ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ (Congress Government) ಮತ್ತು ಕಾಂಗ್ರೆಸ್ ಮುಖಂಡರಿಗೆ ಈ ನಾಡಿನ ನೆಲ, ಜಲ, ಸಂಪತ್ತಿನ ಬಗ್ಗೆ ನೈಜ ಕಾಳಜಿ ಇದ್ದರೆ ಬೆಳಗಾವಿ ವಿಚಾರದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಹೇಳಿಕೆ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ತಮ್ಮ ಅಭಿಪ್ರಾಯ ತಿಳಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಆಗ್ರಹಿಸಿದರು. ಅಲ್ಲದೆ, ದೆಹಲಿ ಗಣರಾಜ್ಯೋತ್ಸವ ಪರೇಡ್ ವೇಳೆ ಕರ್ನಾಟಕದ ಸ್ತಬ್ಧಚಿತ್ರವನ್ನು (Karnataka Tableau) ನಿರಾಕರಣೆ ಮಾಡಿರುವ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರ ಮೊಸಳೆ ಕಣ್ಣೀರು ಸುರಿಸುತ್ತಿದೆ ಎಂದು ಹೇಳಿದರು.
ನಗರದ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಬುಧವಾರ ನಡೆದ ಬಿಜೆಪಿ ಲೋಕಸಭೆ ಕ್ಷೇತ್ರವಾರು ಸಭೆಯ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿ.ವೈ. ವಿಜಯೇಂದ್ರ, ಕಾವೇರಿ ನೀರನ್ನು ತಮಿಳುನಾಡಿಗೆ ಕಳೆದ ಆರು ತಿಂಗಳಿಂದ ಹರಿಸುತ್ತಿದ್ದು, ಅದರ ವಿಷಯದಲ್ಲೂ ದಿಟ್ಟ ನಿರ್ಧಾರ ತೆಗೆದುಕೊಳ್ಳಲಿ ಎಂದು ಒತ್ತಾಯಿಸಿದರು.
ಬೇರೆ ರಾಜ್ಯಕ್ಕೂ ಅವಕಾಶ ಕೊಡಬೇಕೆಂಬ ಸದುದ್ದೇಶ
ದೆಹಲಿ ಗಣರಾಜ್ಯೋತ್ಸವ ಪರೇಡ್ ವೇಳೆ ಸ್ತಬ್ಧಚಿತ್ರ ವಿಷಯದಲ್ಲಿ ಕರ್ನಾಟಕಕ್ಕೆ ನಿರಂತರವಾಗಿ 14 ವರ್ಷಗಳಿಂದ ಅವಕಾಶ ಸಿಕ್ಕಿದೆ. ಈಗ ಕೊಡುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿಲ್ಲ. ಕಳೆದ ವರ್ಷ ಕೂಡ ಕರ್ನಾಟಕಕ್ಕೆ ಅವಕಾಶ ಸಿಕ್ಕಿಲ್ಲ ಎಂದು ಹೇಳಿದಾಗ ರಾಜ್ಯದ ನಮ್ಮೆಲ್ಲ ಹಿರಿಯರು ಪ್ರಯತ್ನಿಸಿದಾಗ ಅವಕಾಶ ಲಭಿಸಿತ್ತು. ಈ ಬಾರಿ ಕರ್ನಾಟಕ, ಗೋವಾ ಸೇರಿ ನಾಲ್ಕೈದು ರಾಜ್ಯಗಳಿಗೆ ಅವಕಾಶ ಸಿಕ್ಕಿಲ್ಲ. ಕರ್ನಾಟಕಕ್ಕೆ ಅವಕಾಶ ಕೊಡಬಾರದೆಂಬ ದುರುದ್ದೇಶ ಇದರಲ್ಲಿ ಇಲ್ಲ. ಬೇರೆ ರಾಜ್ಯಕ್ಕೂ ಅವಕಾಶ ಕೊಡಬೇಕೆಂಬ ಸದುದ್ದೇಶವಿದೆ ಅಷ್ಟೇ ಎಂದು ಬಿ.ವೈ. ವಿಜಯೇಂದ್ರ ಸ್ಪಷ್ಟನೆ ನೀಡಿದರು.
ಮೊಸಳೆ ಕಣ್ಣೀರು
ಅವಕಾಶ ಸಿಗದ ಕರ್ನಾಟಕ ಮತ್ತಿತರ ರಾಜ್ಯಗಳಿಗೆ ಎಕ್ಸಿಬಿಷನ್ನಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. ಇದನ್ನು ಗಮನಿಸದೆ ಈ ನಾಡಿನ ಬಗ್ಗೆ ಮೊಸಳೆ ಕಣ್ಣೀರು ಹಾಕುವ ಕೆಲಸ ರಾಜ್ಯ ಕಾಂಗ್ರೆಸ್ ಸರ್ಕಾರದ್ದು ಎಂದು ಟೀಕಿಸಿದರು. ಕನ್ನಡಪರ ಹೋರಾಟಗಾರ ನಾರಾಯಣಗೌಡರ ಕುರಿತ ಸರ್ಕಾರದ ನಡೆಯನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ಮಂಗಳವಾರ ಬಿಡುಗಡೆ ಆದೊಡನೆ ಮತ್ತೊಂದು ಕೇಸಿನಲ್ಲಿ ಒಳಗಡೆ ಹಾಕುವ ಪಿತೂರಿ ನಡೆಸಿದ ರಾಜ್ಯ ಸರ್ಕಾರ ನಿಮ್ಮದು. ಮೊಸಳೆ ಕಣ್ಣೀರು ಹಾಕುವುದನ್ನು ಬಿಡಿ. ಪ್ರಾಮಾಣಿಕವಾಗಿ ಎಲ್ಲ ವಿಷಯದಲ್ಲೂ ರಾಜ್ಯದ ಪರವಾಗಿ ನಿಲ್ಲಿ ಎಂದು ಬಿ.ವೈ. ವಿಜಯೇಂದ್ರ ಅವರು ಸರ್ಕಾರಕ್ಕೆ ಆಗ್ರಹಿಸಿದರು.
ಎಲ್ಲ ವಿಷಯದಲ್ಲೂ ಕೇಂದ್ರ ಸರ್ಕಾರ ರಾಜ್ಯದ ವಿರುದ್ಧ ಇದೆ ಎಂದು ಮಾನ್ಯ ಮುಖ್ಯಮಂತ್ರಿಗಳು ಬಿಂಬಿಸುತ್ತಿದ್ದಾರೆ. ಇದು ನಿಮಗೆ ಶೋಭೆ ತರುವುದಿಲ್ಲ ಎಂದು ತಿಳಿಸಿದರು. ಬೇರೆ ಬೇರೆ ವಿಷಯಗಳಲ್ಲಿ ನಿಮ್ಮ ನಡವಳಿಕೆಯನ್ನು ಜನತೆ ಗಮನಿಸುತ್ತಿದ್ದಾರೆ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.
ಇದನ್ನೂ ಓದಿ: Forced Conversion : ಮನೆಯೊಳಗೆ ಅನಧಿಕೃತ ಚರ್ಚ್ ನಿರ್ಮಿಸಿ ಪ್ರಾರ್ಥನೆ; ಭದ್ರಾವತಿಯಲ್ಲಿ ಮತಾಂತರಕ್ಕೆ ಪ್ರಚೋದನೆ!
ಬಿಜೆಪಿ ಸಂಘಟನೆ ದೃಷ್ಟಿಯಿಂದ ಇಂದಿನ ಸಭೆ ನಡೆದಿದೆ. ಮುಂದಿನ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರೆದ ಸಭೆ ಇದು ಎಂದು ಬಿ.ವೈ. ವಿಜಯೇಂದ್ರ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.