Site icon Vistara News

BJP Karnataka : ಒಂದು ಸಮುದಾಯವನ್ನು ಮಾತ್ರವೇ ಓಲೈಸುವ ಸಿಎಂ ಸಿದ್ದರಾಮಯ್ಯ; ಬಿಜೆಪಿ ಸರಣಿ ಟ್ವೀಟ್

BJP tweet

ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಕಾಂಗ್ರೆಸ್‌ ಸರ್ಕಾರದ ಆಡಳಿತ ವೈಖರಿ ವಿರುದ್ಧ ಬಿಜೆಪಿ (BJP Karnataka) ಕಿಡಿಕಾರಿದೆ. ಜಾತಿ ರಾಜಕಾರಣ (Caste politics) ಹೆಚ್ಚಾಗಿದೆ ಎಂದು ಆರೋಪ ಮಾಡಿದೆ. ಆಯ್ದ ಜನಾಂಗಕ್ಕೆ ಮಾತ್ರವೇ ಸಿಎಂ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದು ಕಿಡಿಕಾರಿದೆ. ಅಲ್ಲದೆ, ಕಾಂಗ್ರೆಸ್‌ ಹಿರಿಯ ನಾಯಕರಾದ ಬಿ.ಕೆ. ಹರಿಪ್ರಸಾದ್‌ (BK Hariprasad), ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ಹೆಸರುಗಳನ್ನೂ ಉಲ್ಲೇಖಿಸಿದೆ. ಲಿಂಗಾಯತ ಅಧಿಕಾರಿಗಳ (Lingayat officers) ಕಡೆಗಣನೆ ಬಗ್ಗೆ ಶಾಮನೂರು ಶಿವಶಂಕರಪ್ಪ (Shamanur Shivashankarappa) ನೀಡಿರುವ ಹೇಳಿಕೆಯನ್ನೂ ಬಿಜೆಪಿ ಪ್ರಸ್ತಾಪಿಸಿದೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಬಿಜೆಪಿಯು ರಾಜ್ಯ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಬಿಜೆಪಿಯ ಟ್ವೀಟ್‌ನ ಸಂಪೂರ್ಣ ವಿವರ ಇಂತಿದೆ. ‌

ಇದನ್ನೂ ಓದಿ: ಕೆಜಿ ಹಳ್ಳಿ, ಡಿಜೆ ಹಳ್ಳಿ ಪ್ರಕರಣ ವರದಿಯನ್ನು ಸರ್ಕಾರ ಯಥಾವತ್ತು ಸ್ವೀಕರಿಸಿರುವುದು ಸ್ವಾಗತಾರ್ಹ: ಬೊಮ್ಮಾಯಿ

ಬಿಜೆಪಿಯ ಸರಣಿ ಟ್ವೀಟ್

“ಸಿದ್ದರಾಮಯ್ಯರವರ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಆಡಳಿತದಲ್ಲಿ ರಾಜ್ಯದ ಆರು ಕೋಟಿ ಕನ್ನಡಿಗರು ನೆಮ್ಮದಿಯಲ್ಲಿಲ್ಲ ಎಂಬುದು ಎಷ್ಟು ಸತ್ಯವೋ, ಕೈ ಪಕ್ಷದ ನಾಯಕರಿಗೂ ಸಿದ್ದರಾಮಯ್ಯ ಅವರ ಆಡಳಿತ ತೃಪ್ತಿ ತಂದಿಲ್ಲ ಎಂಬುದೂ ಅಷ್ಟೇ ಸತ್ಯ.

ಚುನಾವಣೆಗೂ ಮುನ್ನ ಸಿದ್ದರಾಮಯ್ಯರವರು, ತಮ್ಮದು “ಸರ್ವ ಜನಾಂಗದ ಶಾಂತಿಯ ತೋಟ” ಎಂದು ಹೇಳಿದ್ದು ಸಂಪೂರ್ಣ ಸುಳ್ಳು ಎಂಬುದು ಅವರ ನಾಲ್ಕು ತಿಂಗಳ ಆಡಳಿತದಲ್ಲಿ ಸಾಬೀತಾಗಿದೆ. ಜಾತಿ ರಾಜಕಾರಣವನ್ನೇ ಅಸ್ತ್ರ ಮಾಡಿಕೊಂಡಿರುವ ಅವರು ಕೆಲವೇ ಆಯ್ದ ಜನಾಂಗಕ್ಕೆ ಅನುಕೂಲ ಮಾಡಿ ಉಳಿದವರನ್ನು ಸಂಪೂರ್ಣ ಕಡೆಗಣಿಸಿದ್ದಾರೆ ಎಂಬುದು ಅವರದೇ ಪಕ್ಷದ ನಾಯಕರು ನುಡಿದಿರುವ ಸತ್ಯ.

ಚುನಾವಣಾ ಪೂರ್ವದಲ್ಲಿ ಅಹಿಂದ ಎಂಬ ದಾಳವುರುಳಿಸಿ ರಾಜಕೀಯ ಲಾಭ ಪಡೆದುಕೊಳ್ಳುವ ಸಿದ್ದರಾಮಯ್ಯರವರು, ಚುನಾವಣೆಯ ನಂತರ ಹಿಂದುಳಿದವರನ್ನು ಬಿಟ್ಟು, ತಾವು ಮತ್ತು ತಮ್ಮವರನ್ನು ಮಾತ್ರ ಮುಂದಕ್ಕೆ ಒಯ್ಯತ್ತಾರೆ” ಎಂದು ಬಿ.ಕೆ. ಹರಿಪ್ರಸಾದ್‌ ಅವರು ತುಂಬಿದ ಸಭೆಯಲ್ಲಿ ಗಟ್ಟಿ ಧ್ವನಿಯಲ್ಲಿ ಹೇಳಿ ಸಿದ್ದರಾಮಯ್ಯರವರ ಒಳಗುಣವನ್ನು ಹೊರಹಾಕಿದ್ದಾರೆ.

ಸಿದ್ದರಾಮಯ್ಯರವರ ಅಸಮಾಧಾನ ಹಿಂದುಳಿದ ವರ್ಗಗಳ ನಾಯಕರ ಮೇಲೆ ಮಾತ್ರವಲ್ಲ, ರಾಜ್ಯದ ಹಿಂದುಳಿದ ವರ್ಗಗಳ ಮೇಲೆಯೂ ಅವರ ಅಸಮಾಧಾನ ಜೋರಾಗಿದೆ. ಹಿಂದುಳಿದ ವರ್ಗಗಳನ್ನು ಬಜೆಟ್‌ನಲ್ಲಿ ಕಡೆಗಣಿಸಲು ಇದೇ ಕಾರಣ.

ಅತಿ ಸಣ್ಣ ಹಿಂದುಳಿದ ವರ್ಗಗಳಿಗೆ ಅಭಿವೃದ್ಧಿ ನಿಗಮವೂ ಇಲ್ಲ

ರಾಜ್ಯದ ಪ್ರಮುಖ ಹಿಂದುಳಿದ ಸಮುದಾಯಗಳಾದ ತಿಗಳ, ಮಡಿವಾಳ, ಉಪ್ಪಾರ, ಬಲಿಜ ಸೇರಿದಂತೆ ಇತರ ಸಮುದಾಯಗಳಿಗೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ನಿಗಮಗಳ ಭಾಗ್ಯವಿಲ್ಲ, ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಬಿಡಿಗಾಸಿನ ಅನುದಾನವಿಲ್ಲ, ಇನ್ನು ಅತಿ ಸಣ್ಣ ಹಿಂದುಳಿದ ವರ್ಗಗಳಿಗೆ ಅಭಿವೃದ್ಧಿ ನಿಗಮವೂ ಇಲ್ಲ, ಅನುದಾನವೂ ಇಲ್ಲ. ಇದು ಸಿದ್ದರಾಮಯ್ಯರವರು ಹಿಂದುಳಿದ ವರ್ಗಗಳಿಗೆ ನೀಡಿದ ಮಹಾನ್‌ ಕೊಡುಗೆ!

ಮತ್ತೊಬ್ಬರನ್ನು ರಾಜಕೀಯವಾಗಿ ತುಳಿಯುವ ಗುಣದ ಸಿದ್ದರಾಮಯ್ಯ ರವರು 2013ರಲ್ಲಿ ಕೊರಟಗೆರೆಯಲ್ಲಿ ಡಾ. ಜಿ. ಪರಮೇಶ್ವರ್‌ ಅವರು ಸೋಲುವಂತೆ ನೋಡಿಕೊಂಡಿದ್ದೂ ಅಲ್ಲದೆ, ಇದೀಗ ಅವರ ಗೃಹ ಇಲಾಖೆಗೆ ಉಳಿದವರು ಹಸ್ತಕ್ಷೇಪ ಮಾಡಲು ಕುಮ್ಮಕ್ಕು ನೀಡಿ ಉದ್ದೇಶಪೂರ್ವಕವಾಗಿ ಪರಮೇಶ್ವರ ಅವರನ್ನು ಡಮ್ಮಿ ಮಂತ್ರಿ ಮಾಡಿ ಕೂರಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆಯವರನ್ನು ಲೋಕಸಭೆಗೆ ಕಳುಹಿಸಿದ ಸ್ವಾರ್ಥಿ

ವಿಪಕ್ಷ ಸ್ಥಾನದ ಹುದ್ದೆಗೆ ಅಡ್ಡಗಾಲಾಗಿದ್ದರು ಎಂಬ ಏಕೈಕ ಕಾರಣಕ್ಕೆ ಮಲ್ಲಿಕಾರ್ಜುನ ಖರ್ಗೆಯವರನ್ನು ಲೋಕಸಭೆಗೆ ಕಳುಹಿಸಿದ ಸ್ವಾರ್ಥಿ ಸಿದ್ದರಾಮಯ್ಯರವರು.

ಇನ್ನು ರಾಜ್ಯದ ವೀರಶೈವ-ಲಿಂಗಾಯತ ಸಮುದಾಯದ ವಿರುದ್ದವಂತೂ ಪದೇ ಪದೇ ದ್ವೇಷ ಕಾರಿಕೊಳ್ಳುವ ಸಿಎಂ ಸಿದ್ದರಾಮಯ್ಯರವರು, ಚುನಾವಣೆಗೂ ಮುನ್ನ, ವೀರಶೈವ-ಲಿಂಗಾಯತರೆಲ್ಲರೂ ಭ್ರಷ್ಟರು ಎಂದು ಜರಿದಿದ್ದನ್ನು ರಾಜ್ಯದ ಜನ ಇನ್ನೂ ಮರೆತಿಲ್ಲ ಎಂಬುದನ್ನು ಸಿದ್ದರಾಮಯ್ಯರವರು ಅರಿತುಕೊಳ್ಳುವುದು ಒಳಿತು.

ಈಗ ವೀರಶೈವ-ಲಿಂಗಾಯತ ಸಮುದಾಯಕ್ಕೆ ಸೇರಿದ ಅಧಿಕಾರಿಗಳನ್ನು ಕಡೆಗಣಿಸುತ್ತಿದ್ದಾರೆ ಎಂಬ ನಿಷ್ಠುರ ಸತ್ಯವನ್ನು ಕಾಂಗ್ರೆಸ್‌ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರು ದೂರಿದ್ದಾರೆ. ವೀರಶೈವ-ಲಿಂಗಾಯತ ಸಮುದಾಯದವರಿಗೆ ಸಿಎಂ ಕುರ್ಚಿ ನೀಡಿ ಎನ್ನುವ ಮೂಲಕ ಸಿದ್ದರಾಮಯ್ಯರವರ ನಾಯಕತ್ವದಲ್ಲಿ ತಮಗೆ ನಂಬಿಕೆ ಹಾಗೂ ವಿಶ್ವಾಸವಿಲ್ಲ ಎಂಬ ಸತ್ಯವನ್ನು ಪುನರುಚ್ಛರಿಸಿದ್ದಾರೆ.

ತಮ್ಮ ಸಮುದಾಯ ಸಣ್ಣ ಸಂಖ್ಯೆಯಲ್ಲಿರುವ ಕಾರಣ ತಮಗೆ ಮಂತ್ರಿ ಸ್ಥಾನ ತಪ್ಪಿತು ಎಂಬುದನ್ನು ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿಯವರು ನೋವು ತೋಡಿಕೊಂಡಿದ್ದು, ಸಣ್ಣ ದಲಿತ ಸಮುದಾಯಗಳಿಗೆ ಸಿದ್ದರಾಮಯ್ಯರವರ ಮಂತ್ರಿ ಮಂಡಲದಲ್ಲಿ ಸ್ಥಾನವಿಲ್ಲ ಎಂಬುದಕ್ಕಿದು ಸ್ಪಷ್ಟ ನಿದರ್ಶನ.

ಇದನ್ನೂ ಓದಿ: Lingayat CM : ಲಿಂಗಾಯತ ಸಿಎಂ ಕೂಗು; ಶಾಮನೂರು ಆಕ್ರೋಶಕ್ಕೆ ಕಾಂಗ್ರೆಸ್‌ನಲ್ಲಿ ತಲ್ಲಣ

ಒಟ್ಟಿನಲ್ಲಿ ಸಿದ್ದರಾಮಯ್ಯರವರ ನಾಯಕತ್ವ ಮತ್ತವರ ತುಷ್ಟೀಕರಣದ ರಾಜಕಾರಣ ಹಾಗೂ ಸ್ವಜನಪಕ್ಷಪಾತದಿಂದ ಕೈ ಪಕ್ಷದ ನಾಯಕರೇ ರೋಸಿ ಹೋಗಿರುವುದು ಅವರ ಹೇಳಿಕೆಗಳಿಂದಲೇ ಸಾಬೀತಾಗುತ್ತಿದೆ” ಎಂದು ಬಿಜೆಪಿ ಟ್ವೀಟ್‌ ಮೂಲಕ ಕಿಡಿಕಾರಿದೆ.

Exit mobile version