ಬೆಂಗಳೂರು: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (Former CM HD Kumaraswamy) ಅವರು ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ (CM Siddaramaiah) ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ವಿರುದ್ಧ ಹರಿಹಾಯ್ದಿದ್ದಾರೆ. ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಚ್‌ಡಿಕೆ, ಸಿಎಂ ಸಿದ್ದರಾಮಯ್ಯಗೆ ಸಚಿವರೊಬ್ಬರು ನೀಡಿರುವ ವಿದೇಶಿ ಸೋಫಾ ಸೆಟ್ (Foreign sofa set) ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಇದು 1 ಕೋಟಿ 90 ಲಕ್ಷ ರೂಪಾಯಿ ಬೆಲೆಬಾಳುವ ಗಿಫ್ಟ್ ಎಂದೂ ಹೇಳಿದ್ದಾರೆ. ಅಲ್ಲದೆ, ಇದು ಇದು ಹ್ಯೂಬ್ಲೋಟ್ ವಾಚ್‌ನ (Hublot Watch) ಅಪ್ಡೇಟೆಡ್ ವರ್ಷನ್ ಎಂದು ಕಾಲೆಳೆದಿದ್ದಾರೆ.
ಸಿಎಂ ಕಚೇರಿಗೆ ಒಂದು ಕಡೆ ಖರ್ಚು ಮಾಡುತ್ತಾ ಇದ್ದಾರೆ. ಅಲ್ಲದೆ, ಕೋಟಿ ಕೋಟಿ ರೂಪಾಯಿ ಬೆಲೆಬಾಳುವ ಸೋಫಾ ಸೆಟ್ ನೀಡಿದ್ದಾರೆ ಎಂಬ ಮಾಹಿತಿ ಬಂದಿದೆ. ವಿದೇಶದಲ್ಲಿ ಸಿಗುವ ಸ್ಟಾಂಗ್ಲೆ ಅನ್ನೊ ವಿದೇಶಿ ಬ್ರಾಂಡ್ ಸೋಫಾ ಸೆಟ್ ಇದಾಗಿದ್ದು, 1 ಕೋಟಿ 90 ಲಕ್ಷ ರೂಪಾಯಿ ಬೆಲೆಬಾಳುತ್ತದೆ. ಇದನ್ನು ಯಾರೋ ಆಪ್ತ ಸಚಿವರೇ ಕೊಟ್ಟಿದ್ದಾರೆ ಎಂಬ ಮಾಹಿತಿಯೂ ಬಂದಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
ಸಿಎಂ ಮನೆಯಲ್ಲಿ ಕಾನ್ಫರೆನ್ಸ್ ಹಾಲ್ ಅನ್ನು ನಿರ್ಮಾಣ ಮಾಡಿದ್ದಾರೆ. ಅದಕ್ಕೆ ಎಷ್ಟು ಖರ್ಚು ಮಾಡಿದ್ದಾರೋ ಗೊತ್ತಿಲ್ಲ. ಅಲ್ಲಿಗೆ ಮಾಧ್ಯಮದವರನ್ನು ಒಳಗೆ ಬಿಟ್ಟಿದ್ದಾರೋ ಇಲ್ಲವೋ ಗೊತ್ತಿಲ್ಲ. ಮೂರು ಕೋಟಿ ರೂಪಾಯಿಗಿಂತಲೂ ಹೆಚ್ಚೋ ಏನೋ ಎಂಬುದು ಗೊತ್ತಿಲ್ಲ. ಈ ಎಲ್ಲರದ ಬಗ್ಗೆ ಸತ್ಯ ಹರಿಶ್ಚಂದ್ರರೇ ಉತ್ತರ ಕೊಡಬೇಕು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.
ಸಿದ್ದರಾಮಯ್ಯ ಕರ್ನಾಟಕದಲ್ಲಿ ಮಾಡಿದ್ದೇನು?
ಸಿಎಂ ಸಿದ್ದರಾಮಯ್ಯ ಅವರು ತೆಲಂಗಾಣದಲ್ಲಿ ಮೋದಿಗೆ ಚಾಲೆಂಜ್ ಮಾಡುತ್ತಾರೆ. ನರೇಂದ್ರ ಮೋದಿ ಅವರು ದೇಶವನ್ನು ದಿವಾಳಿ ಮಾಡಿದ್ದಾರೆ ಅಂತ ಹೇಳುತ್ತಾ ಬರುತ್ತಿದ್ದಾರೆ. ಇಲ್ಲಿ ನೀವು ಕರ್ನಾಟಕದಲ್ಲಿ ಏನು ಮಾಡಿದ್ದೀರಿ? ಈಗ ಎಷ್ಟು ಸಾಲ ಆಗಿದೆ ಗೊತ್ತಾ? 12 ವರ್ಷಗಳಲ್ಲಿ ನಾವೆಲ್ಲ ಸೇರಿ ಒಂದು ಲಕ್ಷ ಕೋಟಿ ಸಾಲ ಮಾಡಿದ್ದೆವು. ನೀವು ಸಿಎಂ ಆಗಿದ್ದ 2013 ರಿಂದ 2018 ತನಕ 2 ಲಕ್ಷ 42 ಸಾವಿರ ಕೋಟಿ ಸಾಲ ಮಾಡಿದ್ದೀರಿ ಸಿದ್ದರಾಮಯ್ಯ ಅವರೇ. ನೀವು ಈಗ ಮೋದಿ ಅವರಿಗೆ ಚಾಲೆಂಜ್ ಮಾಡಿದ್ದೀರಿ ಎಂದು ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು.
ರಾಜ್ಯದಲ್ಲಿ ದುಡ್ಡಿಗೇನು ಬರ ಇಲ್ಲ
ಕರ್ನಾಟಕದಲ್ಲಿ 5,71,665 ಕೋಟಿ ರೂಪಾಯಿ ಸಾಲ ಈಗ ಇದೆ. ಇನ್ನು 85815 ಕೋಟಿ ರೂಪಾಯಿ ಸಾಲದ ಗುರಿ ಇಟ್ಟುಕೊಂಡಿದ್ದೀರಿ. ಸಾಲಕ್ಕೆ 56 ಕೋಟಿ ರೂಪಾಯಿ ಕಟ್ಟಬೇಕು. ಇದನ್ನು ನಿಮ್ಮ ಅಧಿಕಾರಿಗಳೇ ಹೇಳುತ್ತಿದ್ದಾರೆ. ಬರದಿಂದ ರಾಜ್ಯ ಅಸ್ತವ್ಯಸ್ತವಾಗಿದೆ. ಆದರೆ, ರಾಜ್ಯದಲ್ಲಿ ದುಡ್ಡಿಗೇನು ಬರ ಇಲ್ಲ, ಬ್ಲಾಕ್ ಮನಿಗೇನೂ ಕಡಿಮೆ ಇಲ್ಲ. ಒಬ್ಬರ ಮನೆಯಲ್ಲಿ 42 ಕೋಟಿ ರೂಪಾಯಿ ಸಿಕ್ಕಿದೆಯಲ್ಲವೇ? ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.
ಸಿಎಂಗೆ ಕಾಂಗ್ರೆಸ್ ಹೈಕಮಾಂಡ್‌ನಿಂದ ಡೆಡ್‌ಲೈನ್; ಎಚ್‌ಡಿಕೆ ಹೇಳಿರುವ ವಿಡಿಯೊ ಇಲ್ಲಿದೆ
ಬೇರೆ ರಾಜ್ಯದಲ್ಲೂ ವೈಎಸ್‌ಟಿ, ಎಸ್‌ಎಸ್‌ಟಿ ಟ್ಯಾಕ್ಸ್
ನೀವು ನಮ್ಮ ರಾಜ್ಯಕ್ಕೆ ಗ್ಯಾರಂಟಿಗಳಿಂದ ಕೊಟ್ಟಿದ್ದು ಕರೆಪ್ಷನ್, ಕಮಿಷನ್ ಕೊಡುಗೆ. ರಾಜ್ಯದಲ್ಲಿ ಅಭಿವೃದ್ಧಿಗೆ ನಿಮ್ಮ ಕೊಡುಗೆ ದೊಡ್ಡ ಶೂನ್ಯ. ನಿಮ್ಮ ಕಾಂಗ್ರೆಸ್ ಶಾಸಕರೇ ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಅತಿ ಹೆಚ್ಚು ಸಾಲ ಪಡೆಯುತ್ತಿರುವ ಕೀರ್ತಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ. ಗ್ಯಾರಂಟಿಗಳ ಮೂಲಕ ಬೇರೆ ರಾಜ್ಯದಲ್ಲೂ ವೈಎಸ್‌ಟಿ, ಎಸ್‌ಎಸ್‌ಟಿ ಟ್ಯಾಕ್ಸ್ ಸಂಗ್ರಹ ಮಾಡಲು ಹೊರಟಿದ್ದೀರಾ ಎಂದು ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಇದನ್ನೂ ಓದಿ: BY Vijayendra : ನ.15ಕ್ಕೆ ಪದಗ್ರಹಣ, ವಿಪಕ್ಷ ನಾಯಕನ ಆಯ್ಕೆ ಬಳಿಕವೇ ದೆಹಲಿಗೆ ಹೋಗುವೆ: ಬಿ.ವೈ. ವಿಜಯೇಂದ್ರ
ಬಿಜೆಪಿ ಜತೆ ವಿಲೀನ ಇಲ್ಲವೇ ಇಲ್ಲ
ಬಿ.ವೈ. ವಿಜಯೇಂದ್ರ ಅವರ ನೇಮಕವನ್ನು ನಾನು ಸ್ವಾಗತ ಮಾಡುತ್ತೇನೆ. ನಮ್ಮ ಉದ್ದೇಶ ಇರೋದು ಇಂತಹ ಕೆಟ್ಟ ಸರ್ಕಾರ ತೆಗೆಯೋದಷ್ಟೇ. ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ವಿಪಕ್ಷ ನಾಯಕ ಆಯ್ಕೆ ಬಗ್ಗೆ ಅವರು ಹೇಳಿದ್ದಾರೆ. ಆದರೆ, ಬಿಜೆಪಿ ಜತೆ ಜೆಡಿಎಸ್ ವಿಲೀನ ಪ್ರಶ್ನೆಯೇ ಇಲ್ಲ. ಎನ್‌ಡಿಎಗೆ ಬೆಂಬಲ ನೀಡಿದ್ದೇವೆ. ಹೀಗಾಗಿ ನಾವು ಜತೆಗಿದ್ದೇವೆ ಅಷ್ಟೇ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.