ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ (Karnataka Assembly Elections) ಎರಡೂ ಕ್ಷೇತ್ರಗಳಲ್ಲಿ ಸೋತ ಬಿಜೆಪಿ ನಾಯಕ ವಿ. ಸೋಮಣ್ಣ (V Somanna) ಅವರು ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಅವರನ್ನು ಬಾಯ್ತುಂಬಾ ಹೊಗಳಿದ್ದಾರೆ. ಬಿಜೆಪಿಯಲ್ಲಿ ತನಗೆ ಅಧ್ಯಕ್ಷ ಹುದ್ದೆ ಅಲ್ಲದಿದ್ದರೆ ಕಾರ್ಯಾಧ್ಯಕ್ಷ ಹುದ್ದೆಯನ್ನಾದರೂ (BJP President post or Working president post) ಕೊಡಿ ಎಂಬ ಬೇಡಿಕೆಯನ್ನು ಮಂಡಿಸಿದ್ದಾರೆ. ಬಿಜೆಪಿ ಮೇಲೆ ಪ್ರೀತಿ, ಕಾಂಗ್ರೆಸ್ ಮೇಲೆ ಆಸೆ ಎಂಬಂತೆ ಮಾತನಾಡಿದ ವಿ. ಸೋಮಣ್ಣ ಎರಡು ದೋಣಿ ಮೇಲೆ ಕಾಲಿಟ್ಟುಕೊಂಡು ಹೋಗುವ ಪ್ರಯತ್ನ ಮಾಡಿದರಾ ಎಂಬ ಸಂಶಯವನ್ನು ಪತ್ರಿಕಾಗೋಷ್ಠಿ ಮೂಡಿಸಿತು!
ಡಿ.ಕೆ.ಶಿವಕುಮಾರ್‌ಗೆ ಮಾನವೀಯತೆ ಇದೆ, ಅದನ್ನು ಮರೆಯದಿರಲಿ
ಸೋಮಣ್ಣ ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಮುಖವಾಗಿ ಮಾತನಾಡಿದ್ದು ಗುತ್ತಿಗೆದಾರರ ಬಾಕಿ ಹಣ ಪಾವತಿ ಬಗ್ಗೆ. ಹಣ ಪಾವತಿ ತಡೆ ಹಿಡಿದಿರುವುದರಿಂದ ಹಲವರು ತೊಂದರೆಯಲ್ಲಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ತನಿಖೆ ಮಾಡಿಸಲಿ. ಆದರೆ, ವಿಷಯದ ಗಂಭೀರತೆಯನ್ನು ಅರಿತು ಹಣ ಬಿಡುಗಡೆ ಮಾಡಲಿ ಎಂದು ಮನವಿ ಮಾಡಿದರು.
ಗುತ್ತಿಗೆದಾರರು ತಮ್ಮ ಜತೆಗೂ ಮಾತನಾಡಿದ್ದಾರೆ. ಯಾರ್ಯಾರು ಎನ್ನುವ ವಿಚಾರಗಳೆಲ್ಲ ಬೇಡ, ಅದರಿಂದ ಗೋಜಲಾಗುತ್ತದೆ ಬಿಟ್ಟರೆ ಪರಿಹಾರ ಆಗುವುದಿಲ್ಲ ಎಂದು ಹೇಳಿದರು ಸೋಮಣ್ಣ.
ಕಾಂಗ್ರೆಸ್ ಈ ಬಾರಿ ಏನಾದರೂ ಅಧಿಕಾರಕ್ಕೆ ಬಂದಿದ್ದರೆ ಅದಕ್ಕೆ ಗುತ್ತಿಗೆದಾರರ ಪಾಲು ದೊಡ್ಡದಿದೆ. ಅವರ ಈ ಕೊಡುಗೆಯನ್ನು ನೆನಪಿಟ್ಟುಕೊಂಡಾದರೂ ಸಹಾಯ ಮಾಡಬೇಕು ಎಂದು ಅವರು ಕೋರಿದರು. ಡಿ.ಕೆ. ಶಿವಕುಮಾರ್ ಅವರು ಮಾನವೀಯ ಮನಸುಳ್ಳ ವ್ಯಕ್ತಿ, ಅವರಿಗೆ ಗುತ್ತಿಗೆದಾರರ ಸಂಕಷ್ಟ ಅರ್ಥವಾಗುತ್ತದೆ ಎಂದುಕೊಂಡಿದ್ದೇನೆ. ಅವರು ತಮ್ಮ ಮನುಷ್ಯವನ್ನು ಮುಂದಿಟ್ಟು ಹಣ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.
ಬೆಂಗಳೂರಿನ ಎಲ್ಲ 28 ಕ್ಷೇತ್ರಗಳಲ್ಲೂ ತನಿಖೆ ಮಾಡಿಸಿ, ಕೆಲಸ ಮಾಡದವರನ್ನು ಒಳಗೆ ಹಾಕಿ. ಹಾಗಂತ ಆದ್ಯತೆ ಮೇಲೆ ಹಣ ಬಿಡುಗಡೆ ಮಾಡಿ ಎಂದು ಸೋಮಣ್ಣ ಕೇಳಿಕೊಂಡರು.
ಸ್ನೇಹಿತನಾಗಿ ಹೇಳುತ್ತಿದ್ದೇನೆ ಡಿ.ಕೆ. ಶಿವಕುಮಾರ್ ಹಣ ಬಿಡುಗಡೆ ಮಾಡಿ
ʻʻಬೆಂಗಳೂರಿನ ಕೆಲವು ಕಾಂಗ್ರೆಸ್ ಶಾಸಕರು ಕೂಡಾ ನನ್ನ ಜತೆ ಮಾತನಾಡಿದ್ದಾರೆ. ಆದರೆ ಯಾರು ಎಂದು ಹೇಳುವುದಿಲ್ಲ. ಯಾಕೆಂದರೆ ಅವರಿಗೆ ಸಮಸ್ಯೆ ಆಗುತ್ತೆʼʼ ಎಂದು ಹೇಳಿದ ಸೋಮಣ್ಣ, ಗುತ್ತಿಗೆದಾರರಿಂದಲೇ ಸರ್ಕಾರ ಬಂದಿದೆ. ಅವರಿಗೆ ಅನ್ಯಾಯ ಮಾಡಬೇಡಿ. ನಿಮ್ಮ ಶಾಸಕರು ಮತ್ತು ನಿಮ್ಮ ಮಂತ್ರಿಗಳು ನಿಮ್ಮ ಬಗ್ಗೆ ಏನು ಮಾತನಾಡ್ತಾರೆ ಅನ್ನೋದು ಗೊತ್ತಿದೆ. ನಿಮ್ಮ ಸ್ನೇಹಿತನಾಗಿ ಒಂದು ಮಾತು ಹೇಳ್ತಿದ್ದೇನೆ. ಗುತ್ತಿಗೆದಾರರ ಹಣ ಬಿಡುಗಡೆ ಮಾಡಿ ಎಂದರು.
ತನಿಖೆ ಹೆಸರಲ್ಲಿ ಗುತ್ತಿಗೆದಾರರಿಗೆ ಮೋಸ ಮಾಡಬೇಡಿ
ʻʻಬರೀ ಗೋವಿಂದರಾಜು ನಗರ ಅಷ್ಟೇ ಅಲ್ಲ. ಪಕ್ಕದಲ್ಲಿ ವಿಜಯನಗರ ಇದೆ. ಆ ಕ್ಷೇತ್ರದ ಕೆಲಸ ಸಹ ತನಿಖೆ ಮಾಡಿ. ಆದರೆ, ತನಿಖೆ ಹೆಸರಲ್ಲಿ ನಿಜವಾದ ಗುತ್ತಿಗೆದಾರನಿಗೆ ಮೋಸ ಮಾಡಬೇಡಿʼʼ ಎಂದು ಹೇಳಿದ ಅವರು, ʻʻಎರಡು ತಿಂಗಳ ಹಿಂದೆ ಬೀದಿಬೀದಿಯಲ್ಲಿ ನಮ್ಮ ವಿರುದ್ಧ ಮಾತನಾಡಿದ್ರಿ. ಈಗ ನಾವು ಆರೋಪ ಮಾಡಿದ್ರೆ ದಾಖಲೆ ಕೊಡಿ ಎಂದು ಕೇಳ್ತೀರಾʼʼ ಎಂದು ಪ್ರಶ್ನಿಸಿದರು.
ಆಗ ಪ್ರಾಮಾಣಿಕರು, ಈಗ ಭ್ರಷ್ಟರು ಹೇಗಾಗುತ್ತಾರೆ?
ʻʻಅಂದು ನಿಮ್ಮ ಪಾಲಿಗೆ ಪ್ರಾಮಾಣಿಕರಾಗಿದ್ದ ಗುತ್ತಿಗೆದಾರರು ಇಂದು ಭ್ರಷ್ಟರಾಗಿದ್ದಾರೆ ಅನ್ನೋದು ಸರಿಯಲ್ಲ. ಬಿಡುಗಡೆಗೆ ಸಿದ್ಧತೆ ಆಗಿರುವ ಪಟ್ಟಿ ಅನುಸಾರ ದುಡ್ಡು ಬಿಡುಗಡೆ ಮಾಡಿ. ಕೆಲಸ ಆಗದಿರುವುದರ ಬಗ್ಗೆ ದುಡ್ಡು ಬಿಡುಗಡೆ ಮಾಡಬೇಡಿ. ಒಬ್ಬ ಗುತ್ತಿಗೆದಾರರನ ಹಿಂದೆ ನೂರಾರು ಕುಟುಂಬ ಇರುತ್ತೆ. ನೂರಾರು ಕುಟುಂಬಗಳು ಇಂದು ಊರಿಗೆ ವಾಪಸು ಆಗುವ ಪರಿಸ್ಥಿತಿ ನಿರ್ಮಾಣ ಆಗಿದೆ. ಕಾನೂನಿನ ಪ್ರಕಾರ ದುಡ್ಡು ಬಿಡುಗಡೆ ಮಾಡಿʼʼ ಎಂದರು ಸೋಮಣ್ಣ.
ಇದನ್ನೂ ಓದಿ : Commission Politics : ನ್ಯಾಯಾಂಗ ತನಿಖೆ ವರದಿ ಬಾರದೆ ಹಳೆ ಬಿಲ್ ಕೊಡಲ್ಲ; ಡಿಕೆಶಿ ಬೆನ್ನಿಗೆ ನಿಂತ ಸಿದ್ದರಾಮಯ್ಯ
ತನಿಖೆಗಳಿಂದ ಯಾವುದೇ ಫಲಿತಾಂಶ ಬರಲ್ಲ!
ʻʻಈ ಹಿಂದೆ ಹಲವು ಹಗರಣಗಳು ತನಿಖೆಗೆ ಹೋಗಿವೆ. ಆದರೆ ಯಾವುದೇ ಫಲಿತಾಂಶ ಬಂದಿಲ್ಲ. ಟಾರ್ಗೆಟ್ ಮಾಡಿ ತನಿಖೆ ಮಾಡುವುದು ಬೇಡ. ನಾನು ಬಿಟ್ಟು ಹೋದ ಕ್ಷೇತ್ರದಿಂದಲೇ ನೀವು ತನಿಖೆ ಮಾಡಿʼʼ ಎಂದು ಹೇಳಿದರು.
ನನಗೆ ರಾಜ್ಯಾಧ್ಯಕ್ಷತೆ ಕೊಟ್ರೆ ಮಜಾನೇ ಬೇರೆ!
ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಿ ಎಂದು ಮನವಿ ಮಾಡಿದ ಸೋಮಣ್ಣ ಅವರು ಇನ್ನೊಂದು ಕಡೆ ತಮ್ಮ ರಾಜಕೀಯ ಬದುಕಿನ ಬಗ್ಗೆಯೂ ಮಾತನಾಡಿದರು. ಗೋವಿಂದರಾಜ ಕ್ಷೇತ್ರವನ್ನು ಬಿಟ್ಟುಕೊಡುವ ಮೂಲಕ ನಾನೇ ನನ್ನ ಕಾಲಿಗೆ ಕಲ್ಲು ಹಾಕಿಕೊಂಡೆ ಎಂದರು
ʻʻನನಗೆ ವಿಧಾನ ಸಭಾ ಚುನಾವಣೆಯಲ್ಲಿ ನಮ್ಮವರೇ ನನಗೆ ಮೋಸ ಮಾಡಿದ್ರು. ಅದು ಎಲ್ಲರಿಗೂ ಗೊತ್ತು. ನಮ್ಮ ನಾಯಕರ ಒತ್ತಾಯಕ್ಕೆ ಮಣಿದು ಎರಡು ಕಡೆ ಸ್ಪರ್ಧೆ ಮಾಡಿದೆ. ನಾನೊಬ್ಬನೇ ಸಿರಿಯಸ್ ಆಗಿ ತೆಗೆದುಕೊಂಡು ಕೆಲಸ ಮಾಡಿದೆʼʼ ಎಂದರು.
ಹೈಕಮಾಂಡ್ ಕೊಟ್ಟ ಟಾಸ್ಕ್ ನಾನೊಬ್ಬನೇ ಸಿರಿಯಸ್ ಆಗಿ ತೆಗೆದುಕೊಂಡಿದ್ದು ಎಂದ ಸೋಮಣ್ಣ ಅವರು ಪರೋಕ್ಷವಾಗಿ ಆರ್ ಆಶೋಕ್ ಸಿರಿಯಸ್ ಆಗಿ ಹೈಕಮಾಂಡ್ ಆದೇಶ ಪಾಲಿಸಿಲ್ಲ ಎಂದರು.
ನನ್ನ ಸೋಲಿಗೆ ನಮ್ಮ ಪಕ್ಷದವರೇ ಕಾರಣ. ಇಷ್ಟರ ನಡುವೆಯೂ ನಾನು ಒಂದು ಕಡೆ ಮೂರು ಸಾವಿರ ವೋಟ್ ಲ್ಲಿ ಸೋತೆ. ನಾನು ಹೇಗೆ ಸೋತೆ ಅಂತ ಎಲ್ಲರಿಗೂ ಗೊತ್ತು. ಅದನ್ನ ನನ್ನ ಬಾಯಿ ಬಿಡಿಸಬೇಡಿ ಎನ್ನುವ ಮೂಲಕ ಸ್ವಪಕ್ಷೀಯರ ವಿರುದ್ಧ ಗರಂ ಆದರು ಸೋಮಣ್ಣ. ʻʻನನಗೆ ಇಷ್ಟು ವಿರೋಧ ಮಾಡಿದ್ರು ಕಡಿಮೆ ಅಂತರದಲ್ಲಿ ಸೋತೆ. ಒಂದು ಕಡೆ ನಾನು ಸ್ಪರ್ಧೆ ಮಾಡಿದ್ರೆ ಅದರ ಕಥೆಯೇ ಬೇರೆ ಇರುತ್ತಿತ್ತುʼʼ ಎಂದರು.
ರಾಜ್ಯಾಧ್ಯಕ್ಷತೆ ಕೊಡಲ್ಲ ಅಂದರೆ ಕಾರ್ಯಾಧ್ಯಕ್ಷ ಸ್ಥಾನ ಕೊಡಿ
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೊಡಿ ಎಂದು ಕೇಳಿದ್ದೇನೆ. ಆಗಲಿಲ್ಲ ಇಲ್ಲ ಅಂದ್ರೆ ಎರಡು ಕಾರ್ಯಾಧ್ಯಕ್ಷ ಸ್ಥಾನ ಸೃಷ್ಟಿ ಮಾಡಿ ನನಗೆ ಒಂದು ಕೊಡಿ ಎಂದ ಸೋಮಣ್ಣ ಅವರು, ನನಗೆ ಅಧ್ಯಕ್ಷ ಸ್ಥಾನ ಕೊಟ್ರೆ ಆ ಮಜನೇ ಬೇರೆ ಎಂದರು.
ನಾನು ಡಿ.ಕೆ. ಶಿವಕುಮಾರ್ ಅವರಷ್ಟು ವೇಗವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಲ್ಲ. ಅವರ ಹಾಗೆ ಕೆಲಸ ಮಾಡಲು ಸಾಧ್ಯವೇ ಇಲ್ಲ ನನಗೆ. ಅವರ ವೇಗವೇ ಬೇರೆ ಎಂದು ಹೊಗಳಿದರು ವಿ. ಸೋಮಣ್ಣ.