Site icon Vistara News

Swami Avimukteshwaranand: ಬಿಜೆಪಿಯನ್ನು ಸದಾ ಕುಟುಕುವ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ! ಏನಿವರ ಹಿನ್ನೆಲೆ?

Swami Avimukteswarananda

ಕೇದಾರನಾಥ ದೇವಾಲಯದಿಂದ (Kedarnath Temple) 228 ಕೆ.ಜಿ ಚಿನ್ನ ನಾಪತ್ತೆಯಾಗಿದೆ ಎಂದು ಆರೋಪಿಸಿ ಅದನ್ನು ಚಿನ್ನದ ಹಗರಣ (gold scam) ಎಂದು ಕರೆದಿದ್ದ ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ (Swami Avimukteshwaranand) ಅವರು ಬಿಜೆಪಿ ಮತ್ತು ಮೋದಿ ವಿರುದ್ಧ ಬಹಿರಂಗವಾಗಿ ಸತತ ಹೇಳಿಕೆ ನೀಡುತ್ತ ಸುದ್ದಿಯಲ್ಲಿದ್ದಾರೆ.

ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಮಾಡಿದ್ದ ಚಿನ್ನದ ಹಗರಣ ಆರೋಪವು ಸಾಕಷ್ಟು ವಿವಾದವನ್ನು ಹುಟ್ಟುಹಾಕಿದೆ. ರಾಹುಲ್‌ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಬಹಿರಂಗವಾಗಿ ಬೆಂಬಲ ನೀಡುತ್ತಿರುವ ಅವರು ಅನೇಕ ರಾಜಕೀಯ ಭಾಷಣಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಆಗಾಗ ಬಿಜೆಪಿಯ ನೀತಿಗಳನ್ನು ಟೀಕಿಸುತ್ತಾರೆ. 2019ರಲ್ಲಿ ವಾರಣಾಸಿ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಯತ್ನಿಸಿದ್ದ ಅವರು 2024ರ ಹೊತ್ತಿಗೆ ಇಂಡಿಯಾ ಮೈತ್ರಿಕೂಟದ ಅಡಿಯಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವಲ್ಲಿ ಯಶಸ್ವಿಯಾಗಿದ್ದರು. ರಾಜಕೀಯವಾಗಿ ತಮ್ಮ ನಿಲುವನ್ನು ಸ್ಪಷ್ಟವಾಗಿ ಈ ಮೂಲಕ ಪ್ರದರ್ಶಿಸಿದ್ದಾರೆ.

ಸಣ್ಣ ವಯಸ್ಸಿನಲ್ಲೇ ನಾಯಕತ್ವ ಪ್ರದರ್ಶನ

ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯ ಪತ್ತಿ ತೆಹಸಿಲ್‌ನ ಬ್ರಹ್ಮನ್‌ಪುರ ಗ್ರಾಮದಲ್ಲಿ ಉಮಾಶಂಕರ್ ಉಪಾಧ್ಯಾಯ ಇವರ ಮೂಲ ಹೆಸರು. ಸ್ವಾಮಿ ಅವಿಮುಕ್ತೇಶ್ವರಾನಂದರು ವಾರಣಾಸಿಯ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ತಮ್ಮ ಶಿಕ್ಷಣವನ್ನು ಪಡೆದರು. ಅಲ್ಲಿ ಅವರು ಶಾಸ್ತ್ರಿ ಮತ್ತು ಆಚಾರ್ಯ ಪದವಿಗಳನ್ನು ಪೂರ್ಣಗೊಳಿಸಿದರು. ವಿದ್ಯಾರ್ಥಿ ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಅವರು 1994ರಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಗೆದ್ದು ಸಣ್ಣ ವಯಸ್ಸಿನಲ್ಲೇ ನಾಯಕತ್ವದ ಸಾಮರ್ಥ್ಯವನ್ನು ಪ್ರದರ್ಶಿಸಿದ್ದರು.

ವಿವಿಧ ಕಾರಣಗಳಿಗಾಗಿ ಹೋರಾಟ

ವೃತ್ತಿಜೀವನದುದ್ದಕ್ಕೂ ಸ್ವಾಮಿ ಅವಿಮುಕ್ತೇಶ್ವರಾನಂದರು ವಿವಿಧ ಕಾರಣಗಳಿಗಾಗಿ ಧ್ವನಿ ಎತ್ತುತ್ತಲೇ ಬಂದಿದ್ದಾರೆ. ಕಾಶಿ ವಿಶ್ವನಾಥ ಕಾರಿಡಾರ್ ನಿರ್ಮಾಣದ ಸಂದರ್ಭದಲ್ಲಿ ದೇವಾಲಯಗಳ ಧ್ವಂಸವನ್ನು ಅವರು ನಿರಂತರ ವಿರೋಧಿಸಿದರು. 2008ರಲ್ಲಿ ಅವರು ಗಂಗಾ ನದಿಯನ್ನು ರಾಷ್ಟ್ರೀಯ ನದಿ ಎಂದು ಘೋಷಿಸಲು ದೀರ್ಘಾವಧಿಯ ಉಪವಾಸ ಸತ್ಯಾಗ್ರಹವನ್ನು ಕೈಗೊಂಡಿದ್ದರು. ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಅನಂತರ ಅವರ ಗುರುಗಳು ಸೂಚನೆ ಮೇರೆಗೆ ಉಪವಾಸವನ್ನು ಕೊನೆಗೊಳಿಸಿದರು.


ಶಾರದಾ ಪೀಠದಲ್ಲಿ ಸ್ಥಾನಮಾನ

ಗುರು, ಜಗದ್ಗುರು ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರ ಮರಣದ ಅನಂತರ 2022ರ ಸೆಪ್ಟೆಂಬರ್‌ನಲ್ಲಿ ಸ್ವಾಮಿ ಅವಿಮುಕ್ತೇಶ್ವರಾನಂದರನ್ನು ಜ್ಯೋತಿಷ್ ಪೀಠದ ಶಂಕರಾಚಾರ್ಯ ಎಂದು ಘೋಷಿಸಲಾಯಿತು. ಶಾರದಾ ಪೀಠದ ದ್ವಾರಕಾದ ಶಂಕರಾಚಾರ್ಯ ಎಂದು ಹೆಸರಿಸಲ್ಪಟ್ಟ ಸ್ವಾಮಿ ಸದಾನಂದ ಸರಸ್ವತಿಯವರೊಂದಿಗೆ ಅವರ ನೇಮಕವಾಯಿತು.

ಇದನ್ನೂ ಓದಿ : Keshav Prasad Maurya: ʼಮಾನ್ಸೂನ್‌ ಆಫರ್‌ʼ ಕೊಟ್ಟ ಅಖಿಲೇಶ್‌ ಯಾದವ್‌ಗೆ ಬಿಜೆಪಿ ಟಾಂಗ್‌

ಹೇಳಿಕೆಗಳಿಂದ ವಿವಾದಗಳು ಹಲವು

ದಿಟ್ಟ ಹೇಳಿಕೆಗಳಿಂದಲೇ ಆಗಾಗ್ಗೆ ಸುದ್ದಿಯಲ್ಲಿರುವ ಸ್ವಾಮಿ ಅವಿಮುಕ್ತೇಶ್ವರಾನಂದರು ಇತ್ತೀಚೆಗೆ ದೆಹಲಿಯಲ್ಲಿ ಕೇದಾರನಾಥ ದೇವಾಲಯದ ಪ್ರತಿಕೃತಿ ನಿರ್ಮಾಣವನ್ನು ಟೀಕಿಸಿದರು. ಅದರ ಮೂಲ ದೇವಾಲಯವು ಹಿಮಾಲಯದಲ್ಲಿದೆ ಎಂದು ವಾದಿಸಿದರು. ಇದು ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ಧಾರ್ಮಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಕ್ರಿಯಾತ್ಮಕ ಪಾತ್ರವನ್ನು ತೋರಿಸುತ್ತಿರುವ ಅವರ ಬೆಂಬಲ ಕಾಂಗ್ರೆಸ್ ಪಕ್ಷಕ್ಕೆ ಇರುದರಿಂದ ಭಾರತೀಯ ರಾಜಕೀಯದಲ್ಲಿ ಅವರು ಗುರುತಿಸಿಕೊಳ್ಳುವಂತಾಗಿದೆ. ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲೂ ಇವರು ಬಿಜೆಪಿಯನ್ನು ಟೀಕಿಸಿ ಸಂಚಲನ ಮೂಡಿಸಿದ್ದರು. ರಾಮ ಮಂದಿರ ಉದ್ಘಾಟನೆಯ ವಿಧಿ ವಿಧಾನ ಸಮರ್ಪಕವಾಗಿ ಆಗಿಲ್ಲ ಎಂದು ಟೀಕಿಸಿದ್ದರು.

Exit mobile version