ಬೆಂಗಳೂರು: ಲೋಕಸಭೆ ಚುನಾವಣೆ (Lok Sabha Election) ಹಿನ್ನೆಲೆಯಲ್ಲಿ ನಗರದಲ್ಲಿ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆ ಸೋಮವಾರ ರಾತ್ರಿ ನಡೆದಿದ್ದು, ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚಿಸಲಾಗಿದೆ. ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷ ಹರೀಶ್ ಚೌಧರಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿ ಪ್ರಮುಖ ನಾಯಕರು ಸಭೆಯಲ್ಲಿ ಭಾಗಿಯಾಗಿದ್ದರು.
ಕಳೆದ ಸಿಇಸಿ ಸಭೆಯಲ್ಲಿ ರಾಜ್ಯದ 7 ಅಭ್ಯರ್ಥಿಗಳನ್ನು ಕಾಂಗ್ರೆಸ್ ಘೋಷಣೆ ಮಾಡಿತ್ತು. ಇಂದಿನ ಸಭೆಯಲ್ಲಿ 21 ಲೋಕಸಭೆ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಚರ್ಚೆ ನಡೆಸಲಾಗಿದ್ದು, ಈ ಬಗ್ಗೆ ಕೇಂದ್ರ ಚುನಾವಣಾ ಸಮಿತಿಗೆ ರಾಜ್ಯದ ನಾಯಕರು ಶಿಫಾರಸು ಮಾಡಲಿದ್ದಾರೆ.
ಸಭೆ ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ಸ್ಕ್ರೀನಿಂಗ್ ಕಮಿಟಿ ಸಭೆ ಆಗಿದೆ, ಎಲ್ಲಾ ಅಭ್ಯರ್ಥಿಗಳ ಹೆಸರು ಚರ್ಚೆ ಆಗಿದೆ. ಕೆಲವು ಸಿಂಗಲ್ ನೇಮ್ ಬಗ್ಗೆಯೂ ಚರ್ಚೆ ಆಗಿದೆ. ಸೆಂಟ್ರಲ್ ಎಲೆಕ್ಷನ್ ಕಮಿಟಿ ಯಾವತ್ತಾದರೂ ನಮಗೆ ಕರೆಯಬಹುದು. ದೆಹಲಿಯಲ್ಲಿ ಸಭೆ ನಡೆಯುತ್ತಿದೆ, ನಾವು ಇಲ್ಲಿ ಸಂಪೂರ್ಣ ಚರ್ಚೆ ಮುಗಿಸಿದ್ದೇವೆ. ಮಾರ್ಚ್ 14 ಮತ್ತು 15ಕ್ಕೆ ಸಭೆ ಕರೆಯಬಹುದು. ನಾನು ಹಾಗೂ ಸಿಎಂ ಹೋಗಿ, ಫೈನಲ್ ಮಾತುಕತೆ ಮಾಡಿ ಬರುತ್ತೇವೆ ಎಂದು ಹೇಳಿದರು.
ಟಿಕೆಟ್ ವಿಚಾರದಲ್ಲಿ ನಮ್ಮ ಅಭಿಪ್ರಾಯ ಏನೇ ಇರಬಹುದು, ಆದರೆ ಹೈಕಮಾಂಡೇ ಅಂತಿಮ ತೀರ್ಮಾನ ಮಾಡಲಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಅಂತಿಮ ತೀರ್ಮಾನ ಮಾಡುತ್ತಾರೆ, ಸಮಿತಿ ಮುಂದೆ ನಾವು ಮಂಡಿಸುತ್ತೇವೆ, ಶೇ.75 ಕ್ಷೇತ್ರಗಳಲ್ಲಿ ಹೆಸರುಗಳು ಸಿಂಗಲ್ ನೇಮ್ ಇದೆ ಎಂದು ತಿಳಿಸಿದರು.
ಇದನ್ನೂ ಓದಿ | Lok Sabha Election : ರಾಜ್ಯದ 22 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಅಂತಿಮ; ಯದುವೀರ್, ಸೋಮಣ್ಣ, ಡಾ. ಮಂಜುನಾಥ್ಗೆ ಟಿಕೆಟ್!
CAA ಜಾರಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರ ಮೂರುವರೆ ವರ್ಷ ನಿದ್ದೆ ಮಾಡುತ್ತಿತ್ತು. ಈಗ ಎಲೆಕ್ಷನ್ ಬಂದಿದೆ, ಈ ಅಸ್ಸಾಂ, ಪಶ್ಚಿಮ ಬಂಗಾಳದಲ್ಲಿ ಜಾತಿ ಹೋರಾಟ ನಡೆಯಿತು. ಈ ದೇಶದಲ್ಲಿ ಶಾಂತಿ ಕದಲಿಸಬೇಕು ಎಂದು ಈ ರೀತಿಯ ತೀರ್ಮಾನ ತೆಗೆದುಕೊಂಡಿದ್ದಾರೆ. ಆದರೆ, ಎಲ್ಲಾ ಜಾತಿ ಧರ್ಮ ರಕ್ಷಣೆ ಮಾಡುವುದು ನಮ್ಮ ಪಕ್ಷದ ಕರ್ತವ್ಯ. ನಾವು ಇದನ್ನು ಖಂಡಿಸುತ್ತೇವೆ.