ನವ ದೆಹಲಿ: ಉಪರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಪಶ್ಚಿಮ ಬಂಗಾಲದ ರಾಜ್ಯಪಾಲ ಜಗದೀಪ್ ಧನಕರ್ ಅವರನ್ನು ಆಯ್ಕೆ ಮಾಡಲಾಗಿದೆ. ಶನಿವಾರ ನಡೆದ ಪಕ್ಷದ ಸಂಸದೀಯ ಸಮಿತಿ ಸಭೆಯಲ್ಲಿ ಈ ಆಯ್ಕೆ ನಡೆದಿದೆ.
ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಕೇಂದ್ರ ಸಚಿವರಾದ ರಾಜನಾಥ ಸಿಂಗ್, ನಿತಿನ್ ಗಡ್ಕರಿ ಮತ್ತು ಪಕ್ಷದ ಹಲವು ನಾಯಕರು ಭಾಗವಹಿಸಿದ್ದರು. ಈ ವಿಷಯವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.
ಸಭೆಯಲ್ಲಿ ಚರ್ಚೆ ನಡೆಸಿ, ರೈತನ ಮಗನಾಗಿರುವ ಧನಕರ್ ಅವರನ್ನು ಅಭ್ಯರ್ಥಿಯಾಗಿಸಲು ಪಕ್ಷವು ತೀರ್ಮಾನಿಸಿದೆ ಎಂದು ನಡ್ಡಾ ಹೇಳಿದ್ದಾರೆ. ಈಗಾಗಲೇ ದೆಹಲಿಗೆ ಆಗಮಿಸಿದ್ದ ಧನಕರ್ ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಉಪರಾಷ್ಟ್ರಪತಿ ಸ್ಥಾನಕ್ಕೆ ಆಗಸ್ಟ್ 6 ಕ್ಕೆ ಮತದಾನ ನಡೆಯಲಿದೆ.
ಈ ಚುನಾವಣೆಯಲ್ಲಿ ರಾಜ್ಯಸಭೆಯ 2೬3 ಚುನಾಯಿತ ಸದಸ್ಯರು, 12 ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರು, 543 ಲೋಕಸಭೆಯ ಚುನಾಯಿತ ಸದಸ್ಯರು ಮತದಾರರಾಗಿರುತ್ತಾರೆ. ಜುಲೈ ೧೯ ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.
ಆಗಸ್ಟ್ 10ಕ್ಕೆ ಹಾಲಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ಅಧಿಕಾರವಧಿ ಮುಕ್ತಾಯವಾಗಲಿದೆ. ಉಪರಾಷ್ಟ್ರಪತಿಗಳು ರಾಜ್ಯಸಭೆಯ ಸಭಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಲಿದ್ದಾರೆ.
ಜುಲೈ 18ಕ್ಕೆ ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಈಗಾಗಲೇ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಹಾಗೂ ಪ್ರತಿಪಕ್ಷಗಳ ಅಭ್ಯರ್ಥಿ ಯಶ್ವಂತ್ ಸಿನ್ಹಾ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.