ಬೆಂಗಳೂರು: ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿಗಳ ನಡುವೆಯೇ ದಿಢೀರ್ ಪತ್ರಿಕಾಗೋಷ್ಠಿ ನಡೆಸಿದ ವಸತಿ ಸಚಿವ ವಿ. ಸೋಮಣ್ಣ, ತಾವು ಯಾವುದೇ ಕಾರಣಕ್ಕೆ ಬಿಜೆಪಿಯನ್ನು ತೊರೆಯುವುದಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.
ನಾನು ಬೆಂಗಳೂರಿಗೆ ಬಂದಿದ್ದು ಹೊಟ್ಟೆ ಪಾಡಿಗೆ. ನನ್ನ ಜೀವನವನ್ನು ನಾನೇ ರೂಪಿಸಿಕೊಂಡಿದ್ದೇನೆ. ಸಂಜೆ ಕಾಲೇಜಿನಲ್ಲಿ ಓದಿದ್ದೇನೆ. ಕಸ್ತೂರಿ ಮಾತ್ರೆ ಮಾರಿದ್ದೇನೆ. ಆರು ಅಡಿ ಎಂಟು ಅಡಿ ರೂಮ್ ನಲ್ಲಿ ೧೬ ವರ್ಷ ವಾಸಿಸಿದ್ದೇನೆ. ಆದರೆ ಸ್ವಾಭಿಮಾನಕ್ಕೆ ಧಕ್ಕೆ ಆದಾಗ ನಾನು ಸುಮ್ಮನೆ ಇರೋನಲ್ಲ. ಸುಳ್ಳು ಹೇಳಿ ನಾನು ನನ್ನ ಜೀವನ ಮಾಡಲ್ಲ. ನಮ್ಮ ತಾಯಿ ತಂದೆ ನನಗೆ ಸಂಸ್ಕಾರ ಕಲಿಸಿಕೊಟ್ಟಿದ್ಸಾರೆ. ನಾನು ಯಾರ ಮುಲಾಜಲ್ಲೂ ಬದುಕಿಲ್ಲ. ಅನಾವಶ್ಯಕವಾಗಿ ಇನ್ನೊಬ್ಬರ ತೇಜೋವದೆ ಮಾಡೋದು ಒಳ್ಳೆಯದಲ್ಲ ಎಂದು ಕಣ್ಣೀರು ಹಾಕಿದರು.
ಇದಕ್ಕೂ ಮೊದಲು ಇಲಾಖೆಯ ಕೆಲಸಗಳ ಮಾಹಿತಿ ನೀಡಿದರು. 3ಲಕ್ಷ ಮನೆ ಮಾಲೀಕರಿಗೆ ಹಕ್ಕು ಪತ್ರ ನೀಡಿ
ಮನೆಗಳ ಮಾಲೀಕರಾಗಿ ಘೋಷಣೆ ಮಾಡಲಾಗಿದೆ. ಕೆ.ಆರ್ ಪುರಂನಲ್ಲಿ ಕೆ ನಾರಾಯಣಪುರದಲ್ಲಿ ಮನೆಗಳ ನಿರ್ಮಾಣ ಆಗಿದೆ. ಮೊದಲು ಒಂದು ಲಕ್ಷ ಡೆಪಾಸಿಟ್ ಇತ್ತು, ಅದನ್ನ 50 ಸಾವಿರಕ್ಕೆ ಇಳಿಸಲಾಗಿದೆ. ಠೇವಣಿ ಇಟ್ಟಿರೋದು ಮನೆಗಳ ಸಂಪೂರ್ಣ ಆದ ಬಳಿಕ ಮನೆ ಕೀ ಕೊಡಲಾಗುವುದು. ಬೇಡ ಅಂದ್ರೆ ಹಣ ವಾಪಸ್ ಮಾಡ್ತೀವಿ.
ಮೂಲಭೂತ ಸೌಕರ್ಯ ವಿಚಾರದಲ್ಲಿ, ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮೊದಲು ಮನೆಗೆ 9ಲಕ್ಷ ವೆಚ್ಚ ತಗಲುತ್ತಿತ್ತು. SC, ST ಗ್ರಾಂಟ್ ಅಡಿಯಲ್ಲಿ ಕೆಲಸ ಮಾಡಿದ್ದೇವೆ. SC, ST ಗಳಿಗೆ 6ಲಕ್ಷ, ಇತರರಿಗೆ 6.5ಲಕ್ಷ ಆಗಲಿದೆ. ಯಾವುದೇ ಮೂಲಭೂತ ಸೌಕರ್ಯ ಇಲ್ಲದೆ ಮನೆ ಹಂಚುವುದಿಲ್ಲ. ಬಡವರಿಗೆ ಸೂರು ಕೊಡಲು ನಾವು ಮುಂದಾಗಿದ್ದೇವೆ ಎಂದರು.
ನಾನು ಬೆಂಗಳೂರಿಗೆ ಬಂದಿದ್ದು ಹೊಟ್ಟೆ ಪಾಡಿಗೆ. ನನ್ನ ಜೀವನವನ್ನು ನಾನೇ ರೂಪಿಸಿಕೊಂಡಿರುವೆ. ಸಂಜೇ ಕಾಲೇಜು ಶಿಕ್ಷಣ ಪಡೆದವನು. ನನ್ನ ಸ್ವಾಭಿಮಾನಕ್ಕೆ ದಕ್ಕೆ ಬಂದಾಗ ನಾನು ಸಹಿಸಿಕೊಂಡಿಲ್ಲ. ನಮ್ಮ ತಂದೆ ತಾಯಿ ನನಗೆ ಸಂಸ್ಕಾರ ಕೊಟ್ಟಿದ್ದಾರೆ ಎಂದು ಭಾವುಕರಾದರು.
ನಾನು ಮೊದಲು ಕಾರ್ಪೊರೇಟರ್ ಇದ್ದೆ. 1994ರಲ್ಲಿ ಶಾಸಕನಾದೆ. ರಾಜ್ಯದಲ್ಲಿ ಅತಿ ಹೆಚ್ಚು ಮತಗಳಿಂದ ಗೆದ್ದೆ. ಮೂರು ಮರ್ಡರ್ ಆಯ್ತು, ನನ್ನ ಮೇಲೆ ಎತ್ತಿ ಹಾಕಿದ್ರು. ಅಬ್ದುಲ್ ಅಜೀಮ್ ನನ್ನ ಮೇಲೆ ಆರೋಪ ಮಾಡಿದ್ರು. ದೇವೇಗೌಡರು ಬೈ ಎಲೆಕ್ಷನ್ ನಲ್ಲಿ ಸಹಾಯ ಮಾಡಿದ್ರು. ದೇವೇಗೌಡರು ನನ್ನ ರಾಜಕೀಯವಾಗಿ ಕೈ ಹಿಡಿದ್ರು. ನನ್ನ ಜಾತಿಯೇ ಬೇರೆ, ಅವರ ಜಾತಿಯೇ ಬೇರೆ. ನಾನು ವಠಾರದ ಮನೆಯಲ್ಲಿ ಇದ್ದೆ. ಅದಾದ ಮೇಲೆ ಕಾಂಗ್ರೆಸ್ ಹೋದೆ. ಕಾಂಗ್ರೆಸ್ ನಿಂದ ಎರಡು ಬಾರಿ ಗೆದ್ದೆ. ಆದಾದ ಮೇಲೆ ಸೋತೆ.
ಸೋತವನನ್ನ ಎಂಎಲ್‌ಸಿ ಮಾಡಿದ್ದು ಯಡಿಯೂರಪ್ಪ ಅವರು. ನನ್ನ ಸಚಿವರನ್ನ ಮಾಡಿದ್ರು. ನಾನು ನೇರವಾಗಿ ಮಾತಾಡ್ತೀನಿ. ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಚಿತಾವಣೆ ಮಾಡುವ ಕೆಲಸ ಮಾಡಿಲ್ಲ. ನಾನು ಯಾವ ಪಕ್ಷದಲ್ಲಿ ಇರ್ತೇನೆ ಅದೇ ನಮ್ಮ ತಾಯಿ ಅಂತ ನೋಡ್ತೀನಿ. ಮಾಧ್ಯಮದಲ್ಲಿ ಎಂದಾದ್ರೂ ನಾನು ಹೇಳಿದ್ದೀನಾ ಬಿಜೆಪಿ ಬಿಡ್ತೀನಿ ಅಂತ? ನನ್ನ ವಯಸ್ಸೆಷ್ಟು.? ಇಷ್ಟು ವಯಸ್ಸಾದ್ರೂ ಸೆಕ್ಯೂರಿಟಿ ಇಲ್ಲದೆ ಓಡಾಡ್ತಿದ್ದೀನಿ. ಕ್ಷೇತ್ರದಲ್ಲಿ ಹೇಗಿದೆ ಅನ್ನೋದು ನಿಮಗೆ ಗೊತ್ತಿದೆ. ಅಮಿತ್ ಶಾ, ನಡ್ಡಾ ಜಿ ನಮ್ಮ ನಾಯಕರು. ಅವರಿಗೆ ಈಗಾಗಲೇ ಹೇಳಿದ್ದೇನೆ. ನಾನು ಪಕ್ಷ ಬಿಟ್ಟು ಹೋಗುವ ಪ್ರಮೆಯವೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಭಯ ಬಿದ್ದು ಇರೋನಲ್ಲ. ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ನಾನು ಸುಮ್ಮನೆ ಇರಲ್ಲ. ನಾನು ಬಿಜೆಪಿ ಬಿಡಲ್ಲ. ನಾನು ಯಾವ ಕಾರಣಕ್ಕೂ ಬಿಜೆಪಿ ಬಿಡಲ್ಲ. ಬಿಜೆಪಿಯಲ್ಲೇ ಇರ್ತೇನೆ ಎಂದ ಸೋಮಣ್ಣ, ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದ್ರೆ ಸುಮ್ಮನಿರೋಲ್ಲ. ಪ್ರಧಾನಿ ಅವರು ಉತ್ತಮ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಇದೆಲ್ಲದಕ್ಕೂ ಇತಿಶ್ರೀ ಹಾಡೋಣ. ಬಿಜೆಪಿಯಲ್ಲೇ ಮುಂದುವರೆಯುತ್ತೇನೆ ಎಂದು ತಿಳಿಸಿದರು.
ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಅರುಣ್ ಸೋಮಣ್ಣ ವಾಗ್ದಾಳಿ ವಿಚಾರದಲ್ಲಿ ಪ್ರತಿಕ್ರಿಯಿಸಿ, ನನ್ನ ಮಗ ಡಾಕ್ಟರ್. ಅವನಿಗೆ 47 ವರ್ಷ, ಸಣ್ಣ ಮಗು ಅಲ್ಲ. ಯಾವುದೇ ವ್ಯವಸ್ಥೆ, ಪಾಪುಲಾರಿಟಿಯನ್ನ, ಕೆಲಸವನ್ನ ಸ್ವೀಕಾರ ಮಾಡಬೇಕು. ರಾಜಕೀಯದಲ್ಲಿ ಯಾರಿಗೆ ಯಾರೂ ಶತ್ರು ಅಲ್ಲ. ಯಾರೂ ಈ ರೀತಿ ಮಾಡಬಾರದು. ವಿಜಯಸಂಕಲ್ಪ ಯಾತ್ರೆ ಶುರುವಾಗಿದೆ. ಬಿಜೆಪಿ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ನಾನು ಮಂತ್ರಿ ಆಗಿದ್ದೇನೆ. ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋಗೋದು ಅಂತಿದೆ. ಮೋದಿ, ಅಮಿತ್ ಶಾ, ನಡ್ಡಾ ನಮ್ಮ ನಾಯಕರು. ನಾವು ಚುನಾವಣೆ ಎದುರಿಸ್ತೇವೆ ಎಂದರು.
ಸೋಮಣ್ಣ ಹಾಗೂ ಪುತ್ರ ಇಬ್ಬರೂ ಸ್ಪರ್ಧೆ ಮಾಡ್ತಾರಾ? ಎಂಬ ಕುರಿತು ಪ್ರತಿಕ್ರಿಯಿಸಿ, ಪಕ್ಷದ ತೀರ್ಮಾನಕ್ಕೆ ನಾನು ಬದ್ದ. ಕೊಟ್ರೆ ಸ್ಪರ್ಧೆ ಮಾಡ್ತೀನಿ, ಇಲ್ಲದಿದ್ರೆ ಸುಮನಾಗ್ತೀನಿ. ನಾನು ಈಗಾಗಲೇ ಹಲವು ಬಾರಿ ಸ್ಪರ್ಧೆ ಮಾಡಿದ್ದೇನೆ. ಮಂತ್ರಿಯಾಗಿ ಯಾರಿಗೂ ಅಪಚಾರ ಮಾಡೋದಿಲ್ಲ. ಬಿಜೆಪಿಯಲ್ಲಿ ನನಗೆ ಗೌರವ ನೀಡಿದ್ದಾರೆ. ಮುಂದಿನ ಚುನಾವಣೆಗೆ ಟಿಕೆಟ್ ನೀಡಿದ್ರೆ ಸ್ಪರ್ಧೆ ಮಾಡ್ತೀನಿ. ಇಲ್ಲದಿದ್ರೆ ಪಕ್ಷದಲ್ಲಿ ಕೆಲಸ ಮಾಡಿಕೊಂಡು ಇರ್ತೇನೆ ಎಂದು ತಿಳಿಸಿದರು.
ನನಗೆ ಡಬಲ್ ಸ್ಟಾಂಡರ್ಡ್ ಅನ್ನೋದು ಗೊತ್ತಿಲ್ಲ ಎಂದ ಸೋಮಣ್ಣ, ನಾನು ಎಂದಾದರೂ ಬಿಜೆಪಿ ಬಿಡ್ತೀನಿ ಅಂತಾ ಹೇಳಿದ್ದೀನಾ..? ಯಾರು ನಮ್ಮಿಂದ ಬೆಳೆದಿದ್ಸಾರೆ ಅವರೇ ನನಗೆ ತೊಂದರೆ ಕೊಡ್ತಿರೋದು. ಮೊನ್ನೆ ಧರ್ಮೇಂದ್ರ ಪ್ರಧಾನ್ ಕೂಡ ನನ್ನ ಜೊತೆ ಮಾತಾಡಿದ್ದಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೂಡ ಮಾತಾಡಿದ್ದಾರೆ. ನಾನು ಮತ್ತೆ ಪಿಗ್ಮಿ ಕಲೆಕ್ಟ್ ಮಾಡೋಕೆ ಹೋಗೋಕೆ ರೆಡಿ ಇದ್ದಾನೆ ಎಂದು ಹೇಳಿದರು.
ತೊಂದರೆ ಯಾರು ಕೊಡ್ತಿದ್ದಾರೆಂಬ ಪ್ರಶ್ನೆಗೆ ಉತ್ತರಿಸಿ, ಅದೆಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತದೆ. ನಾನು ಬಿಜೆಪಿ ಬಿಡುವುದಿಲ್ಲ,, ಬಿಜೆಪಿ ಯಲ್ಲೇ ಇರ್ತೇನೆ. ಯಾವ ನಾಯಕರು ನನ್ನ ಗೌರವಕ್ಕೆ ಧಕ್ಕೆ ತಂದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.