Site icon Vistara News

Vijay Sankalpa Yatre: ಮೋದಿ ಸಾವನ್ನು ಬಯಸುವ ಕಾಂಗ್ರೆಸ್‌ ಪಕ್ಷವನ್ನು ತಿರಸ್ಕರಿಸಿ: ಬಸವ ಕಲ್ಯಾಣದಲ್ಲಿ ಅಮಿತ್‌ ಶಾ ಕರೆ

vijay-sankalpa-yatre-amit shah speech

#image_title

ಬೀದರ್‌: ದೇಶ ವಿದೇಶಗಳಲ್ಲಿ ಕೋಟ್ಯಂತರ ಜನರ ಮನಗೆದ್ದಿರುವ ಪ್ರಧಾನಿ ನರೇಂದ್ರ ಮೋದಿಯವರ ಸಾವನ್ನು ಬಯಸುವ ಕಾಂಗ್ರೆಸ್‌ ಪಕ್ಷವನ್ನು ತಿರಸ್ಕರಿಸಿ, ಅಂಥವರಿಗೆ ರಾಜಕೀಯದಲ್ಲಿ ಯಾವುದೇ ಅಸ್ತಿತ್ವ ಇರಬಾರದು ಎಂದು ಕೇಂದ್ರ ಗೃಹಸಚಿವ ಅಮಿತ್‌ ಶಾ ಕರೆ ನೀಡಿದ್ದಾರೆ. ಬಸವ ಕಲ್ಯಾಣದಿಂದ ವಿಜಯ ಸಂಕಲ್ಪ ಯಾತ್ರೆಯ (Vijay Sankalpa Yatre) ರಥಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕರ್ನಾಟಕದಿಂದ ಸಾವಿರಾರು ಕಿಲೋಮೀಟರ್‌ ದೂರದ ಈಶಾನ್ಯ ರಾಜ್ಯಗಳಲ್ಲಿ ಕಾಂಗ್ರೆಸ್‌ ನಾಶವಾಗಿದೆ. ಹೇಗೆ ಸೋತಿದ್ದಾರೆ ಎಂದರೆ ದುರ್ಬೀನ್‌ ಹಾಕಿ ಹುಡುಕುವಂತೆ ಆಗಿದೆ. ಕರ್ನಾಟಕದಲ್ಲೂ ಕಾಂಗ್ರೆಸ್‌ ಸರ್ಕಾರ ಆಗುವುದಿಲ್ಲ.

ಈಶಾನ್ಯದಲ್ಲಿ ಬಿಜೆಪಿ ಪ್ರವೇಶವೇ ಆಗುವುದಿಲ್ಲ ಎನ್ನುತ್ತಿದ್ದರು, ಈಗ ಎರಡನೇ ಬಾರಿ ಬಿಜೆಪಿ ಹಾಗೂ ಎನ್‌ಡಿಎ ಸರ್ಕಾರ ರಚನೆ ಆಗಿದೆ. ಮೋದಿಯವರ ಜಾದೂ ಈಶಾನ್ಯವಿರಲಿ. ಗುಜರಾತ್‌ ಇರಲಿ, ಉತ್ತರ ಪ್ರದೇಶವಿರಲಿ, ಕರ್ನಾಟಕವಿರಲಿ, ಎಲ್ಲ ಕಡೆಯೂ ಇದೆ. ಮೋದಿಯವರ ನೇತೃತ್ವದಲ್ಲಿ ಬಿಜೆಪಿಯನ್ನು ಗೆಲ್ಲಿಸುತ್ತೀರೊ, ಇಲ್ಲವೊ? ಎಂದರು.

ವಿಶ್ವಕ್ಕೆ ಮೊದಲ ಸಂಸತ್‌ ಪರಿಕಲ್ಪನೆ ಬಸವ ಕಲ್ಯಾಣದಲ್ಲಿ ಸಿಕ್ಕಿತು. ಪ್ರಧಾನಿ ಮೋದಿಯವರು ವಿಶ್ವಸಂಸ್ಥೆಯಲ್ಲಿ ಇದನ್ನು ಹೇಳಿದ್ದರು. ಬಸವಕಲ್ಯಾಣ ಅಭಿವೃದ್ಧಿಗೆ ಬಿಜೆಪಿ ಸಾಕಷ್ಟು ಕೊಡುಗೆ ನೀಡಿದೆ. ವಿಜಯ ಸಂಕಲ್ಪ ಯಾತ್ರೆಯು ಬಿಜೆಪಿ ವಿಜಯಕ್ಕಾಗಿ ಅಲ್ಲ, ನಮ್ಮ ವ್ಯಕ್ತಿಯನ್ನು ಸಿಎಂ ಮಾಡುವುದಕ್ಕಾಗಿ ಅಲ್ಲ. ಇದು ಕರ್ನಾಟಕದ ಬಡವರ ಕಲ್ಯಾಣಕ್ಕಾಗಿ ವಿಜಯದ ಸಂಕಲ್ಪ ಯಾತ್ರೆ. ಬಾಕಿ ಉಳಿದಿರುವ ವಿಕಾಸದ ಯೋಜನೆಗಳನ್ನು ಪೂರ್ಣಗೊಳಿಸಲು ಈ ಯಾತ್ರೆ ನಡೆಸುತ್ತಿದ್ದೇವೆ.

ಇದನ್ನೂ ಓದಿ: Vijay Sankalpa Yatre: ವೀರಶೈವ ಲಿಂಗಾಯತರು ಕಾಂಗ್ರೆಸ್‌ ಅಪಪ್ರಚಾರಕ್ಕೆ ಬಲಿಯಾಗಬೇಡಿ: ಬಿ.ಎಸ್‌. ಯಡಿಯೂರಪ್ಪ ಮನವಿ

ಮೂರ್ನಾಲ್ಕು ದಿನದಿಂದ ಕಾಂಗ್ರೆಸ್‌ನವರ ಹೇಳಿಕೆ ನೀಡುತ್ತಿದ್ದೇನೆ. ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ಸ್ತರ ದನದಿಂದ ದಿನಕ್ಕೆ ಕುಸಿಯುತ್ತಿದೆ. ಮೋದಿ ಸಾಯಬೇಕು ಎಂದು ಹೇಳುತ್ತಾರೆ ಕಾಂಗ್ರೆಸ್‌ನವರು. ಕಾಂಗ್ರೆಸ್‌ನವರು ಹೀಗೆ ಹೇಳುವುದರಿಂದ ದೇವರು ನಿಮ್ಮ ಮಾತು ಕೇಳುವುದಿಲ್ಲ. ಏಕೆಂದರೆ 130 ಕೋಟಿ ಜನರು ಮೋದಿಯವರ ದೀರ್ಘಾಯುಶ್ಯಕ್ಕೆ ಪ್ರಾರ್ಥಿಸುತ್ತಿದ್ದಾರೆ.

ನೀವು ಎಷ್ಟು ಕೆಸರನ್ನು ಮೋದಿಯವರ ಮೇಲೆ ಎರೆಚುತ್ತೀರೊ, ಕಮಲ ಅಷ್ಟೂ ಅರಳುತ್ತದೆ. ಮೋದಿಯವರನ್ನು ಎಷ್ಟು ಟೀಕಿಸಿದರೂ ನೀವು ಸಫಲರಾಗುವುದಿಲ್ಲ. ಮೋದಿಯವರ ಬಗ್ಗೆ ಕೆಟ್ಟದಾಗಿ ಮಾತನಾಡುವ ಕಾಂಗ್ರೆಸ್‌ಗೆ ಓಟ್‌ ಹಾಕಬೇಕ? ಈ ಸಂದೇಶವನ್ನು ಕಲ್ಯಾಣ ಕರ್ನಾಟಕದ ಮನೆಮನೆಗೂ ತಲುಪಿಸಿ. ಪ್ರಧಾನಿ ಸಾಯಬೇಕು ಎಂದು ಆಸೆ ಪಡುವವರಿಗೆ ರಾಜನೀತಿಯಲ್ಲಿ ಜಾಗ ಇರಬಾರದು ಎಂದರು.

ನಿಜಲಿಂಗಪ್ಪ ಹಾಗೂ ವೀರೇಂದ್ರ ಪಾಟೀಲರನ್ನು ಅವಮಾನಿಸಿದ ವಿಚಾರವನ್ನು ಅಮಿತ್‌ ಶಾ ಸಹ ಪ್ರಸ್ತಾಪಿಸಿದರು. ಕಾಂಗ್ರೆಸ್‌ನಿಂದ ಕರ್ನಾಟಕಕ್ಕೆ ಗೌರವ ಸಿಗುವುದಿಲ್ಲ. ಕರ್ನಾಟಕಕ್ಕೆ ಸನ್ಮಾನವು ಬಿಜೆಪಿಯಿಂದ ಮಾತ್ರ ಸಿಗುತ್ತದೆ. ಯಡಿಯೂರಪ್ಪ ಅವರ ಜನ್ಮದಿನದಂದು ಪ್ರಧಾನಿ ಮೋದಿ ಆಗಮಿಸಿ ಗೌರವಿಸಿದರು. ದೊಡ್ಡ ನಾಯಕರಿಗೆ ಯಾವ ರೀತಿ ಗೌರವ ನೀಡಲಾಗುತ್ತದೆ ಎನ್ನುವುದನ್ನು ಬಿಜೆಪಿ ನೋಡಿದರೆ ಗೊತ್ತಾಗುತ್ತದೆ ಎಂದರು.

Exit mobile version