ಬೆಂಗಳೂರು: ರಾಜ್ಯ ರಾಜಕೀಯದಲ್ಲಿ (Karnataka Politics) ಅನೇಕ ಚಟುವಟಿಕೆ ನಡೆಯುತ್ತಿದೆ. ಸರ್ಕಾರ ಹಾಗೂ ವಿರೋಧ ಪಕ್ಷಗಳ ನಡುವೆ ಸಾಕಷ್ಟು ತಿಕ್ಕಾಟಗಳು ನಡೆಯುತ್ತಿವೆ. ಈ ಮಧ್ಯೆ ಸರ್ಕಾರದ ಒಳಗೂ ಕೆಲವು ಆಂತರಿಕ ಸಂಘರ್ಷಗಳು ನಡೆಯುತ್ತಿವೆ. ವಿಧಾನ ಪರಿಷತ್ ನಾಮ ನಿರ್ದೇಶನ (Nominated to Legislative Council) ವಿಚಾರಕ್ಕೆ ಸಂಬಂಧಿಸಿ ಕೊನೆಗೂ ಮೂರು ಹೆಸರನ್ನು ಸಿಎಂ ಸಿದ್ದರಾಮಯ್ಯ (CM Siddaramaiah) ಅಂತಿಮಗೊಳಿಸಿದ್ದರು ಎಂದು ಹೇಳಲಾಗಿತ್ತು. ಆದರೆ, ಇದು ಮತ್ತಷ್ಟು ಬಿಡಿಸಲಾಗದ ಕಗ್ಗಂಟಾಗಿ ರೂಪುಗೊಳ್ಳುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ. ಮಾಜಿ ಸಚಿವೆ ಉಮಾಶ್ರೀ (Former Minister Umashree), ಮಾಜಿ ಸಚಿವ ಎಂ.ಆರ್. ಸೀತಾರಾಂ (Former minister MR Sitaram) ಹಾಗೂ ಮಾಜಿ ಇಡಿ ಅಧಿಕಾರಿ ಸುಧಾಮ್ ದಾಸ್ (Sudam Das) ಹೆಸರು ಬಹುತೇಕ ಫೈನಲ್ ಆಗಿತ್ತು. ಆದರೆ, ಈಗ ಉಮಾಶ್ರೀ ಹೆಸರಿಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಸ್ವತಃ ಡಿಸಿಎಂ ಡಿ.ಕೆ. ಶಿವಕುಮಾರ್ ಅಡ್ಡ ನಿಂತಿದ್ದಾರೆ ಎಂದು ತಿಳಿದುಬಂದಿದೆ.
ಹೀಗಾಗಿ ಎರಡನೇ ಬಾರಿಯೂ ವಿಧಾನ ಪರಿಷತ್ ನಾಮ ನಿರ್ದೇಶನವು ಕಗ್ಗಂಟಾಗಿಯೇ ಉಳಿದಿದೆ. ಇಲ್ಲಿ ಸಿಎಂ ಸಿದ್ದರಾಮಯ್ಯ ಅವರು ಒಲವು ತೋರಿದ್ದರೂ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ ತೀವ್ರ ವಿರೋಧ ಒಡ್ಡಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಸರು ಶಿಫಾರಸು ಮಾಡುವ ವಿಚಾರವು ಸಿಎಂ ಸಿದ್ದರಾಮಯ್ಯಗೆ ತಲೆನೋವಾಗಿ ಪರಿಣಮಿಸಿದೆ.
ಇದನ್ನೂ ಓದಿ: High court : 6 ವರ್ಷ ಲೈಂಗಿಕ ಸಂಬಂಧ ಹೊಂದಿ ಬಳಿಕ ಅತ್ಯಾಚಾರ ಎಂದರೆ ನಂಬಬೇಕಾ?; ಹೈಕೋರ್ಟ್ ಗರಂ!
ಆರಂಭದಲ್ಲೇ ಎದುರಾಗಿದ್ದ ವಿಘ್ನ
ಈ ಮೊದಲು ಕೇಂದ್ರ ಮಾಜಿ ಸಚಿವ ಕೆ. ರೆಹಮಾನ್ ಖಾನ್ ಪುತ್ರ ಮನ್ಸೂರ್ ಅಲಿಖಾನ್ ಹೆಸರನ್ನು ಸಹ ವಿಧಾನ ಪರಿಷತ್ ನಾಮನಿರ್ದೇಶನ ಸ್ಥಾನಕ್ಕೆ ಸೂಚಿಸಲಾಗಿತ್ತು. ಇವರ ಜತೆಗೆ ಎಂ.ಆರ್. ಸೀತಾರಾಮ್, ಸುಧಾಮ್ ದಾಸ್ ಹೆಸರುಗಳನ್ನು ಸಿಎಂ ಸಿದ್ದರಾಮಯ್ಯ. ಶಿಫಾರಸು ಮಾಡಿದ್ದರು. ಸಿಎಂ ಶಿಫಾರಸು ಮಾಡಿದ್ದ ಪಟ್ಟಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆಕ್ಷೇಪ ವ್ಯಕ್ತಪಡಿಸಿ ವಿವರಣೆ ಕೇಳಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ತನ್ನ ನಿಲುವನ್ನು ಬದಲಾಯಿಸಿ, ಕೊನೇ ಹಂತದಲ್ಲಿ ಮಾಜಿ ಸಚಿವೆ ಉಮಾಶ್ರೀ ಹೆಸರನ್ನು ಸೂಚಿಸಿತ್ತು. ಆದರೆ, ಈಗ ಈ ಹೆಸರಿಗೂ ವಿರೋಧ ವ್ಯಕ್ತವಾಗಿದೆ.
ಉಮಾಶ್ರೀ ಪರ ಇರುವ ಸಿದ್ದರಾಮಯ್ಯ
ಇಲ್ಲಿ ಉಮಾಶ್ರೀ ಪರವಾಗಿ ಸಿಎಂ ಸಿದ್ದರಾಮಯ್ಯ ನಿಂತಿದ್ದಾರೆ. ಅಲ್ಲದೆ, ಮಹಿಳಾ ಕೋಟಾದಡಿ ಯಾರಿಗೂ ಸ್ಥಾನ ನೀಡಿಲ್ಲ. ನೇಕಾರರ ಸಮುದಾಯಕ್ಕೆ ಆದ್ಯತೆ ನೀಡಬೇಕು. ಹೀಗಾಗಿ ಉಮಾಶ್ರೀ ಅವರನ್ನು ನಾಮನಿರ್ದೇಶನ ಮಾಡಬೇಕು. ಅವರಿಗೆ ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಹ ನೀಡಿಲ್ಲ. ಟಿಕೆಟ್ ಕೇಳಿದ ಸಂದರ್ಭದಲ್ಲಿ ಎಂಎಲ್‌ಸಿ ಮಾಡುವುದಾಗಿ ಭರವಸೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಟಿಕೆಟ್ ಕೊಡಬೇಕು ಎಂಬುದು ಒಂದು ವಾದವಾಗಿದೆ.
ಇದನ್ನೂ ಓದಿ: HD Kumaraswamy : ಕಾಂಗ್ರೆಸ್ ಸಚಿವರ ಪಾಪದ ದುಡ್ಡಲ್ಲಿ ವಿದೇಶಕ್ಕೆ ಹೋಗಲಾ? ಎಚ್‌ಡಿಕೆ ಗರಂ
ಹೈಕಮಾಂಡ್‌ಗೆ ದೂರು ನೀಡಿದ ಡಿಕೆಶಿ
ಯಾವುದೇ ಕಾರಣಕ್ಕೂ ಉಮಾಶ್ರೀ ಅವರನ್ನು ವಿಧಾನ ಪರಿಷತ್‌ಗೆ ನಾಮ ನಿರ್ದೇಶನ ಮಾಡಕೂಡದು ಎಂದು ಪಟ್ಟು ಹಿಡಿದು ಕುಳಿತಿರುವ ಡಿ.ಕೆ. ಶಿವಕುಮಾರ್, ಈ ಸಂಬಂಧ ಹೈಕಮಾಂಡ್ ಗಮನಕ್ಕೂ ತಂದಿದ್ದಾರೆ. ಹೀಗಾಗಿ ಸಚಿವ ಸಂಪುಟ ರಚನೆಗಿಂತಲೂ ಪರಿಷತ್ ನಾಮನಿರ್ದೇಶನ ವಿಚಾರವು ಕಗ್ಗಂಟಾಗಿ ಪರಿಣಮಿಸಿದೆ.