ಬೆಂಗಳೂರು: ರಾಜ್ಯ ಉದ್ಧಾರವಾಗಬೇಕಾದರೆ ಟ್ರಾನ್ಸ್‌ಫರ್ ದಂಧೆ (Transfer Scam) ನಿಲ್ಲಿಸಬೇಕು. ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಎಂದು ಆಡಳಿತ ಪಕ್ಷವಾದ ಕಾಂಗ್ರೆಸ್‌ನ ನಾಯಕರಾದ, ಶಾಸಕ ಬಸವರಾಜ ರಾಯರೆಡ್ಡಿ (MLA Basavaraja Rayareddy) ಅವರು ಸ್ಪಷ್ಟ ಶಬ್ದಗಳಲ್ಲಿ ಹೇಳಿದ್ದಾರೆ. ರಾಜ್ಯ ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ (HD Kumaraswamy), ಬಸವರಾಜ ಬೊಮ್ಮಾಯಿ (Basavaraja Bommai) ಸೇರಿದಂತೆ ವಿಪಕ್ಷ ನಾಯಕರು ಆರೋಪ ಮಾಡಿದ್ದರು. ಇದೀಗ ಸರ್ಕಾರದ ವಿರುದ್ಧ ಸ್ವಪಕ್ಷೀಯರೇ ಗಂಭೀರ ಆರೋಪ ಮಾಡಿದ್ದಾರೆ.
ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ Power point with HPK ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಬಸವರಾಜ ರಾಯರೆಡ್ಡಿ ಅವರು, ಟ್ರಾನ್ಸ್‌ಫರ್ ದಂಧೆ ನಿಲ್ಲಿಸುವಂತೆ ಸಿಎಂಗೆ ಸಲಹೆ ನೀಡುತ್ತೇನೆ ಎಂದಿದ್ದಾರೆ. ಜತೆಗೆ ರಾಜ್ಯ ಸರ್ಕಾರದಲ್ಲಿ ಭಾರಿ ಬದಲಾವಣೆ ಆಗಬೇಕು ಎಂದು ಹೇಳಿದ್ದಾರೆ.
ಇತ್ತೀಚೆಗೆ ಮಂತ್ರಿಗಳ ವಿರುದ್ಧ ಧ್ವನಿ ಎತ್ತಿದ ಕಾಂಗ್ರೆಸ್ ನಾಯಕರಲ್ಲಿ ಬಸವರಾಜ ರಾಯರೆಡ್ಡಿ ಮುಂಚೂಣಿಯಲ್ಲಿದ್ದಾರೆ. ಶಾಸಕ ಬಿ.ಆರ್. ಪಾಟೀಲ್ ಅವರು ಬರೆದ ಪತ್ರಕ್ಕೆ ಸಹಿ ಹಾಕಿದ್ದಲ್ಲದೆ, ಅದನ್ನು ಸಮರ್ಥನೆ ಕೂಡಾ ಮಾಡಿಕೊಂಡಿದ್ದರು.
ʻʻಬಿಜೆಪಿ ವಿರುದ್ಧ ಈ ಹಿಂದೆ ಕಾಂಗ್ರೆಸ್ 40 ಪರ್ಸೆಂಟ್ ಎಂದು ಆರೋಪಿಸಿತ್ತು.. ಇದೀಗ 15 ಪರ್ಸೆಂಟ್ ಕಮಿಷನ್ ಎಂದು ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಆರೋಪ ಮಾಡುತ್ತಿವೆ. ಒಟ್ಟಿನಲ್ಲಿ ಕರ್ನಾಟಕ ಭ್ರಷ್ಟ ರಾಜ್ಯ ಆಗುತ್ತಿದೆ, ರಾಷ್ಟ್ರ ಮಟ್ಟದಲ್ಲಿ ಕರ್ನಾಟಕದ ಮರ್ಯಾದೆ ಹಾಳಾಗುತ್ತಿದೆ. ಇದನ್ನು ತೊಲಗಿಸುವ ನಿಟ್ಟಿನಲ್ಲಿ ಸಿಎಂ ಕೆಲಸ ಮಾಡಬೇಕುʼʼ ಎಂದು ಬಸವರಾಜ ರಾಯರೆಡ್ಡಿ ಒತ್ತಾಯಿಸಿದ್ದಾರೆ.
ಕಾಂಗ್ರೆಸ್‌ನ ಪ್ರಧಾನ ಮಂತ್ರಿ ಅಭ್ಯರ್ಥಿ ಯಾರು?
ಮುಂದಿನ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರನ್ನೇ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಿದರೆ ನಷ್ಟವೇ ಹೊರತು ಲಾಭವಿಲ್ಲ ಎಂಬ ಅಭಿಪ್ರಾಯಗಳಿಗೆ ಪ್ರತಿಕ್ರಿಯಿಸಿದ ಬಸವರಾಜ ರಾಯರೆಡ್ಡಿ, ರಾಹುಲ್ ಗಾಂಧಿ ಅವರು ಪ್ರಬುದ್ಧರಾಗುತ್ತಿದ್ದಾರೆ. ಇನ್ನು ಒಬ್ಬ ಡೈನಾಮಿಕ್ ನಾಯಕ ಬೇಕು ಎಂದು ನೋಡುವುದಾದರೆ ಅದಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರೇ ಸೂಕ್ತ ಎಂದು ಅಭಿಪ್ರಾಯಪಟ್ಟರು. ಅವರಿಗೆ ಅನುಭವ ಇದೆ, ಜ್ಞಾನ ಇದೆ. ಪ್ರಧಾನಿ ಹುದ್ದೆಗೆ ಅವರು ಅರ್ಹರಾಗಿದ್ದಾರೆ ಎಂದು ರಾಯರೆಡ್ಡಿ ಹೇಳಿದರು.
ಇದನ್ನೂ ಓದಿ: Power Point with HPK : ಲೋಕಸಭೆಯಲ್ಲಿ ನನಗೆ ಫಂಡ್ ಮಾಡಿ ಗೆಲ್ಲಿಸಲು ಸಿಂಡಿಕೇಟ್ ಸಿದ್ಧವಾಗಿದೆ: ಕೃಷ್ಣ ಬೈರೇಗೌಡ
ರಾಯರೆಡ್ಡಿ ಅವರನ್ನು ಕೇಂದ್ರಕ್ಕೆ ಸಾಗಹಾಕುವ ಯತ್ನ ನಡೆಯುತ್ತಿದೆಯಾ?
ರಾಜ್ಯದ ಪ್ರಭಾವಿ ನಾಯಕರನ್ನು ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸುವ ಕಾಂಗ್ರೆಸ್ ಪ್ಲ್ಯಾನ್ ಬಗ್ಗೆ ಕೇಳಿದಾಗ, ʻʻನನ್ನನ್ನು ಕೇಂದ್ರಕ್ಕೆ ಸಾಗ ಹಾಕಲು ಜಿಲ್ಲೆಯ ನಾಯಕರು ಪ್ರಯತ್ನ ಮಾಡುತ್ತಿದ್ದಾರೆ. ನಾನು ಸ್ವಲ್ಪ ಖಡಕ್ ಆಗಿರುವುದರಿಂದ ಇಲ್ಲಿ ಬೇಡ, ಲೋಕಸಭೆಗೆ ಹೋಗಲಿ ಎಂಬ ಅಭಿಪ್ರಾಯ ಕೆಲವರಿಗೆ ಇದೆ. ಆದರೆ, ಸದ್ಯಕ್ಕೆ ನನಗೆ ಅದರಲ್ಲಿ ಆಸಕ್ತಿ ಇಲ್ಲʼʼ ಎಂದು ಸ್ಪಷ್ಟಪಡಿಸಿದರು ಬಸವರಾಜ ರಾಯರೆಡ್ಡಿ.
ಇದಿಷ್ಟೇ ಅಲ್ಲ ಇನ್ನೂ ಹಲವು ವಿಚಾರಗಳಿಗೆ ಸಂಬಂಧಿಸಿ ಬಸವರಾಜ ರಾಯರೆಡ್ಡಿ ಅವರು ತಮ್ಮ ಮುಕ್ತ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಭಾನುವಾರ (ಆಗಸ್ಟ್ 12) ಸಂಜೆ 7 ಗಂಟೆಗೆ ವಿಸ್ತಾರ ನ್ಯೂಸ್ ಚಾನೆಲ್‌ನಲ್ಲಿ ಪ್ರಸಾರವಾಗುವ ‘Powerpoint with HPK’ ಕಾರ್ಯಕ್ರಮದಲ್ಲಿ ಸಚಿವರ ಸಂಪೂರ್ಣ ಸಂದರ್ಶನ ಬಿತ್ತರವಾಗಲಿದ್ದು, ಹಲವು ಹೊಸ ಸಂಗತಿಗಳ ಅನಾವರಣವಾಗಲಿದೆ. ತಪ್ಪದೆ ವೀಕ್ಷಿಸಿ.