ಬೆಂಗಳೂರು: ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ (Belagavi Assembly Session) ಈ ಬಾರಿ ಶಾಸಕರು, ಸಚಿವರ ಹಾಜರಾತಿಗಾಗಿ ಸ್ಪೀಕರ್ ಯು.ಟಿ. ಖಾದರ್ (Speaker UT Khader) ವಿಶೇಷ ಕಾರ್ಯಯೋಜನೆಯೊಂದನ್ನು ರೂಪಿಸಿದ್ದಾರೆ. ಪ್ರತಿ ದಿನ ಸದನಕ್ಕೆ ಬೇಗ ಬರುವ ಸದಸ್ಯರಿಗೆ ಬಹುಮಾನ ಕೊಡುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಅತಿ ಹೆಚ್ಚು ಗೈರು ಹಾಜರಾಗುವ ಸದಸ್ಯರಿಗೂ ಪ್ರಶಸ್ತಿ ನೀಡಲಾಗುತ್ತಿದೆ. ಮುಂದೆ ಅವರು ಗೈರಾಗದಂತೆ ಮಾಡಲು ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ಯು.ಟಿ. ಖಾದರ್ ತಿಳಿಸಿದ್ದಾರೆ.
ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಹಾಗೂ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದು, ಪ್ರತಿ ನಿತ್ಯ ಅಧಿವೇಶನಕ್ಕೆ ಬೇಗ ಹಾಜರಾಗುವ ಸದಸ್ಯರಿಗೆ ಟೀ ಕಪ್‌ಗಳನ್ನು ನೀಡಲಾಗುತ್ತಿದ್ದು, ಇದರಲ್ಲಿ ರಾಷ್ಟ್ರ ಹಾಗೂ ರಾಜ್ಯದ ಲಾಂಛನಗಳು ಇರುತ್ತವೆ. ಹೆಚ್ಚು ಬಾರಿ ಬೇಗ ಬಂದವರಿಗೆ ಅಷ್ಟೇ ಸಂಖ್ಯೆಯ ಟೀ ಕಪ್‌ಗಳನ್ನು ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: Assembly Elections 2023 : ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮುಂದುವರಿಕೆಯ ಸಂಕೇತ: ಡಿಕೆಶಿ
ಸ್ಪೀಕರ್ ಯು.ಟಿ ಖಾದರ್ ಮಾತನಾಡಿ, ನಾಳೆಯಿಂದ 16ನೇ ವಿಧಾನಮಂಡಲ ಅಧಿವೇಶನ ಪ್ರಾರಂಭವಾಗಲಿದೆ. ಡಿಸೆಂಬರ್ 4 ರಿಂದ 15ರ ವರೆಗೆ ನಡೆಯಲಿದೆ. ನಾವೆಷ್ಟೇ ಕೆಲಸ ಮಾಡಿದರೂ ಎಲ್ಲರ ಸಹಕಾರ ಅಗತ್ಯವಿದೆ. ವಿಧಾನಮಂಡಲ ಅಧಿವೇಶನಕ್ಕೆ ಬರುವವರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಎರಡು ಅಧಿವೇಶನದಲ್ಲಿ ಭಾಗವಹಿಸಲು ಸವಲತ್ತು ಕಲ್ಪಿಸಲಾಗಿದೆ. ಅಧಿಕಾರಿ ವರ್ಗದವರಿಗೆ ಅಗತ್ಯವಿರುವ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ ಎಂದು ಹೇಳಿದರು.
ಈ ಬಾರಿ ಅತ್ಯುತ್ತಮ ಊಟ
ಈ ಬಾರಿ ಅತ್ಯುತ್ತಮ ಊಟ, ತಿಂಡಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಫುಡ್ ಕೋರ್ಟ್ ಕೂಡ ಮಾಡಲಾಗಿದೆ. ಇದರಿಂದ ಶಾಸಕರು ಯಾರೂ ಹೊರಗೆ ಹೋಗುವ ಅವಶ್ಯಕತೆ ಇರೋದಿಲ್ಲ. ಬರುವ ಜನಸಾಮಾನ್ಯರಿಗೂ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಳಗಾವಿಯಲ್ಲಿ ಎಲ್‌ಇಡಿ ಅಳವಡಿಸಲಾಗಿದೆ. ಇದು ಕಾಯಂ ಆಗಿ ಉಳಿಯಲಿದ್ದು, ಹತ್ತು ವರ್ಷಗಳ ಕಾಲ ಇರಲಿದೆ ಎಂದು ಯು.ಟಿ. ಖಾದರ್ ತಿಳಿಸಿದರು.
ಮಕ್ಕಳಿಗೆ ಕಿರುಚಿತ್ರ ಪ್ರದರ್ಶನ ಮತ್ತು ಚಾಕೋಲೆಟ್ ವಿತರಣೆ
ಜನ ಸಾಮಾನ್ಯರನ್ನು, ವಿದ್ಯಾರ್ಥಿಗಳನ್ನು ಆಕರ್ಷಿಸಲು, ಪ್ರವಾಸಿ ತಾಣ ಮಾಡಲು ಚರ್ಚೆ ಮಾಡಲಾಗಿದೆ. ಶಾಲಾ ಮಕ್ಕಳು ಸಭೆ ವೀಕ್ಷಣೆಗೆ ಹೊರಗೆ ಕಾಯಬೇಕಿತ್ತು. ಆದರೆ, ಈಗ ಬಂದವರನ್ನು ನೇರವಾಗಿ ಪಾಸ್ ಕೊಟ್ಟು ಒಳಗೆ ಬಿಡಲಾಗುವುದು. ಉಳಿದವರನ್ನು 500 ಜನ ಕೂರುವ ವ್ಯವಸ್ಥೆ ಕಲ್ಪಿಸಲಾಗಿದ್ದು, ಅಲ್ಲಿ ಕೂರಲಿದ್ದಾರೆ. ಅಲ್ಲಿ ಕೂರುವ ಮಕ್ಕಳಿಗೆ ಕಿರುಚಿತ್ರ ಪ್ರದರ್ಶಿಸುವ ವ್ಯವಸ್ಥೆ ಮಾಡಿದ್ದೇವೆ. ಕನಿಷ್ಠ ಅರ್ಧ ಗಂಟೆ ಕೂರಲು ಬಿಡಲಾಗುವುದು. ಮಕ್ಕಳಿಗೆ ಚಾಕೋಲೆಟ್, ತಂಪು ಪಾನೀಯ ವ್ಯವಸ್ಥೆಯನ್ನು ಕೂಡ ಮಾಡಲಾಗುವುದು. ಮಕ್ಕಳು ಈ ದೇಶದ ಮುಂದಿನ ಪ್ರಜೆಗಳು. ಬಂದವರು ಬೇಸರದಿಂದ ಹೋಗಬಾರದು ಎಂದು ಯು.ಟಿ. ಖಾದರ್ ಹೇಳಿದರು.
ಸುವರ್ಣ ಸಂಭ್ರಮದ ಕಾಲಘಟದಲ್ಲಿ ಒಂದೊಂದು ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಅಧಿವೇಶನ ಮೊದಲು ಮಕ್ಕಳು ಬಂದು ಕಾರ್ಯಕ್ರಮ ನಡೆಸಿ ಕೊಡಲಿದ್ದಾರೆ. ಸುವರ್ಣ ಸಂಭ್ರಮದ ಕಾರ್ಯಕ್ರಮದಲ್ಲಿ ಹಲವು ತಂಡದವರು ಭಾಗಿಯಾಗಲಿದ್ದಾರೆ. ವಿರಾಸತ್ ಆಳ್ವಾಸ್ ಕಾರ್ಯಕ್ರಮ ಏರ್ಪಡಿಸಿದ್ದು, ಎರಡು ಗಂಟೆಗಳ ಕಾಲ ಕಾರ್ಯಕ್ರಮ ನೀಡಲಿದ್ದಾರೆ ಎಂದು ಯು.ಟಿ. ಖಾದರ್ ಮಾಹಿತಿ ನೀಡಿದರು.
ಈ ಬಾರಿ ಅಧಿವೇಶನದಲ್ಲಿ ಏಳರಿಂದ ಎಂಟು ಬಿಲ್ ಬರುವ ಸಾಧ್ಯತೆ ಇದೆ. ಮೂರು ಆರ್ಡಿನೆನ್ಸ್ ಆಗಿರೋ ಬಿಲ್ ಬರಲಿದೆ ಎಂದು ಇದೇ ವೇಳೆ ಯು.ಟಿ. ಖಾದರ್ ತಿಳಿಸಿದರು.
ಸಭಾಪತಿ ಬಸವರಾಜ್ ಹೊರಟ್ಟಿ ಮಾತನಾಡಿ, ಈ ಬಾರಿ ಜಾಸ್ತಿ ಪ್ರತಿಭಟನೆ ನಡೆಯುವುದಿಲ್ಲ. ಈಗಾಗಲೇ ಅನೇಕ ಸಚಿವರ ಜತೆ ಮಾತನಾಡಲಾಗಿದೆ. ಹೀಗಾಗಿ ಪ್ರತಿಭಟನೆ ಜಾಸ್ತಿ ಆಗುವುದಿಲ್ಲ. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳನ್ನು ಚರ್ಚೆ ಮಾಡುತ್ತೇವೆ. ಈ ಭಾಗದ ಸಮಸ್ಯೆಗೆ ಮೊದಲ ಆದ್ಯತೆ ನೀಡುತ್ತೇವೆ. ಯಾವುದೇ ಶಾಸಕರು ಚರ್ಚೆಗೆ ಭಾಗವಹಿಸಬಹುದು ಮತ್ತು ಪ್ರಶ್ನೆ ಕೇಳಬಹುದು ಎಂದು ಹೇಳಿದರು.
ಬೆಳಗಾವಿ ಕಚೇರಿ ಸ್ಥಳಾಂತರಕ್ಕೆ ಒಪ್ಪದ ಐಎಎಸ್ ಅಧಿಕಾರಿಗಳು
ರಾಜ್ಯ ಮಟ್ಟದ ಕಚೇರಿಗಳನ್ನು ಬೆಳಗಾವಿಗೆ ಶಿಫ್ಟ್ ಆಗಬೇಕು ಅಂತ ರಿಪೋರ್ಟ್ ಕೊಡಲಾಗಿದೆ. ಕ್ಯಾಬಿನೆಟ್ ಕೂಡಾ ಒಪ್ಪಿಕೊಂಡಿದೆ. ಆದರೆ ಐಎಎಸ್ ಅಧಿಕಾರಿಗಳು ಇಲ್ಲಿಗೆ ಬರಲು ಇಷ್ಟ ಪಡುತ್ತಿಲ್ಲ. ಸರ್ಕಾರ ಈ ಬಗ್ಗೆ ಕ್ರಮವಹಿಸಬೇಕು. ಹೆಚ್ಚು ರಾಜ್ಯ ಕಚೇರಿಗಳು ಬೆಳಗಾವಿ ಸೌಧಕ್ಕೆ ಶಿಫ್ಟ್ ಆಗಬೇಕು. ಸರ್ಕಾರ ಈ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ಬಸವರಾಜ ಹೊರಟ್ಟಿ ಹೇಳಿದರು.
ಸುವರ್ಣಸೌಧದಲ್ಲಿ ನೆಹರು ಭಾವಚಿತ್ರ ಹಾಕುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸ್ಪೀಕರ್ ಯು.ಟಿ ಖಾದರ್, ದೇಶದ ಮೊದಲ ಪ್ರಧಾನಿಯಾಗಿರುವ ಜವಾಹರ್ ಲಾಲ್ ನೆಹರೂ ಅವರು ಭಾವಚಿತ್ರ ಹಾಕುವಂತೆ ಒತ್ತಾಯ ಇದೆ. ನೋಡೋಣ ಅದರ ಬಗ್ಗೆ ಚರ್ಚೆ ಮಾಡಿ ತೀರ್ಮಾನಿಸೋಣ ಎಂದು ತಿಳಿಸಿದರು.
ಈ ಬಾರಿ ಅಧಿವೇಶನದಲ್ಲಿ 2,512 ಪ್ರಶ್ನೆಗಳು ಬರಲಿದೆ. ದಿನಕ್ಕೆ 15 ಚುಕ್ಕೆ ಗುರುತಿನ ಪ್ರಶ್ನೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳಿದರು.
ಇದನ್ನೂ ಓದಿ: Assembly Elections 2023 : ನಮ್ಮ ಗ್ಯಾರಂಟಿ ಯಶಸ್ಸಿನಿಂದ ತೆಲಂಗಾಣದಲ್ಲಿ ಗೆಲುವು: ಸಿಎಂ ಸಿದ್ದರಾಮಯ್ಯ
ಕಾಂಗ್ರೆಸ್‌ನಿಂದ ಮುಸ್ಲಿಂ ಸಮುದಾಯದ ಸ್ಪೀಕರ್ ಒಬ್ಬರನ್ನು ಆಯ್ಕೆ ಮಾಡಿದೆ. ಈ ಮೂಲಕ ಬಿಜೆಪಿಯವರು ಸದನದಲ್ಲಿ ಅವರಿಗೆ ನಮಸ್ಕರಿಸಿ ಕೂರುವಂತೆ ಮಾಡಿದ್ದು ಕಾಂಗ್ರೆಸ್ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ನೀಡಿದ್ದ ಹೇಳಿಕೆ ಸಂಬಂಧ ಬಿಜೆಪಿ ಸದನದಲ್ಲಿ ಪ್ರತಿಭಟನೆ ಮಾಡುವುದಾಗಿ ಹೇಳಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಯು.ಟಿ. ಖಾದರ್, ಜಮೀರ್ ಅಹ್ಮದ್ ಖಾನ್ ಅವರು ಚುನಾವಣೆ ಸಂದರ್ಭದಲ್ಲಿ ಸಭೆಯ ಹೊರಗೆ ಹೇಳಿಕೆ ನೀಡಿದ್ದಾರೆ. ಈಗ ನಮಗೆ ಅಧಿವೇಶನದಲ್ಲಿ ಹತ್ತು ದಿನ ಮಾತ್ರ ಅವಕಾಶ ಇದೆ. ಉತ್ತರ ಕರ್ನಾಟಕದ ಸಮಸ್ಯೆ ಹೆಚ್ಚಿದೆ. ಅದರ ಬಗ್ಗೆ ಹೆಚ್ಚು ಚರ್ಚೆ ಆಗಬೇಕು. ಅದನ್ನು ಹೊರತುಪಡಿಸಿ ಬೇರೆ ಯಾವುದೇ ಚರ್ಚೆ ಬೇಡ ಅನ್ನೋದು ನಮ್ಮ ಅಭಿಪ್ರಾಯ. ಆದರೆ, ಈವರೆಗೂ ಬಿಜೆಪಿಯಿಂದ ಇದರ ಬಗ್ಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.