ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಅವರು ಬುಧವಾರ (ನ. 15) ಅಧಿಕಾರವನ್ನು ಸ್ವೀಕಾರ ಮಾಡುತ್ತಿದ್ದಂತೆ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಇದೇ ಶುಕ್ರವಾರ (ನ.17) ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ಕರೆದಿದ್ದಾರೆ. ಈ ಮೂಲಕ ಪ್ರತಿಪಕ್ಷ ನಾಯಕನ (Opposition leader) ಆಯ್ಕೆ ನಡೆಯಲು ಮುಹೂರ್ತ ಫಿಕ್ಸ್ ಆದಂತೆ ಆಗಿದೆ.
ಖಾಸಗಿ ಹೋಟೆಲ್‌ನಲ್ಲಿ ಸಂಜೆ 6 ಗಂಟೆಗೆ ಶಾಸಕಾಂಗ ಪಕ್ಷದ ಸಭೆಯನ್ನು ನಿಗದಿ ಮಾಡಲಾಗಿದೆ. ಈ ಸಂಬಂಧ ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಪತ್ರ ಬರೆದಿರುವ ಬಿ.ವೈ. ವಿಜಯೇಂದ್ರ ಕಡ್ಡಾಯವಾಗಿ ಸಭೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: HD Kumarswamy : ಕಾಂಗ್ರೆಸ್ ಎಂದರೆ ಕಳ್ಳಕಳ್ಳವಾಗಿ ಪೋಸ್ಟರ್ ಅಂಟಿಸುವ ಶಿಖಂಡಿ ಪಕ್ಷ; ಜೆಡಿಎಸ್ ತಿರುಗೇಟು
ಆಗಲಿದೆ ಪ್ರತಿಪಕ್ಷ ನಾಯಕನ ತೀರ್ಮಾನ
ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಸರಿಸುಮಾರು ಆರು ತಿಂಗಳಾಗುತ್ತಾ ಬಂದಿದೆ. ಈ ಮಧ್ಯೆ ಒಂದು ಅಧಿವೇಶನವೂ ನಡೆದು ಹೋಯಿತು. ಆದರೆ, ಬಿಜೆಪಿಯಲ್ಲಿ ಪ್ರತಿಪಕ್ಷ ನಾಯಕನ ಆಯ್ಕೆಯನ್ನು ಮಾಡಲು ಆಗಿರಲಿಲ್ಲ. ಆದರೆ, ಈಗ ಅದಕ್ಕೆ ಮುಹೂರ್ತ ಫಿಕ್ಸ್ ಆದಂತೆ ಆಗಿದೆ.
ಏನಿದೆ ಲೆಕ್ಕಾಚಾರ?
ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಲಿಂಗಾಯತರನ್ನು ನೇಮಕ ಮಾಡಿರುವುದರಿಂದ ವಿರೋಧ ಪಕ್ಷದ ನಾಯಕನ ಹುದ್ದೆ ಒಂದೋ ಒಕ್ಕಲಿಗರಿಗೆ ಒಲಿಯಲಿದೆ. ಇಲ್ಲವೇ ಇತರ ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರಿದ ಶಾಸಕರಿಗೆ ಸಿಗಲಿದೆ ಎಂಬ ಲೆಕ್ಕಾಚಾರವಿದೆ.
ವಿರೋಧ ಪಕ್ಷದ ನಾಯಕನಾಗುವ ದೊಡ್ಡ ಅವಕಾಶವನ್ನು ಬಸವರಾಜ ಬೊಮ್ಮಾಯಿ (Basavaraja Bommai) ಮತ್ತು ಆರಗ ಜ್ಞಾನೇಂದ್ರ ಅವರು ಕಳೆದುಕೊಂಡಿದ್ದಾರೆ. ಬಸವರಾಜ ಬೊಮ್ಮಾಯಿ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಈ ಅವಕಾಶ ಅವರಿಗೆ ಕೊಡುವುದು ಕಷ್ಟ. ಆರಗ ಜ್ಞಾನೇಂದ್ರ ಅವರು ಒಕ್ಕಲಿಗರಾದರೂ ಶಿವಮೊಗ್ಗ ಜಿಲ್ಲೆಯವರು. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಮತ್ತು ವಿರೋಧ ಪಕ್ಷದ ನಾಯಕ ಎರಡೂ ಸ್ಥಾನಗಳನ್ನು ಒಂದೇ ಜಿಲ್ಲೆಗೆ ಕೊಡುವುದು ಸಾಧ್ಯವೇ ಇಲ್ಲ. ಹೀಗಾಗಿ ಅವರು ಅವಕಾಶವನ್ನು ತಪ್ಪಿಸಿಕೊಳ್ಳಲಿದ್ದಾರೆ ಎಂದೇ ಹೇಳಲಾಗುತ್ತಿದೆ.
ಒಕ್ಕಲಿಗರಾದರೆ ಎರಡು ಆಯ್ಕೆ
ಒಂದು ವೇಳೆ ಈ ಬಾರಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಒಕ್ಕಲಿಗರಿಗೆ ನೀಡುವುದೇ ಹೌದಾದರೆ ಪ್ರಮುಖವಾಗಿ ಸ್ಪರ್ಧೆಯಲ್ಲಿ ಮೇಲ್ನೋಟಕ್ಕೆ ಕಾಣುವವರು ಮಾಜಿ ಡಿಸಿಎಂಗಳಾದ ಆರ್. ಅಶೋಕ್ (R Ashok) ಮತ್ತು ಡಾ. ಸಿ.ಎನ್. ಅಶ್ವತ್ಥನಾರಾಯಣ (Dr. CN Ashwathnarayana). ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆರ್. ಅಶೋಕ್ ಅವರನ್ನು ಬೆಂಬಲಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಒಂದು ಹಂತದಲ್ಲಿ ಬಿಜೆಪಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬಿಟ್ಟು ಕೊಡಬಹುದಾ ಎಂಬ ಚರ್ಚೆಯೂ ನಡೆದಿತ್ತು. ಆದರೆ, ಜೆಡಿಎಸ್‌ನ ಕೋರ್ ಕಮಿಟಿ ಅಧ್ಯಕ್ಷರಾಗಿರುವ ಜಿ.ಟಿ. ದೇವೇಗೌಡ ಅವರು ಯಾವ ಕಾರಣಕ್ಕೂ ಇಂಥ ಸಾಧ್ಯತೆಗಳಿಲ್ಲ ಎಂದಿದ್ದಾರೆ.
ಒಂದು ವೇಳೆ ಒಕ್ಕಲಿಗರಿಗೆ ಬೇಡ, ಇತರ ಹಿಂದುಳಿದ ವರ್ಗಗಳ ನಾಯಕರಿಗೆ ಈ ಅವಕಾಶ ನೀಡೋಣ ಎಂಬ ತೀರ್ಮಾನಕ್ಕೆ ಬಂದರೆ ಕಾರ್ಕಳದ ಶಾಸಕ ಸುನಿಲ್ ಕುಮಾರ್ (V Sunil Kumar) ಅವರು ಅವಕಾಶ ಪಡೆದುಕೊಳ್ಳುವ ಸಾಧ್ಯತೆ ಇದೆ.
ನಾನೂ ಆಕಾಂಕ್ಷಿ ಎಂದಿರುವ ಡಾ. ಸಿ.ಎನ್. ಅಶ್ವತ್ಥ ನಾರಾಯಣ
ಈ ನಡುವೆ, ವಿರೋಧಪಕ್ಷದ ನಾಯಕನ ಹುದ್ದೆಗೆ ನಾನೂ ಆಕಾಂಕ್ಷಿ ಎಂದು ಮಾಜಿ ಡಿಸಿಎಂ ಹಾಗೂ ಮಲ್ಲೇಶ್ವರ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಶನಿವಾರ ಹೇಳಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನದ ನೇಮಕ ಆಗಿದೆ. ಸೂಕ್ತವಾದ ವ್ಯಕ್ತಿಯನ್ನು ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡುತ್ತಾರೆ. ವಿಧಾನ ಸಭೆಯಲ್ಲಿರುವ 66 ಜನ ಶಾಸಕರಿದ್ದಾರೆ. ಎಲ್ಲರೂ ವಿರೋಧ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದಾರೆ. ನಾನೂ ಕೂಡ ಆಕಾಂಕ್ಷಿಯಾಗಿದ್ದೇನೆ ಎಂದು ಹೇಳಿಕೆ ನೀಡಿದ್ದರು.
ಇದನ್ನೂ ಓದಿ : HD Kumaraswamy : ಎಚ್.ಡಿ. ಕುಮಾರಸ್ವಾಮಿ ಮಾತು ನಂಬಲು ನಾನು ದಡ್ಡನೇ?: ಡಿ.ಕೆ. ಶಿವಕುಮಾರ್
ʻʻವಿಧಾನಸಭೆಯಲ್ಲಿ ಬಿಜೆಪಿ ಕಾನೂನಾತ್ಮಕವಾಗಿ ವಿರೋಧ ಪಕ್ಷ. ನಮ್ಮಲ್ಲೇ ಬೇಕಾದಷ್ಟು ನಾಯಕರಿದ್ದಾರೆ.
ಜೆಡಿಎಸ್ ಜತೆ ಮೈತ್ರಿ ಆಗಿರಬಹುದು. ಅಂದ ಮಾತ್ರಕ್ಕೆ ಅವರಿಗೆ ವಿರೋಧ ಪಕ್ಷದ ನಾಯಕ ಸ್ಥಾನ ಕೊಡಬೇಕು ಅಂತ ಏನೂ ಇಲ್ಲʼʼ ಎಂದು ಅಶ್ವತ್ಥನಾರಾಯಣ ಹೇಳಿದ್ದರು.