Site icon Vistara News

Hindu Temple: ಹಿಂದು ದೇಗುಲಕ್ಕೆ ಟ್ಯಾಕ್ಸ್;‌ 10 ಪರ್ಸೆಂಟ್‌ ಒಳಮರ್ಮ ಬಿಚ್ಚಿಟ್ಟ ಬಿಜೆಪಿ!

Tax on Hindu temple BJP reveals 10 per cent infighting and Kota Srinivas Poojary

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರ (Congress Government) ಮಂಡಿಸಿರುವ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ ವಿಧೇಯಕದಲ್ಲಿನ (Hindu Religious Institutions and Charitable Endowments Bill) ಕೆಲವು ಅಂಶಗಳನ್ನು ಬಿಜೆಪಿ ತೆರೆದಿಟ್ಟಿದೆ. 1 ಕೋಟಿ ರೂಪಾಯಿ ಆದಾಯ ಇರುವ ದೇವಸ್ಥಾನಗಳ (Hindu Temple) ಶೇಕಡಾ 10ರ ಲೆಕ್ಕವನ್ನು ಬಿಚ್ಚಿಟ್ಟಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿರುವ ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಕೋಟ ಶ್ರೀನಿವಾಸ್‌ ಪೂಜಾರಿ (Kota Srinivas Poojary), ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಭಕ್ತರು ಹುಂಡಿಗೆ ಹಾಕಿದ ಹಣ, ಭಕ್ತರ ಸೇವೆಯಿಂದ ಬಂದ ಹಣ ಸೇರಿ ಯಾವ ದೇವಸ್ಥಾನದ ಆದಾಯ 1 ಕೋಟಿ ರೂಪಾಯಿ ಆಗಿರುತ್ತದೆಯೋ ಅದರಲ್ಲಿನ 90 ಲಕ್ಷ ರೂಪಾಯಿಯನ್ನು ದೇವಾಲಯಕ್ಕೆ ಖರ್ಚು ಮಾಡಿ, ಉಳಿದ 10 ಲಕ್ಷದಲ್ಲಿ ಶೇಕಡಾ 10 ಎಂದರೆ 1 ಲಕ್ಷ ರೂಪಾಯಿ ಸರ್ಕಾರಕ್ಕೆ ಬರುತ್ತಿತ್ತು. ಈಗ ತಿದ್ದುಪಡಿ ಮಾಡಲಾಗಿರುವ ಪ್ರಕಾರ, ಮೂಲ ಆದಾಯದಲ್ಲಿಯೇ ಶೇ. 10 (10 ಲಕ್ಷ‌ ರೂಪಾಯಿ) ಪಡೆಯಲು ಮುಂದಾಗಲಾಗಿದೆ. ನಾವು ಇದನ್ನು ವಿರೋಧಿಸಿದ್ದೇವೆ ಎಂದು ಕೋಟ ಶ್ರೀನಿವಾಸ ಪೂಜಾರಿ ಅಂಕಿ-ಅಂಶವನ್ನು ಬಿಚ್ಚಿಟ್ಟರು.

ನಿವ್ವಳ ಉಳಿಕೆಯಲ್ಲಿ ಹಣ ಪಡೆಯಲು ತಿಳಿಸಿದೆವು. ವ್ಯವಸ್ಥಾಪನಾ ಸಮಿತಿಯಲ್ಲಿ ಅಧ್ಯಕ್ಷರ ಆಯ್ಕೆ ಸರಿಯಲ್ಲ ಎಂದಿದ್ದೇವೆ. ರಾಮಲಿಂಗಾರೆಡ್ಡಿ, ಎಚ್.ಕೆ. ಪಾಟೀಲ ಅವರಂಥ ಹಿರಿಯರು ಪ್ರಜಾಪ್ರಭುತ್ವದಲ್ಲಿ ಪ್ರತಿಪಕ್ಷಗಳ ಒಳ್ಳೆಯ ಸಲಹೆಗೆ ಬೆಲೆ ಕೊಡುತ್ತಾರೆಂದು ಭಾವಿಸಿದ್ದೆವು. ಆದರೆ, ಸರ್ಕಾರ ಹಠಮಾರಿತನದ ಧೋರಣೆ ಅನುಸರಿಸಿದೆ. ತಿದ್ದುಪಡಿಯನ್ನು ಮತ್ತೊಮ್ಮೆ ಚರ್ಚೆ ಮಾಡಿ ಎಂದು ತಿರಸ್ಕಾರ ಮಾಡಿದ್ದೇವೆ. ಅರ್ಚಕರ ಪರವಾಗಿರುವ ನಮ್ಮ ಒಟ್ಟು ನಿಲುವಿನ ಕುರಿತು ದಾರಿ ತಪ್ಪಿಸುವ ಕೆಲಸವನ್ನು ಸಿದ್ದರಾಮಯ್ಯ, ಡಿಕೆಶಿ ಮತ್ತು ಇತರರು ಮಾಡಿದ್ದಾರೆ ಎಂದು ಕೋಟ ಶ್ರೀನಿವಾಸ್‌ ಪೂಜಾರಿ ಸ್ಪಷ್ಟಪಡಿಸಿದರು.

ಧಾರ್ಮಿಕ ದತ್ತಿ ಇಲಾಖೆ ಕಡೆಗಣನೆ

ಕಳೆದ ವರ್ಷ ಧಾರ್ಮಿಕ ದತ್ತಿ ಇಲಾಖೆಗೆ ನಮ್ಮ‌ ಬಿಜೆಪಿ ಸರ್ಕಾರ 250 ಕೋಟಿ ರೂ. ನೀಡಿತ್ತು. ಆದರೆ,‌ ಈಗ ಕಾಂಗ್ರೆಸ್ ಸರ್ಕಾರವು ಹಿಂದೂ ಧಾರ್ಮಿಕ ದತ್ತಿ ಇಲಾಖೆಯನ್ನು ಕಡೆಗಣಿಸಿದ್ದು, 50 ಕೋಟಿ ರೂಪಾಯಿಯನ್ನೂ ಕೊಟ್ಟಿಲ್ಲ ಎಂದು ಕೋಟ ಶ್ರೀನಿವಾಸ ಪೂಜಾರಿ ಕಿಡಿಕಾರಿದ್ದಾರೆ.

ಅರ್ಚಕರಿಗೆ ಮನೆ ಕೊಟ್ಟಿದ್ದು ನಮ್ಮ ಸರ್ಕಾರ. ತಸ್ತೀಕ್ ತಂದದ್ದು ನಮ್ಮ ಸ‌ರ್ಕಾರ. ಅದನ್ನು 48 ಸಾವಿರಕ್ಕೆ ಏರಿಸಿದ್ದು ನಮ್ಮ ಸರ್ಕಾರವಾಗಿದೆ. ಇದೆಲ್ಲವನ್ನೂ ಜನರು ಅರ್ಥ ಮಾಡಿಕೊಳ್ಳಬೇಕು. ದೇವಸ್ಥಾನದ ಒಟ್ಟು ಆದಾಯದಿಂದ ಶೇ. 10 ಅನ್ನು ಪಡೆಯುವ ಮಸೂದೆ ಜಾರಿಗೆ ಮುಂದಾದುದರಿಂದ ದೇವಸ್ಥಾನದ ಒಟ್ಟು ಆರ್ಥಿಕ ವ್ಯವಸ್ಥೆ ಕುಸಿಯಬಾರದೆಂಬ ಕಾರಣಕ್ಕೆ ವಿರೋಧಿಸಿದ್ದೇವೆ. ಆದರೆ, ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ತುಂಬ ದೇವಸ್ಥಾನಗಳಲ್ಲಿ ಶಾಲೆ, ಗೋಶಾಲೆಗಳನ್ನು ನಡೆಸಲಾಗುತ್ತಿದೆ. ಮಧ್ಯಾಹ್ನದ ಅನ್ನ ಪ್ರಸಾದ, ಸಪ್ತಪದಿ (ಮದುವೆ) ವ್ಯವಸ್ಥೆ ಇದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ತಸ್ತೀಕ್ ಕೊಡುವ ಯೋಜನೆಯನ್ನು ರೂಪಿಸಿದ್ದೇ ಬಿಜೆಪಿ

“ಧಾರ್ಮಿಕ ವಿಚಾರಕ್ಕೆ ಸಂಬಂಧಿಸಿ ಮೊನ್ನೆ ದೇಗುಲಗಳ ಮಸೂದೆಯನ್ನು ಬಿಜೆಪಿ- ಜೆಡಿಎಸ್ ಸದಸ್ಯರು ವಿರೋಧಿಸಿದ್ದಾರೆ. ನಾವು ಅರ್ಚಕರಿಗೆ- ದೇವಾಲಯಗಳಿಗೆ ಒಳ್ಳೆಯದು ಮಾಡಲು ಹೊರಟಿದ್ದೆವು. ಆದರೆ, ಬಿಜೆಪಿ ಇದನ್ನು ವಿರೋಧಿಸಿದೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಶೇಷವಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಎಚ್.ಕೆ. ಪಾಟೀಲ್, ಧಾರ್ಮಿಕ ದತ್ತಿ ಸಚಿವ ರಾಮಲಿಂಗಾರೆಡ್ಡಿ ಆರೋಪಿಸುತ್ತಿರುವುದನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ವಾಸ್ತವಿಕವಾಗಿ ದೇವಾಲಯಗಳ ಅಭಿವೃದ್ಧಿಗಾಗಿ ತಿದ್ದುಪಡಿ ತಂದು 33,500 ದೇವಸ್ಥಾನಗಳಿಗೆ ತಸ್ತೀಕ್ ಕೊಡುವ ಯೋಜನೆಯನ್ನು ರೂಪಿಸಿದ್ದೇ ಬಿಜೆಪಿ ಎಂದು ಕೋಟ ಶ್ರೀನಿವಾಸ ಪೂಜಾರಿ ವಿವರಿಸಿದರು.

ಏರಿಕೆ ಮಾಡಿದ್ದು ನಮ್ಮ ಸರ್ಕಾರ

ಬಿ.ಎಸ್. ಯಡಿಯೂರಪ್ಪ ಅವರ ಮುಖ್ಯಮಂತ್ರಿಯಾಗಿದ್ದ ವೇಳೆ ತಸ್ತೀಕ್ ಎಂಬ ಯೋಜನೆಯನ್ನು ನಮ್ಮ ಸರ್ಕಾರ ಜಾರಿಗೊಳಿಸಿತ್ತು. ಆಗ ತಸ್ತೀಕ್ 6,500 ರೂಪಾಯಿ ಇತ್ತು. 33,500 ದೇವಸ್ಥಾನಗಳಿಗೂ ಅದನ್ನು ಕೊಡುತ್ತಿದ್ದೆವು. ವಿ.ಎಸ್. ಆಚಾರ್ಯರು ಸಚಿವರಿದ್ದಾಗ ಅದನ್ನು 12 ಸಾವಿರ ಮಾಡಿದ್ದು, ನಾನು ಧಾರ್ಮಿಕ ದತ್ತಿ ಸಚಿವನಾದಾಗ 24 ಸಾವಿರಕ್ಕೆ ಏರಿಸಿದ್ದೆ. ನಮ್ಮದೇ ಸರ್ಕಾರ ಇದ್ದಾಗ 48 ಸಾವಿರಕ್ಕೆ ಏರಿಸಿದ್ದು, ಈಗ ಅದು 60 ಸಾವಿರ ಆಗಿದೆ ಎಂದು ವಿವರ ನೀಡಿದರು. ಬಡ ದೇವಸ್ಥಾನಗಳಿಗೆ ಅನುಕೂಲ ಆಗಲಿ ಎಂದು ಅದನ್ನು 1 ಲಕ್ಷಕ್ಕೆ ಏರಿಸಲು ಒತ್ತಾಯ ಮಾಡುತ್ತಿದ್ದೇವೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.‌

ನಾನು ಸಚಿವನಾಗಿದ್ದಾಗ ಅರ್ಚಕರಿಗೆ ಪಿಂಚಣಿ, ಆರೋಗ್ಯ ವಿಮೆ, ಅರ್ಚಕರ ಮಕ್ಕಳಿಗೆ ವಿದ್ಯಾರ್ಥಿವೇತನ, ಅರ್ಚಕರ ಮನೆ ಪ್ರಸ್ತಾಪವನ್ನು ಮುಂದಿಟ್ಟಿದ್ದು, ಅರ್ಚಕರ ಮನೆ ಮಂಜೂರು ಮಾಡಿದ್ದೇವೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಸರ್ಕಾರದಿಂದಲೇ ಆಯ್ಕೆ ಸರಿಯಲ್ಲ

ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ 100 ಕೋಟಿ ರೂಪಾಯಿ ಆದಾಯವಿದ್ದರೆ 10 ಕೋಟಿ ರೂಪಾಯಿಯನ್ನು ಧಾರ್ಮಿಕ ದತ್ತಿ ಇಲಾಖೆಗೆ ಕೊಡಬೇಕಾಗುತ್ತದೆ. ನಿರ್ವಹಣಾ ವೆಚ್ಚ ತೆಗೆದ ನಂತರ ನಿವ್ವಳ ಉಳಿಕೆಯಲ್ಲಿ ಶೇ. 10 ಪಡೆಯಬೇಕೆಂದು ನಮ್ಮ ಒತ್ತಾಯವಿತ್ತು. ವ್ಯವಸ್ಥಾಪನಾ ಸಮಿತಿಯನ್ನು ರಚಿಸುವ ಅಧಿಕಾರ ಎ ದರ್ಜೆಯ ದೇವಸ್ಥಾನಕ್ಕೆ ಧಾರ್ಮಿಕ ಪರಿಷತ್ ಮಾಡುತ್ತದೆ. ಬಿ, ಸಿ ದೇವಸ್ಥಾನಗಳಿಗೆ ಜಿಲ್ಲಾ ಧಾರ್ಮಿಕ ಪರಿಷತ್ ಮಾಡುತ್ತದೆ. ಧಾರ್ಮಿಕ ಪರಿಷತ್ ಮೂಲಕ ಸದಸ್ಯರ ಆಯ್ಕೆ ಮಾಡಿದ ನಂತರ ಅಧ್ಯಕ್ಷರನ್ನು ಅವರೇ ಆಯ್ಕೆ ಮಾಡಬೇಕು. ರಾಮಲಿಂಗಾರೆಡ್ಡಿ ಮಂಡಿಸಿದ್ದ ಈ ಬಿಲ್‍ನಲ್ಲಿ ಧಾರ್ಮಿಕ ಪರಿಷತ್ತಿನ ಮೂಲಕ ವ್ಯವಸ್ಥಾಪನಾ ಸಮಿತಿ, ಅಧ್ಯಕ್ಷರನ್ನು ಸರ್ಕಾರವೇ ಆಯ್ಕೆ ಮಾಡುತ್ತದೆ. ಇದನ್ನು ವಿರೋಧಿಸಿದ್ದೇವೆ ಎಂದು ತಿಳಿಸಿದರು.‌

‘ನಾವು ಅರ್ಚಕರಿಗೆ ಒಳ್ಳೆಯದು ಮಾಡಲು ಹೋದೆವು. ಆದರೆ, ಬಿಜೆಪಿಯವರು ಅಡ್ಡ ಹಾಕಿದ್ದಾರೆ. ಮೇಲ್ಮನೆಯಲ್ಲಿ 3 ತಿಂಗಳಲ್ಲಿ ಬಹುಮತ ಬರಲಿದೆ. ಆಗ ನಾವು ತರುತ್ತೇವೆ’ ಎಂದು ಡಿಸಿಎಂ ಡಿ.ಕೆ .ಶಿವಕುಮಾರ್‌ ಅವರು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. “ಬಿಜೆಪಿಯವರು ತಪ್ಪು ಮಾಡುತ್ತಿದ್ದಾರೆ. ನಾವು ಒಳ್ಳೆಯದು ಮಾಡಿದರೆ ಇವರು ಕೆಟ್ಟದು ಮಾಡುತ್ತಾರೆ” ಎಂದು ಸಿಎಂ ಸಿದ್ದರಾಮಯ್ಯ ಅವರು ಪ್ರಥಮ ಬಾರಿಗೆ ದೇವರ ಪರ ಮಾತನಾಡಿದ್ದಾರೆ. ಚರ್ಚೆ ಮಾಡಿ ಅನುಮೋದಿಸಲು ಒತ್ತಾಯಿಸಿದ್ದೇವೆ. ಆದರೆ, ಡಿಕೆಶಿ ಅವರು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ಕೋಟ ಶ್ರೀನಿವಾಸ ಪೂಜಾರಿ ಟೀಕಿಸಿದರು.

ಹೀಗೆ ಕೊಡಲು ನೀವೇ ಬೇಕೇ?: ರವಿಕುಮಾರ್

ವಿಧಾನ ಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ್ ಮಾತನಾಡಿ, 35 ಸಾವಿರ ಅರ್ಚಕರ ಮನೆಗೆ 15 ಕೋಟಿ, ಸ್ಕಾಲರ್‌ಶಿಪ್‍ಗೆ 5 ಕೋಟಿ ರೂ., 5 ಕೋಟಿ ರೂಪಾಯಿಯಲ್ಲಿ ವಿಮೆ ಮಾಡಿಸುವುದಾಗಿ ಹೇಳಿದ್ದಾರೆ. ನೀವು ಕ್ರಿಶ್ಚಿಯನ್ನರು, ಮುಸ್ಲಿಮರಿಗೆ 300 ಕೋಟಿ ಕೊಟ್ಟಿದ್ದೀರಿ. 35 ಸಾವಿರ ದೇವಸ್ಥಾನಗಳಿಗೆ 300 ಕೋಟಿ ಕೊಡಬೇಕಿತ್ತು ಎಂದು ಹೇಳಿದರು. ಹಿಂದೂ ದೇವಾಲಯ ಎಂದರೆ ಇಷ್ಟು ಕನಿಷ್ಠವೇ? ಹಿಂದೂಗಳ ವಿಚಾರ ಬಂದಾಗ ಶ್ರೀಮಂತ ದೇವಾಲಯದಿಂದ ಕಿತ್ತುಕೊಂಡು ಬೇರೆ ದೇವಾಲಯಕ್ಕೆ ಕೊಡಲು ನೀವೇ ಬೇಕೇ? ಎಂದು ಕೇಳಿದರು.

ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ಎಂದು ಘೋಷಿಸುವ ಸರ್ಕಾರ, ಅಲ್ಪಸಂಖ್ಯಾತರ ಅಭಿವೃದ್ಧಿಗೆ 1 ಸಾವಿರ ಕೋಟಿ ಎಂದು ಆದೇಶ ನೀಡಿದ ರಾಜ್ಯ ಕಾಂಗ್ರೆಸ್ ಸರ್ಕಾರವು ಹಿಂದುಳಿದ, ಅತಿ ಕೆಳ ಸ್ಥಿತಿಯಲ್ಲಿರುವ ದೇವಸ್ಥಾನಗಳಿಗೆ 300 ಕೋಟಿ ಕೊಡಲು ಸಾಧ್ಯವಿಲ್ಲವೇ? ಎಂದು ‌ರವಿಕುಮಾರ್ ಪ್ರಶ್ನೆ ಮಾಡಿದರು. ವಿಧಾನ‌ ಪರಿಷತ್ ಸದಸ್ಯ ಕೆ.ಎಸ್. ನವೀನ್, ಪ್ರತಾಪಸಿಂಹ ನಾಯಕ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಇದನ್ನೂ ಓದಿ: Job Fair: ಇನ್ನು ಪ್ರತಿ ವರ್ಷ ಜಿಲ್ಲಾ ಮಟ್ಟದಲ್ಲೂ ಉದ್ಯೋಗ ಮೇಳ; ಪೂರಕ ತರಬೇತಿ

ಹೀಗೆ ಮಾಡೋಕೆ ನೀವೇ ಬೇಕೇ?

ವಿಧಾನ ಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರು ಮಾತನಾಡಿ, 35 ಸಾವಿರ ಅರ್ಚಕರ ಮನೆಗೆ 15 ಕೋಟಿ, ಸ್ಕಾಲರ್‍ಶಿಪ್‍ಗೆ 5 ಕೋಟಿ, 5 ಕೋಟಿಯಲ್ಲಿ ವಿಮೆ ಮಾಡಿಸುವುದಾಗಿ ಹೇಳಿದ್ದಾರೆ. ನೀವು ಕ್ರಿಶ್ಚಿಯನ್ನರು, ಮುಸ್ಲಿಮರಿಗೆ 300 ಕೋಟಿ ಕೊಟ್ಟಿದ್ದೀರಿ. 35 ಸಾವಿರ ದೇವಸ್ಥಾನಗಳಿಗೆ 300 ಕೋಟಿ ಕೊಡಬೇಕಿತ್ತು ಎಂದು ಹೇಳಿದರು. ಹಿಂದೂ ದೇವಾಲಯ ಎಂದರೆ ಇಷ್ಟು ಕನಿಷ್ಠವೇ ಎಂದು ಪ್ರಶ್ನಿಸಿದರು. ಹಿಂದೂಗಳ ವಿಚಾರ ಬಂದಾಗ ಶ್ರೀಮಂತ ದೇವಾಲಯದಿಂದ ಕಿತ್ತುಕೊಂಡು ಬೇರೆ ದೇವಾಲಯಕ್ಕೆ ಕೊಡಲು ನೀವೇ ಬೇಕೇ? ಎಂದು ಕೇಳಿದರು.
ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ಎಂದು ಘೋಷಿಸುವ ಸರಕಾರ, ಅಲ್ಪಸಂಖ್ಯಾತರ ಅಭಿವೃದ್ಧಿಗೆ 1 ಸಾವಿರ ಕೋಟಿ ಎಂದು ಆದೇಶ ನೀಡಿದ ರಾಜ್ಯ ಕಾಂಗ್ರೆಸ್ ಸರಕಾರವು ಹಿಂದುಳಿದ, ಅತಿ ಕೆಳ ಸ್ಥಿತಿಯಲ್ಲಿರುವ ದೇವಸ್ಥಾನಗಳಿಗೆ 300 ಕೋಟಿ ಕೊಡಲು ಸಾಧ್ಯವಿಲ್ಲವೇ ಎಂದು ಪ್ರಶ್ನೆಯನ್ನು ಮುಂದಿಟ್ಟರು. ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್. ನವೀನ್, ಪ್ರತಾಪಸಿಂಹ ನಾಯಕ್, ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Exit mobile version