ಬೆಂಗಳೂರು: ಲೋಕಸಭೆ ಚುನಾವಣೆ (Lok Sabha Election 2024) ಪ್ರಚಾರದ ನಡುವೆಯೇ ಬೆಂಗಳೂರು ದಕ್ಷಿಣ (Bangalore South) ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ (tejaswi surya) ಇನ್ನೊಂದು ಕಿರಿಕ್ ಮಾಡಿಕೊಂಡಿದ್ದಾರೆ. ಅವರು ಕರೆದ ಠೇವಣಿದಾರರ (depositors) ಸಭೆಯಲ್ಲಿ ಗಲಾಟೆ ಸೃಷ್ಟಿಯಾಗಿದ್ದು, ತಬ್ಬಿಬ್ಬಾದ ಸಂಸದ ತೇಜಸ್ವಿ ಸೂರ್ಯ ಅಲ್ಲಿಂದ ಹೊರನಡೆದಿದ್ದಾರೆ.
ಏಪ್ರಿಲ್ 13ರಂದು ಗುರು ರಾಘವೇಂದ್ರ ಕೋಆಪರೇಟಿವ್ ಬ್ಯಾಂಕ್ ಹಾಗೂ ಕೋಆಪರೇಟಿವ್ ಬ್ಯಾಂಕ್‌ಗಳ ಠೇವಣಿದಾರರ ಸಭೆಯನ್ನು ಸಂಸದ ತೇಜಸ್ವಿ ಸೂರ್ಯ ಮತ್ತು ಶಾಸಕ ರವಿ ಸುಬ್ರಮಣ್ಯ ಕರೆದಿದ್ದರು. ಠೇವಣಿದಾರರ ಸಭೆಯಲ್ಲಿ ಗದ್ದಲ ಉಂಟಾಗಿದ್ದು, ಗ್ರಾಹಕರನ್ನು ತಳ್ಳಿ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ.
ತೇಜಸ್ವಿ ಸೂರ್ಯ ಕರೆದ ಸಭೆಯಲ್ಲಿಯೇ ಅವರ ವಿರುದ್ಧವೇ ಡಿಪಾಸಿಟರ್‌ಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗದ್ದಲ ಹೆಚ್ಚಾದ ವೇಳೆ ತೇಜಸ್ವಿ ಸೂರ್ಯ ಕುಪಿತಗೊಂಡು ಸಭೆಯಿಂದ ಎದ್ದು ಹೊರ ನಡೆಯಲು ಮುಂದಾಗಿದ್ದು, ಈ ಸಂದರ್ಭದಲ್ಲಿ ತಡೆದ ಮಹಿಳೆಯೊಬ್ಬರನ್ನು ತಳ್ಳಿ ಹೊರ ನಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಸ್ಥಳದಲ್ಲಿದ್ದ ಚುನಾವಣಾ ಅಧಿಕಾರಿಗಳ ಮೇಲೆಯೂ ಹಲ್ಲೆ ಮಾಡಿ ದರ್ಪ ತೋರಿದ್ದಾರೆ. ವಾಗ್ವಾದದ ವೇಳೆ ಶಾಸಕ ರವಿ ಸುಬ್ರಮಣ್ಯಂ ಗ್ರಾಹಕರೊಬ್ಬರನ್ನು ಕೈ ಹಿಡಿದು ಎಳೆದಿದ್ದಾರೆ ಎಂದು ಆರೋಪಿಸಲಾಗಿದೆ.
ಠೇವಣಿದಾರರ ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದು ತೇಜಸ್ವಿ ಸೂರ್ಯ ವಿರುದ್ಧ ಠೇವಣಿದಾರರು ಗದ್ದಲ ಎಬ್ಬಿಸಿದ್ದರು. ಈ ಸಂದರ್ಭದಲ್ಲಿ ತೇಜಸ್ವಿ ಸೂರ್ಯ ಡೌನ್ ಡೌನ್ʼ ಎಂದು ಘೋಷಣೆಗಳೂ ಕೇಳಿಬಂದವು. ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ಹತೋಟಿಗೆ ತಂದರು.
ತೇಜಸ್ವಿ ಬಳಿ ಆಸ್ತಿ ಎಷ್ಟಿದೆ? ಎಷ್ಟು ಶೇರು?
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಬಳಿ ಇಲ್ಲಿ ಯಾವುದೇ ಸ್ವಂತ ಮನೆ, ಕಾರು ಅಥವಾ ಬೈಕು ಇಲ್ಲ. ಇದನ್ನು ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ (Affidavit) ಘೋಷಿಸಿಕೊಂಡಿದ್ದಾರೆ.
ಕಳೆದ ಬಾರಿ 13.46 ರೂ. ಲಕ್ಷ ಮೌಲ್ಯದ ಆಸ್ತಿಯನ್ನು ತೇಜಸ್ವಿ ಸೂರ್ಯ ಘೋಷಿಸಿಕೊಂಡಿದ್ದರು. ಎರಡನೇ ಬಾರಿ ಆಸ್ತಿ ಮೌಲ್ಯದಲ್ಲಿ ಭಾರೀ ಹೆಚ್ಚಳವಾಗಿದೆ. ಈ ಬಾರಿ ಅವರು 4.10 ಕೋಟಿ ರೂ. ಮೌಲ್ಯದ ಆಸ್ತಿಯ ಒಡೆಯನಾಗಿದ್ದಾರೆ.
ಹೂಡಿಕೆಯಿಂದಲೇ ಕೋಟ್ಯಾಂತರ ರೂ. ಗಳಿಕೆ ಲೆಕ್ಕ ಕೊಟ್ಟಿದ್ದಾರೆ ತೇಜಸ್ವಿ ಸೂರ್ಯ. ಮ್ಯೂಚುವಲ್ ಫಂಡ್, ಈಕ್ವಿಟಿಗಳಲ್ಲಿ 1,99,44,863 ಕೋಟಿ ಹೂಡಿಕೆ ಮಾಡಿದ್ದಾರೆ. 1,79,31,750 ರೂ. ಮಾರುಕಟ್ಟೆ ಮೌಲ್ಯದ ಷೇರುಗಳನ್ನು ಹೊಂದಿದ್ದು, ವಿವಿಧ ವಿಮಾ ಕಂಪನಿಗಳಲ್ಲಿನ 25,28,446 ಲಕ್ಷ ವಿಮೆ ಮಾಡಿಸಿದ್ದಾರೆ. 80 ಸಾವಿರ ನಗದು ಹೊಂದಿದ್ದು, ವಿವಿಧ ಬ್ಯಾಂಕ್‌ಗಳ ಖಾತೆಯಲ್ಲಿ 5,45,430 ರೂ. ಠೇವಣಿ ಇಟ್ಟಿದ್ದಾರೆ.
ತೇಜಸ್ವಿ ಸೂರ್ಯ ವಿರುದ್ಧ ದೇಶಾದ್ಯಂತ ಕೇಸ್‌ಗಳೂ ದಾಖಲಾಗಿವೆ. ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಗಳಲ್ಲಿ ಎರಡು ಕೇಸ್ ಇದ್ದು, ನವದೆಹಲಿಯ ಸಿವಿಲ್ ಲೈನ್ಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಧಾರ್ಮಿಕ ಭಾವನೆಗಳಿಗೆ ಅವಮಾನ, ನಂಬಿಕೆಗೆ ಚ್ಯುತಿ, ಕಾನೂನುಬಾಹಿರವಾಗಿ ಗುಂಪು ಜಮಾವಣೆ, ಸರ್ಕಾರಿ ಅಧಿಕಾರಿ ಕರ್ತವ್ಯಕ್ಕೆ ಅಡ್ಡಿ ಮತ್ತು ಸಾರ್ವಜನಿಕ ಸ್ಥಳದಲ್ಲಿ ಗಲಾಟೆಗೆ ಸಂಬಂಧಿಸಿದ ಪ್ರಕರಣಗಳಿವೆ.
ಇದನ್ನೂ ಓದಿ: Tejaswi Surya: ತೇಜಸ್ವಿ ಸೂರ್ಯ ಆಸ್ತಿ ಎಷ್ಟಿದೆ? ಷೇರು, ಮ್ಯೂಚುಯಲ್ ಫಂಡ್‌ಗಳಲ್ಲಿ ಕೋಟ್ಯಂತರ ರೂ. ಹೂಡಿಕೆ!