Site icon Vistara News

Vistara news polling booth : ದಾವಣಗೆರೆಯಲ್ಲಿ ಕೈಗೆ ಜೈ, ಸಿದ್ದೇಶ್ವರ್‌ ಸಾಮ್ರಾಜ್ಯಕ್ಕೆ ಹಿನ್ನಡೆ?

Vistara Polling Booth Davanagere11

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ವಿಸ್ತಾರ ನ್ಯೂಸ್‌ (Vistara News) ಗುರುವಾರ (ಮಾ. 21) ನಡೆಸಿದ ಪೋಲಿಂಗ್‌ ಬೂತ್‌ (Vistara news polling booth) ಜನಮತಗಣನೆಯಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆಯಾಗುವ ಅಚ್ಚರಿ ಫಲಿತಾಂಶ ಲಭ್ಯವಾಗಿದೆ. ವಿಸ್ತಾರ ನ್ಯೂಸ್‌ ನಡೆಸಿದ ಈ ಸಮೀಕ್ಷೆಗೆ ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಾವಿರಾರು ಕರೆಗಳು ಬಂದಿವೆ. ಇವರ ಪೈಕಿ ಶೇಕಡಾ 65ರಷ್ಟು ಮಂದಿ ಕಾಂಗ್ರೆಸ್‌ನ್ನು ಬೆಂಬಲಿಸಿದ್ದರೆ ಶೇ. 35ರಷ್ಟು ಮಂದಿ ಮಾತ್ರ ಬಿಜೆಪಿ ಪರ ಒಲವು ತೋರಿದ್ದಾರೆ. ಬಿಜೆಪಿ ಆಗಲೇ ತನ್ನ ಅಭ್ಯರ್ಥಿಯನ್ನು ಘೋಷಿಸಿದ್ದರೆ ಕಾಂಗ್ರೆಸ್‌ನಿಂದ ಮೂವರ ಹೆಸರು ಮುಂಚೂಣಿಯಲ್ಲಿದೆ.

ವಿಸ್ತಾರ ನ್ಯೂಸ್‌ ಪೋಲಿಂಗ್‌ ಬೂತ್‌ಗೆ ಬಂದಿರುವ ಕರೆಗಳ ಸಂಖ್ಯೆ ಸಾವಿರಾರು. ಆದರೆ ನಮಗೆ ಸ್ವೀಕರಿಸಲು ಸಾಧ್ಯವಾಗಿದ್ದು ಕೇವಲ 5362 ಕರೆಗಳನ್ನು ಮಾತ್ರ. ಅಚ್ಚರಿ ಎಂದರೆ ಹಾಲಿ ಸಂಸದರನ್ನು ಹೊಂದಿರುವ ಬಿಜೆಪಿ (BJP Karnataka) ಪರವಾಗಿ ಬಂದಿರುವ ಮತಗಳು ಕೇವಲ 1856. ಇನ್ನೂ ಅಭ್ಯರ್ಥಿಯನ್ನೇ ಅಂತಿಮಗೊಳಿಸದ ಕಾಂಗ್ರೆಸ್ (Congress Karnataka) ಪರ 3496 ಮತಗಳು ಬಂದಿವೆ. ಹೀಗಾಗಿ ಇಲ್ಲಿ ಕಾಂಗ್ರೆಸ್‌ ಸದ್ಯಕ್ಕೆ ಮುನ್ನಡೆಯಲ್ಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಕರೆಗಳ ಶೇಕಡಾವಾರು ವಿವರ

ಸ್ವೀಕರಿಸಿದ ಕರೆಗಳು : 5362
ಬಿಜೆಪಿ : 1856 (ಶೇ.35 )
ಕಾಂಗ್ರೆಸ್ : 3496 (ಶೇ.65)
ಇತರರಿಗೆ 10 ಮತಗಳು ಸಿಕ್ಕಿವೆ.

ಪೋಲಿಂಗ್‌ ಬೂತ್‌ನಲ್ಲಿ ಕಂಡ ಕದನದ ಕತೆಗಳು

ದಾವಣಗೆರೆ ಕ್ಷೇತ್ರದಲ್ಲಿ ಬಿಜೆಪಿ ಗಾಯತ್ರಿ ಸಿದ್ದೇಶ್ವರ್‌ ಅವರಿಗೆ ಟಿಕೆಟ್‌ ನೀಡಿದೆ. ಈ ಕ್ಷೇತ್ರದ ಹಾಲಿ ಸಂಸದ ಸಿದ್ದೇಶ್ವರ್‌ ಅವರ ಬಗ್ಗೆ ಕೆಲವೊಂದು ಭಿನ್ನ ಸ್ವರಗಳು ಕೇಳಿಬಂದ ಹಿನ್ನೆಲೆಯಲ್ಲಿ ಅವರ ಪತ್ನಿಗೆ ಬಿಜೆಪಿ ಟಿಕೆಟ್‌ ನೀಡಿದೆ. ಆದರೆ, ಇದರ ವಿರುದ್ಧವೂ ಅಪಸ್ವರಗಳಿವೆ.

ಕಾಂಗ್ರೆಸ್‌ನಿಂದ ಇಲ್ಲಿ ಮೂರು ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ. ರಾಜ್ಯದಲ್ಲಿ ಸಚಿವರಾಗಿರುವ ಎಸ್‌.ಎಸ್‌. ಮಲ್ಲಿಕಾರ್ಜುನ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್‌, ಸಾಕಷ್ಟು ಓಡಾಟ ನಡೆಸುತ್ತಿರುವ ಜಿಬಿ ವಿನಯಕುಮಾರ್‌ ಮತ್ತು ಎಚ್‌.ಬಿ. ಮಂಜಪ್ಪ.

ಇಲ್ಲಿ ಕಾಂಗ್ರೆಸ್‌ ಪ್ರಭಾ ಮಲ್ಲಿಕಾರ್ಜುನ್‌ ಅವರಿಗೆ ಟಿಕೆಟ್‌ ನೀಡಲು ಮುಂದಾಗಿದೆ. ಎನ್ನಲಾಗಿದೆ. ಅಚ್ಚರಿ ಎಂದರೆ ವಿಸ್ತಾರ ನ್ಯೂಸ್‌ ಪೋಲಿಂಗ್‌ ಬೂತ್‌ನಲ್ಲಿ ಜಿ.ಬಿ. ವಿನಯಕುಮಾರ್‌ ಅವರ ಕಡೆ ಸ್ವಲ್ಪ ಜಾಸ್ತಿ ಒಲವು ಕಂಡುಬಂದಿದೆ. ಪ್ರಭಾ ಮಲ್ಲಿಕಾರ್ಜುನ್‌ ಮತ್ತು ವಿನಯ ಕುಮಾರ್‌ ಇಬ್ಬರೂ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದವರೇ. ಪ್ರಭಾ ಮಲ್ಲಿಕಾರ್ಜುನ್‌ ಅವರು ಶಾಮನೂರು ಕುಟುಂಬದ ಸಂಸ್ಥೆಗಳನ್ನು ನಿರ್ವಹಿಸುತ್ತಿದ್ದರೆ ಜಿ.ಬಿ ವಿನಯ ಕುಮಾರ್‌ ಅವರು ಇನ್‌ಸೈಡ್‌ ಎಂಬ ಸಂಸ್ಥೆಯ ಮೂಲಕ ಐಎಎಸ್‌ ತರಬೇತಿ ನೀಡುತ್ತಿದ್ದಾರೆ. ಗಾಯತ್ರಿ ಸಿದ್ದೇಶ್ವರ್‌ ಕೂಡಾ ಶಿಕ್ಷಣ ಸಂಸ್ಥೆಗಳ ನಿರ್ವಹಣೆಯಲ್ಲಿ ಸಿದ್ಧಹಸ್ತರು

ಏನಿದು ಪೋಲಿಂಗ್‌ ಬೂತ್‌?

ಬೆಂಗಳೂರಿನಲ್ಲಿರುವ ವಿಸ್ತಾರ ನ್ಯೂಸ್‌ ಮುಖ್ಯ ಕಚೇರಿಯಲ್ಲಿ ತೆರೆಯಲಾಗಿರುವ ಪೋಲಿಂಗ್‌ ಬೂತ್‌ಗೆ ಸಾರ್ವಜನಿಕರು ನಿಗದಿತ ಸಮಯದಲ್ಲಿ ಪೋನ್‌ ಮಾಡುವ ಮೂಲಕ ತಮ್ಮ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಯಾರಾಗಬೇಕು, ಯಾವ ಪಕ್ಷ ಈ ಬಾರಿ ಗೆಲ್ಲಬೇಕು ಎಂದು ತಿಳಿಸಬಹುದು.

ಇದನ್ನೂ ಓದಿ: Vistara news polling booth: ಕೋಲಾರದಲ್ಲಿ ಮೈತ್ರಿಗೆ ಮಹಾ ಬಲ; ಕಾಂಗ್ರೆಸ್‌ ಆಗಲಿದೆಯೇ ಸಬಲ?

ಪೋಲಿಂಗ್‌ ಬೂತ್‌ನಲ್ಲಿ ಮಾಹಿತಿ ಸಂಗ್ರಹ ಹೇಗೆ?

ವಿಸ್ತಾರ ನ್ಯೂಸ್‌ ಪೋಲಿಂಗ್‌ ಬೂತ್‌ಗೆ ಒಂದೇ ದೂರವಾಣಿ ಸಂಖ್ಯೆಯನ್ನು ನೀಡಲಾಗಿದೆ. ಆದರೆ, ಈ ಒಂದೇ ದೂರವಾಣಿ ಸಂಖ್ಯೆ ಸುಮಾರು 20ಕ್ಕೂ ಅಧಿಕ ಫೋನ್‌ಗಳಿಗೆ ಕನೆಕ್ಟ್‌ ಆಗುತ್ತದೆ. ಏಕಕಾಲದಲ್ಲಿ 20ಕ್ಕೂ ಅಧಿಕ ಮಂದಿ ಕರೆಯನ್ನು ಸ್ವೀಕರಿಸಿ ಮಾಹಿತಿಯನ್ನು ಸಂಗ್ರಹ ಮಾಡಲಾಗುತ್ತದೆ. ಯಾರು ಅಭ್ಯರ್ಥಿಯಾಗಬೇಕು? ಯಾರು ಗೆಲ್ಲಬೇಕು? ಯಾರಿಗೆ ಮತ ಎಂಬಿತ್ಯಾದಿ ಮಾಹಿತಿಗಳನ್ನು ಈ ವೇಳೆ ದಾಖಲಿಸಿಕೊಳ್ಳಲಾಗುತ್ತದೆ. ಬಳಿಕ ಅವುಗಳನ್ನು ಸಮೀಕರಿಸಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ.

ಈಗಾಗಲೇ ಮಂಡ್ಯ, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಬೆಂಗಳೂರು ಉತ್ತರ, ಬಳ್ಳಾರಿ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರಗಳ ಸಮೀಕ್ಷೆ ಮುಕ್ತಾಯಗೊಂಡಿವೆ.

ನೀವು ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ: 080-69554488

Exit mobile version