ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ (Assembly Election) ಆಡಳಿತ ಪಕ್ಷವಾಗಿದ್ದ ಬಿಜೆಪಿ ಹೀನಾಯ ಸೋಲು ಕಂಡಿತ್ತು. ಇದೇ ವೇಳೆ ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಅಭೂತಪೂರ್ವ ಗೆಲುವು ಸಾಧಿಸಿತ್ತು. ಈ ಗೆಲುವಿನ ಹಿಂದೆ ಬಹುಮುಖ್ಯವಾಗಿ ಬಿಜೆಪಿಯಲ್ಲಿ ನಡೆದ ಕೆಲವು ಬದಲಾವಣೆಗಳು ಸಹ ಕಾರಣ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆಗ ಸಿಎಂ ಆಗಿದ್ದ ಬಿ.ಎಸ್. ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಲಾಗಿದೆ. ಹಿರಿಯ ನಾಯಕ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿಗೆ ಟಿಕೆಟ್ ನೀಡಲಿಲ್ಲ. ಈ ಮೂಲಕ ಲಿಂಗಾಯತ ಸಮುದಾಯದ (Lingayat community) ಕಡೆಗಣನೆಯಾಗಿದೆ ಎಂಬ ಕಾಂಗ್ರೆಸ್ ಅಸ್ತ್ರ ಫಲಿಸಿತ್ತು. ಆದರೆ, ಈಗ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಐದು ತಿಂಗಳು ಮುಗಿಯುತ್ತಾ ಬಂದ ವೇಳೆ ಬಿಜೆಪಿ ಹೈಕಮಾಂಡ್ (BJP high command) ಮಾಸ್ಟರ್ ಸ್ಟ್ರೋಕ್ ನೀಡಿದೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (BS Yediyurappa) ಪುತ್ರ, ಬಿಜೆಪಿ ಉಪಾಧ್ಯಕ್ಷರಾಗಿದ್ದ ಬಿ.ವೈ. ವಿಜಯೇಂದ್ರ (BY Vijayendra) ಅವರಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವನ್ನು ನೀಡಿದೆ. ಇದೇ ಈಗ ಕಾಂಗ್ರೆಸ್ ಪಾಳೆಯದ ಟೆನ್ಶನ್ಗೆ ಕಾರಣವಾಗಿದೆ.
ಇಲ್ಲಿಯವರೆಗೆ ಬಿಜೆಪಿಯಿಂದ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಲಿಂಗಾಯತರ ಕಡೆಗಣನೆ ಮಾಡಲಾಗಿದೆ ಎಂದು ಹೇಳಿಕೊಂಡು ಬರುತ್ತಿದ್ದ ಕಾಂಗ್ರೆಸ್ಗೆ ಈಗ ಬಿ.ವೈ. ವಿಜಯೇಂದ್ರ ಆಯ್ಕೆಯು ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ. ಈ ಕಾರಣದಿಂದಾಗಿ ಕೈ ಪಕ್ಷ ಈಗ ಅಲರ್ಟ್ ಆಗಿದೆ. ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹಾಕಿಕೊಂಡಿದ್ದ ಕಾಂಗ್ರೆಸ್ ನಾಯಕರು ಈಗ ಬೇರೆ ರಣತಂತ್ರವನ್ನು ಹೆಣೆಯಲು ಸಿದ್ಧರಾಗುತ್ತಿದ್ದಾರೆ.
ಕಾಂಗ್ರೆಸ್ಗೆ ಏಕೆ ಭಯ?
ಕಳೆದ ಚುನಾವಣೆಯಲ್ಲಿ ಲಿಂಗಾಯತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಅನ್ನು ಬೆಂಬಲಿಸಿದ್ದರು. ಇದರ ಪರಿಣಾಮ 135 ಸ್ಥಾನಗಳನ್ನು ಕೈ ಪಡೆ ಗೆದ್ದುಕೊಂಡಿತ್ತು. ಈಗ ಅದೇ ಸಮುದಾಯದ ಪ್ರಬಲ ಯುವ ನಾಯಕ ಎಂದೇ ಗುರುತಿಸಿಕೊಂಡಿರುವ ಬಿ.ವೈ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಹುದ್ದೆಗೆ ನೇಮಕ ಮಾಡಲಾಗಿದೆ. ಅಲ್ಲದೆ, ಅವರ ತಂದೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಹ ಈಗ ಫುಲ್ ಆ್ಯಕ್ಟಿವ್ ಆಗಿದ್ದಾರೆ. ರಾಜ್ಯದೆಲ್ಲೆಡೆ ಮಿಂಚಿನ ಸಂಚಾರ ನಡೆಸಲು ಸಿದ್ಧತೆ ನಡೆಸಿದ್ದಾರೆ. ಈ ಮೂಲಕ ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಅತಿ ಹೆಚ್ಚಿನ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಕೆಲಸ ಮಾಡುವುದಾಗಿ ಹೇಳಿದ್ದಾರೆ.
ಲಿಂಗಾಯತರ ಓಲೈಕೆಗೆ ಡಿ.ಕೆ. ಶಿವಕುಮಾರ್ ತಂತ್ರ
ಈಗ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ವರಿಷ್ಠರ ಈ ನಡೆಯು ಕೈ ಪಾಳಯದಲ್ಲಿ ಆತಂಕವನ್ನು ಹುಟ್ಟುಹಾಕಿದೆ. ಸಾಕಷ್ಟು ರಾಜಕೀಯ ಲೆಕ್ಕಾಚಾರಗಳನ್ನು ಇಟ್ಟುಕೊಂಡಿದ್ದ ಈ ಪಕ್ಷಕ್ಕೆ ಈಗ ವಿಜಯೇಂದ್ರ ಆಯ್ಕೆಯಿಂದ ಲಿಂಗಾಯತ ಸಮುದಾಯದ ಬೆಂಬಲ ಸಿಗುವುದು ಕಷ್ಟ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ಆ ಸಮುದಾಯವನ್ನು ಹಿಡಿದಿಡಲು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ತಂತ್ರಗಾರಿಕೆಯನ್ನು ಆಂರಭಿಸಿದ್ದಾರೆ ಎನ್ನಲಾಗಿದೆ.
ಶೆಟ್ಟರ್, ಸವದಿಗೆ ಮಂತ್ರಿಗಿರಿ?
ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದ ಪ್ರಬಲ ಸಮುದಾಯದ ನಾಯಕರಿಗೆ ಡಿಸೆಂಬರ್ನಲ್ಲಿ ಶುಭ ಸುದ್ದಿ ನೀಡಲು ಕಾಂಗ್ರೆಸ್ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಮಾಜಿ ಡಿಸಿಎಂ ಲಕ್ಷ್ಮಣ ಸವದಿಗೆ ಸ್ಥಾನಮಾನ ಕೊಡುವ ಸಾಧ್ಯತೆ ಇದೆ. ಡಿಸೆಂಬರ್ನಲ್ಲಿ ಸಂಪುಟದಲ್ಲಿ ಕೆಲವು ಬದಲಾವಣೆ ಮಾಡಲು ಚಿಂತನೆ ನಡೆಸಿದ್ದು, ಕಳೆದ ಆರು ತಿಂಗಳಲ್ಲಿ ಕೆಲಸ ಮಾಡದ ಕೆಲವು ಸಚಿವರಿಗೆ ಕೊಕ್ ಕೊಡಲು ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಮುಂದಾಗಿದ್ದಾರೆ ಎನ್ನಲಾಗಿದೆ. ಹೀಗೆ ತೆರವಾಗುವ ಸ್ಥಾನಕ್ಕೆ ಶೆಟ್ಟರ್ ಮತ್ತು ಸವದಿಯನ್ನು ಆಯ್ಕೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: BY Vijayendra : ಹಿರಿಯರ ಮನೆಯತ್ತ ವಿಜಯೇಂದ್ರ ನಡೆ; ಬೊಮ್ಮಾಯಿ ಆಶೀರ್ವಾದ ಪಡೆದ ಬಿಜೆಪಿ ರಾಜ್ಯಾಧ್ಯಕ್ಷ
ಏಕೆ ಈ ನಿರ್ಧಾರ?
ಕಳೆದ ಚುನಾವಣೆಯಲ್ಲಿ ಸೋಲು ಕಂಡರೂ ಸಹ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿಗೆ ಮಂತ್ರಿಗಿರಿ ನೀಡಿದರೆ, ಲಿಂಗಾಯತ ಸಮುದಾಯವನ್ನು ಕಾಂಗ್ರೆಸ್ ಪರಿಗಣಿಸಿದೆ ಎಂಬ ಸಂದೇಶವನ್ನು ನೀಡಿದಂತಾಗುತ್ತದೆ. ಇದನ್ನು ಲೋಕಸಭಾ ಚುನಾವಣೆಗೆ ಪ್ರಬಲ ಅಸ್ತ್ರವನ್ನಾಗಿ ಬಳಸಿಕೊಳ್ಳಬಹುದು ಎಂಬ ಚಿಂತನೆಯಲ್ಲಿ ಕಾಂಗ್ರೆಸ್ ಪಕ್ಷ ಇದೆ. ಆದರೆ, ಚುನಾವಣೆ ಮುನ್ನ ಇಂತಹ ಬದಲಾವಣೆ ಬೇಡ ಎಂದು ಕೆಲವು ನಾಯಕರು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೆ ಡಿ.ಕೆ. ಶಿವಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದು, ಶೆಟ್ಟರ್, ಸವದಿಗೆ ಸ್ಥಾನಮಾನ ಕೊಡದಿದ್ದರೆ ನಮಗೆ ಪ್ರಯೋಜನ ಇಲ್ಲ ಎಂದು ಹೇಳುತ್ತಿದ್ದಾರೆ. ಹೀಗಾಗಿ ಕೊನೇ ಘಳಿಗೆಯಲ್ಲಿ ಯಾವ ನಿರ್ಧಾರಕ್ಕೆ ಕಾಂಗ್ರೆಸ್ ಬರಲಿದೆ ಎಂಬುದು ಸದ್ಯದ ಕುತೂಹಲವಾಗಿದೆ.