ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾವಿಬ್ಬರೂ ಒಟ್ಟಾಗಿದ್ದೇವೆ. ನಮ್ಮಿಬ್ಬರ ನಡುವೆ ಬಿರುಕು ಇದೆ ಎನ್ನುವುದು ವಿರೋಧ ಪಕ್ಷಗಳು ಹಾಗೂ ಕೆಲವು ಮಾಧ್ಯಮಗಳ ಸೃಷ್ಟಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬುಧವಾರ ಪ್ರತಿಪಾದಿಸಿದರು.
ತಮ್ಮ 75ನೇ ವರ್ಷದ ಪ್ರಯುಕ್ತ ದಾವಣಗೆರೆಯಲ್ಲಿ ಆಯೋಜನೆ ಮಾಡಲಾಗಿದ್ದ ಬೃಹತ್ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ನೆರೆದಿದ್ದ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದರು.
ನಾನು ಕಾಂಗ್ರೆಸ್ ಸೇರಿದ ದಿನದಿಂದ ಇವತ್ತಿನವರೆಗೂ ರಾಹುಲ್ ಗಾಂಧಿಯವರು ನನ್ನ ಮೇಲೆ ಅಪಾರವಾದ ಪ್ರೀತಿಯನ್ನು ಇಟ್ಟುಕೊಂಡೊದ್ದಾರೆ. ನಾನು ಬೇರೆ ಪಕ್ಷದಿಂದ ಬಂದಿದ್ದರೂ, ರಾಹುಲ್ ಗಾಂಧಿ, ಸೋನಿಯಾ ಗಾಂಧಿಯವರು, ನಾನು ಮುಖ್ಯಮಂತ್ರಿ ಆಗಲು ಕಾರಣ ಎಂಬುದನ್ನು ಇಂದು ನೆನೆಯಬೇಕಿದೆ. ನಾನು ಮುಖ್ಯಮಂತ್ರಿಯಾದ ನಂತರ ಐದು ವರ್ಷ ಬಂಡೆಯಂತೆ ನನಗೆ ಎಲ್ಲ ಸಹಕಾರ, ಬೆಂಬಲವನ್ನು, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಕೊಟ್ಟಿದ್ದಾರೆ ಎಂದರು.
75 ವರ್ಷದಲ್ಲಿ ಸುಮಾರು ಐವತ್ತು ವರ್ಷಗಳು ನಾನು ಈ ನಾಡಿನ ಜನರ ಜತೆ ಇದ್ದೇನೆ. 1972ರ ಆಗಸ್ಟ್ ತಿಂಗಳಲ್ಲಿ ನಾನು ವಕೀಲನಾಗಿ ಸೇರ್ಪಡೆಯಾದೆ. ಆದಾದ ನಂತರ 1978ರಲ್ಲಿ ತಾಲೂಕು ಅಭಿವೃದ್ಧಿ ಮಂಡಲಿ ಸದಸ್ಯನಾದೆ. 83ರಲ್ಲಿ ಶಾಸಕ, 84ರಲ್ಲಿ ಮಂತ್ರಿಯಾದೆ. ಅಂದಿನಿಂದ ಇಂದಿನವರೆಗೆ ನಿರಂತರವಾಗಿ ರಾಜ್ಯದ ಜನರ ಸಂಪರ್ಕವನ್ನು ಇಟ್ಟುಕೊಂಡು ಜನಸೇವೆಯನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ ಎಂದು ನೆನೆದರು.
ಇದನ್ನೂ ಓದಿ | ಡಿಕೆಶಿ-ಸಿದ್ದರಾಮಯ್ಯ ಒಗ್ಗಟ್ಟಿನ ಶಕ್ತಿ ರಾಜ್ಯದ ಬಿಜೆಪಿ ಸರಕಾರವನ್ನು ಕಿತ್ತೊಗೆಯಲಿದೆ ಎಂದ ರಾಹುಲ್ ಗಾಂಧಿ
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನಸೇವೆ, ಜನಶಕ್ತಿಯೇ ಮುಖ್ಯ. ಅದೊಂದು ಇಲ್ಲದಿದ್ದರೆ ಯಾರೂ ದೀರ್ಘ ಕಾಲದವರೆಗೆ ಸೇವೆ ಮಾಡಲು ಸಾಧ್ಯವಾಗುವುದಿಲ್ಲ ಎಂದ ಸಿದ್ದರಾಮಯ್ಯ, ನನಗೆ ಈ ರೀತಿ ನಿರಂತರವಾಗಿ ಜನಸೇವೆ ಮಾಡಲು ಅವಕಾಶ ಸಿಕ್ಕಿದ್ದಕ್ಕೆ ಕರ್ನಾಟಕದ ಜನರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ದೈಹಿಕ, ಮಾನಸಿಕವಾಗಿ ಸದೃಢನಾಗಿರುವವರೆಗೆ ಸಕ್ರಿಯ ರಾಜಕಾರಣದಲ್ಲಿದ್ದುಕೊಂಡು ನಾಡಿನ ಸೇವೆಯನ್ನು ಮಾಡುತ್ತೇನೆ ಎಂದರು.
ತಮ್ಮ ಹಾಗೂ ಶಿವಕುಮಾರ್ ನಡುವಿನ ವಿಚಾರವನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಇದ್ದಾರೆ. ಅನೇಕ ಬಾರಿ ವಿರೋಧ ಪಕ್ಷದವರು ಹಾಗೂ ಮಾಧ್ಯಮದವರು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಬಿರುಕಿದೆ ಎಂದು ಹೇಳುತ್ತಾರೆ. 75ನೇ ಹುಟ್ಟುಹಬ್ಬ ಆಚರಿಸಲು ಶಿವಕುಮಾರ್ ವಿರೋಧ ಇದೆ ಎಂದು ಹೇಳುತ್ತಾರೆ. ಇದು ವಿರೋಧಪಕ್ಷದವರ ಭ್ರಮೆ ಹಾಗೂ ಕೆಲವು ಮಾಧ್ಯಮಗಳ ಸೃಷ್ಟಿ. ನಾನು ಹಾಗೂ ಶಿವಕುಮಾರ್ ಒಟ್ಟಾಗಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಹೇಳಿದರು.
ಇವತ್ತು ನಮ್ಮ ಮುಂದಿರುವ ಸವಾಲು ಎಂದರೆ, ಕರ್ನಾಟಕದಲ್ಲಿರುವ ಭ್ರಷ್ಟ, ಜನಪೀಡಕ ಹಾಗೂ ಕೋಮುವಾದಿ ಸರ್ಕಾರವನ್ನು ಕಿತ್ತೊಗೆದು ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ. ಅದಕ್ಕೆ ಕರ್ನಾಟಕದ ಜನರ ಆಶೀರ್ವಾದ ಬೇಕು. ನನ್ನ 44ವರ್ಷದ ಸಕ್ರಿಯ ರಾಜಕಾರಣದಲ್ಲಿ, ಈಗಿರುವಂತಹ ಬಿಜೆಪಿ ಸರ್ಕಾರದಷ್ಟು ಭ್ರಷ್ಟ, ಕೋಮುವಾದಿ ಸರ್ಕಾವನ್ನು ನೋಡಿರಲಿಲ್ಲ. ನನಗೆ ಹುಟ್ಟುಹಬ್ಬದ ಶುಭ ಕೋರುವುದರ ಮೂಲಕ, ಈ ಕೋಮುವಾದಿ ಸರ್ಕಾರವನ್ನು ಕಿತ್ತೊಗೆಯುತ್ತೇವೆ ಎಂದು ಶಪಥ ಮಾಡಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ | Video | ಸಿದ್ದರಾಮಯ್ಯ @75: ಸಿದ್ದರಾಮೋತ್ಸವಕ್ಕೂ ಮುನ್ನ ಒಂದು ಸಿಪ್ ಬಿಯರ್