ಮೈಸೂರು: ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಪ್ರಬಲವಾದ ಆಡಳಿತ ವಿರೋಧಿ ಅಲೆ ಇದ್ದು, ಕಾಂಗ್ರೆಸ್ ಯಾವುದೇ ತಂತ್ರಗಾರಿಕೆಯನ್ನೂ ಮಾಡದೆ ಸುಮ್ಮನೆ ಇದ್ದರೂ ಗೆಲ್ಲುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಗುಜರಾತ್ ನಲ್ಲಿ ಬಿಜೆಪಿ ಬರುತ್ತೆ ಅಂತ ನಿರೀಕ್ಷೆ ಇತ್ತು. ಆಪ್ ಸ್ಪರ್ಧೆ ಮಾಡಿ ಕಾಂಗ್ರೆಸ್ ಮತ ತಿಂದರು. ಆಪ್ ಪಡೆದ ಮತಗಳೆಲ್ಲ ಕಾಂಗ್ರೆಸ್‌ನದ್ದು. ಒಂದು ರಾಜ್ಯದ ಚುನಾವಣಾ ಫಲಿತಾಂಶ ಗಾಳಿ ಇನ್ನೊಂದು ರಾಜ್ಯಕ್ಕೆ ಬೀಸಲ್ಲ. ಫಲಿತಾಂಶ ಕರ್ನಾಟಕದ ಮೇಲೆ ಯಾವ ಪರಿಣಾಮ ಬೀರಲ್ಲ. ಇಲ್ಲಿಯ ಬಿಜೆಪಿ ಸರಕಾರ ಅತಿ ಭ್ರಷ್ಟ ಸರ್ಕಾರ. ಕಾಂಗ್ರೆಸ್ ಸಂಘಟನೆ ಇಲ್ಲಿ ಶಕ್ತಿಯುತವಾಗಿದೆ. ಗುಜರಾತ್ ಅನ್ನು ಕರ್ನಾಟಕಕ್ಕೆ ಹೋಲಿಕೆ ಮಾಡಬೇಡಿ.
ಹಿಮಾಚಲ ಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆ ಇತ್ತು. ಕಾಂಗ್ರೆಸ್‌ಗೆ ಪ್ಲಸ್ ಆಗಿದೆ. ಗುಜರಾತ್‌ನಲ್ಲಿ ಆಪ್ ಪಕ್ಷ ಬಹಳ ಹಣ ಖರ್ಚು ಮಾಡಿತು. ಬಿಜೆಪಿಯೇ ಆಪ್ ಪಕ್ಷಕ್ಕೆ ಫಂಡ್ ಮಾಡಿದೆ ಎಂಬ ಮಾಹಿತಿ ಇದೆ. ಕಾಂಗ್ರೆಸ್ ಮತ ವಿಭಜನೆಗಾಗಿ ಆಪ್ ಪಕ್ಷಕ್ಕೆ ಬಿಜೆಪಿ ಫಂಡ್ ಮಾಡಿತು. ಜೆಡಿಎಸ್ ಜತೆ ಇಲ್ಲಿ ಬಿಜೆಪಿ ತಂತ್ರಗಾರಿಕೆ ಮಾಡಬಹುದು. ಆದರೆ ಅದು ಇಲ್ಲಿ ನಡೆಯಲ್ಲ. ಕರ್ನಾಟಕದ ಆಡಳಿತ ಪರಿಸ್ಥಿತಿ ಬಹಳ ಕೆಟ್ಟದಾಗಿದೆ. ಗುಜರಾತ್ ನಲ್ಲಿ ಶೇ.40 ಸರ್ಕಾರ ಇತ್ತು ಅಂತ ಯಾರಾದರೂ ಹೇಳಿದ್ರಾ? ಕರ್ನಾಟಕದ್ದು ಹೇಳಿದ್ರಾ? ಅಷ್ಟು ದುಡ್ಡ ಖರ್ಚು ಮಾಡಿದರೂ ಆಪ್ 6 ಸ್ಥಾನ ಪಡೆದಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸುಮ್ಮನೆ ಇದ್ದರೂ ಗೆಲ್ಲುತ್ತೆ. ನಾವು ಏನೂ ತಂತ್ರಗಾರಿಕೆ ಮಾಡುವುದೆ ಬೇಡ. ಮೋದಿ ಹವಾ ಎಲ್ಲೂ ಇಲ್ಲ. ಹವಾ ಇದ್ದಿದ್ದರೆ ದೆಹಲಿಯಲ್ಲೇ ಯಾಕೆ ಸೋಲಲುತ್ತಿದ್ದರು? ಎಲ್ಲಿ ಹೋಯಿತು ಮೋದಿ ಹವಾ? ಎಂದು ಪ್ರಶ್ನಿಸಿದರು.
ಕೆ.ಎಸ್. ಈಶ್ವರಪ್ಪ
ಶಿವಮೊಗ್ಗ: ಗುಜರಾತ್ ಸಾಕಷ್ಟು ಅಭಿವೃದ್ಧಿಯಾಗಿದೆ. ಗುಜರಾತ್ ಹೋಗಿ ನೋಡಿದರೆ ಅಲ್ಲಿನ ಅಭಿವೃದ್ಧಿ ಗೊತ್ತಾಗುತ್ತದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಇಡೀ ದೇಶಕ್ಜೆ ಮಾದರಿಯಾಗಿ ಅಭಿವೃದ್ಧಿ ಮಾಡಲಾಗಿದೆ. ಅದೇ ರೀತಿಯಲ್ಲಿ ನಾವು ನಮ್ಮ ರಾಜ್ಯದಲ್ಲೂ ಅಭಿವೃದ್ಧಿ ಮಾಡಿದ್ದೇವೆ. ಗುಜರಾತ್ ರೀತಿಯಲ್ಲಿ ನಾವೂ ಮುಂದಿನ ಚುನಾವಣೆಯಲ್ಲಿ ಗೆಲ್ಲುತ್ತೇವೆ. ಗುಜರಾತ್ ನಲ್ಲಿ ಪೇಜ್ ಪ್ರಮುಖ ರಚನೆ ಯಶಸ್ವಿಯಾಗಿದೆ. ನಮ್ಮ ರಾಜ್ಯದಲ್ಲೂ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಪೇಜ್ ಪ್ರಮುಖ ರಚಿಸಿದ್ದೇವೆ. ಪೂರ್ಣ ಬಹುಮತ ರಾಜ್ಯದಲ್ಲೂ ಬರಲಿದೆ. ಇಂದಿನ ಫಲಿತಾಂಶ ಇಡೀ ದೇಶಕ್ಕೆ ಸಂತೋಷ. ಮುಂದಿನ ವರ್ಷ ಲೋಕಸಭಾ ಚುನಾವಣೆಯಿದೆ. ಅಲ್ಲೂ ಗೆಲುವು ಸಾಧಿಸಲು ಈ ಫಲಿತಾಂಶ ದಿಕ್ಸೂಚಿ ಆಗಲಿದೆ.
ಅಧಿಕಾರಕ್ಕಾಗಿ ಕಾಂಗ್ರೆಸ್ ಮುಖಂಡರು ಜಗಳ ಆಡುತ್ತಿದ್ದಾರೆ. ರಾಜ್ಯದಲ್ಲಿ ೧೫ ಸೀಟು ಗೆಲುವು ಸಾಧಿಸಲು ಸಾಧ್ಯವಿಲ್ಲ. ಇಡೀ ದೇಶದಲ್ಲಿ ಕಾಂಗ್ರೆಸ್ ಸೋತು ಸೋತು ಮುಖಂಡರಿಗೆ ಸಾಕಾಗಿದೆ. ಸೋಲು ತಮ್ಮ ಮೇಲೆ ಬಾರದಿರಲೆಂದು ಎಐಸಿಸಿ ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಅವರಿಂದಲೇ ಕಾಂಗ್ರೆಸ್ ಸೋತಿದೆ ಎಂದು ಆರೋಪ ಹೊರಿಸುತ್ತಾರೆ. ಆಮ್ ಆದ್ಮಿ ಪ್ರಾದೇಶಿಕ ಪಕ್ಷದ ತರಹ ಅಲ್ಲೊಂದು ಇಲ್ಲೊಂದು ಗೆದ್ದಿದೆ. ಅವರಿಗೆ ಹೆಚ್ಚೇನೂ ಸೀಟು ಬಂದಿಲ್ಲ. ದೆಹಲಿ ಬಿಟ್ಟರೆ ಬೇರೆಲ್ಲೂ ಅವರಿಗೆ ಅಧಿಕಾರ ಸಿಕ್ಕಿಲ್ಲ ಎಂದರು.
ಸಿ.ಟಿ. ರವಿ
ಚಿಕ್ಕಮಗಳೂರು: ಗುಜರಾತ್ ಚುನಾವಣೆಯ ಫಲಿತಾಂಶ ರಾಜ್ಯದ ಮೇಲೆ ಭಾಗಶಃ ಪರಿಣಾಮ ಬೀರುತ್ತದೆ ಎಂದು ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶೀ ಸಿ.ಟಿ. ರವಿ ತಿಳಿಸಿದ್ದಾರೆ.
ಚಿಕ್ಕಮಗಳೂರಿನ ದತ್ತಪೀಠದಲ್ಲಿ ಮಾತನಾಡಿದ ಸಿ.ಟಿ. ರವಿ, ಹಾಗಂತ ನಾವಿಲ್ಲಿ ಸುಮ್ಮನೆ ಕೂರೋ ಹಾಗಿಲ್ಲ. ಕಷ್ಟಪಡಲೇಬೇಕು. ನಮಗೆ ಈಗಿರುವ ವಾತಾವರಣದಲ್ಲಿ ಅದಕ್ಕೆ ಬರುವ ವಿಶ್ವಾಸವಿದೆ. ಸರ್ಕಾರದ ಅವಧಿ ಮುಗಿದ ಮೇಲೆ ಚುನಾವಣೆಗೆ ಹೋಗುತ್ತೇವೆ. ಮಧ್ಯಂತರದಲ್ಲಿ ಚುನಾವಣೆ ನಡೆಸಬೇಕಾದ ಅವಶ್ಯಕತೆ ನಮಗಿಲ್ಲ ಎಂದರು.
ಪ್ರಿಯಾಂಕ್ ಖರ್ಗೆ
ಕಲಬುರಗಿ: ಗುಜರಾತ್ ಚುನಾವಣೆ ನಮ್ಮ ನೀರಿಕ್ಷೆಗಿಂತ ಕಡಿಮೆ ಸಾಧನೆಯಾಗಿದೆ ಎಂದು ಕಾಂಗ್ರೆಸ್ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನಮ್ಮ ನೀರಿಕ್ಷೆ 80 ರಿಂದ 90 ಇತ್ತು. ಗುಜರಾತ್ ನಲ್ಲಿ 3 ಎಮ್ ಬಹಳ ಚೆನ್ನಾಗಿ ಕೆಲಸ ಮಾಡುತ್ತಿದೆ. ಮನಿ, ಮಸಲ್, ಮೋದಿ ಕಳೆದ 27 ವರ್ಷಗಳಿಂದ ಕೆಲಸ ಮಾಡುತ್ತಿದೆ. ನಮ್ಮ ನಾಯಕರನ್ನು ಹೆದರಿಸುವ ಬೆದರಿಸುವ ತಂತ್ರ ಮಾಡುತ್ತಿದ್ದಾರೆ. ಗುಜರಾತ್‌ನಲ್ಲಿ ಏಳು ಬಾರಿ ಮುಖ್ಯಮಂತ್ರಿ ಬದಲಾವಣೆ ಮಾಡಿದ್ದಾರೆ. 27 ವರ್ಷ ಆದರೂ ಸಾಧನೆ ಮೂಲಕ ಆಡಳಿತಕ್ಕೆ ಬರುತ್ತಿಲ್ಲ. ಬಿಜೆಪಿ ಬಹುತೇಕ ಕಡೆ ಖರೀದಿ ಮಾಡಿ ಅಧಿಕಾರಕ್ಕೆ ಬರುತ್ತಿದೆ ಎಂದಿದ್ದಾರೆ.
ಸಿ.ಸಿ. ಪಾಟೀಲ್
ಬೆಂಗಳೂರು: ನಿರೀಕ್ಷೆಯಂತೆಯೇ ಗುಜರಾತಿನ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿಯು ಪ್ರಚಂಡ ಬಹುಮತ ಪಡೆದು ದಾಖಲೆ ನಿರ್ಮಿಸಿದೆ. ಕಾಂಗ್ರೆಸ್ ಪಕ್ಷವು ದಾಖಲೆ ಪ್ರಮಾಣದಲ್ಲೇ ಇಳಿಮುಖ ಕಂಡಿದೆ ಎಂದು ಸಚಿವ ಸಿ.ಸಿ. ಪಾಟೀಲ್ ಹೇಳಿದ್ದಾರೆ.
ಭಾರತ್ ಜೋಡೋ, ಭಾರತ್ ನೋಡೋಗಳಂತಹ ಜನರ ಕಣ್ಣು ಕಟ್ಟುವ ಕಾಂಗ್ರೆಸ್ಸಿನ ರಾಜಕೀಯ ನಾಟಕಕ್ಕೆಲ್ಲ ಜನತೆ ಮನ್ನಣೆ ನೀಡುವುದಿಲ್ಲ, ಅಷ್ಟೇ ಅಲ್ಲ ಸನ್ಮಾನ್ಯ ಮೋದಿಜಿ ಅವರ ಅಭಿವೃದ್ಧಿಯ ಮಾನದಂಡವೊಂದೇ ಸದಾ ಜನರ ಹೃದಯ ಗೆಲ್ಲಲು ಸಾಧ್ಯವೆಂಬುದನ್ನು ಈ ಫಲಿತಾಂಶವು ದೃಢಪಡಿಸಿದೆ.
ಸಮಗ್ರ ಗುಜರಾತಿನಲ್ಲಿ ಹಿಂದೆಂದೂ ಇಲ್ಲದಷ್ಟು ಅಭಿವೃದ್ಧಿಯ ವೇಗವನ್ನು ಬಿಜೆಪಿಯ ಆಡಳಿತದಲ್ಲಿ ಜನತೆ ಪ್ರತ್ಯಕ್ಷವಾಗಿ ನೋಡಿದ್ದರಿಂದ, ಈ ಸಾಧನೆಗೆ ಅಲ್ಲಿಯ ಜನರು ಉತ್ತಮ ವಿವೇಚನೆಯಿಂದ ಕೃತಜ್ಞತಾ ಪೂರ್ವಕವಾಗಿ ಅಭೂತಪೂರ್ವ ಜನಬೆಂಬಲದ ಉಡುಗೊರೆ ನೀಡಿದ್ದಾರೆ. ಈ ಬಗ್ಗೆ ನಾನು ಅಲ್ಲಿಯ ಎಲ್ಲಾ ಮತದಾರರನ್ನು ಅಭಿನಂದಿಸುತ್ತೇನೆ. ಈ ಗೆಲುವಿಗೆ ಶ್ರಮಿಸಿದ ನಮ್ಮ ಪಕ್ಷದ ಎಲ್ಲಾ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೂ ನಾನು ವಂದನೆಗಳನ್ನು ತಿಳಿಸುತ್ತೇನೆ.
ತ್ರಿಮೂರ್ತಿಗಳಾದ ಸನ್ಮಾನ್ಯ ಮೋದಿ, ಜೆ.ಪಿ. ನಡ್ಡಾ, ಅಮಿತ್ ಶಾಅವರ ಸಬ್ ಕಾ ಸಾಥ್ – ಸಬ್ ಕಾ ವಿಕಾಸ್ ಎಂಬ ವಿಶಾಲ ಮನೋಭಾವದ ಆಡಳಿತ ಸೂತ್ರ ಇಡೀ ದೇಶದಲ್ಲೇ ಈಗ ಪ್ರಗತಿಯ ಹೊಸ ಸಂಚಲನ ಮೂಡಿಸುತ್ತಿದೆ. ಕರ್ನಾಟಕದಲ್ಲಿಯೂ ಇದೇ ರೀತಿ ಗುಜರಾತಿನಂತೆ ಸನ್ಮಾನ್ಯ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ನಮ್ಮ ಸರ್ಕಾರವು ಮುಂದಿನ ಚುನಾವಣೆಯಲ್ಲಿ ಅಭೂತಪೂರ್ವ ವಿಜಯ ಸಾಧಿಸುವ ಲಕ್ಷಣ ಈ ಫಲಿತಾಂಶದಿಂದ ಮತ್ತಷ್ಟು ಗಟ್ಟಿಗೊಂಡಿದೆ. ಇದು ಬಿಜೆಪಿಯ ಸಕಾರಾತ್ಮಕ ಮತ್ತು ಪ್ರಗತಿಯ ಧ್ಯೇಯೋದ್ದೇಶಗಳಿಗೆ ಮತ್ತಷ್ಟು ಪ್ರೇರಣೆ ನೀಡಲಿದೆ ಎಂದು ನಾನು ಭಾವಿಸುತ್ತೇನೆ. ಕೇವಲ ಹಳಸಲು ಘೋಷಣೆ ಮಾಡದೇ, ಜನಪರ ಕಾಳಜಿಗೆ ನಿಜವಾಗಿ ತುಡಿಯುವ ಮತ್ತು ದುಡಿಯುವ ಸರ್ಕಾರ ಜನರ ಮನಸ್ಸನ್ನು ಗೆಲ್ಲಬಹುದು ಎಂಬುದಕ್ಕೆ ಗುಜರಾತಿನ ಈ ಫಲಿತಾಂಶವೇ ಸಾಕ್ಷಿಯಾಗಿದೆ ಎಂದಿದ್ದಾರೆ.
ಆರ್. ಅಶೋಕ್
ಬೆಂಗಳೂರು: ಇದು ಕರ್ನಾಟಕದ ಪಾಲಿಗೆ ಮಹತ್ವದ ಚುನಾವಣೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಗುಜರಾತ್‌ನಲ್ಲಿ ಜನರು ಬಿಜೆಪಿಗೆ ಬೆಂಬಲ ಕೊಟ್ಟಿದ್ದಾರೆ. ಡಬಲ್ ಇಂಜಿನ್ ಸರ್ಕಾರಕ್ಕೆ ಜನರು ಬೆಂಬಲ ಕೊಟ್ಟಿದ್ದಾರೆ. ಕರ್ನಾಟಕದ ಕಾರ್ಯಕರ್ತರಿಗೂ ಇದು ಬೂಸ್ಟ್ ಆಗುತ್ತೆ. ಕಾಂಗ್ರೆಸ್ ನ ಜೋಡೋ ಯಾತ್ರೆ ಪ್ರತಿಫಲ ಅವರು ಗಡ್ಡ ಬಿಟ್ಟಿರೋದು ಮಾತ್ರ. ಅವರ ಜೋಡೋ ಯಾತ್ರೆ ಚೋಡೋ ಆಗಿಬಿಟ್ಟಿದೆ.
ಆ ಜಾಗದಲ್ಲಿ ಈಗ ಆಮ್ ಆದ್ಮಿ ಬರುತ್ತಿದೆ. ಕಾಂಗ್ರೆಸ್ ಅನ್ನು ಮುಗಿಸೋದು ಎಂದರೆ ಆಪ್. ಐದು ತಿಂಗಳು ಯಾಕೆ ಕಾಯುತ್ತೀರ? ಈಗಲೇ ಗಂಟುಮೂಟೆ ಕಟ್ಟಿಕೊಳ್ಳಿ. ಕಾಂಗ್ರೆಸ್‌ಗೆ ದೇಶದಲ್ಲಿ ಉಳಿಗಾಲವಿಲ್ಲ. ಕರ್ನಾಟಕದಲ್ಲಿ ಗಂಟುಮೂಟೆ ಕಟ್ಟಲು ಕಾಂಗ್ರೆಸ್ ಸಜ್ಜಾಗಿ. ಹಲವರು ಬಿಜೆಪಿಗೆ ಸೇರಲು ಸಜ್ಜಾಗಿದ್ದಾರೆ. ಜಟ್ಟಿ ಬಿದ್ರೂ ಮೀಸೆ ಮಣ್ಣಾಗಲಿಲ್ಲ ಅನ್ನೋ ಸ್ಥಿತಿ ಕಾಂಗ್ರೆಸ್‌ನದ್ದು ಎಂದಿದ್ದಾರೆ.
ಸತೀಶ್ ಜಾರಕಿಹೊಳಿ
ಬೆಳಗಾವಿ: ಗುಜರಾತ್‌ನಲ್ಲಿ ಇಷ್ಟು ಅಂತರದಿಂದ ಸೋಲುತ್ತೇವೆ ಎಂದು ನಿರೀಕ್ಷೆ ಮಾಡಿರಲಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಆಮ್ ಆದ್ಮಿ ಪಕ್ಷ 7 ಸ್ಥಾನವನ್ನು ಪಡೆದರು ಸಹ ನಮ್ಮ ಮತಗಳನ್ನು ಪಡೆದಿದ್ದಾರೆ. ಜೆಡಿಎಸ್‌ನಿಂದ ನಮಗೆ ಏನೂ ತೊಂದರೆ ಇಲ್ಲ. ಅವರು ಗೆಲ್ಲುವ ಕಡೆ ಅವರು ಗೆಲ್ಲುತ್ತಾರೆ. ನಾವು ಗೆಲ್ಲುವ ಕಡೆ ನಾವೇ ಗೆಲ್ಲುತ್ತೇವೆ. ಸಂಘರ್ಷ ಏರ್ಪಡುವಂತಹ ಸಂಭವ ಕಡಿಮೆ. ನಾವು ಸೆಕ್ಯುಲರ್ ವೋಟ್ ಗಳು ಬದಲಾವಣೆಯಾಗಿದೆ. ಈಗ ಪಕ್ಕದ ರಾಜ್ಯಗಳು ಕೇರಳ, ತಮಿಳುನಾಡು , ಆಂಧ್ರ ಈ ತರಹ ಇದೆ. ಯಾವುದೇ ಹೊಸ ಪಕ್ಷ ಬಂದರೆ ಸಾಮಾನ್ಯವಾಗಿ ಸೆಕ್ಯುಲರ್ ವೋಟ್ ಗಳನ್ನ ಸೆಳೆಯುತ್ತಾರೆ. ಮುಸ್ಲಿಂ ಆಗಬಹುದು, ಯಾರೇ ಆಗಬಹುದು ಎಲ್ಲರಿಗೂ ಒಂದೆ ಸ್ಥಾನ ಮಾನವನ್ನು ಕೊಡುತ್ತದೆ. ಗೆಲ್ಲುವಂತಹವರಿಗೆ ಮೊದಲು ನಾವು ಟಿಕೆಟ್ ಕೊಡಬೇಕು.
ಬಿಜೆಪಿ ಅವರು ಇದೇ ತಂತ್ರಗಾರಿಕೆ ಬಳಸಿಯೇ ಗೆದ್ದಿದ್ದರು. ಪಕ್ಷ ಕರ್ನಾಟಕದಲ್ಲಿ ಅಧಿಕಾರ ಬರಬೇಕಾದರೆ ಈ ತರಹದು ಎಲ್ಲ ಮಾಡಬೇಕು. ಮೋದಿ ಅವರು ಆಂಬುಲೆನ್ಸ್ ಬಂದಾಗ ದಾರಿ ಬಿಡೋದು, ಅಂತಹ ಸ್ಟ್ಯಾಟರ್ಜಿ ಮಾಡುತ್ತಾರೆ. ನಮ್ಮ ಕಾಂಗ್ರೆಸ್ ನವರು ಈ ತರಹ ಮಾಡಲ್ಲ ಎಂದರು.
ಗುಜರಾತ್‌ನಲ್ಲಿ ಇಷ್ಟು ಕಡಿಮೆ ಸ್ಥಾನ ಬರಬಹುದು ಎಂದು ಅಂದುಕೊಂಡಿರಲಿಲ್ಲ. ಆಮ್ ಆದ್ಮಿ ಪಾರ್ಟಿ ಗುಜರಾತ್‌ನ ಕಾಂಗ್ರೆಸ್ ಓಟ್ ಬ್ಯಾಂಕ್ ಅನ್ನು ಪಡೆಯುವಲ್ಲಿ ಯಶಸ್ವಿ ಆದರು. ಆಮ್ ಆದ್ಮಿ ಸೆಕ್ಯುಲರ್ ಓಟುಗಳನ್ನು ಪಡೆಯುತ್ತಾರೆ. ಕರ್ನಾಟಕದಲ್ಲಿ ಇದರ ಪರಿಣಾಮ ಆಗುವುದಕ್ಕೆ ಸಾಧ್ಯವಿಲ್ಲ ಎಂದರು.
ಮಧು ಬಂಗಾರಪ್ಪ
ಶಿವಮೊಗ್ಗ: ಮಲೆನಾಡಿನಲ್ಲಿ ಶರಾವತಿ ಸಂತ್ರಸ್ತರ ಪರ ಕಾಂಗ್ರೆಸ್ ಜನ ಆಕ್ರೋಶ ಹೋರಾಟ ನಡೆಯುತ್ತಿದ್ದು, ಗಾಢ ನಿದ್ರೆಯಲ್ಲಿ ಇರುವ ಬಿಜೆಪಿ ಸರ್ಕಾರವನ್ನು ಎಚ್ಚರಿಸುತ್ತೇವೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.
ಈ ಸರ್ಕಾರವನ್ನು ಎಚ್ಚರಿಸಲು ಡಿಕೆಶಿ ಮತ್ತು ಸಿದ್ದರಾಮಯ್ಯ ನೇತೃತ್ವದಲ್ಲಿ ಈಗಾಗಲೇ ಶಿವಮೊಗ್ಗ ದಲ್ಲಿ ಹೋರಾಟ ನಡೆಯುತ್ತಿದೆ. ಈಗ ಶರಾವತಿ ಸಂತ್ರಸ್ತರ ಸಮಸ್ಯೆ ಕುರಿತು ಸರ್ಕಾರಕ್ಕೆ ನೆನಪಾಗಿದೆ. ಬೆಳಗಾವಿ ಅಧಿವೇಶನದಲ್ಲಿ ಶರಾವತಿ ಸಂತ್ರಸ್ತರ ಪರಿಹಾರ ಕುರಿತು ಕಾಂಗ್ರೆಸ್ ನಾಯಕರಿಂದ ಚರ್ಚೆ ನಡೆಯುತ್ತದೆ.
ಗುಜರಾತ್ ಚುನಾವಣೆ ಫಲಿತಾಂಶ ರಾಜ್ಯದಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ. ಗುಜರಾತ್ ಮತದಾರರು ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ. ಆದ್ರೆ ಕರ್ನಾಟಕ ದಲ್ಲಿ ವಿಭಿನ್ನ ಪರಿಸ್ಥಿತಿ ಇದೆ. ರಾಜ್ಯದಲ್ಲಿ ಬಿಜೆಪಿ ಆಡಳಿತ ವಿರೋಧಿ ಅಲೆ ಇದೆ. ಕಾಂಗ್ರೆಸ್ ಪಕ್ಷದ ಪರ ವಾತಾವರಣ ಇದೆ. ರಾಜ್ಯದ ಮತದಾರರು ಬುದ್ಧಿವಂತರು ಎಂದಿದ್ದಾರೆ.
ಇದನ್ನೂ ಓದಿ | Gujarat Election Results | ಕರ್ನಾಟಕದಲ್ಲೂ ಪ್ರಭಾವ ಎಂದ ಬಿಜೆಪಿ; ದಿಕ್ಸೂಚಿ ಅಲ್ಲ ಎಂದ ಕಾಂಗ್ರೆಸ್