ಬೆಂಗಳೂರು: ರಾಜ್ಯಸಭಾ ಚುನಾವಣೆಗೆ (Rajya sabha Election) ಸಂಬಂಧಿಸಿ ಅತಿ ದೊಡ್ಡ ಬೆಳವಣಿಗೆಯೊಂದು ನಡೆದಿದೆ. ಬಿಜೆಪಿಯಿಂದ ಗೆದ್ದ ಯಶವಂತಪುರ ಶಾಸಕ ಎಸ್.ಟಿ ಸೋಮಶೇಖರ್ (ST Somashekhar) ಅವರು ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಥವಾ ಮೈತ್ರಿ ಅಭ್ಯರ್ಥಿಗೆ ಮತ ಹಾಕುವ ಬದಲು ಕಾಂಗ್ರೆಸ್‌ನ ಮೂರನೇ ಅಭ್ಯರ್ಥಿಗೆ (Congress Candidate) ಮತ ಹಾಕಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಬಿಜೆಪಿಯ ಚುನಾವಣಾ ಏಜೆಂಟ್ ಆಗಿರುವ ಸುನಿಲ್ ಕುಮಾರ್ ಅವರು ಕೂಡಾ ಇದನ್ನು ಸ್ಪಷ್ಟಪಡಿಸಿದ್ದಾರೆ. ಈಗ ಸೋಮಶೇಖರ್ ವಿರುದ್ಧ ಶಿಸ್ತು ಕ್ರಮಕ್ಕೆ ಬಿಜೆಪಿ ಮುಂದಾಗಿದೆ. ಎಸ್‌ಟಿಎಸ್ ಅವರ ಈ ನಡೆಗೆ ವ್ಯಗ್ರವಾಗಿರುವ ಬಿಜೆಪಿಯು ಮುಂದಿನ ಕ್ರಮಕ್ಕಾಗಿ ಬಿರುಸಿನ ಚಟುವಟಿಕೆ ನಡೆಸಿದೆ.
ಮತದಾನಕ್ಕೆ ಮೊದಲೇ ಅಡ್ಡ ಮತದಾನದ ಸುಳಿವು ಕೊಟ್ಟಿದ್ದ ಎಸ್.ಟಿ. ಸೋಮಶೇಖರ್ ಅವರು ಮತಪೆಟ್ಟಿಗೆ ಬಳಿ ತೆರಳಿ ತಮ್ಮ ಮೊದಲ ಪ್ರಾಶಸ್ತ್ಯದ ಮತವನ್ನು ಕಾಂಗ್ರೆಸ್‌ಗೆ ಹಾಕಿದ್ದಾರೆ ಎನ್ನಲಾಗಿದೆ. ಇದನ್ನು ಬಿಜೆಪಿ ಚುನಾವಣಾ ಏಜೆಂಟ್ ಆಗಿರುವ ಸುನಿಲ್ ಕುಮಾರ್ ಅವರಿಗೆ ತೋರಿಸಿದ್ದಾರೆ. ಬಳಿಕ ಹೋಗಿ ಮತ ಚಲಾವಣೆ ಮಾಡಿದ್ದಾರೆ. ಎಸ್.ಟಿ. ಸೋಮಶೇಖರ್ ಮತ ಚಲಾವಣೆ ಮಾಡುತ್ತಿದ್ದಂತೆ ಸುನಿಲ್ ಕುಮಾರ್ ಅವರು ಪ್ರತಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಗಮನಕ್ಕೆ ತಂದಿದ್ದಾರೆ. ಎಸ್.ಟಿ. ಸೋಮಶೇಖರ್ ಅಡ್ಡ ಮತದಾನ ಮಾಡಿದ್ದಾರೆ ಎಂಬುದು ಗಮನಕ್ಕೆ ಬರುತ್ತಿದ್ದಂತೆ ಅಲರ್ಟ್ ಆದ ಬಿಜೆಪಿ, ಶಿಸ್ತು ಕ್ರಮವನ್ನು ತೆಗೆದುಕೊಳ್ಳಲು ಮುಂದಾಗಿದೆ.
ಹೈಕೋರ್ಟ್ ವಕೀಲರ ಕರೆಸಿಕೊಂಡ ಬಿಜೆಪಿ
ಬಿಜೆಪಿ ನಾಯಕರಾದ ಬಿ.ವೈ. ವಿಜಯೇಂದ್ರ, ಆರ್. ಅಶೋಕ್ ಸೇರಿದಂತೆ ಇನ್ನಿತರರು ಕೂಡಲೇ ಹೈಕೋರ್ಟ್‌ನಿಂದ ವಕೀಲರನ್ನು ಕರೆಸಿಕೊಂಡು ಚರ್ಚೆ ನಡೆಸಿದ್ದಾರೆ. ವಿಪ್ ಉಲ್ಲಂಘನೆಯನ್ನು ಮಾಡಲಾಗಿದೆ. ಈ ಬಗ್ಗೆ ಯಾವೆಲ್ಲ ಕ್ರಮವನ್ನು ತೆಗೆದುಕೊಳ್ಳಬಹುದು? ಎಂಬಿತ್ಯಾದಿ ವಿಷಯಗಳ ಬಗ್ಗೆ ಚರ್ಚೆಯನ್ನು ನಡೆಸಲಾಗಿದೆ. ಹೀಗಾಗಿ ಯಾವ ಕ್ರಮವನ್ನು ಕೈಗೊಳ್ಳಬಹುದು ಎಂಬ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿವೆ.
ಬಿಜೆಪಿಯ ದೊಡ್ಡನಗೌಡ ಪಾಟೀಲ್ ಮಾತನಾಡಿ, ಎಸ್.ಟಿ. ಸೋಮಶೇಖರ್, ಹೆಬ್ಬಾರ್ ಇಬ್ಬರಿಗೂ ವಿಪ್ ನೋಟಿಸ್ ನೀಡಿದ್ದೆವು. ಸೋಮಶೇಖರ್ ಅಡ್ಡ ಮತದಾನ ಮಾಡಿದ್ದಾರೆ. ಶಿಸ್ತು ಕ್ರಮ ಆಗಬೇಕು ಅಂತ ಚರ್ಚೆಯಾಗುತ್ತಿದೆ. ಪಕ್ಷದ ನಿರ್ಣಯಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ. ಅವರ ಮನೆಗೆ ಖುದ್ದಾಗಿ ತೆರಳಿ ನೋಟಿಸ್ ನೀಡಲಾಗಿದೆ. ಮುಂದಿನ ಕ್ರಮಕ್ಕೆ ನಾಯಕರ ಚರ್ಚೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಬಾಂಡಗೆ ಅವರಿಗೆ ಮತ್ತೊಂದು ವೋಟ್ ಹಾಕಿಸಲು ನಿರ್ಧಾರ
ಎಸ್.ಟಿ. ಸೋಮಶೇಖರ್ ಅವರ ಅಡ್ಡ ಮತದಾನದ ಬಳಿಕ ಎಚ್ಚೆತ್ತ ಬಿಜೆಪಿ ನಾಯಕರು ತಮ್ಮ ಅಭ್ಯರ್ಥಿ ನಾರಾಯಣಸಾ ಬಾಂಡಗೆ ಅವರಿಗೆ ಮತ್ತೊಂದು ವೋಟ್ ಹಾಕಿಸಲು ಮುಂದಾಗಲಾಗಿದೆ ಎಂದು ಹೇಳಿದ್ದಾರೆ.
ಬಿಜೆಪಿ ಮುಂದೆ ಇರುವ ಆಯ್ಕೆಗಳು?
- ಎಸ್.ಟಿ. ಸೋಮಶೇಖರ್ಗೆ ನೋಟಿಸ್ ಕೊಡುವುದು
- ಸಕಾರಣ ಕೊಡದಿದ್ದರೆ ಪಕ್ಷದಿಂದ ಉಚ್ಚಾಟನೆ ಮಾಡಬಹುದು
- ಸ್ಪೀಕರ್ ಮೊರೆ ಹೋಗಬಹುದು
- ವಿಪ್ ಉಲ್ಲಂಘನೆ ಮಾಡಿ ಪಕ್ಷಾಂತರ ನಿಷೇಧ ಕಾಯಿದೆ ಅಡಿ ಕ್ರಮ ಜರುಗಿಸುವಂತೆ ಮನವಿ ಮಾಡಬಹುದು
ಇದನ್ನೂ ಓದಿ: Rajyasabha Election : ಅಡ್ಡ ಮತದಾನ ಮಾಡಿದ ಸೋಮಶೇಖರ್ ವಿರುದ್ಧ HDK ಕೆಂಡಾಮಂಡಲ
ಎಸ್‌ಟಿಎಸ್ ಶಾಸಕತ್ವಕ್ಕೆ ಏನೂ ತೊಂದರೆ ಇಲ್ಲ?
ಪಕ್ಷಾಂತರ ನಿಷೇಧ ಕಾಯ್ದೆಯ ಶೆಡ್ಯೂಲ್ 10 ಅಡಿ ನೀಡಿರುವ ವಿಪ್ ಅನ್ವಯ ಎಸ್.ಟಿ. ಸೋಮಶೇಖರ್ ಅವರ ಶಾಸಕತ್ವಕ್ಕೆ ಯಾವುದೇ ಸಮಸ್ಯೆ ಬಾರದು ಎಂದು ಹೇಳಲಾಗುತ್ತಿದೆ. ಅಂದರೆ ಈ ಕಾಯ್ದೆಯಡಿ ಸೋಮಶೇಖರ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ, ಶಿಸ್ತು ಕ್ರಮ ಕೈಗೊಳ್ಳುವಂತೆ ಬಿಜೆಪಿಯು ಸ್ಪೀಕರ್ ಮೊರೆ ಹೋಗಬಹುದಾಗಿದೆ. ಆಗ ಎಸ್‌ಟಿಎಸ್ ನೀಡುವ ಕಾರಣವನ್ನು ಪರಿಗಣಿಸಿ ಅವರ ಮೇಲೆ ಕ್ರಮವನ್ನು ತೆಗೆದುಕೊಳ್ಳುವುದು ಬಿಡುವುದು ಸ್ಪೀಕರ್‌ಗೆ ಬಿಟ್ಟ ವಿಚಾರವಾಗಿದೆ. ಹೀಗಾಗಿ ಇಲ್ಲಿ ಸ್ಪೀಕರ್ ನಿರ್ಣಯವೇ ಅಂತಿಮವಾಗಿರುತ್ತದೆ.