Site icon Vistara News

Caste Census report: ಜಾತಿಗಣತಿ ರಿಪೋರ್ಟ್‌‌ ಬಗ್ಗೆ ಕಾಂಗ್ರೆಸ್‌ನಲ್ಲಿ ಟೆನ್ಶನ್‌; ಸಿದ್ದರಾಮಯ್ಯ ಮಾಡಿದ್ದಾರೆ ಮಾಸ್ಟರ್‌ ಪ್ಲ್ಯಾನ್!

Tension in Congress over caste census report CM Siddaramaiah made master plan

ಬೆಂಗಳೂರು: ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯನ್ನೊಳಗೊಂಡ ಜಾತಿ ಗಣತಿ ವರದಿಯನ್ನು (Caste Census report) ರಾಜ್ಯ ಸರ್ಕಾರವು ಗುರುವಾರ (ಫೆ.29) ಅಧಿಕೃತವಾಗಿ ಸ್ವೀಕಾರ ಮಾಡಿದೆ. ಆದರೆ, ಇದರ ಬೆನ್ನಲ್ಲೇ ಈಗ ಕಾಂಗ್ರೆಸ್‌ಗೆ ಟನ್ಶನ್‌ ಶುರುವಾಗಿದೆ. ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಹಿನ್ನಡೆಯಾಗಬಹುದು ಎಂಬ ಆತಂಕವಿದ್ದರೂ, ಕೆಲವು ಪ್ರಬಲ ಸಮುದಾಯಗಳಿಗೆ ರಾಜಕೀಯದಲ್ಲಿ ತಮ್ಮ ಹಿಡಿತ ಕೈತಪ್ಪುವ ಭೀತಿಯೂ ಉಂಟಾಗಿದೆ. ಈ ಕಾರಣದಿಂದ ಸ್ವಪಕ್ಷದಲ್ಲೇ ಅಪಸ್ವರಗಳು ಕೇಳಿಬಂದಿವೆ. ಇನ್ನು ಪ್ರತಿಪಕ್ಷಗಳಿಗೆ ಇದೇ ದೊಡ್ಡ ಅಸ್ತ್ರವಾದರೆ ಮುಂದಿನ ನಡೆ ಏನು ಎಂಬ ವಿಚಾರವೂ ಕೈಪಡೆಯನ್ನು ಕಾಡುತ್ತಿದೆ. ಆದರೆ, ಇದಕ್ಕೆ ಮದ್ದರಿಯಲು ಸಿಎಂ ಸಿದ್ದರಾಮಯ್ಯ (CM Siddaramaiah) ಮುಂದಾಗಿದ್ದು, ಮಾಸ್ಟರ್‌ ಪ್ಲ್ಯಾನ್‌ ರೂಪಿಸಿದ್ದಾರೆ.

ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ವರದಿ ಬಗ್ಗೆ ಸಹ ಇನ್ನೂ ಯಾರಿಗೂ ಒಂದು ನಿರ್ಧಾರಕ್ಕೆ ಬರಲಾಗುತ್ತಿಲ್ಲ. ಈ ರಿಪೋರ್ಟ್‌ ಬಗ್ಗೆಯೂ ಅನುಮಾನವನ್ನು ಹಲವರು ವ್ಯಕ್ತಪಡಿಸಿದ್ದಾರೆ. ಕಾರಣ, ಇದಕ್ಕೆ ಕಾಂತರಾಜು ಆಯೋಗ ನೀಡಿದ್ದ ವರದಿಯ ಅಂಕಿಅಂಶಗಳೇ ಜೀವಾಳವಾಗಿದೆ ಎಂಬುದು ಕೈಪಡೆ ಕೆಲವು ನಾಯಕರ ಹಾಗೂ ವಿಪಕ್ಷ ನಾಯಕರ ಆಕ್ಷೇಪಕ್ಕೆ ಕಾರಣವಾಗಿದೆ.

ಈಗ ಕೇಳಿಬಂದಿರುವ ಆರೋಪಗಳೇನು?

ಈಗಾಗಲೇ ಕಾಂಗ್ರೆಸ್‌ಗೆ ಸ್ವಪಕ್ಷೀಯ ಶಾಸಕರು, ಸಚಿವರೇ ಮುಳುವಾಗುತ್ತಿದ್ದಾರೆ. ಈ ವರದಿಯನ್ನು ಒಪ್ಪುವುದಿಲ್ಲ ಎಂದು ಶಾಸಕ ವಿನಯ ಕುಲಕರ್ಣಿ ಹೇಳಿದ್ದರೆ, ವರದಿಯಲ್ಲಿ ದೋಷವಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ತಮ್ಮ ವಾದವನ್ನು ಮುಂದಿಟ್ಟಿದ್ದಾರೆ. ಪ್ರತಿಪಕ್ಷಗಳು ಸಹ ಇದು ಕಾಂತರಾಜು ವರದಿಯ ಯಥಾವತ್ತು ನಕಲು. ಈ ವರದಿಯನ್ವಯ ಸರ್ಕಾರದ ನಿರ್ಧಾರವನ್ನು ಪ್ರಕಟಿಸಬೇಕು. ಅಲ್ಲದೆ, ವಿಶೇಷ ಅಧಿವೇಶನವನ್ನು ಕರೆದು ಚರ್ಚೆ ನಡೆಸಬೇಕು ಎಂದು ಆಗ್ರಹಿಸಿವೆ. ಇದರ ಜತೆಗೆ ತಮ್ಮ ಸಣ್ಣ ಸಮುದಾಯಗಳನ್ನು ಕಡೆಗಣಿಸಲಾಗಿದೆ ಎಂಬುದು ಪ್ರಬಲ ಸಮುದಾಯಗಳ ನಾಯಕರ ವಾದವಾಗಿವೆ. ಅಲ್ಲದೆ, ಸಿಎಂ ಸಿದ್ದರಾಮಯ್ಯ ಅವರ ಈ ನಿರ್ಧಾರ ಸರಿಯಲ್ಲ ಎಂಬ ಆಕ್ಷೇಪಗಳು ಸ್ವಪಕ್ಷದಲ್ಲಿ ಆಂತರಿಕ ಚರ್ಚೆಗಳಿಗೆ ಎಡೆಮಾಡಿಕೊಟ್ಟಿವೆ.

ಲೋಕಸಭಾ ಚುನಾವಣೆಗೆ ಡ್ಯಾಮೇಜ್‌ ಭಯ

ಇನ್ನು ಪ್ರತಿ ಚುನಾವಣೆ ವೇಳೆಯೂ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತಾ ಬಂದಿವೆ. ಆದರೆ, ಈಗ ಈ ಸಮುದಾಯಗಳ ನಾಯಕರ ವಿರೋಧದ ನಡೆವೆಯೂ ಸಿಎಂ ಸಿದ್ದರಾಮಯ್ಯ ಜಾತಿ ಗಣತಿ ವರದಿಯನ್ನು ಸ್ವೀಕಾರ ಮಾಡಿದ್ದಾರೆ. ಇದರಿಂದ ಪಕ್ಷಕ್ಕೆ ಭಾರಿ ಪ್ರಮಾಣದ ಡ್ಯಾಮೇಜ್‌ ಆಗಲಿದೆ. ಅದು ಲೋಕಸಭಾ ಚುಣಾವಣೆಯಲ್ಲಿ ಗೊತ್ತಾಗಲಿದೆ ಎಂಬ ಆತಂಕವನ್ನು ಈಗಾಗಲೇ ಪಕ್ಷದ ವಲಯದಲ್ಲಿ ಹಲವು ಕಾಂಗ್ರೆಸ್‌ ಶಾಸಕರು, ಸಚಿವರು ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಪ್ರಬಲ ಸಮುದಾಯಗಳ ವಿರೋಧ ಪಕ್ಕಾ ಎಂದೂ ಹೇಳುತ್ತಿದ್ದಾರೆ.

ಡ್ಯಾಮೇಜ್‌ ಕಂಟ್ರೋಲ್ಗೆ ಸಿಎಂ ಪ್ಲ್ಯಾನ್!‌

ಈ ಎಲ್ಲ ಬೆಳವಣಿಗೆ ನಡುವೆಯೂ ಸಿಎಂ ಸಿದ್ದರಾಮಯ್ಯ ಮಾತ್ರ ಜಾತಿ ಗಣತಿ ವರದಿ ಸ್ವೀಕಾರದ ಬಗ್ಗೆ ಪಾಸಿಟಿವ್‌ ಆಗಿಯೇ ಇದ್ದಾರೆ ಎನ್ನಲಾಗಿದೆ. ಆದರೆ, ಇದರಿಂದ ಆಗಬಹುದಾದ ಡ್ಯಾಮೇಜ್‌ ಕಂಟ್ರೋಲ್‌ಗೆ ಸಿಎಂ ಪ್ಲ್ಯಾನ್‌ ಮಾಡಿದ್ದಾರೆ ಎನ್ನಲಾಗಿದೆ. ಈ ವರದಿ ಬಗ್ಗೆ ಗುರುವಾರ (ಫೆ. 29) ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಚಾರ ಪ್ರಸ್ತಾಪವಾಗಿದೆ. ಸಂಪುಟ ಸಚಿವರು ಸುದೀರ್ಘ ಚರ್ಚೆ ನಡೆಸಿದ್ದಾರೆ. ಆಗ ಮಾತನಾಡಿದ್ದ ಸಿಎಂ, ಇದನ್ನು ನಾವೇ ಅಸ್ತ್ರ ಮಾಡಿಕೊಳ್ಳೋಣ ಎಂದು ಸಹ ಹೇಳಿದ್ದಾರೆ. ಇದು ಪರಿಷ್ಕೃತ ವರದಿಯಾಗಿದ್ದು, ಇದರಲ್ಲಿ ಯಾವುದೇ ಲೋಪವಿಲ್ಲ. ಮುಂದಿನ ಕ್ಯಾಬಿನೆಟ್‌ನಲ್ಲಿ ಈ ಬಗ್ಗೆ ಚರ್ಚೆ ನಡೆಸೋಣ. ಕ್ಯಾಬಿನೆಟ್‌ ಸಭೆಯಲ್ಲಿ ಚರ್ಚೆ ಬಳಿಕ ಮುಂದಿನ ನಿರ್ಧಾರವನ್ನು ಕೈಗೊಳ್ಳೋಣ. ಸಬ್‌ ಕಮಿಟಿಗೆ ಹಾಕೋದು ಅಗತ್ಯ ಇದ್ದರೆ ಅದರ ಬಗ್ಗೆಯೂ ಚರ್ಚೆ ಮಾಡೋಣ ಎಂದು ಹೇಳಿದ್ದಾರೆ.

ಈ ಚುನಾವಣೆ ದಾಟುವವರೆಗೂ ಮುಂದೂಡಿಕೆ

ಈಗ ಬರುತ್ತಿರುವ ಲೋಕಸಭಾ ಚುನಾವಣೆ ವರೆಗೂ ಜಾತಿ ಗಣತಿ ವರದಿಯನ್ನು ಜಾರಿಗೆ ತರುವುದು ಬೇಡ. ಹೇಗೂ ಇನ್ನು ಮೂರು ತಿಂಗಳೂ ಅಧಿವೇಶನ ಇರುವುದಿಲ್ಲ. ಬಳಿಕ ನಡೆಯುವ ಅಧಿವೇಶನದಲ್ಲಿ ಈ ವರದಿಯನ್ನು ಪ್ರಸ್ತಾಪಿಸಿ ಚರ್ಚೆ ಮಾಡೋಣ. ಈಗ ನಾವು, ಈ ಮೊದಲು ಹೇಳಿದಂತೆ ವರದಿಯನ್ನು ಸ್ವೀಕಾರ ಮಾಡಿದ್ದೇವೆ. ಇದರ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಚರ್ಚೆ ನಡೆಸಿಯೇ ಮುಂದಿನ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ಹೇಳೋಣ ಎಂದು ಸಿಎಂ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.

ಬಿಜೆಪಿಗೆ ಅಸ್ತ್ರ ಮಾಡಿಕೊಡಬೇಡಿ!

ಚುನಾವಣೆಯಲ್ಲಿ ಬಿಜೆಪಿ ಇದನ್ನು ಅಸ್ತ್ರ ಮಾಡಿಕೊಳ್ಳುತ್ತದೆ. ನಾವು ಅದಕ್ಕೆ ಅವಕಾಶವನ್ನು ಕೊಡಬಾರದು. ಜನರಿಗೆ ಇದರ ಬಗ್ಗೆ ಸ್ಪಷ್ಟನೆ ಹಾಗೂ ಸ್ಪಷ್ಟತೆಯನ್ನು ಕೊಡಬೇಕು. ಇಲ್ಲದಿದ್ದರೆ ಬಿಜೆಪಿ ಅವರು ಹೇಳಿದನ್ನೇ ನಿಜವೆಂದು ಜನರು ತಿಳಿದುಕೊಳ್ಳುತ್ತಾರೆ. ಈ ವರದಿಯಲ್ಲಿ ಯಾವುದೇ ಲೋಪಗಳು ಇಲ್ಲ. ಎಲ್ಲ ಸಮುದಾಯಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮಾಹಿತಿ ಇದರಲ್ಲಿದೆ. ಅಲ್ಲದೆ, ಇದರಿಂದ ಎಲ್ಲ ಸಮುದಾಯಗಳಿಗೂ ಪ್ರಾತಿನಿಧ್ಯ ಸಿಗಲಿದೆ ಎಂದು ಮನವರಿಕೆಯನ್ನು ಮಾಡಿಕೊಡೋಣ ಎಂಬುದನ್ನು ಸಹ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ವಿವರಣೆ ನೀಡಿದ್ದಾರೆ ಎನ್ನಲಾಗಿದೆ.

ಜಾತಿವಾರು ಜನಸಂಖ್ಯೆಯ ವಿವರ

ಇದನ್ನೂ ಓದಿ: Water Scarcity : ಬೆಂಗಳೂರಿನ ನೀರಿನ ಘಟಕಗಳಲ್ಲಿ ಒಬ್ಬರಿಗೆ ಒಂದೇ ಕ್ಯಾನ್‌ ನೀರು!

ವರದಿಯ ಸಾರಾಂಶ ಏನು?

Exit mobile version