ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ (Parliament Elections 2024) ತುಮಕೂರು ಕ್ಷೇತ್ರದಿಂದ (Tumkur Constituency) ಸ್ಪರ್ಧೆ ಮಾಡಬೇಕು ಎಂದು ಭಾರಿ ಪ್ರಯತ್ನದಲ್ಲಿರುವ ಮಾಜಿ ಸಚಿವ ವಿ ಸೋಮಣ್ಣ (V Somanna) ಅವರಿಗೆ ಬಿಜೆಪಿ ಹೈಕಮಾಂಡ್ (BJP High Command) ಟಿಕೆಟ್ ಕೊಡುವುದು ಬಹುತೇಕ ಖಚಿತ ಎಂಬ ಮಾತು ಕೇಳಿಬರುತ್ತಿದೆ. ತುಮಕೂರಿನ ಹಾಲಿ ಸಂಸದ ಜಿ.ಎಸ್. ಬಸವರಾಜು (MP GS Basavaraju) ಅವರು ಸ್ವಯಂ ನಿವೃತ್ತಿ ಪಡೆದಿರುವುದರಿಂದ ಈ ಕ್ಷೇತ್ರದ ಮೇಲೆ ವಿ.ಸೋಮಣ್ಣ, ಮಾಜಿ ಸಚಿವ ಮಾಧು ಸ್ವಾಮಿ ಸೇರಿದಂತೆ ಕೆಲವರು ಕಣ್ಣಿಟ್ಟಿದ್ದಾರೆ. ವಿ. ಸೋಮಣ್ಣ ಅವರು ಬಿಜೆಪಿ ಟಿಕೆಟ್‌ಗೆ ಮಾತ್ರವಲ್ಲ, ಬಿಜೆಪಿ ಟಿಕೆಟ್ ಕೊಡದಿದ್ದರೆ ಕಾಂಗ್ರೆಸ್‌ಗೆ ಜಿಗಿಯುವ ಬಗ್ಗೆಯೂ ಯೋಚಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈ ನಡುವೆ ವಿ. ಸೋಮಣ್ಣ ಅವರ ಸ್ಪರ್ಧೆಗೆ ಹೈಕಮಾಂಡ್ ಅದರಲ್ಲೂ ಮುಖ್ಯವಾಗಿ ಬಿಜೆಪಿಯ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ (BS Yediyurappa) ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ.
ವಿ ಸೋಮಣ್ಣ ಅವರಿಗೆ ಟಿಕೆಟ್ ನೀಡುವ ಕುರಿತು ಮಾಜಿ ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಬಿ.ವೈ ವಿಜಯೇಂದ್ರ ಅವರಿಂದ ಹೈಕಮಾಂಡ್ ಅಭಿಪ್ರಾಯ ಕೇಳಿತ್ತು. ಸೋಮಣ್ಣಗೆ ಟಿಕೆಟ್ ಕೊಡುವ ಬಗ್ಗೆ ತಮ್ಮ ಅಭ್ಯಂತರ ಇಲ್ಲ ಎಂದು ಇಬ್ಬರೂ ನಾಯಕರು ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಹೈಕಮಾಂಡ್ ಸ್ಪರ್ಧೆಗೆ ಸಿದ್ಧರಾಗುವಂತೆ ವಿ. ಸೋಮಣ್ಣ ಅವರಿಗೆ ಪರೋಕ್ಷ ಸುಳಿವು ನೀಡಿದೆ.
ವಿ. ಸೋಮಣ್ಣ ಅವರು ಈ ಹಿಂದೆ ಗೋವಿಂದ ರಾಜ ನಗರ ಕ್ಷೇತ್ರದ ಶಾಸಕರಾಗಿದ್ದರು. ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ ಅವರ ಸೂಚನೆ ಮೇರೆಗೆ ಅವರು ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿನ ವರುಣಾ ಮತ್ತು ಚಾಮರಾಜ ನಗರ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು. ತನ್ನನ್ನು ಅತಂತ್ರಗೊಳಿಸಿದ ವಿಚಾರದಲ್ಲಿ ಅವರು ಸಿಟ್ಟಾಗಿದ್ದು, ಬಿಜೆಪಿ ಬಿಡುವ ಬಗ್ಗೆಯೇ ಮಾತನಾಡಿದ್ದರು. ಬಳಿಕ ಹೈಕಮಾಂಡ್ ಅವರನ್ನು ಸಮಾಧಾನ ಮಾಡಿತ್ತು.
ಒಂದು ಹಂತದಲ್ಲಿ ಅವರಿಗೆ ರಾಜ್ಯಸಭಾ ಸದಸ್ಯತ್ವ ನೀಡುವ ಸುದ್ದಿ ಹರಡಿತ್ತಾದರೂ ಅದು ನಾರಾಯಣ ಬಾಂಡಗೆ ಅವರಿಗೆ ಒಲಿದ ಹಿನ್ನೆಲೆಯಲ್ಲಿ ವಿ. ಸೋಮಣ್ಣ ಮತ್ತೆ ನಿರಾಸೆ ಅನುಭವಿಸಿದರು. ಇದೀಗ ಅವರು ಬಯಸಿದಂತೆ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಅವಕಾಶ ನೀಡುವ ಸಾಧ್ಯತೆ ದಟ್ಟವಾಗಿದೆ.
ಒಂದು ಮಾಹಿತಿ ಪ್ರಕಾರ, ಬಿ.ವೈ ವಿಜಯೇಂದ್ರ ಅವರು ಶುಕ್ರವಾರ ಸೋಮಣ್ಣ ಅವರ ಜತೆ ಮಾತಾಡಿ ಕ್ಷೇತ್ರದ ತಯಾರಿ ಮಾಡಿಕೊಳ್ಳಿ ಎಂದು ತಿಳಿಸಿದ್ದಾರೆನ್ನಲಾಗಿದೆ. ಹೀಗಾಗಿ ತುಮಕೂರಿನಲ್ಲಿ ಓಡಾಟ ಚುರುಕು ಮಾಡಲು ಸೋಮಣ್ಣ ನಿರ್ಧರಿಸಿದ್ದಾರೆ. ವಿ ಸೋಮಣ್ಣ ಮುಂದಿನ ಮೂರು ತಿಂಗಳು ತುಮಕೂರಿನಲ್ಲೇ ವಾಸ್ತವ್ಯ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ: V Somanna: ನಾನು ನಿಂತ ನೀರಲ್ಲ, ನನ್ನ ಮೇಲೆ ಯಾರೋ ಮಾಟ ಮಾಡಿಸಿರಬೇಕು: ವಿ. ಸೋಮಣ್ಣ
ಟಿಕೆಟ್ ಕೇಳಿದ್ದು ನಿಜ, ಕೊಟ್ರೆ ಸ್ಪರ್ಧಿಸ್ತೇನೆ : ಅಡ್ಡ ಗೋಡೆ ಮೇಲೆ ಸೋಮಣ್ಣ ದೀಪ
ಈ ನಡುವೆ, ತುಮಕೂರು ಸ್ಪರ್ಧೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂಬ ವಿಚಾರದ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ವಿ ಸೋಮಣ್ಣ ಜಾಣ್ಮೆಯ ಉತ್ತರ ನೀಡಿದ್ದಾರೆ. ʻʻಅದರ ಬಗ್ಗೆ ನನಗೆ ಗೊತ್ತಿಲ್ಲ, ಆ ಮಾಹಿತಿ ನನಗೆ ಇಲ್ಲ. ನಾನು ತುಮಕೂರು ಟಿಕೆಟ್ ಕೇಳಿರುವುದು ನಿಜ. ಕೊಟ್ಟರೆ ಖಂಡಿತ ಸ್ಪರ್ಧೆ ಮಾಡುತ್ತೇನೆʼʼ ಎಂದು ಹೇಳಿದರು.
ʻʻನಾನು 365 ದಿನವೂ ಚುನಾವಣೆಯೇ ಮಾಡೋದು. ಗೆದ್ದಾಗಲೂ ನಾನು ಸುಮ್ನೆ ಕೂತಿಲ್ಲ, ಇದು ನನ್ನ ರೊಟೀನ್ ಕೆಲಸ. ಈಗ ಸೋತಿದೀನಿ ಅಂತ ಸ್ವಲ್ಪ ಸೋಮಾರಿ ಆಗಿದ್ದೇನೆ. ಹೈಕಮಾಂಡ್ ಬಳಿ ತುಮಕೂರು ಲೋಕಸಭೆ ಟಿಕೆಟ್ ಕೇಳಿದೀನಿ. ಗುರುತಿಸಿ ಟಿಕೆಟ್ ಕೊಟ್ರೆ, ಜನರ ಬಳಿ ಹೋಗ್ತೀನಿʼʼ ಎಂದು ಹೇಳಿದರು ಸೋಮಣ್ಣ.
ʻʻದೇಶದಲ್ಲಿ ಮತ್ತೆ ಮೋದಿಯವರು ಪ್ರಧಾನಿ ಆಗಬೇಕು. ಮೋದಿಯವರು ದೇಶದ ಪ್ರಧಾನಿ ಆಗ್ತಾರೆ ಅಂದ್ರೆ ಅದಕ್ಕೆ ನಮ್ಮ ಅಳಿಲು ಸೇವೆಯೂ ಇರಬೇಕಲ್ಲʼʼ ಎಂದು ಹೇಳಿದ ಸೋಮಣ್ಣ, ʻʻತುಮಕೂರು ನನಗೇನೂ ಹೊಸದಲ್ಲ, ಅಲ್ಲಿ ಮನೆ ನೋಡುವ ಅಗತ್ಯ ಕಂಡುಬರಲ್ಲ. ನನಗೆ ಬೆಂಗಳೂರು ಹೇಗೋ ತುಮಕೂರೂ ಹಾಗೆಯೇ. ನನಗೂ ತುಮಕೂರಿಗೂ ಅವಿನಾಭವ ಸಂಬಂಧ ಇದೆʼʼ ಎಂದರು. ಜತೆಗೆ ಹೈಕಮಾಂಡ್ ಎಲ್ಲಿಗೆ ಕಳಿಸಿದ್ರೂ ಹೋಗಿ ನಿಲ್ತೀನಿ ಎಂದರು.
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಕೇಂದ್ರ ಸಚಿವರು, ಪಕ್ಷದ ಹಿರಿಯ ನಾಯಕರಾದ ಶ್ರೀ @nitin_gadkari ಅವರನ್ನು ಇಂದು ದೆಹಲಿಯಲ್ಲಿ ಭೇಟಿಯಾಗಿ, ಸಮಾಲೋಚನೆ ನಡೆಸಲಾಯಿತು.
— V. Somanna (@VSOMANNA_BJP) February 6, 2024
ಈ ವೇಳೆ ಪಕ್ಷದ ಹಿರಿಯ ನಾಯಕರಾದ ಶ್ರೀ ಪ್ರಭಾಕರ್ ಕೋರೆಯವರು ಹಾಗೂ ತುಮಕೂರು ಕ್ಷೇತ್ರದ ಸಂಸದರು, ಆತ್ಮೀಯರಾದ ಶ್ರೀ ಜಿ.ಎಂ ಸಿದ್ದೇಶ್ವರ್ ಅವರು ಉಪಸ್ಥಿತರಿದ್ದರು. pic.twitter.com/EXEDoDgM0k
ಹಾಲಿ ಸಂಸದರ ಮೂಲಕ ಮನವೊಲಿಸಿದ ಸೋಮಣ್ಣ
ವಿ. ಸೋಮಣ್ಣ ಅವರು ಬಹಳ ಹಿಂದಿನಿಂದಲೇ ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ, ಅವರಿಗೆ ಭಯ ಇರುವುದು ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ ವಿಜಯೇಂದ್ರ ಅವರ ಮೇಲೆ. ಒಂದೊಮ್ಮೆ ತಾವು ಹೈಕಮಾಂಡ್ ಮನವೊಲಿಸಿ ಟಿಕೆಟ್ ಪಡೆದರೂ ರಾಜ್ಯ ನಾಯಕರು ತಪ್ಪಿಸಬಹುದು ಎಂಬ ಭಯ ಅವರಲ್ಲಿತ್ತು.
ಹೀಗಾಗಿ ಅವರು ಹಾಲಿ ಸಂಸದರಾಗಿರುವ ಬಸವರಾಜ್ ಅವರ ಮೂಲಕವೇ ಬಿ.ಎಸ್. ಯಡಿಯೂರಪ್ಪ ಮತ್ತು ಬಿ.ವೈ ವಿಜಯೇಂದ್ರ ಅವರ ಮನವೊಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಹಾಲಿ ಸಂಸದ ಬಸವರಾಜು ಮೂಲಕ ಲಾಬಿ ಮಾಡಿರುವ ಸೋಮಣ್ಣ ಅವರ ಮೂಲಕವೇ ಹೈಕಮಾಂಡ್ ಜತೆ ಮಾತುಕತೆ ನಡೆಸಿದ್ದರು. ಆಗ ಸರ್ವೇ ರಿಪೋರ್ಟ್ ಆಧಾರದ ಮೇಲೆ ಟಿಕೆಟ್ ಕೊಡ್ತೀವಿ ಎಂದು ವರಿಷ್ಠರು ಹೇಳಿದ್ದಾರೆ ಎನ್ನಲಾಗಿದೆ.
ಮಣ್ಣಿನ ಮಗ, ಮಾಜಿ ಪ್ರಧಾನಿಗಳು ಹಾಗೂ ಜನತಾದಳದ ವರಿಷ್ಠರಾದ ಶ್ರೀ @H_D_Devegowda ಅವರನ್ನು ದೆಹಲಿಯ ಅವರ ನಿವಾಸದಲ್ಲಿ ಭೇಟಿಯಾಗಿ, ಕುಶಲೋಪರಿ ವಿಚಾರಿಸಿ, ಆಶೀರ್ವಾದ ಪಡೆದುಕೊಂಡ ಸಂದರ್ಭ. pic.twitter.com/vWufb4Cr0x
— V. Somanna (@VSOMANNA_BJP) February 6, 2024
ʻʻಮೊದಲು ಸಂಘಟನೆ ಕೆಲಸ ಮಾಡಿ. ಬಳಿಕ ಟಿಕೆಟ್ ಬಗ್ಗೆ ನೋಡೋಣ. ರಾಜ್ಯ ಘಟಕ ಮತ್ತು ಹೈಕಮಾಂಡ್ ಪ್ರತ್ಯೇಕ ಸರ್ವೇ ಮಾಡುತ್ತದೆ. ಸರ್ವೇ ರಿಪೋರ್ಟ್ ಮೇಲೆ ಟಿಕೆಟ್ʼʼ ಎಂದು ಹೈಕಮಾಂಡ್ ಹೇಳಿತ್ತು. ಇದಾದ ಬಳಿಕ ಸೋಮಣ್ಣ ಅವರು ಬಸವರಾಜ್ ಅವರ ಮೂಲಕವೇ ಬಿಎಸ್ವೈ, ಬಿವೈ ವಿಜಯೇಂದ್ರ ಅವರ ಮನವೊಲಿಕೆ ಮಾಡಿದ್ದಾರೆ.