Site icon Vistara News

Assembly Session : ಅಧಿವೇಶನದಲ್ಲಿ ನನಗೆ ಮೊದಲ ಸಾಲೇ ಬೇಕು; ಪಟ್ಟು ಹಿಡಿದಿರುವ ಎಚ್.ಡಿ. ರೇವಣ್ಣ!

HD Revanna in Assembly Session

ಬೆಂಗಳೂರು: ಬೆಳಗಾವಿ ವಿಧಾನ ಮಂಡಲ ಅಧಿವೇಶನವು (Assembly Session) ಡಿಸೆಂಬರ್‌ 4ರಂದು ಪ್ರಾರಂಭವಾಗುತ್ತಲಿದೆ. ಇದೇ ವೇಳೆ ವಿರೋಧ ಪಕ್ಷಗಳ (Opposition Party) ಕಡೆ ಇರುವ ಮೊದಲ ಸಾಲಿನಲ್ಲಿ ಸೀಟ್ ಪಡೆಯಲು ಈಗಲೇ ಒತ್ತಡ ಆರಂಭವಾಗಿದೆ. “ನನಗೆ ಮೊದಲ ಸಾಲಿನಲ್ಲಿಯೇ ಸೀಟ್ ಬೇಕು” ಎಂದು ಹಿರಿಯ ಶಾಸಕರೊಬ್ಬರು ಒತ್ತಾಯ ಮಾಡಿದ್ದಾರೆ. ವಿಧಾನಸಭಾ ಕಾರ್ಯದರ್ಶಿಗೆ ಒತ್ತಡ ಹಾಕಿರುವುದು ತಿಳಿದುಬಂದಿದೆ. ಮಾಜಿ ಸಚಿವ ಎಚ್.ಡಿ. ರೇವಣ್ಣ (HD Revanna) ಅವರೇ ಈಗ ಈ ಡಿಮ್ಯಾಂಡ್‌ ಅನ್ನು ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಬಿಜೆಪಿ ಅಧಿಕೃತ ವಿರೋಧ ಪಕ್ಷವಾಗಿರುವುದರಿಂದ ಸಹಜವಾಗಿ ಮೊದಲ ಸಾಲಿನ ಸೀಟುಗಳಲ್ಲಿ ಬಿಜೆಪಿ ನಾಯಕರಿಗೆ ಸ್ಥಾನವನ್ನು ಕಲ್ಪಿಸಿಕೊಡಲಾಗುತ್ತದೆ. ಇನ್ನು ಜೆಡಿಎಸ್‌ನಲ್ಲಿ ಶಾಸಕಾಂಗ ಪಕ್ಷದ ನಾಯಕರು ಹಾಗೂ ಉಪ ನಾಯಕರಿಗೆ ತಲಾ ಒಂದು ಸ್ಥಾನವನ್ನು ನೀಡಲು ತೀರ್ಮಾನ ಮಾಡಲಾಗಿತ್ತು. ಈ ವಿಷಯ ತಿಳಿದ ಎಚ್.ಡಿ. ರೇವಣ್ಣ ತಮಗೂ ಮೊದಲ ಸಾಲಿನಲ್ಲಿಯೇ ಸೀಟು ಕೊಡಿ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ ಎನ್ನಲಾಗಿದೆ. ಎರಡನೇ ಸಾಲಿನಲ್ಲಿ ನನಗೆ ಬೇಡ. ಮೊದಲ ಸಾಲಿನಲ್ಲಿಯೇ ಸ್ಥಾನ ಕಲ್ಪಿಸಿಕೊಡಿ ಎಂದು ದುಂಬಾಲು ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Laxmi Hebbalkar : ಬೆಳಗಾವಿ ರೈತರಿಗೆ ಗುಡ್‌ ನ್ಯೂಸ್‌ ಕೊಟ್ಟ ಲಕ್ಷ್ಮಿ ಹೆಬ್ಬಾಳ್ಕರ್‌; ಜಮೀನು ಬಾಡಿಗೆ ಹೆಚ್ಚಳ!

ಈ ಬಾರಿ ಮೊದಲ ಸಾಲಿನಲ್ಲಿ ಬಿಜೆಪಿ ಹಿರಿಯ ಶಾಸಕರಿಗೆ ಅವಕಾಶವನ್ನು ಕಲ್ಪಿಸಲಾಗಿದೆ. ಆರ್. ಅಶೋಕ್ (ವಿರೋಧ ಪಕ್ಷದ ನಾಯಕ, ಉಪ ನಾಯಕ (ನೇಮಕ ಆಗಿಲ್ಲ) ಬಸವರಾಜ ಬೊಮ್ಮಾಯಿ, ಅಶ್ವಥ್ ನಾರಾಯಣ, ಆರಗ ಜ್ಞಾನೇಂದ್ರ, ಸುರೇಶ್ ಕುಮಾರ್ ಅವರಿಗೆ ಸ್ಥಾನವನ್ನು ನೀಡುವ ತೀರ್ಮಾನವನ್ನು ಮಾಡಲಾಗಿತ್ತು.

ಅಲ್ಲದೆ, ಜೆಡಿಎಸ್‌ಗೆ ಎರಡು ಸೀಟ್ ಕೊಡುವ ನಿರ್ಧಾರಕ್ಕೆ ವಿಧಾನಸಭಾ ಕಾರ್ಯದರ್ಶಿ ಬಂದಿದ್ದರು ಎನ್ನಲಾಗಿದೆ. ಜೆಡಿಎಸ್‌ ಅಧಿಕೃತ ವಿಪಕ್ಷ ಸ್ಥಾನ ಪಡೆಯದ ಹಿನ್ನೆಲೆಯಲ್ಲಿ ಜೆಡಿಎಲ್‌ಪಿ ನಾಯಕ ಎಚ್.ಡಿ. ಕುಮಾರಸ್ವಾಮಿ, ಉಪ ನಾಯಕಿ ಶಾರದಾ ಪೂರ್ಯನಾಯಕ್‌ಗೆ ಸೀಟ್ ಕೊಡಲು ವಿಧಾನಸಭಾ ಕಾರ್ಯದರ್ಶಿ ತೀರ್ಮಾನ ಮಾಡಿದ್ದರು.

ಎಚ್‌.ಡಿ. ರೇವಣ್ಣ ಆಕ್ಷೇಪ

ಆದರೆ, ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರಿಂದ ಮಾತ್ರ ತೀವ್ರ ಆಕ್ಷೇಪ ಕೇಳಿಬಂದಿದೆ. ನನಗೆ ಮೊದಲ ಸಾಲಿನಲ್ಲಿ ಸೀಟ್ ಕೊಡಿ. ನಮ್ಮ ಪಕ್ಷದವರಿಗೆ ಮೂರು ಸೀಟ್ ಕೊಡಿ. ಅದರಲ್ಲಿ ನಾನೂ ಕೂರುತ್ತೇನೆ. ಬಿಜೆಪಿಯ ಒಬ್ಬ ಹಿರಿಯ ಸದಸ್ಯರನ್ನು ಎರಡನೇ ಸಾಲಿಗೆ ಹಾಕಿ ಎಂದು ಎಚ್.ಡಿ. ರೇವಣ್ಣ ಪಟ್ಟು ಹಿಡಿದು ಕುಳಿತಿದ್ದಾರೆ.

ಆರಗ ಜ್ಞಾನೇಂದ್ರ ಶಿಫ್ಟ್‌ ಸಾಧ್ಯತೆ

ಬಿಜೆಪಿ ಯಾವ ನಾಯಕನನ್ನು ಎರಡನೇ ಸಾಲಿಗೆ ಹಾಕಬೇಕು ಎಂಬುದರ ಬಗ್ಗೆ ನೀವೇ ನಿರ್ಧಾರ ಮಾಡಿ. ಅದಕ್ಕೆ ನಾನು ಮೂಗು ತೂರಿಸುವುದಿಲ್ಲ ಎಂದು ವಿಧಾನಸಭಾ ಕಾರ್ಯದರ್ಶಿಗೆ ರೇವಣ್ಣ ಹೇಳಿದ್ದಾರೆ ಎನ್ನಲಾಗಿದೆ. ಕೊನೆಗೆ ರೇವಣ್ಣ ಒತ್ತಡಕ್ಕೆ ಮಣಿದು ಮೊದಲ ಸಾಲಿನಲ್ಲಿ ಸೀಟ್ ಕೊಡಲು ತೀರ್ಮಾನ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಎರಡನೇ ಸಾಲಿಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಹೀಗಾಗಿ ಎಚ್.ಡಿ. ಕುಮಾರಸ್ವಾಮಿ, ಶಾರದಾ ಪೂರ್ಯ ನಾಯ್ಕ್ ಜತೆಗೆ ಎಚ್.ಡಿ. ರೇವಣ್ಣ ಅವರಿಗೂ ಮೊದಲ ಸಾಲಿನಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ ಎನ್ನಲಾಗಿದೆ.

Exit mobile version