Site icon Vistara News

ಸಿದ್ದರಾಮಯ್ಯ ಮತ್ತೆ ಕೊಡಗಿಗೆ ತೆರಳಲು ದಿನಾಂಕ ನಿಗದಿ: ಸಿಎಂ, ಪಿಎಂಗೆ ಬಹಿರಂಗ ಸವಾಲು

siddaramaih on BBC Documentary

ಬೆಂಗಳೂರು: ಮಳೆಯಿಂದಾದ ಹಾನಿ ಪರಿಶೀಲನೆಗೆ ತೆರಳಿದ್ದಾಗ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ತೋರಿಸಿದ್ದಷ್ಟೆ ಅಲ್ಲದೆ ಮೊಟ್ಟೆ ಎಸೆದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಸಿದ್ದರಾಮಯ್ಯ, ಕೊಡಗು ಎಸ್‌ಪಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ತಿಳಿಸಿದ್ದಾರೆ.

ರಾಜ್ಯ ಪೊಲೀಸ್‌ ಇಲಾಖೆ ಸಂಘ ಪರಿವಾರದ ಕೈಗೊಂಬೆ ಆಗಿದೆ. ಬಿಜೆಪಿ ಪಕ್ಷದ ಪುಂಡರ ಗೂಂಡಾಗಿರಿಗೆ ಅವಕಾಶ ನೀಡಿ, ಕೈಕಟ್ಟಿಕೊಂಡು ತಮಾಷೆ ನೋಡುವ ಪೊಲೀಸರ ಕರ್ತವ್ಯ ಲೋಪವನ್ನು ಖಂಡಿಸಿ ಆಗಸ್ಟ್‌ 26ರಂದು ಕೊಡಗಿನ ಎಸ್‌.ಪಿ. ಕಚೇರಿಗೆ ಮುತ್ತಿಗೆ ಹಾಕುತ್ತೇವೆ. ಬಿಜೆಪಿಯ ಗೂಂಡಾಗಿರಿಗೆ ಹೋರಾಟದ ಮೂಲಕವೇ ತಕ್ಕ ಉತ್ತರ ಕೊಡುತ್ತೇವೆ ಎಂದಿದ್ದಾರೆ.

ಸಿದ್ದಾಂತಕ್ಕೆ ಸಿದ್ದಾಂತ ಉತ್ತರವಾಗಬೇಕು. ಸಿದ್ದಾಂತವನ್ನು ಕಲ್ಲು-ಮೊಟ್ಟೆಗಳ ಮೂಲಕ ಎದುರಿಸುವುದು, ಸಮರ್ಥಿಸುವುದು ಹೇಡಿಗಳ ಲಕ್ಷಣ. ಬನ್ನಿ ಚರ್ಚೆ ಮಾಡೋಣ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಹಾಗೂ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಬಹಿರಂಗ ಆಹ್ವಾನ ನೀಡಿದ್ದಾರೆ.

ಗಲಭೆ ಮಾಡಿಸುತ್ತೀರ ಎಂದ ಈಶ್ವರಪ್ಪ

ಬಿಜೆಪಿ ಗೂಂಡಾಗಳು, ಗಲಭೆ ಮಾಡಿಸುತ್ತಾರೆ ಎಂಬ ಸಿದ್ದರಾಮಯ್ಯ ಮಾತಿಗೆ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯನವರೇ, ನನ್ನದು ನಿಮ್ಮಂತೆ ಅಧಿಕಾರಕ್ಕಾಗಿ ವಿಲಿ ವಿಲಿ ಒದ್ದಾಡುವ ಜಾಯಮಾನವಲ್ಲ. ಕಳ್ಳನ ಮನಸ್ಸು ಹುಳ್ ಹುಳ್ಗೆ ಎನ್ನುವ ಗಾದೆ ಮಾತಿನ ರೀತಿಯಲ್ಲಿ ನಿಮ್ಮ ಮನಸ್ಸಿನಲ್ಲಿರುವುದನ್ನೇ ಹೇಳಿದ್ದೀರಿ. ಆಧಿಕಾರದ ಆಸೆಗಾಗಿ ಟಿಪ್ಪುಗೆ ಪೂಜೆ ಮಾಡಿದ ತಮಗೆ, ಬೇಕಾದಾಗ ಗಲಭೆ ಮಾಡಿಸುವ ಅಭ್ಯಾಸವಿದೆ ಎನ್ನುವ ಸತ್ಯ ಗೊತ್ತಿರುವ ವಿಷಯವೇ ಎಂದಿದ್ದಾರೆ.

ಶಿವಮೊಗ್ಗ, ಭದ್ರಾವತಿಯಲ್ಲಿ ಗಲಾಟೆ ಮಾಡಿಸಿದ್ದು ನಾನೆ? ಸಾವರ್ಕರ್ ಫೋಟೊ ಹರಿದು ಹಾಕಿದ್ದು ನಾನೇ? ಆರಾಮವಾಗಿ ಹೋಗುತ್ತಿದ್ದ ಪ್ರೇಮಸಿಂಗ್‌ಗೆ ಚಾಕು ಹಾಕಿಸಿದ್ದು ನಾನೆ? ಎಂದಿರುವ ಈಶ್ವರಪ್ಪ, ಕಾಂಗ್ರೆಸ್‌ನ ಕಾರ್ಪೊರೇಟರ್ ಗಂಡ ಸಾವರ್ಕರ್ ಫೋಟೊ ಹರಿದು ಹಾಕಿದ್ದಾರೆ ಎನ್ನುವುದು ಸ್ಪಷ್ಟವಾಗಿ ಕಾಣುತ್ತಿದೆ. ಇದು ಗೊತ್ತಿದ್ದರೂ ಸಿದ್ದರಾಮಯ್ಯ, ಡಿಕೆಶಿಗೆ ಕ್ಷಮೆ ಕೇಳುವ ಸೌಜನ್ಯ ತೋರಿಲ್ಲ. ಆದಾಗ್ಯೂ ಗಲಾಟೆಗೆ ನಾನೇ ಕಾರಣ ಎನ್ನುವವರಿಗೆ ಇನ್ನೇನು ಹೇಳಲಿ? ಭಂಡರಿಗೆ ಭಂಡತನದ ಉತ್ತರ ಕೊಡಬೇಕಾಗುತ್ತದೆ ಎಂದರು.

ಟ್ವೀಟ್‌ಗಳ ಕುರಿತು ಪ್ರತಿಕ್ರಿಯಿಸಿ, ರಾಜಕಾರಣದಲ್ಲಿ ಟ್ವೀಟ್ ಮಾರ್ ಇದ್ದೇ ಇದೆ. ಎದುರು ಬದುರು ಟೀಕೆನೂ ಮಾಡಿಕೊಳ್ಳುತ್ತೇವೆ, ಒಬ್ಬರನ್ನೊಬ್ಬರು ಹೊಗಳಿಕೊಳ್ಳಲು ರಾಜಕಾರಣ ಇಲ್ಲ. ಅವರಿಗೆ ನಾವು ಬಯ್ಯೋದು, ನಾವು ಅವರಿಗೆ ಬಯ್ಯೋದೇ ರಾಜಕಾರಣ. ನಾವು ತಪ್ಪು ಮಾಡಿದ್ದನ್ನು ಅವರು ಹೇಳುತ್ತಾರೆ, ಅವರು ತಪ್ಪು ಮಾಡಿದ್ದನ್ನು ನಾವು ಹೇಳುತ್ತೇವೆ. ನಾವು ಮಾಡಿದ ಕೆಲಸವನ್ನೆಲ್ಲ ಅವರು ಹೊಗಳುತ್ತಾರ? ಅವರು ಮಾಡಿದ್ದನ್ನು ನಾವು ಹೊಗಳುತ್ತೇವೆಯೇ? ಆಡಳಿತ ದೃಷ್ಟಿಯಿಂದ ಟೀಕೆಯನ್ನು ಒಳ್ಳೆಯ ರೀತಿಯಲ್ಲಿ ನಾವು ಸ್ವೀಕರಿಸುತ್ತೇವೆ ಎಂದರು.

ಸರ್ಕಾರದ ವಿರುದ್ಧ ಕಾಂಗ್ರೆಸ್ ಹೋರಾಟ ವಿಚಾರದಲ್ಲಿ ಪ್ರರಿಕ್ರಿಯಿಸಿ, ಅವರು ಪಕ್ಷದಲ್ಲಿ ಇರುವುದನ್ನು ತೋರಿಸಲು ಬೇಕಾದ್ದನ್ನು ಮಾಡಲಿ. ನಾವು ವಿರೋಧ ಪಕ್ಷದಲ್ಲಿದ್ದಾಗ ಸಾಕಷ್ಟು ಕಾರ್ಯಕ್ರಮ ಮಾಡಿದ್ದೆವು. ಪಾಪ ಅವರು ಮಲಗಿಕೊಂಡಿದ್ದರು. ಈಗ ಅವರಿಬ್ಬರೂ ನಾನೇ ಮುಖ್ಯಮಂತ್ರಿ ಎಂದು ಬಡಿದಾಡುತ್ತಿದ್ದಾರೆ. ಚಿತ್ರದುರ್ಗದ ಜಾತಿ ಸಭೆಯಲ್ಲೂ ಅವರಿಬ್ಬರೂ ಬಡಿದಾಡಿದ್ದಾರೆ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ | ಬಿಜೆಪಿಯ ಗೋಬ್ಯಾಕ್‌ ‌ವಿರುದ್ಧ ಸಿದ್ದರಾಮಯ್ಯ ಗರಂ, ಆ. 26ರಂದು ಕೊಡಗಿನಲ್ಲಿ ಕಾಂಗ್ರೆಸ್‌ ಪ್ರತಿಭಟನೆ

Exit mobile version