Site icon Vistara News

Opposition Leader : ವಿಪಕ್ಷ ನಾಯಕನ ಆಯ್ಕೆ ಮುನ್ನವೇ ಅಸಮಾಧಾನ; ಯತ್ನಾಳ್, ಜಾರಕಿಹೊಳಿ ವಾಕೌಟ್‌!

Basanagouda Patil Yatnal and Ramesh Jarkiholi

ಬೆಂಗಳೂರು: ಬಿಜೆಪಿಯಲ್ಲಿ ಎಲ್ಲವೂ ಸರಿ ಹೋಗುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ (BJP state president) ಹುದ್ದೆಗೆ ಬಿ.ವೈ. ವಿಜಯೇಂದ್ರ ಅವರನ್ನು ಆಯ್ಕೆ ಮಾಡಲಾಗಿದೆ. ಈಗ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಬೇಕು ಎಂಬ ನಿಟ್ಟಿನಲ್ಲಿ ಶುಕ್ರವಾರ (ನ. 17) ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ (BJP legislature party meeting) ನಿಗದಿಯಾಗಿತ್ತು. ಆದರೆ, ವಿಪಕ್ಷ ನಾಯಕನ (Opposition Leader) ಆಯ್ಕೆಗೆ ಮುನ್ನವೇ ಅಸಮಾಧಾನ ಸ್ಫೋಟಗೊಂಡಿದೆ. ಸಭೆಗೂ ಮುನ್ನವೇ ಅಸಮಾಧಾನವನ್ನು ಹೊರಗೆ ಹಾಕಿ ಮಾಜಿ ಸಚಿವ, ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal) ಹೊರನಡೆದಿದ್ದಾರೆ. ಇವರಿಗೆ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ (Ramesh Jarkiholi) ಸಾಥ್‌ ನೀಡಿದ್ದಾರೆ.

ಶಾಸಕಾಂಗ ಪಕ್ಷದ ಸಭೆಯನ್ನು ಸಂಜೆ 6 ಗಂಟೆಗೆ ಆಯೋಜನೆ ಮಾಡಲಾಗಿತ್ತು. ಬಿಜೆಪಿಯ ಹಿರಿಯ ನಾಯಕರು ಸೇರಿದಂತೆ ಒಬ್ಬೊಬ್ಬರೇ ನಾಯಕರು ಆಗಮಿಸುತ್ತಿದ್ದರು. ಈ ಸಭೆಗೆ ಸುಮಾರು ಮುಕ್ಕಾಲು ಗಂಟೆ ಮುಂಚೆಯೇ ಆಗಮಿಸಿದ್ದ ಬಸನಗೌಡ ಪಾಟೀಲ್‌ ಯತ್ನಾಳ್‌, ಯಾವುದೋ ವಿಚಾರಕ್ಕೆ ಮುನಿಸಿಕೊಂಡು ಹೊರ ನಡೆದಿದ್ದಾರೆ.

ಹೋಟೆಲ್‌ನಿಂದ ಹೊರಗೆ ಬಂದು ಕಾರು ಹತ್ತಿದ ಅವರನ್ನು ಮಾಧ್ಯಮದವರು ಪ್ರಶ್ನೆ ಮಾಡಿದಾಗ, “ಏನೂ ಅಸಮಾಧಾನ ಇಲ್ಲ. ನಾನು ಟೀ ಕುಡಿಯಲು ಹೊರಗೆ ಹೋಗುತ್ತಿದ್ದೇನೆ” ಎಂದಷ್ಟೇ ಹೇಳಿ ಅಲ್ಲಿಂದ ನಿರ್ಗಮಿಸಿದರು. ಹೀಗಾಗಿ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಸಭೆಯನ್ನು ಬಹಿಷ್ಕರಿಸಿ ಹೊರಟರು.

ಉತ್ತರ ಕರ್ನಾಟಕ ಪ್ರಾಶಸ್ತ್ಯ ಕೊಡಲಿಲ್ಲವೆಂದು ಅಸಮಾಧಾನ?

ಇಲ್ಲಿಯವರೆಗೆ ಪ್ರಮುಖ ಸ್ಥಾನವನ್ನು ದಕ್ಷಿಣ ಕರ್ನಾಟಕ ಭಾಗದವರೇ ಪಡೆಯುತ್ತಿದ್ದಾರೆ. ಬಿಜೆಪಿ ಬೆಳವಣಿಗೆಗೆ ಉತ್ತರ ಕರ್ನಾಟಕದವರ ಕೊಡುಗೆಯೂ ಸಾಕಷ್ಟು ಇದೆ. ಹೀಗಾಗಿ ಈ ಭಾಗದವರಿಗೆ ಪ್ರತಿಪಕ್ಷ ನಾಯಕ ಸ್ಥಾನವನ್ನು ಕೊಡಬೇಕು ಎಂಬುದು ಬಸನಗೌಡ ಪಾಟೀಲ್‌ ಯತ್ನಾಳ್‌ ವಾದವಾಗಿತ್ತು.

ಕೇಂದ್ರದಿಂದ ಬಿಜೆಪಿ ವೀಕ್ಷಕರಾಗಿ ಆಗಮಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಹಾಗೂ ದುಷ್ಯಂತ್ ಕುಮಾರ್ ಗೌತಮ್ (Dushyant Kumar Gautam) ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ದ ಬಸನಗೌಡ ಪಾಟೀಲ್‌ ಯತ್ನಾಳ್‌, ಪ್ರತಿಪಕ್ಷದ ನಾಯಕ ಸ್ಥಾನವನ್ನು ಉತ್ತರ ಕರ್ನಾಟಕದವರಿಗೆ ಕೊಡಬೇಕು. ಉತ್ತರ ಕರ್ನಾಟಕಕ್ಕೆ ಆದ್ಯತೆ ಕೊಡಬೇಕು ಎಂದು ಆಗ್ರಹಿಸಿದ್ದರು.

ಉತ್ತರ ಕರ್ನಾಟಕದ ಜನರು ಊಟ ಹಾಕಿದ್ದಾರೆ. ಈ ಸ್ಥಾನವನ್ನು ಉ.ಕ. ಮಂದಿಗೆ ಕೊಡದೇ ಹೋದರೆ ಜನರೇ ತೀರ್ಮಾನ ಮಾಡುತ್ತಾರೆ. ನನಗೆ ಯಾರ ಭಯ ಇಲ್ಲ. ಉತ್ತರ ಕರ್ನಾಟಕ, ಹಿಂದುತ್ವದ ಹಿನ್ನೆಲೆಯಲ್ಲಿ ನಾನು ಕೇಳುತ್ತೇನೆ. ಶಾಸಕಾಂಗ ಸಭೆಯಲ್ಲಿ ಇದನ್ನು ಪ್ರಶ್ನೆ ಮಾಡುತ್ತೇನೆ. ಪಂಚಮಸಾಲಿಗಳಿಗೆ ಯಾವಾಗಲೂ ಅನ್ಯಾಯ ಮಾಡಿದ್ದಾರೆ. ಬಸವರಾಜ ಬೊಮ್ಮಾಯಿ ಬಂದಾಗಿನಿಂದ ಅನ್ಯಾಯ ಆಗಿದೆ. ದಲಿತರಿಗೆ, ಒಕ್ಕಲಿಗರಿಗೆ, ಎಸ್‌ಟಿಗೆ ಮೀಸಲಾತಿ ಕೊಟ್ಟಿರುವ ನಮ್ಮಿಂದ ಪಂಚಮಸಾಲಿಗೆ ಅನ್ಯಾಯ ಆಗಿದೆ. ಈ ಬಗ್ಗೆ ಬೊಮ್ಮಾಯಿ ಜತೆ ಮಾತನಾಡಿದ್ದೇನೆ‌. ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ಕೊಡಬೇಕು ಅಂತ ಮಾತನಾಡಿದ್ದೇವೆ. ಈ ವಿಚಾರದಲ್ಲಿ ನಾವೆಲ್ಲ ಒಂದು ಎಂದು ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿಕೆ ನೀಡಿದ್ದರು.

ಈಗ ವಿಪಕ್ಷ ನಾಯಕನ ಸ್ಥಾನವನ್ನು ಪುನಃ ದಕ್ಷಿಣ ಕರ್ನಾಟಕ ಭಾಗದವರಿಗೆ ನೀಡಲಾಗುತ್ತಿದೆ ಎಂಬ ಸುಳಿವು ಸಿಕ್ಕು ಅವರು ಹೊರನಡೆದಿದ್ದಾರೆಯೇ ಎಂಬ ಚರ್ಚೆಗಳು ಸಹ ನಡೆದಿದೆ.

ಇದನ್ನೂ ಓದಿ: Education News : ಪ್ರಾಥಮಿಕ ಶಾಲಾ ಶಿಕ್ಷಕರ ಕೊರತೆ ನಿವಾರಣೆಗೆ ಕ್ರಮ; ನೂತನ ಶಿಕ್ಷಕರ ನಿಯೋಜನೆ

ಬಿಜೆಪಿ ಶಾಸಕಾಂಗ ಸಭೆಯಲ್ಲಿ ಭಾಗವಹಿಸಿದವರ ಪಟ್ಟಿ

ವೀಕ್ಷಕರಾಗಿ ನಿರ್ಮಲಾ ಸೀತಾರಾಮನ್, ದುಷ್ಯಂತ್ ಕುಮಾರ್ ಗೌತಮ್ ಭಾಗಿಯಾಗಿದ್ದರೆ, ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಡಿಸಿಎಂ ಆರ್.‌ ಅಶೋಕ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.

Exit mobile version