಿಯಿಂದ ಹೊರಬರಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೀರಿ. ಅಭಿನಂದನೆಗಳು.

ವೋಟಿಗಾಗಿ ಗ್ಯಾರಂಟಿ ಸಮಾವೇಶ

ಸತ್ಯ ಗಂಟಲಲ್ಲಿ ಸಿಕ್ಕಿಕೊಂಡ ಬಿಸಿತುಪ್ಪದಂತೆ.. ಕಕ್ಕಲೇಬೇಕು. 2019ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಆಯ್ಕೆಯಾದ ಪಕ್ಷೇತರ ಅಭ್ಯರ್ಥಿ ಗೆಲುವಿಗೆ ಕಾಂಗ್ರೆಸ್ಸೇ ಕಾರಣ ಎಂದು ಸ್ವತಃ ನೀವೇ ಒಪ್ಪಿಕೊಂಡಿದ್ದೀರಿ. ನಿಮ್ಮದೇ ಮಾತುಗಳಲ್ಲಿ ಹೇಳುವುದಾದರೆ.. “ಸುಮಲತಾ ಬಿಜೆಪಿಯಿಂದ ಗೆದ್ದಿದ್ದಲ್ಲ.. ಕಾಂಗ್ರೆಸ್‌ ವೋಟುಗಳಿಂದಲೇ ಗೆದ್ದಿದ್ದು ಆಯಮ್ಮ..!!” ಇದಲ್ಲವೇ ನಂಬಿಕೆದ್ರೋಹ..?

ನಿಮ್ಮ ಗೋಮುಖವ್ಯಾಘ್ರತನ ಅರಿಯಲು ಇಷ್ಟು ಸಾಕು. ಅಂದು ಕಾಂಗ್ರೆಸ್ ಮೈತ್ರಿ ಪಕ್ಷ, ನಿಖಿಲ್‌ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿ. ಅವರ ಜತೆಯಲ್ಲೇ ಪ್ರಚಾರದ ಸೋಗಿನಾಟವಾಡಿ, ಮಾಧ್ಯಮಗಳ ಮುಂದೆ ಗೆಲ್ಲಿಸುತ್ತೇವೆಂದು ಪೋಸು ಕೊಡುತ್ತಲೇ ನಿಖಿಲ್ ಸುತ್ತ ಶಕುನಿ ವ್ಯೂಹವನ್ನೇ ರಚಿಸಿದ ಕಲಿಯುಗದ ಶಕುನಿ ನೀವಲ್ಲದೆ ಮತ್ತ್ಯಾರು ಸಿದ್ದರಾಮಯ್ಯನವರೇ?

ಕಳ್ಳಬೆಕ್ಕು ಕದ್ದು ಹಾಲು ಕುಡಿದರೆ ಗೊತ್ತಾಗದೇ? ಬೂದಿ ಮುಚ್ಚಿದ ಕೆಂಡ ತಣ್ಣಗಿರಲು ಸಾಧ್ಯವೇ? ಕುದಿಯುವ ಕುಲುಮೆಯಂತಿರುವ ನಿಮ್ಮ ಉದರಹುರಿಗೆ ತಂಪೆನ್ನುವುದುಂಟೆ? 5 ವರ್ಷಗಳ ನಂತರವಾದರೂ ಸತ್ಯ ಕಕ್ಕಿದ್ದೀರಿ ಹಾಗೂ ನಂಬಿದವನ ಮನೆ ನಾಶವಾಗಲಿ ಎನ್ನುವ ನಿಮ್ಮಹೇಯತನ ಬಯಲಾಗಿದೆ. ಸತ್ಯಮೇಯ ಜಯತೆ. ಇದಿಷ್ಟೇ ನನ್ನ ಕಳಕಳಿ ಮತ್ತು ನಂಬಿಕೆ.

ಇಂಥ ಆತ್ಮವಂಚನೆ ಏತಕ್ಕೆ?

ಸಕ್ಕರೆ ಕಾರ್ಖಾನೆ ಬಗ್ಗೆ ಹೇಳಿದ್ದೀರಿ. ಬಜೆಟ್‌ನಲ್ಲಿ ‌ಘೋಷಣೆ ಮಾಡಿದ್ದೀರಿ, ಸರಿ.. ದುಡ್ಡು ಎಲ್ಲಿಟ್ಟಿದ್ದೀರಿ. ನಾನು 2019ರ ಬಜೆಟ್‌ನಲ್ಲಿಯೇ ಈ ಕಾರ್ಖಾನೆಗೆ 100 ಕೋಟಿ ರೂಪಾಯಿ ತೆಗೆದಿರಿಸಿದ್ದೆ. ಎಲ್ಲಿ ಹೋಯಿತು ಆ ದುಡ್ಡು? ಇದರ ಬಗ್ಗೆ ಗ್ಯಾರಂಟಿ ಸಮಾವೇಶದಲ್ಲಿ ಚಕಾರ ಎತ್ತಿಲಿಲ್ಲವೇಕೆ ಸಿದ್ದರಾಮಯ್ಯನವರೇ? ಇಂಥ ಆತ್ಮವಂಚನೆ ಏತಕ್ಕೆ?

ಇದನ್ನೂ ಓದಿ: CM Siddaramaiah: ಬಿಜೆಪಿ ಜತೆ ಜೆಡಿಎಸ್‌ ಮೈತ್ರಿ; ದೇವೇಗೌಡರ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ತನ್ನ ತಲೆಗೇ ಹರಳೆಣ್ಣೆ ಇಲ್ಲ, ಪಕ್ಕದವನಿಗೆ ಸಂಪಂಗೆಣ್ಣೆ ಕೊಟ್ಟನಂತೆ ನಿಮ್ಮಂಥವನೊಬ್ಬ! ನಿಮ್ಮ ವೈಖರಿ ಹಾಗಿದೆ. ಕನ್ನಡಿಗರು ಬರದ ಬೆಂಕಿಯಲ್ಲಿ ಬೇಯುತ್ತಿದ್ದರೆ ನಿಮ್ಮ ಸರ್ಕಾರ ಕದ್ದುಮುಚ್ಚಿ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದೆ! ಒಂದು ಕೈಲಿ ಅಗ್ಗದ ಗ್ಯಾರಂಟಿ ಕೊಟ್ಟು ಹತ್ತು ಕೈಗಳಲ್ಲಿ ಬದುಕಿನ ಗ್ಯಾರಂಟಿ ಕಿತ್ತುಕೊಳ್ಳುತ್ತಿದ್ದೀರಿ? ಇದು ನ್ಯಾಯವೇ?” ಎಂದು ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.

Exit mobile version