ಬೆಂಗಳೂರು: ಬೆಂಗಳೂರಿನ ನೈಋತ್ಯ ರೈಲ್ವೆ ವಲಯದ (South Western Railway Zone) ಮೂಲಕ ಹಾದುಹೋಗುವ 2 ವಂದೇ ಭಾರತ್ ರೈಲುಗಳ (Vande Bharat Train) ಮೇಲೆ ಇತ್ತೀಚೆಗೆ ಮೂರು ಕಡೆ ಪ್ರತ್ಯೇಕವಾಗಿ ಕಲ್ಲು ತೂರಾಟದ ಪ್ರಕರಣಗಳು ನಡೆದಿವೆ. ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ಭಾನುವಾರ (ಮಾ.03) ರಂದು ದುಷ್ಕರ್ಮಿಗಳು ಕಲ್ಲು ತೂರಿದ್ದು, ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣಗಳನ್ನು ರೈಲ್ವೆ ಇಲಾಖೆ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿದೆ. ಈ ವರ್ಷವೊಂದರಲ್ಲೇ ವಂದೇ ಭಾರತ್ ರೈಲಿನ ಮೇಲೆ 10 ಬಾರಿ ಕಲ್ಲು ತೂರಾಟ ನಡೆಸಿದ ಪ್ರಕರಣಗಳು ಬೆಳಕಿಗೆ ಬಂದಿದೆ. ಕಳೆದ ವರ್ಷ 40 ಕಲ್ಲು ತೂರಾಟ ಪ್ರಕರಣಗಳು ನಡೆದಿದ್ದವು. ಅದೃಷ್ಟವಶಾತ್ ಈ ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಗಾಯವಾಗಿಲ್ಲ. ಆದರೆ, ರೈಲುಗಳ ಕಿಟಕಿ ಗಾಜುಗಳಿಗೆ ಹಾನಿಯಾಗಿವೆ.
ಕೆಎಸ್ಆರ್ ಬೆಂಗಳೂರು-ಧಾರವಾಡ (20661/20662) ಮಧ್ಯೆ ಸಂಚರಿಸುವ ವಂದೇ ಭಾರತ್ ರೈಲಿನ ಮೇಲೆ ಎರಡು ಬಾರಿ ಮತ್ತು ಮೈಸೂರು-ಚೆನ್ನೈ ಸೆಂಟ್ರಲ್ ವಂದೇ ಭಾರತ್ (20608) ರೈಲಿನ ಮೇಲೆ ಕಲ್ಲು ತೂರಲಾಗಿದೆ. ಭಾನುವಾರ (ಮಾ.03) ರಂದು ಬೆಂಗಳೂರಿನಿಂದ ಧಾರವಾಡದ ಕಡೆ ಹೊರಟಿದ್ದ ವಂದೇ ಭಾರತ್ ರೈಲಿನ ಮೇಲೆ ಚಿಕ್ಕಬಾಣಾವರ ರೈಲು ನಿಲ್ದಾಣದ ಬಳಿ ಮುಂಜಾನೆ 6.15ಕ್ಕೆ ಕಲ್ಲು ತೂರಲಾಗಿದೆ. ಇದೇ ರೈಲು ಧಾರವಾಡದಿಂದ ಬೆಂಗಳೂರಿಗೆ ಬರುವಾಗ ಮಾರ್ಗ ಮಧ್ಯೆ ಹಾವೇರಿ ಮತ್ತು ಹರಿಹರ ರೈಲು ನಿಲ್ದಾಣಗಳ ಸಮೀಪ ಮಧ್ಯಾಹ್ನ 3.30ರ ಸುಮಾರಿಗೆ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ.
ಬೆಂಗಳೂರು ಮುಖಾಂತರ ಹಾದು ಚೈನ್ನೈ ತಲುಪುವ ಮೈಸೂರು-ಚೆನ್ನೈ ಸೆಂಟ್ರಲ್ ವಂದೇ ಭಾರತ್ ರೈಲು ಮಾರ್ಗ ಮಧ್ಯೆ ಆಂಧ್ರಪ್ರದೇಶದ ಮೂಲಕ ಹಾದು ಹೋಗುತ್ತದೆ. ಈ ರೈಲು ಕುಪ್ಪಂ ನಿಲ್ದಾಣದ ಬಳಿ ಬಂದಾಗ ಸಂಜೆ 4.30ರ ಸುಮಾರಿಗೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ.
ಎರಡು ಕಲ್ಲು ತೂರಾಟಗಳು ಬೆಂಗಳೂರು ರೈಲು ನಿಲ್ದಾಣ ವ್ಯಾಪ್ತಿಯಲ್ಲಿ ಸಂಭವಿಸಿದರೆ (ಚಿಕ್ಕಬಾಣಾವವಾರ ಮತ್ತು ಹಾವೇರಿ-ಹರಿಹರ) ಮೂರನೇ ಕಲ್ಲು ತೂರಾಟ ಪ್ರಕರಣು ಮೈಸೂರು ರೈಲು ನಿಲ್ದಾಣ ವ್ಯಾಪ್ತಿಯಲ್ಲಿ ನಡೆದಿದೆ.
ಆರೋಪಿಗಳ ಪತ್ತೆ ಸುಲಭವೇ?
ಪದೆ ಪದೇ ಕಲ್ಲು ತೂರಾಟ ಪ್ರಕರಣಗಳು ಸಂಭವಿಸುತ್ತಿರುವುದರಿಂದ ರೈಲ್ವೆ ಇಲಾಖೆಗೆ ನಷ್ಟ ಉಂಟಾಗುತ್ತದೆ. ಅಲ್ಲದೆ, ಆರೋಪಿಗಳ ಪತ್ತೆ, ಬಂಧನ ಕಾರ್ಯವೂ ಅಷ್ಟು ಸುಲಭವಲ್ಲ. ಕೆಲವು ಸಂದರ್ಭದಲ್ಲಿ ಮಕ್ಕಳು, ಮದ್ಯವ್ಯಸನಿಗಳು ಇಲ್ಲವೇ ಮಾದಕ ವ್ಯಸನಿಗಳು ಎಸಗಿರುವುದು ಗೊತ್ತಾಗಿದೆ. ಈಗ ರೈಲಿನ ಒಳಗೆ ಇರುವ ಹಾಗೂ ಹೊರಗಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದು, ಆರೋಪಿಗಳನ್ನು ಶೀಘ್ರದಲ್ಲೇ ಪತ್ತೆ ಹಚ್ಚಲಾಗುವುದು. ಆದರೆ, ರೈಲು ಗಂಟೆಗೆ 100 ಕಿಮೀ ವೇಗದಲ್ಲಿ ಚಲಿಸುವುದರಿಂದ ಸಿಸಿ ಕ್ಯಾಮೆರಾದ ದೃಶ್ಯಗಳನ್ನು ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಲು ಸ್ವಲ್ಪ ಕಷ್ಟವಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: JP Nadda: ರಾಜ್ಯಸಭೆ ಸದಸ್ಯ ಸ್ಥಾನಕ್ಕೆ ಜೆ.ಪಿ. ನಡ್ಡಾ ರಾಜೀನಾಮೆ; ಚುನಾವಣೆ ಸ್ಪರ್ಧೆ ಫಿಕ್ಸ್?
5 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು!
ಸೆಕ್ಷನ್ 147 (ರೈಲ್ವೆ ಹಳಿಯಲ್ಲಿ ಅತಿಕ್ರಮಣ) ಮತ್ತು ಸೆಕ್ಷನ್ 153 (ಉದ್ದೇಶ ಪೂರ್ವಕ ಕ್ರಿಯೆ ಅಥವಾ ಲೋಪದಿಂದ ರೈಲ್ವೆಯಲ್ಲಿ ಪ್ರಯಾಣಿಸುವ ವ್ಯಕ್ತಿಗಳ ಸುರಕ್ಷತೆಗೆ ಅಪಾಯವನ್ನುಂಟು ಮಾಡುವುದು) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗುತ್ತದೆ. ರೈಲುಗಳ ಮೇಲೆ ಕಲ್ಲು ತೂರಾಟ ನಡೆಸುವುದು ಕ್ರಿಮಿನಲ್ ಅಪರಾಧವಾಗಿದೆ. ರೈಲ್ವೇ ಕಾಯ್ದೆ ಸೆಕ್ಷನ್ 153ರ ಅಡಿಯಲ್ಲಿ 5 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ.