Site icon Vistara News

Power Point with HPK : ವಿಧಾನಸೌಧದಲ್ಲಿ ವರ್ಗಾವಣೆ ದಂಧೆ: ಬಸವರಾಜ ರಾಯರೆಡ್ಡಿ ಸ್ಫೋಟಕ ಹೇಳಿಕೆ

Basavaraj Rayareddy in Power point with HPK

ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಶಿಸ್ತು ಎಂಬುದಿಲ್ಲ. ವಿಧಾನಸೌಧವನ್ನು ನೋಡಿದರೆ ಮಾರ್ಕೆಟ್‌ ಇದ್ದ ಹಾಗೆ ಕಾಣುತ್ತದೆ. ಅಲ್ಲಿಗೆ ಅಷ್ಟು ಜನ ಯಾಕೆ ಬರುತ್ತಾರೆಂದು ಗೊತ್ತಿಲ್ಲ. ಒಳಗೆ ಹೋಗಬೇಕಾದರೆ ಎಲ್ಲವನ್ನೂ ಸರಿಸಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಯಾವುದೇ ಸರ್ಕಾರ ಇರಲಿ ಹೆಚ್ಚಾಗಿ ಅಲ್ಲಿ ವರ್ಗಾವಣೆಯ ಕೆಲಸ ನಡೆಯುತ್ತದೆ. ಒಟ್ಟಿನಲ್ಲಿ ಅಲ್ಲಿ ವರ್ಗಾವಣೆಯೇ ಒಂದು ದಂಧೆಯಾಗಿಬಿಟ್ಟಿದೆ (Transfer racket) ಎಂದು ಹಿರಿಯ ರಾಜಕಾರಣಿ, ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ (MLA Basavaraj Rayareddy) ಅವರು ಪವರ್‌ ಪಾಯಿಂಟ್‌ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಹೇಳಿದರು.

ವಿಸ್ತಾರ ನ್ಯೂಸ್‌ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ “ಪವರ್‌ ಪಾಯಿಂಟ್‌ ವಿತ್‌ ಎಚ್‌ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಶಾಸಕ ಬಸವರಾಜ ರಾಯರೆಡ್ಡಿ, ವಿಧಾನಸೌಧದಲ್ಲಿ ನಡೆಯುವ ವರ್ಗಾವಣೆ ದಂಧೆ ಹಾಗೂ ಸಚಿವರ ಕಚೇರಿಯಲ್ಲಿ (Ministers Office) ತುಂಬಿ ತುಳುಕುವ ಜನರ ಬಗ್ಗೆ ಅಸಮಾಧಾನವನ್ನು ಹೊರಹಾಕಿದರು.

ಇನ್ನು ವಿಧಾನಸೌಧದ ಕೆಲವು ಕಡೆ ನಾವು ಕಾರ್ಯಕರ್ತರು ಎಂದು ಹೇಳಿಕೊಳ್ಳುವ 50-60 ಜನರು ಒಬ್ಬ ಸಚಿವರ ಕೊಠಡಿಯಲ್ಲಿ ಕುಳಿತಿರುತ್ತಾರೆ. ಹೀಗಿದ್ದಾಗ ಸಚಿವರು ಹೇಗೆ ಕೆಲಸ ಮಾಡುತ್ತಾರೆ? ಇನ್ನು ಸಚಿವರಿಗೂ ಶಿಸ್ತು ಎಂಬುದು ಇರಬೇಕು. ಅವರ ಕೊಠಡಿಗೆ ಒಬ್ಬ ಶಾಸಕ ಬಂದರೆ, ಅವರನ್ನು ಕೂರಿಸಿಕೊಂಡು ಸಮಸ್ಯೆಗಳನ್ನು ಆಲಿಸಬೇಕು. ಅಭಿವೃದ್ಧಿಗೆ ಸಂಬಂಧಪಟ್ಟಂತೆ ಚರ್ಚೆಗೆ ಅನುವು ಮಾಡಿಕೊಡಬೇಕು ಎಂದು ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.

ಈ ಸರ್ಕಾರಕ್ಕೆ 6 ತಿಂಗಳು ಗಡುವು ಕೊಡುತ್ತೇವೆ

ಸಿಎಂ ಸಿದ್ದರಾಮಯ್ಯ ಅವರು ಬದ್ಧತೆ ಇರುವ ವ್ಯಕ್ತಿ. ಅಲ್ಲದೆ, ಸರ್ಕಾರ ಬಂದು ಮೂರು ತಿಂಗಳಾಗುತ್ತಾ ಬಂದಿದೆ. ಇನ್ನೂ ಒಂದು ಆರು ತಿಂಗಳು ಕಾಯೋಣ. ಖಂಡಿತವಾಗಿಯೂ ಈ ಸರ್ಕಾರ ಅಭಿವೃದ್ಧಿಯನ್ನು ಮಾಡುತ್ತದೆ. ನಾವು ಸಹ ಅವಕಾಶವನ್ನು ಕೊಡಬೇಕು. ಇನ್ನು ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ಸಹ ಅಭಿವೃದ್ಧಿ ಪರವಾಗಿ ಇರುವ, ಬದ್ಧತೆಯುಳ್ಳ ರಾಜಕಾರಣಿಯಾಗಿದ್ದಾರೆ. ಅವರು ಸ್ವಲ್ಪ ಹಾವಭಾವ ಬದಲಾಯಿಸಿಕೊಂಡು ಪ್ರೀತಿಯಿಂದ ಎಲ್ಲರನ್ನೂ ಕಂಡರೆ ಅವರು ಒಬ್ಬ ಒಳ್ಳೆಯ ಸಚಿವರು ಎಂದು ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.

ನಾನು ‌ರಾಜ್ಯ ಸರ್ಕಾರದ ವಿರುದ್ಧ ಪತ್ರ ಬರೆಯುವ ಆಲೋಚನೆಯಲ್ಲಿ ಇರಲಿಲ್ಲ. ಆಗ ನಮ್ಮ ಹಿರಿಯ ಶಾಸಕರಾದ ಬಿ.ಆರ್.‌ ಪಾಟೀಲ್‌ ಅವರು ಬಂದು, “ನಮ್ಮ ಅವಮಾನ ಆಗುತ್ತಿದ್ದು, ಯಾರೂ ಬೆಲೆ ಕೊಡುತ್ತಿಲ್ಲ, ಮುಜುಗರ ಆಗುತ್ತಿದೆ” ಎಂದು ಹೇಳಿಕೊಂಡರು. ಆಗ ನಾನು, “ಹೇಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ಸಭೆ ಕರೆಯುವುದಾಗಿ ಹೇಳಿದ್ದಾರೆ. ಹಾಗಾಗಿ ಈ ಸಂಬಂಧ ನೀವೊಂದು ಪತ್ರ ಬರೆಯಿರಿ ಎಂದು ಹೇಳಿದೆ. ಆದರೆ, ಇದನ್ನು ಪತ್ರಿಕೆಗಳಿಗೆ, ಮಾಧ್ಯಮಗಳಿಗೆ ಕೊಡಬೇಕು ಎಂದು ಬೈಲಾದಲ್ಲಿ ಇಲ್ಲ. ಹೇಗೋ ಇವು ಮಾಧ್ಯಮದವರಿಗೆ ತಲುಪಿದೆ. ಕಾರಣ ಮೂಲ ಪತ್ರ ನಮ್ಮ ಬಳಿಯೇ ಇತ್ತು. ಅಲ್ಲಿ ಬಂದಿರುವುದು ನೂರಕ್ಕೆ ನೂರವೊಂದರಷ್ಟು ನಕಲಿ ಪತ್ರವಾಗಿದೆ ಎಂದು ಸ್ಪಷ್ಟಪಡಿಸಿದರು.

ಶಾಸಕರಿಗೆ ಬಹಳಷ್ಟು ಅವಮಾನ ಆಗುತ್ತಿದೆ. ಸಚಿವರು ನಮಗೆ ಸ್ಪಂದಿಸುತ್ತಿಲ್ಲ. ಕೊಟ್ಟಂತಹ ಬೇಡಿಕೆ ಈಡೇರುತ್ತಿಲ್ಲ. ಇದರಿಂದ ನಮಗೆ ಮಾನಸಿಕ ಆಘಾತವಾಗುತ್ತಿದೆ. ಹೀಗಾಗಿ ಈ ಎಲ್ಲ ಅಂಶಗಳನ್ನು ಚರ್ಚೆ ಮಾಡಲು ಶಾಸಕಾಂಗ ಪಕ್ಷದ ಸಭೆ ಕರೆಯಿರಿ ಎಂಬ ಮೂರೇ ಸಾಲನ್ನು ಮನವಿ ಪತ್ರದಲ್ಲಿ ಬರೆಯಲಾಗಿತ್ತು. ಅದಕ್ಕೆ ನಾವೆಲ್ಲರೂ ಸಹಿ ಹಾಕಿದ್ದೇವೆ ಎಂದು ಶಾಸಕ ಬಸವರಾಜ ರಾಯರೆಡ್ಡಿ ಅವರು ಪತ್ರದ ಹಿಂದಿನ ಸತ್ಯವನ್ನು ಬಿಚ್ಚಿಟ್ಟರು.

ಆದರೆ, ಈ ವಿಷಯ ಮಾಧ್ಯಮಗಳಿಗೆ ಹೋಗಿ ಬಹಳ ದೊಡ್ಡ ಮಟ್ಟದಲ್ಲಿ ಚರ್ಚೆಯಾಯಿತು. ಪಕ್ಷಕ್ಕೂ ಇದರಿಂದ ಮುಜುಗರ ಆಯಿತು. ಸಿಎಂ ಸಿದ್ದರಾಮಯ್ಯ ಅವರು ಸಹ ಈ ಬಗ್ಗೆ ಪ್ರಶ್ನೆ ಮಾಡಿದರು. ಆದರೆ, ನಾವು ಪತ್ರ ಬರೆದಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದು ನಾನು ವಾದಿಸಿದ್ದೇನೆ. ಈ ನಡುವೆ ಶಾಸಕಾಂಗ ಪಕ್ಷದ ಸಭೆ ಚೆನ್ನಾಗಿಯೇ ನಡೆಯಿತು. ಕೊನೆಗೆ ಜಿಲ್ಲಾವಾರು ಶಾಸಕರು, ಉಸ್ತುವಾರಿ ಸಚಿವರ ಸಭೆ ಕರೆದು ಚರ್ಚೆ ನಡೆಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು ಎಂದು ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.

ಈ ಪತ್ರದ ಹಿಂದಿನ ಮಾಸ್ಟರ್‌ ಮೈಂಡ್‌ ನಾನಲ್ಲ. ಆದರೆ, ಸಭೆ ಕರೆದಿದ್ದರಿಂದ ಎಲ್ಲರಿಗೂ ಒಳ್ಳೆಯದೇ ಆಗಿದೆ. ಬಹಳಷ್ಟು ಶಾಸಕರು ಇದರಿಂದ ಖುಷಿಯಾಗಿದ್ದಾರೆ. ನೀವು ಮಾಡಿದ್ದರಿಂದ ಒಳ್ಳೆಯದಾಯಿತು. ಈಗ ಎಲ್ಲರೂ ನಮ್ಮೊಂದಿಗೆ ಚೆನ್ನಾಗಿ ಮಾತನಾಡುತ್ತಿದ್ದಾರೆ ಎಂದು ಶಾಸಕರು ನನಗೆ ಹೇಳಿದ್ದಾರೆ ಎಂದು ಶಾಸಕ ಬಸವರಾಜ ರಾಯರೆಡ್ಡಿ ತಿಳಿಸಿದರು.

ಇದನ್ನೂ ಓದಿ: Commission Politics : ಕಮಿಷನ್‌ ಕೇಳಿಲ್ಲವಾದರೆ ಡಿಕೆಶಿ ಅಜ್ಜಯ್ಯನ ಮೇಲೆ ಪ್ರಮಾಣ ಮಾಡಲಿ: ಸಿ.ಟಿ. ರವಿ ಸವಾಲು

ನೋ ನಾನು ಕ್ಷಮೆ ಕೇಳಿಯೇ ಇಲ್ಲ

ನೋ ನೋ.. ಪತ್ರ ಬರೆದಿರುವ ಸಂಬಂಧ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾನು ಸಹಿತ ಯಾರೂ ಸಹ ಕ್ಷಮೆ ಕೇಳಿಲ್ಲ. ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ಪತ್ರಿಕೆಯಲ್ಲಿ ಅವರ ಹೇಳಿಕೆ ನೋಡುತ್ತಿದ್ದಂತೆ ನಾನು ಅವರಿಗೆ ಮೆಸೇಜ್‌ ಮಾಡಿದೆ. ಅದಕ್ಕೆ ಅವರೂ ಸಹ “ಐ ಆಮ್‌ ಸಾರಿ ಬ್ರದರ್‌, ಐ ನಾಟ್‌ ಮೀನ್‌ ಇಟ್”‌ ಎಂದು ಪ್ರತಿಕ್ರಿಯೆ ನೀಡಿದ್ದಾರೆ ಎಂದು ಶಾಸಕ ಬಸವರಾಜ ರಾಯರೆಡ್ಡಿ ತಿಳಿಸಿದರು.

Exit mobile version