ಬೆಂಗಳೂರು: ರಾಜ್ಯ ಬಿಜೆಪಿಯ ಡೈನಮಿಕ್ ನಾಯಕ, ಹಲವು ಹೋರಾಟಗಳನ್ನು ಮುನ್ನಡೆಸಿದ ಕಾರ್ಯತಂತ್ರ ನಿಪುಣ (Strategist) ಎನ್. ರವಿ ಕುಮಾರ್ (N Ravikumar) ಈಗ ವಿಧಾನ ಪರಿಷತ್‌ನಲ್ಲಿ (Legislative Council) ವಿರೋಧ ಪಕ್ಷದ ಸಚೇತಕರಾಗಿದ್ದಾರೆ (Chief Whip of Opposition Party). ಪಕ್ಷದ ನಿಲುವುಗಳನ್ನು ಸಮರ್ಥವಾಗಿ ಸಮರ್ಥಿಸಬಲ್ಲ, ಶಿಸ್ತಿಗೆ ಇನ್ನೊಂದು ಹೆಸರಾದ ಎನ್. ರವಿ ಕುಮಾರ್ ಅವರು ಮೇಲ್ಮನೆಯಲ್ಲಿ ಪಕ್ಷವನ್ನು ಸಚೇತಕರಾಗಿ ಮುನ್ನಡೆಸಲಿದ್ದಾರೆ. ಅವರ ಹೋರಾಟದ ಛಲ, ದೇಶ ವಿರೋಧಿಗಳಿಗೆ ಸಿಂಹಸ್ವಪ್ನರಾಗಿರುವ ರೀತಿಯಿಂದಾಗಿ ಪಕ್ಷದ ಗೆಳೆಯರ ಬಳಗದಲ್ಲಿ ಇವರು ಟೈಗರ್ ರವಿ ಎಂದೇ ಜನಪ್ರಿಯರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಅವರು ಈ ನೇಮಕವನ್ನು (25-11-2023) ಮಾಡುವ ಮೂಲಕ ಪಕ್ಷದ ಸಂಘಟನಾತ್ಮಕ ಹಿನ್ನೆಲೆಯ ಎಲ್ಲ ಆಳ ಅಗಲಗಳನ್ನು ಬಲ್ಲ ಬಲಿಷ್ಠ ವ್ಯಕ್ತಿಗೆ ಗೌರವದ ಸ್ಥಾನಮಾನ ನೀಡಿದ್ದಾರೆ. ಎನ್. ರವಿ ಕುಮಾರ್ ಅವರು ಇದುವರೆಗೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ (BJP State General Secretary) ಸ್ಮರಣೀಯ ಕೆಲಸ ಮಾಡಿದ್ದರು.
ಎನ್. ರವಿ ಕುಮಾರ್ ಅವರ ಹೋರಾಟದ ಹಾದಿ
- ಎನ್ ರವಿಕುಮಾರ್ ಅವರು ಮೂಲತಃ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹುಚ್ಚಂಗಿಪುರ ಗ್ರಾಮದವರು.
- ಹಿಂದುಳಿದ ವರ್ಗದ ಕೋಲಿ ಗಂಗಾಮತ ಸಮಾಜದವರಾಗಿದ್ದು, 2 ಜನವರಿ 1967 ರಲ್ಲಿ ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದವರು.
- ಉತ್ತಮ ಶೈಕ್ಷಣಿಕ ಹಿನ್ನೆಲೆಯನ್ನು ಹೊಂದಿರುವ ರವಿಕುಮಾರ್ ಬಿ.ಎ, ಬಿ.ಎಡ್ ಶಿಕ್ಷಣವನ್ನು ಪೂರೈಸಿದ್ದಾರೆ.
- ಕಾಲೇಜು ದಿನಗಳಿಂದಲೇ ವಿದ್ಯಾರ್ಥಿ ನಾಯಕತ್ವ, ಹೋರಾಟಗಳಲ್ಲಿ ಮಂಚೂಣಿ ನಾಯಕತ್ವ, ಸಮಾಜದ ಬಗ್ಗೆ ಅಪಾರವಾದ ಕಾಳಜಿ, ಸಮಾಜದ-ದೇಶದ ಸಮಸ್ಯೆಗಳ ಬಗ್ಗೆ ಚಿಂತನೆಯನ್ನು ಹೊಂದಿದವರು.
- ಕಾಲೇಜು ದಿನಗಳಲ್ಲೇ ವಿಶ್ವದ ನಂ.1 ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸಂಪರ್ಕಕ್ಕೆ ಬಂದಿದ್ದರು.
- 1991ರಿಂದ 2015ರ ವರೆಗೆ ಎಬಿವಿಪಿ ಪೂರ್ಣಾವಧಿ ಕಾರ್ಯಕರ್ತರಾಗಿ ಸುಮಾರು 25 ವರ್ಷಗಳಷ್ಟು ವಿದ್ಯಾರ್ಥಿ ಪರಿಷತ್‌ನಲ್ಲಿ ಕಾರ್ಯನಿರ್ವಹಿಸಿದ್ದಾರೆ.
- ನಗರ ಸಂಘಟನಾ ಕಾರ್ಯದರ್ಶಿಯಿಂದ ರಾಜ್ಯ ಕಾರ್ಯದರ್ಶಿ, ರಾಜ್ಯ ಸಂಘಟನಾ ಕಾರ್ಯದರ್ಶಿ, ರಾಷ್ಟ್ರೀಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಅನುಭವ.
- ಅಂದಿನ ಯುಪಿಎ ಸರ್ಕಾರದ ಹಗರಣಗಳ ವಿರುದ್ಧದ ಭ್ರಷ್ಟಾಚಾರ ವಿರೋಧಿ ಆಂದೋಲನದ ರಾಷ್ಟ್ರೀಯ ಸಹ ಸಂಯೋಜಕರಾಗಿ ದೇಶಾದ್ಯಂತ ಜನಜಾಗೃತಿ ಕಾರ್ಯಕ್ರಮ ಮಾಡಿದ್ದಾರೆ.
- ಪರಿಷತ್ತಿನ ಕರ್ನಾಟಕ ಹಾಗೂ ಕೇರಳದ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಸೇರಿದಂತೆ ಮೊದಲಾದ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
- ಈದ್ಗಾ ಮೈದಾನದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಹೋರಾಟದ ನೇತೃತ್ವವನ್ನು ವಹಿಸುವುದರ ಜೊತೆಗೆ ರಾಜ್ಯದ ಸಿ.ಇ.ಟಿ ಸಮಸ್ಯೆ, ಡೋನೆಷನ್ ಹಾವಳಿ, ವಿಶ್ವ ಸುಂದರಿಯರ ಸ್ಪರ್ಧೆ ವಿರುದ್ಧ ಹೋರಾಟ, ಭ್ರಷ್ಟ ಕುಲಪತಿಗಳ ವಿರುದ್ಧ ಉಪವಾಸ ಸತ್ಯಾಗ್ರಹ, ಯುಪಿಯ ಸರ್ಕಾರದ ಹಗರಣಗಳ ವಿರುದ್ಧ ಹೋರಾಟ, ದೇಶದ್ರೋಹಿ ಭಯೋತ್ಪಾದನೆ ಹಾಗೂ ನಕ್ಸಲ್ರ ವಿರುದ್ಧ ಹೋರಾಟ, ಹೀಗೆ ಹಲವಾರು ಹೋರಾಟಗಳನ್ನು ಕಟ್ಟುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.
- ರಾಜ್ಯದ ಎಲ್ಲಾ ಕಾಲೇಜು ಕ್ಯಾಂಪಸ್ಗಳಲ್ಲಿ ದೇಶಭಕ್ತಿಯಾದ 1857ರ ಸ್ವಾತಂತ್ರ್ಯ ಸಂಗ್ರಾಮದ ರಥಯಾತ್ರೆ, ಹುತಾತ್ಮ ಭಗತ್ ಸಿಂಗ್ ಅವರ 100ನೇ ವರ್ಷಾಚರಣೆಯನ್ನು ಮುನ್ನಡೆಸಿದ್ದಾರೆ.
- ಎಬಿವಿಪಿಗೆ 60ರ ಸಂಭ್ರಮಾಚರಣೆ ಹಾಗೂ ಸ್ವಾಮಿ ವಿವೇಕಾನಂದರ 150ನೇ ಜನ್ಮಾಚರಣೆ ಸಂದರ್ಭದಲ್ಲಿ ಪರಿಷತ್ತಿನ ಕಿರು ಹೊತ್ತಿಗೆಗಳನ್ನು ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ಎಬಿವಿಪಿಯ ಪರಿಚಯ ತಲುಪುವಲ್ಲಿ ಶ್ರಮವಹಿಸಿದ್ದಾರೆ.
- ದೇಶದ ಅನೇಕ ಶೈಕ್ಷಣಿಕ, ಸಾಮಾಜಿಕ ಆಂದೋಲನಗಳನ್ನು ಕಟ್ಟಿದ್ದಾರೆ. ಪ್ರಮುಖವಾಗಿ ಅಕ್ರಮ ಬಾಂಗ್ಲಾ ನುಸುಳುಕೋರರ ವಿರುದ್ಧ “ಚಿಕನ್ನೆಕ್ ಚಲೋ” ಹೋರಾಟ, ಹೀಗೆ ಹಲವಾರು ಹೋರಾಟಗಳನ್ನು ಕಟ್ಟುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.
ಎಬಿವಿಪಿಯಿಂದ ಬಿಜೆಪಿಗೆ ಪಾದಾರ್ಪಣೆ
2015ರಲ್ಲಿ ಎಬಿವಿಪಿಯ ಎಲ್ಲ ಜವಾಬ್ದಾರಿಗಳಿಂದ ಮುಕ್ತರಾಗಿ, ನಂತರ ಸಂಘಪರಿವಾರದ ರಾಜಕೀಯ ಪಕ್ಷವಾದ ಬಿಜೆಪಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿಯನ್ನು ಹೊತ್ತು ರಾಜ್ಯದ ಎಲ್ಲಾ ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಪ್ರವಾಸವನ್ನು ಮಾಡಿ ಪಕ್ಷದ ಸಂಘಟನೆಯನ್ನು ಬೆಳೆಸಲು ಶ್ರಮಪಡುತ್ತಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ನಿರಂತರ ಹೋರಾಟ, ಪಕ್ಷ ಬಲಪಡಿಸಲು ರೈತ ಚೈತನ್ಯ ಯಾತ್ರೆ, ಪರಿವರ್ತನಾ ರ‍್ಯಾಲಿ, ಬೈಕ್ ರ‍್ಯಾಲಿ ಸೇರಿದಂತೆ ಕೇರಳದಲ್ಲಿ ಹತ್ಯೆ ಖಂಡಿಸಿ ನಡೆದ ಜನ ಸುರಕ್ಷಾಯಾತ್ರೆ ಸೇರಿದಂತೆ ರಾಜ್ಯದ ಅನೇಕ ಸಮಸ್ಯೆಗಳ ವಿರುದ್ಧ ಹೋರಾಟ ಹಾಗೂ ಪಕ್ಷದಲ್ಲಿ ವಿನೂತನ ಕಾರ್ಯಕ್ರಮಗಳನ್ನು ಸಂಘಟಿಸುವಲ್ಲಿ ಶ್ರಮಿಸುತ್ತಿದ್ದಾರೆ.
ಪಕ್ಷದ ಕಾರ್ಯಕರ್ತರಿಗೆ ಸೈದ್ಧಾಂತಿಕ ಹಾಗೂ ಸಂಘಟನಾತ್ಮಕ ಚಿಂತನೆ ಸೇರಿದಂತೆ ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ. ಇದರ ಜೊತೆಗೆ ರಾಜ್ಯ ರೈತ ಮೋರ್ಚಾದ ಹಾಗೂ ಅಲ್ಪಸಂಖ್ಯಾತ ಮೋರ್ಚಾದ ಪ್ರಭಾರಿಗಳಾಗಿಯೂ ಕೂಡ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ :BJP Karnataka : ಕೋಟ ಶ್ರೀನಿವಾಸ ಪೂಜಾರಿ ಮೇಲ್ಮನೆ ವಿಪಕ್ಷ ನಾಯಕ, ಬೆಲ್ಲದ್‌ಗೂ ಸ್ಥಾನ
ಪ್ರಸ್ತುತ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ಸಹ ಕಾರ್ಯನಿರ್ವಹಿಸುತ್ತಿರುವ ಇವರು ವಿಧಾನ ಪರಿಷತ್ತಿನ ಕಲಾಪದಲ್ಲಿಯೂ ಸಹ ರಾಜ್ಯದ ಹಲವಾರು ಜ್ವಲಂತ ಸಮಸ್ಯೆಗಳು, ಶೈಕ್ಷಣಿಕ, ಸಾಮಾಜಿಕ ಸಮಸ್ಯೆಗಳಿಗೆ ಸರ್ಕಾರದ ಗಮನ ಸೆಳೆದು ಪ್ರಸ್ತುತ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿ ಆಯ್ಕೆಯಾಗಿದ್ದಾರೆ.