ಬೆಂಗಳೂರು: ಸನಾತನ ಧರ್ಮ (Sanatan Dharma) ಕೊರೊನಾ, ಡೆಂಗ್ಯೂ ಇದ್ದ ಹಾಗೆ ಎಂದು ಹೇಳಿಕೆ ನೀಡಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ (Tamil Nadu Minister Udhayanidhi Stalin) ವಿರುದ್ಧ ಮಾಜಿ ಡಿಸಿಎಂ, ಬಿಜೆಪಿ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ (Former Deputy CM and senior BJP leader KS Eshwarappa) ಗುಡುಗಿದ್ದಾರೆ. ಪವರ್ ಪಾಯಿಂಟ್ ವಿತ್ ಎಚ್ಪಿಕೆ (Power Point with HPK) ಸಂದರ್ಶನದಲ್ಲಿ ಮಾತನಾಡಿದ ಅವರು, ಉದಯನಿಧಿಯನ್ನು ಹುಚ್ಚ, ಅಯೋಗ್ಯ ಎಂದಿದ್ದಾರೆ. ಸನಾತನ ಧರ್ಮದ ಬಗ್ಗೆ ಮಾತನಾಡಲು ಅವನು ಯಾವನು ಎಂದು ಏಕವಚನದಲ್ಲಿಯೇ ಪ್ರಶ್ನೆ ಮಾಡಿದ್ದಾರೆ.
ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ “ಪವರ್ ಪಾಯಿಂಟ್ ವಿತ್ ಎಚ್ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಕೆ.ಎಸ್. ಈಶ್ವರಪ್ಪ, ಏಡ್ಸ್, ಡೆಂಘೀಯಂತಹ ಹೇಳಿಕೆ ನೀಡಿದವರಿಗೆ ಜನರೇ ಚಿಕಿತ್ಸೆ ಕೊಡುತ್ತಾರೆ. ಈ ಹೇಳಿಕೆ ಕೊಟ್ಟವನ ಹೆಸರನ್ನೇ ನಾನು ಇದುವರೆಗೆ ಕೇಳಿರಲಿಲ್ಲ. ಉದಯನಿಧಿ ಸ್ಟಾಲಿನ್ಗೆ ಯಾವ ಪದದಲ್ಲಿ ಬೈಯಬೇಕು ಎಂಬುದೇ ನನಗೆ ಗೊತ್ತಾಗಲಿಲ್ಲ. ಅವನನ್ನು ಹುಚ್ಚ ಎನ್ನಬೇಕೋ? ಅಯೋಗ್ಯ ಎನ್ನಬೇಕೋ? ಎಂಬುದೇ ನನಗೆ ಗೊತ್ತಾಗಲಿಲ್ಲ. ಸನಾತನ ಧರ್ಮದ ಬಗ್ಗೆ ಮಾತನಾಡಲು ಇವನು ಯಾವನು? ಇವನಿಗೆ ಅಧಿಕಾರವೇ ಇಲ್ಲ. ಇವನು ಕ್ರಿಶ್ಚಿಯನ್ ಆಗಿದ್ದಾನೆ. ಹಾಗಾಗಿ ಕ್ರಿಶ್ಚಿಯನ್ ಧರ್ಮದಲ್ಲಿ ಏನು ರಿಪೇರಿ ಮಾಡಲು ಕೆಲಸ ಇದೆಯೋ ಅದನ್ನು ಮಾಡಲಿ ಎಂದು ಸವಾಲು ಹಾಕಿದರು.
ಮುಸ್ಲಿಮರಲ್ಲೂ ನೂರು ಸಮಸ್ಯೆ ಇದೆ. ಅವರ ಸಮುದಾಯದ ಬಗ್ಗೆ ಮಾತನಾಡಲಿ ನೋಡೋಣ. ಏಕೆ ಮಾತನಾಡುವುದಿಲ್ಲ? ಹಿಂದು ಸಮಾಜಕ್ಕೆ, ಸನಾತನ ಧರ್ಮಕ್ಕೆ ಬೈದರೆ ಮುಸ್ಲಿಮರ ಮತ ಸಿಗುತ್ತದೆ ಎಂಬ ಕಾರಣಕ್ಕೆ ಹೀಗೆ ಮಾಡುತ್ತಿದ್ದಾರೆ. ಹಿಂದು ಸಮಾಜದ ವಿರುದ್ಧ ಹೋದರೆ ಕಾಂಗ್ರೆಸ್ ನಿರ್ನಾಮ ಆಗುತ್ತದೆ ಎಂಬ ಕಾರಣಕ್ಕಾಗಿಯೇ ಕಾಂಗ್ರೆಸ್ ಇದರ ಬಗ್ಗೆ ಮಾತನಾಡದಿರುವ ನಿರ್ಣಯ ಕೈಗೊಂಡಿತು. ಉದಯನಿಧಿ ಸ್ಟಾಲಿನ್ ಹೇಳಿಕೆ ನೀಡಿದ ಎರಡು ದಿನ ಇವರು ಬಾಯಿಗೆ ಬಂದಂತೆ ಮಾತನಾಡಿದರು. ಕೊನೆಗೆ ಇವರಿಗೆ ಅರಿವಾಯಿತು ಎಂದು ಕೆ.ಎಸ್. ಈಶ್ವರಪ್ಪ ಕಿಡಿಕಾರಿದರು.
ಕಾಂಗ್ರೆಸ್ನವರಿಗೆ ಮುಸ್ಲಿಮರ ಮತ ಬೇಕು. ಹೀಗಾಗಿ ಅವರು ಸಹ ಇಂಥ ಹೇಳಿಕೆಯನ್ನು ಬೆಂಬಲಿಸುತ್ತಾ ರಾಜಕಾರಣ ಮಾಡುತ್ತಾ ಬಂದಿದ್ದಾರೆ. ಇದು ಎಷ್ಟು ದಿನ ನಡೆಯುತ್ತದೆ? ಜನರು ಸಹ ಹಿಂದುತ್ವವನ್ನು ಬೆಂಬಲಿಸುತ್ತಿದ್ದಾರೆ ಎಂದು ಕೆ.ಎಸ್. ಈಶ್ವರಪ್ಪ ಹೇಳಿದರು.
ಇದನ್ನೂ ಓದಿ: Power Point with HPK : ಜಾತಿ ಹೆಸರಿಲ್ಲದೆ ಸಿದ್ದರಾಮಯ್ಯ, ಡಿಕೆಶಿ ರಾಜಕೀಯ ಮಾಡಲ್ಲವೆಂದ ಈಶ್ವರಪ್ಪ
ಹಿಂದು ಸಮಾಜವನ್ನು ನಿರ್ನಾಮ ಮಾಡುತ್ತೇವೆ ಎಂದು ಹೋದ ರಾಕ್ಷಸರು ನಾಶವಾಗಿ ಹೋದರು. ಸರ್ವೇ ಜನಃ ಸುಖಿನೋ ಭವಂತು ಎಂಬ ಸಮಾಜ ನಮ್ಮದು. ಹಿಂದು ಧರ್ಮವನ್ನು ಟೀಕೆ ಮಾಡುತ್ತಾ ಬಂದಿರುವ ಕಾಂಗ್ರೆಸ್ ಸ್ಥಿತಿ ಇಂದು ಏನಾಗಿದೆ? ಕೇಂದ್ರದಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನ ಸಿಗದಷ್ಟು ಮಟ್ಟಿಗೆ ಬಂದು ತಲುಪಿದೆ ಎಂದು ಕೆ.ಎಸ್. ಈಶ್ವರಪ್ಪ ಹೇಳಿದರು.