Site icon Vistara News

Suvendu Adhikari: ಉಪಚುನಾವಣೆಯಲ್ಲಿ ಭಾರಿ ವಂಚನೆ? 2 ಲಕ್ಷ ಹಿಂದುಗಳ ವೋಟಿಂಗ್‌ ಹಕ್ಕು ಕಸಿಯಲಾಗಿತ್ತು ಎಂದ ಬಿಜೆಪಿ ನಾಯಕ

Suvendu Adhikari

Suvendu Adhikari

ಕೋಲ್ಕತ್ತಾ: ಜುಲೈ 10ರಂದು 7 ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ (Bypolls Result). ಲೋಕಸಭಾ ಚುನಾವಣೆ (Lok Sabha Election)ಯ ಬಳಿಕ ನಡೆದ ಮೊದಲ ಎಲೆಕ್ಷನ್‌ ಎನ್ನುವ ಕಾರಣಕ್ಕೆ ಇದು ಕುತೂಹಲ ಕೆರಳಿಸಿತ್ತು. 13 ಸ್ಥಾನಗಳ ಪೈಕಿ ಪ್ರತಿಪಕ್ಷಗಳ ಇಂಡಿ ಒಕ್ಕೂಟ 10 ಕಡೆ ಗೆದ್ದು ಪ್ರಬಲ ಪೈಪೋಟಿಯ ಸೂಚನೆ ನೀಡಿದರೆ ಬಿಜೆಪಿ ಕೇವಲ 2 ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಇನ್ನು ಒಂದು ಕಡೆ ಪಕ್ಷೇತರ ಅಭ್ಯರ್ಥಿ ಗೆಲುವಿನ ನಗೆ ಬೀರಿದ್ದಾರೆ. ಈ ಬಗ್ಗೆ ಮಾತನಾಡಿದ ಪಶ್ಚಿಮ ಬಂಗಾಳದ ಪ್ರತಿಪಕ್ಷದ ನಾಯಕ, ಬಿಜೆಪಿ ಮುಖಂಡ ಸುವೇಂದು ಅಧಿಕಾರಿ (Suvendu Adhikari), ಉಪಚುನಾವಣೆ ವೇಳೆ ಸುಮಾರು 2 ಲಕ್ಷ ಹಿಂದುಗಳಿಗೆ ತಮ್ಮ ಹಕ್ಕು ಚಲಾಯಿಸಲು ಅವಕಾಶವನ್ನೇ ನೀಡಲಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಲೋಕಸಭಾ ಚುನಾವಣೆಯ ವೇಳೆಯೂ ಸುಮಾರು 50 ಲಕ್ಷ ಹಿಂದುಗಳ ವೋಟಿಂಗ್‌ ಹಕ್ಕು ಕಸಿದುಕೊಳ್ಳಲಾಗಿತ್ತು. ಇದರ ವಿರುದ್ಧ ಕಾನೂನು ಸಮರ ಸಾರುವುದಾಗಿ ಘೋಷಿಸಿದ್ದಾರೆ.

ಸುವೇಂದು ಅಧಿಕಾರಿ ಹೇಳಿದ್ದೇನು?

ʼʼಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವ ಸಂಪೂರ್ಣ ನಾಶವಾಗಿದೆ. ಇದರ ವಿರುದ್ಧ ನಾವು ಹೋರಾಟ ನಡೆಸಲಿದ್ದೇವೆ. ಲೋಕಸಭಾ ಚುನಾವಣೆಯ ವೇಳೆ ಸುಮಾರು 50 ಲಕ್ಷ ಹಿಂದುಗಳಿಗೆ ತಮ್ಮ ಹಕ್ಕನ್ನು ಚಲಾಯಿಸಲು ಅವಕಾಶ ನೀಡಲಿಲ್ಲ. ಇನ್ನು ಇತ್ತೀಚೆಗೆ ನಡೆದ 4 ಕ್ಷೇತ್ರಗಳ ಉಪ ಚುನಾವಣೆಯಲ್ಲಿ 2 ಲಕ್ಷಕ್ಕಿಂತ ಅಧಿಕ ಹಿಂದುಗಳ ಹಕ್ಕನ್ನು ಹತ್ತಿಕ್ಕಲಾಯಿತುʼʼ ಎಂದು ಅವರು ಆರೋಪಿಸಿದ್ದಾರೆ.

ʼʼತಮ್ಮ ವೋಟಿಂಗ್‌ ಹಕ್ಕು ಕಳೆದುಕೊಂಡವರ ದೂರನ್ನು ಸ್ವೀಕರಿಸಲು ನಾನು ಪೋರ್ಟಲ್‌ ಒಂದನ್ನು ಆರಂಭಿಸುತ್ತಿದ್ದೇನೆ. ಮತ ಚಲಾವಣೆಯ ಹಕ್ಕು ನಿರಾಕರಿಸಲ್ಪಟ್ಟವರು ಇದರಲ್ಲಿ ತಮ್ಮ ದೂರನ್ನು ದಾಖಲಿಸಬಹುದು. ಅವರ ಹೆಸರನ್ನು ಸಂಪೂರ್ಣವಾಗಿ ಗೌಪ್ಯವಾಗಿ ಇಡಲಾಗುವುದು. ಯಾವುದೇ ರೀತಿಯ ಭಯ ಬೇಡ. ಜತೆಗೆ ನಾನು ಕಾನೂನು ಹೋರಾಟವನ್ನೂ ಕೈಗೊಳ್ಳಲಿದ್ದೇನೆʼʼ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಮಾತ್ರವಲ್ಲ ಅವರು ರಾಜಭವನದ ಮುಂದೆ ಪ್ರತಿಭಟನೆಯನ್ನೂ ನಡೆಸಿದ್ದಾರೆ.

ಇದನ್ನೂ ಓದಿ: Bypolls Result: 7 ರಾಜ್ಯಗಳ ಉಪಚುನಾವಣೆಯಲ್ಲಿ ಮುನ್ನಡೆ ಸಾಧಿಸಿದ ಇಂಡಿ ಒಕ್ಕೂಟ; ಬಿಜೆಪಿಗೆ ಮುಖಭಂಗ

ಉಪಚುನಾವಣೆಯ ಫಲಿತಾಂಶ

ಪಶ್ಚಿಮ ಬಂಗಾಳದ ರಾಯ್‌ಗಂಜ್‌, ರಣಘತ್ ದಕ್ಷಿಣ, ಬಾಗ್ಡಾ, ಮತ್ತು ಮಾನಿಕ್ತಾಲಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿತ್ತು. ಈ ಪೈಕಿ ಈ ನಾಲ್ಕೂ ಸೀಟುಗಳಲ್ಲಿ ಆಡಳಿತ ರೂಢ ತೃಣಮೂಲ ಕಾಂಗ್ರೆಸ್‌ (Trinamool Congress)ನ ಅಭ್ಯರ್ಥಿಗಳು ಗೆದ್ದು ಕ್ಲೀನ್‌ ಸ್ವೀಪ್‌ ಸಾಧಿಸಿದ್ದಾರೆ. ವಿಶೇಷ ಎಂದರೆ ಈ ಪೈಕಿ ಮೂರು ಸ್ಥಾನಗಳನ್ನು ಹಿಂದೆ ಬಿಜೆಪಿ ಗೆದ್ದುಕೊಂಡಿತ್ತು. ಇನ್ನು ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ 42 ಕ್ಷೇತ್ರಗಳ ಪೈಕಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ 29 ಕಡೆ ಜಯಭೇರಿ ಬಾರಿಸಿತ್ತು. ಶನಿವಾರ ಬಿಜೆಪಿಯ ಸಂಸದ ಸುಕುಂತ ಮುಜುಂದಾರ್‌ ಕೂಡ ಉಪಚುನಾವಣೆಯಲ್ಲಿ ಮೋಸ ನಡೆದಿದೆ ಎಂದು ದೂರಿದ್ದರು. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದರು.

Exit mobile version