ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರವು (Karnataka Congress Government) ತಪ್ಪು ಅಂಕಿ-ಅಂಶಗಳ ಜಾಹೀರಾತನ್ನು (Advertising Money) ನೀಡಿದೆ. ಇದು ಖಂಡನೀಯವಾಗಿದೆ. ಸರ್ಕಾರಿ ಬೊಕ್ಕಸದ ಹಣದ ದುರ್ಬಳಕೆ ಮತ್ತು ವಂಚನೆಯಾಗಿದೆ ಎಂದು ಆರೋಪಿಸಿ ಬಿಜೆಪಿ (BJP Karnataka) ನಿಯೋಗವು ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.
ಬಿಜೆಪಿ ನಿಯೋಗವು ಮಂಗಳವಾರ ರಾಜಭವನಕ್ಕೆ ಭೇಟಿ ನೀಡಿ ರಾಜ್ಯ ಸರ್ಕಾರದ ವಿರುದ್ಧ ದೂರು ಸಲ್ಲಿಸಿತು. ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಲು ರಾಜ್ಯದ ಜನರ ತೆರಿಗೆ ಹಣವನ್ನು ಬಳಕೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದೆ. ಈ ವೇಳೆ ರಾಜ್ಯಪಾಲರು ಇಲ್ಲದೇ ಇದ್ದರಿಂದ ಮನವಿಯನ್ನು ಅಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಸಲ್ಲಿಸಲಾಗಿದೆ.
ಇದನ್ನೂ ಓದಿ: Congress Protest : ಪ್ರೊಟೆಸ್ಟ್ ವಾರ್! ಕೇಂದ್ರದಿಂದ ಅನ್ಯಾಯ ಎಂದ ಕಾಂಗ್ರೆಸ್‌ಗೆ ʼಚಾನ್ಸೇ ಇಲ್ಲʼ ಎಂದ ಬಿಜೆಪಿ!
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಹರತಾಳು ಹಾಲಪ್ಪ, ಮುಖಂಡ ಭಾಸ್ಕರ ರಾವ್, ವಕೀಲರ ಸಂಘದ ಅಧ್ಯಕ್ಷ ವಿವೇಕ ರೆಡ್ಡಿ ಅವರ ನಿಯೋಗವು ಕಾಂಗ್ರೆಸ್ ವಿರುದ್ಧ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.
ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ರೀತಿಯ ಮತ್ತು ಈ ಮೂಲಕ ಸಂವಿಧಾನಕ್ಕೆ ಅಗೌರವ ತರುವ ಕೆಲಸವನ್ನು ಈ ಜಾಹೀರಾತಿನ ಮೂಲಕ ರಾಜ್ಯದ ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ಮನವಿ ಗಮನ ಸೆಳೆದಿದೆ. ‘ನನ್ನ ತೆರಿಗೆ ನನ್ನ ಹಕ್ಕು’ ಎಂಬ ಶೀರ್ಷಿಕೆಯ ಈ ಜಾಹೀರಾತಿನ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ದೆಹಲಿ ಚಲೋ ನಡೆಸಲು ಕರೆ ನೀಡಿದ್ದು ಆಘಾತಕರ ಎಂದು ತಿಳಿಸಲಾಗಿದೆ.
ರಾಜ್ಯದ ಜನರನ್ನು ತಪ್ಪು ದಾರಿಗೆಳೆಯುವ ಅಂಕಿ – ಅಂಶಗಳನ್ನು ಈ ಜಾಹೀರಾತು ಒಳಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜಕಾರಣ ಮಾಡಲು ಈ ಜಾಹೀರಾತು ಕೊಟ್ಟಿದ್ದಾರೆ. ರಾಜ್ಯ ಸರ್ಕಾರದ ಈ ಕ್ರವನ್ನು ಬಿಜೆಪಿ ಆಕ್ಷೇಪ ವ್ಯಕ್ತಪಡಿಸುವುದಾಗಿ ಮನವಿ ಹೇಳಿದೆ.
ಇದನ್ನೂ ಓದಿ: Single Window Scheme: ಚಾರಣಕ್ಕೆ ಏಕ ಗವಾಕ್ಷಿ ಯೋಜನೆ; ಕಡಲಾಮೆ ಮೊಟ್ಟೆ ಪತ್ತೆ ಮಾಡಿದವರಿಗೆ ಬಹುಮಾನ
ಕೇಂದ್ರ ಸರ್ಕಾರದ ವಿರುದ್ಧ ರ‍್ಯಾಲಿ ಅಥವಾ ಪ್ರತಿಭಟನೆ ನಡೆಸುವ ಕುರಿತು ತಿಳಿಸಲು ಈ ಜಾಹೀರಾತು ನೀಡಿದ್ದು, ಇದು ಖಜಾನೆಯ ಹಣದ ದುರ್ಬಳಕೆ ಮತ್ತು ಮೋಸಗಾರತನ ಎಂದು ಆಕ್ಷೇಪ ಸೂಚಿಸಲಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಈ ಜಾಹೀರಾತಿನ ಮೂಲಕ ಸಾಂವಿಧಾನಿಕ ಬಿಕ್ಕಟ್ಟು ಉದ್ಭವಿಸಿದ್ದು, ರಾಜ್ಯಪಾಲರು ಸೂಕ್ತ ಕ್ರಮ ಕೈಗೊಳ್ಳಲು ಮನವಿ ಮಾಡಲಾಗಿದೆ. ರಾಜ್ಯದ ವಾರ್ತಾ ಮತ್ತು ಪ್ರಚಾರ ಇಲಾಖೆ ಕಮೀಷನರ್ ಅವರಿಗೆ ಇಂಥ ಜಾಹೀರಾತು ನೀಡುವುದನ್ನು ನಿಲ್ಲಿಸುವಂತೆ ನಿರ್ದೇಶನ ನೀಡಬೇಕೆಂದು ಕೂಡ ಮನವಿ ಕೋರಿದೆ.