Site icon Vistara News

Surapura Assembly constituency: ಸುರಪುರ ಉಪ ಚುನಾವಣೆಗೆ ರಾಜುಗೌಡ ಬಿಜೆಪಿ ಅಭ್ಯರ್ಥಿ; ಹೇಗಿದೆ ಕ್ಷೇತ್ರ ಚಿತ್ರಣ?

Raju Gowda Shorapur or Surapura Assembly constituency BJP Candidate

ಬೆಂಗಳೂರು: ದೇಶದೆಲ್ಲೆಡೆ ಲೋಕಸಭಾ ಚುನಾವಣೆಯ (Lok Sabha Election 2024) ಫೀವರ್‌ ಹೆಚ್ಚಾಗಿದೆ. ಈ ನಡುವೆ ಮುಖ್ಯ ಚುನಾವಣಾ ಆಯೋಗವು ಹಲವು ರಾಜ್ಯಗಳ ಉಪ ಚುನಾವಣೆಯನ್ನೂ ಸಹ ಘೋಷಣೆ ಮಾಡಿದೆ. ಇದಕ್ಕೆ ಈಗ ರಾಜ್ಯದಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ (Raja Venkatappa Nayaka) ಅವರ ನಿಧನದಿಂದ ತೆರವಾಗಿದ್ದ ಸುರಪುರ ವಿಧಾನಸಭಾ ಕ್ಷೇತ್ರಕ್ಕೆ (Surapura Assembly constituency) ಬಿಜೆಪಿ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದೆ. ರಸಿಂಹ ನಾಯಕ (ರಾಜೂಗೌಡ) (Raju Gowda) ಅವರಿಗೆ ಮತ್ತೆ ಟಿಕೆಟ್ ನೀಡಲಾಗಿದೆ.

ರಾಜುಗೌಡ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ರಾಜಾ ವೆಂಕಟಪ್ಪ ನಾಯಕ ವಿರುದ್ಧ ಸೋಲು ಕಂಡಿದ್ದರು. ಆದರೆ, ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಿದೆ. 2023ರಲ್ಲಿ ನಡೆದ ಚುನಾವಣೆಯಲ್ಲಿ ರಾಜೂಗೌಡ ಅವರು 25223 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಆದರೆ, ಕಳೆದ 2018ರ ಚುನಾವಣೆಯಲ್ಲಿ ರಾಜುಗೌಡ ಅವರು ಗೆದ್ದಿದ್ದರು. ಅಲ್ಲದೆ, ಬಿ.ಎಸ್.‌ ಯಡಿಯೂರಪ್ಪ (BS Yediyurappa) ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಇವರು ಕ್ಷೇತ್ರದಲ್ಲಿ ಜನರನ್ನು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರು. ಆದರೆ, ಕಾಂಗ್ರೆಸ್‌ ಅಭ್ಯರ್ಥಿಗೆ ಇರುವ ಅನುಕಂಪದ ಅಲೆಯನ್ನು ದಾಟಿ ಇವರು ಜಯಗಳಿಸಬೇಕೆಂದರೆ ಹೆಚ್ಚಿನ ಶ್ರಮವನ್ನು ಹಾಕಲೇಬೇಕಿದೆ.

ಕಾಂಗ್ರೆಸ್‌ನಿಂದ ರಾಜಾ ವೇಣುಗೋಪಾಲ ನಾಯಕ ಸ್ಪರ್ಧೆ

ಕಾಂಗ್ರೆಸ್‌ನಿಂದ ಈಗಾಗಲೇ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ. ರಾಜಾ ವೆಂಕಟಪ್ಪ ನಾಯಕ ಅವರ ಪುತ್ರ ರಾಜಾ ವೇಣುಗೋಪಾಲ ನಾಯಕ (Raja Venugopala Nayaka) ಸ್ಪರ್ಧೆ ಮಾಡುತ್ತಿದ್ದಾರೆ. ತಂದೆ ನಿಧನವಾಗಿದ್ದರಿಂದ ಅನುಕಂಪದ ಅಲೆ ಹಾಗೂ ಕಾಂಗ್ರೆಸ್‌ ಆಡಳಿತದಲ್ಲಿರುವುದು ಅವರಿಗೆ ಪ್ಲಸ್‌ ಆಗಲಿದೆ. ಜತೆಗೆ ವೇಣುಗೋಪಾಲ ನಾಯಕ್‌ಗೆ ಚುನಾವಣೆ ಹೊಸದೇನಲ್ಲ. ಅವರದ್ದು ರಾಜಕೀಯ ಹಿನ್ನೆಲೆಯ ಕುಟುಂಬವಾಗಿದೆ. ಇವರ ಅಜ್ಜ ರಾಜಾ ಕುಮಾರ ನಾಯಕ ಅವರು ಎರಡು ಬಾರಿ, ತಂದೆ ರಾಜಾ ವೆಂಕಟಪ್ಪ ನಾಯಕ 4 ಬಾರಿ, ಚಿಕ್ಕಪ್ಪ ಒಂದು ಬಾರಿ ಸುರಪುರ ಕ್ಷೇತ್ರದಿಂದ ಶಾಸಕರಾಗಿದ್ದರು. ಅಲ್ಲದೆ, ತಂದೆಯ ಜತೆಗೆ ಚುನಾವಣೆ ಸಂದರ್ಭದಲ್ಲಿ ಕ್ಯಾಂಪೇನ್‌ ಮಾಡುವುದು, ತಂತ್ರಗಾರಿಕೆಯನ್ನು ರೂಪಿಸುವ ಕೆಲಸವನ್ನು ವೇಣುಗೋಪಾಲ ನಾಯಕ ಮಾಡುತ್ತಿದ್ದರು. ಹೀಗಾಗಿ ಅವರಿಗೆ ಈ ಚುನಾವಣೆ ಹೊಸದಲ್ಲ.

ಎಲ್ಲ ಪಕ್ಷದವರೂ ಇಲ್ಲಿ ಗೆದ್ದಿದ್ದಾರೆ

2008ರ ಕ್ಷೇತ್ರ ಮರು ವಿಂಗಡಣೆವರೆಗೂ ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಸಾಮಾನ್ಯ ವರ್ಗದವರು ಸ್ಪರ್ಧೆ ಮಾಡಬಹುದಾಗಿತ್ತು. ಇದರ ಬಳಿಕ ಎಸ್‌ಟಿ ಮೀಸಲು ಕ್ಷೇತ್ರವಾಯಿತು. 1957ರಿಂದ ಇಲ್ಲಿಯವರೆಗೆ ಒಟ್ಟು 16 ಬಾರಿ ಚುನಾವಣೆಗಳು ನಡೆದಿವೆ. ಇದರಲ್ಲಿ ಕಾಂಗ್ರೆಸ್‌ 8, ಬಿಜೆಪಿ 2 ಹಾಗೂ ಸ್ವತಂತ್ರ ಪಕ್ಷ, ಕರ್ನಾಟಕ ಕಾಂಗ್ರೆಸ್‌ ಪಕ್ಷ (ಕೆಸಿಪಿ), ಕನ್ನಡ ನಾಡು ಪಕ್ಷ (ಕೆಎನ್‌ಡಿಪಿ) ಮತ್ತು ಸ್ವತಂತ್ರ್ಯ ಅಭ್ಯರ್ಥಿಗಳು ತಲಾ ಒಮ್ಮೆ ವಿಜಯ ಸಾಧಿಸಿದ್ದಾರೆ.

ಪಕ್ಷಾಂತರ ಮಾಡಿದ್ದ ರಾಜುಗೌಡ

2013ರ ಚುನಾವಣೆಯಲ್ಲಿ ಬಿಜೆಪಿ ತೊರೆದು ಜೆಡಿಎಸ್‌ ಸೇರಿದ್ದ ರಾಜು ಗೌಡ ಸೋಲು ಕಂಡಿದ್ದರು. ಆಗ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ರಾಜಾ ವೆಂಕಟಪ್ಪ ನಾಯಕ 65,033 ಮತಗಳನ್ನು ಪಡೆದು ಗೆದ್ದಿದ್ದರು. ರಾಜುಗೌಡ 60,958 ಮತಗಳನ್ನು ಪಡೆದಿದ್ದರು. ಕೇವಲ 4,075 ಮತಗಳ ಅಂತರದಿಂದ ಸೋಲು ಕಂಡಿದ್ದರು.

2018ರ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಸೇರಿದ ರಾಜು ಗೌಡ 1,04,426 ಮತಗಳನ್ನು ಪಡೆದು ಮೂರನೇ ಬಾರಿಗೆ ಜಯ ಸಾಧಿಸಿದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ರಾಜಾ ವೆಂಕಟಪ್ಪ ನಾಯಕ 81,851 ಮತಗಳನ್ನು ಪಡೆದುಕೊಂಡಿದ್ದರು. ಹೀಗಾಗಿ 22,568 ಮತಗಳ ಅಂತರದಲ್ಲಿ ರಾಜುಗೌಡ ಗೆದ್ದಿದ್ದರು.

ಸಮುದಾಯವಾರು ಮತಗಳು ಎಷ್ಟಿವೆ?

ಸದ್ಯದ ಮಾಹಿತಿ ಪ್ರಕಾರ ಸುರಪುರ ಕ್ಷೇತ್ರದಲ್ಲಿ 1,41, 618 ಪುರುಷರು, 1,39,729 ಮಹಿಳಾ, 28 ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಸೇರಿ ಒಟ್ಟು 2,81,375 ಮತದಾರರಿದ್ದಾರೆ. ಎಸ್‌ಟಿ ಮೀಸಲು ಕ್ಷೇತ್ರವಾಗಿರುವ ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಪರಿಶಿಷ್ಟ ಪಂಗಡದ ಜನರೇ ನಿರ್ಣಾಯಕರು.

ಇದನ್ನೂ ಓದಿ: Lok Sabha Election 2024: ಮಂಡ್ಯನಾ? ರಾಮನಗರವಾ? ಧರ್ಮ ಸಂಕಟದಲ್ಲಿ ಮಾಜಿ ಸಿಎಂ ಎಚ್‌ಡಿಕೆ!

ಉಪ ಚುನಾವಣೆಯ ಫಲಿತಾಂಶ ಜೂ. 4ಕ್ಕೆ ಇದ್ದು, ಯಾರು ವಿಜಯಶಾಲಿಯಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಆದರೆ, ಸುರಪುರ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್‌ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿದೆ.

Exit mobile version