Site icon Vistara News

Water Crisis: ಬೆಂಗಳೂರಲ್ಲಿ ಹಾಲಿನ ಟ್ಯಾಂಕರ್ ಮೂಲಕ ನೀರು ಪೂರೈಕೆ; ಬರದ ವಾಸ್ತವ ಬಿಚ್ಚಿಟ್ಟ ಎಚ್.ಡಿ. ದೇವೇಗೌಡ!

HD DeveGowda reveals the reality of Karnataka drought

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರವು ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಬೆಂಗಳೂರು ಸೇರಿ ಇಡೀ ರಾಜ್ಯದಲ್ಲಿ ನೀರಿನ ಸಮಸ್ಯೆ (Water Crisis) ಉಲ್ಬಣವಾಗಿದೆ. ಹಾಲಿನ ಟ್ಯಾಂಕರ್ (Milk Tanker) ಮೂಲಕ ನೀರು ಪೂರೈಕೆ (Water Supply) ಮಾಡಲಾಗುತ್ತಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ (HD DeveGowda) ಅವರು ಬರದ ವಾಸ್ತವತೆಯನ್ನು ತೆರೆದಿಟ್ಟರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಚ್.ಡಿ. ದೇವೇಗೌಡ, ಎಲ್ಲ ಕಡೆ ಗ್ಯಾರಂಟಿ ಕೊಟ್ಟಿದ್ದೇವೆ, ಸಾಧನೆ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿಕೊಂಡು ಓಡಾಡುತ್ತಿದ್ದಾರೆ. ರಾಜ್ಯದಲ್ಲಿ 692 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಸಿದ್ದರಾಮಯ್ಯ ಸಾಧನೆಯ ಕಿರುನೋಟ ಎಂದು ವ್ಯಂಗ್ಯವಾಡಿದರು.

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಕಾವೇರಿ ನೀರಿಗಾಗಿ ಹೋರಾಟ ನಡೆಸಿ ಹೇಮಾವತಿ, ಕಬಿನಿ, ಹಾರಂಗಿ ಅಣೆಕಟ್ಟು ಕಟ್ಟಿಸಿದವನು ನಿಮ್ಮ ಮುಂದೆ ಕುಳಿತಿದ್ದೇನೆ. ಹೇಮಾವತಿಯಲ್ಲಿ ನೀರಿದೆ. ಅಲ್ಲಿನ ಹಳ್ಳಿಗಳಿಗೂ ಆ ನೀರು ಕೊಡಿ, ಬೆಂಗಳೂರಿಗೂ ನೀರು ಕೊಡಿ. ಕೆ.ಆರ್.ಎಸ್‌ನಲ್ಲಿ 90 ಅಡಿಗೆ ಬಂದಿದೆ. ಹೇಮಾವತಿಯಲ್ಲಿ 23 ಟಿಎಂಸಿ ನೀರಿದೆ. ಜನರಿಗೆ ಕೊಡಲು ನಿಮಗೆ ಸಮಸ್ಯೆ ಏನು? ಜನರು ನೀರಿಗಾಗಿ ಕಣ್ಣೀರು ಹಾಕುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಕಳವಳ ವ್ಯಕ್ತಪಡಿಸಿದರು.

ಬೆಂಗಳೂರು ನೀರಿನ ಸಮಸ್ಯೆ ಉಲ್ಬಣಕ್ಕೆ ಕಳವಳ

ಬೆಂಗಳೂರು ಸೇರಿ ಇಡೀ ರಾಜ್ಯದಲ್ಲಿ ನೀರಿನ ಸಮಸ್ಯೆ ಉಲ್ಬಣವಾಗಿದೆ. ಹಾಲಿನ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಮಾರ್ಚ್ 7ರ ಒಳಗೆ ನೋಂದಣಿ ಮಾಡಿಕೊಳ್ಳದ ಟ್ಯಾಂಕರ್ ಗಳನ್ನು ವಶಕ್ಕೆ ಪಡೆಯುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ ಎಂದು ದಿನಪತ್ರಿಕೆಗಳ ಸುದ್ದಿ ತುಣುಕುಗಳನ್ನು ತೋರಿಸುತ್ತಾ ಸರಕಾರದ ಮೇಲೆ ಎಚ್.ಡಿ. ದೇವೇಗೌಡ ಪ್ರಹಾರ ನಡೆಸಿದರು.

ಕುಡಿಯುವ ನೀರಿನ ಸಮಸ್ಯೆ ಎಷ್ಟು ದಿನಗಳಿಂದ ಇದೆ. ಇವರೇ ಅಲ್ಲವೇ ಡಿಸಿಎಂ, ನೀರಾವರಿ ಮಂತ್ರಿ. ಒಂದು ಟ್ಯಾಂಕರ್ ನೀರಿಗೆ ₹2500 ರಿಂದ 3,000 ಕೊಡಬೇಕು. 10 ತಿಂಗಳಲ್ಲಿ‌ ನೀವು ಎಷ್ಟು ಕಡೆ ಪ್ರವಾಸ ಮಾಡಿದ್ದೀರಾ? 20 ದಿನ ಅಧಿವೇಶನ, ಸಭೆ, ಮಂತ್ರಿಗಳ ಮನೆ ಊಟಕ್ಕೆ 4 ದಿನ ಕಳೆದಿರಿ. ಬಾಕಿ ದಿನ ಏನು ಮಾಡಿದಿರಿ ನೀವು? ಗ್ಯಾರಂಟಿ ಯೋಜನೆ ಉಸ್ತುವಾರಿಗೆ ಮಾಜಿ ಮಂತ್ರಿಗಳ ನೇತೃತ್ವದಲ್ಲಿ ಸಮಿತಿ ಮಾಡಿದ್ದೀರಿ. 95 ಜನರಿಗೆ ಕ್ಯಾಬಿನೆಟ್ ದರ್ಜೆ!! ಆಹಾ.. ಎಂತಹ ಆಡಳಿತ? ಎಂದು ಎಚ್.ಡಿ. ದೇವೇಗೌಡ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ನೀರಿನ ಬಗ್ಗೆ ಇವತ್ತು ಸಭೆ. ಜನ ನೀರು ಕುಡಿಯುತ್ತಿದ್ದಾರಾ ಅಂತ ಸಭೆ. ಗೌರವಾನ್ವಿತ ಸಿಎಂ, ಕಾಂಗ್ರೆಸ್ ಅಧ್ಯಕ್ಷರು ಸಭೆ ಮಾಡುತ್ತಿದ್ದಾರೆ. ನಾನು ಕೂಗಿದರೆ ಮಂಡ್ಯ, ಹಾಸನ ಅಲ್ಲ. ಚಿಕ್ಕಮಗಳೂರುವರೆಗೂ ಕೇಳಬೇಕು. ಕೂಗಿ ಅಂದರು. ನಾಚಿಕೆ ಆಗುವುದಿಲ್ಲವಾ? ಎಂದು ಎಚ್.ಡಿ. ದೇವೇಗೌಡ‌ ಕಿಡಿಕಾರಿದರು.

ಎರಡು ನಾಲಿಗೆಯ ಹೇಳಿಕೆಗೆ ಕಿಡಿ

ವೃಷಭಾವತಿ ನೀರನ್ನು ನೆಲಮಂಗಲಕ್ಕೆ ಎತ್ತುತ್ತೇವೆ ಅಂತಾರೆ. ಮೂರು ತಿಂಗಳ ಹಿಂದೆ ಹೇಮಾವತಿ ನೀರು ನೆಲಮಂಗಲಕ್ಕೆ ತರುತ್ತೇನೆ ಅಂದರು. ಸಮಯಕ್ಕೆ ಸಂದರ್ಭಕ್ಕೆ ಅನುಸಾರವಾಗಿ ಹೇಳಿಕೆ ನೀಡುವ ನಿಮ್ಮನ್ನು ಜನ ನಂಬ್ತಾರೇನ್ರಿ? ಈ ನಾಲಿಗೆಯಲ್ಲಿ ಯಾವ ಯಾವ ಸಮಯಕ್ಕೆ ಏನೇನು ಹೇಳ್ತೀರಾ? ಎಂದು ಮಾಜಿ ಪ್ರಧಾನಿಗಳು ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.

ಶೀಘ್ರವೇ ಟ್ಯಾಂಕರ್ ನೀರಿಗೆ ದರ ನಿಗದಿ ಮಾಡುತ್ತೇವೆ ಅಂತಾರೆ. ನೀರಿನ‌ ಬಗ್ಗೆ ಸಚಿವರಿಗೆ ಕೇಳಿದರೆ ಕುಡಿಯುವ ನೀರು ಕೊಡುವುದು ದೊಡ್ಡ ಸಮಸ್ಯೆ ಅಂತಾರೆ. ಸಚಿವರು ಎಲ್ಲಾ ನೀರಿನ ಟ್ಯಾಂಕರ್ ಗಳು ರಿಜಿಸ್ಟರ್ ಮಾಡಿಕೊಳ್ಳಬೇಕು ಅಂತಾರೆ‌. ಇತ್ತ ನೋಡಿದರೆ ಕುಡಿಯುವ ನೀರಿಗೆ ಜನರು ಪರದಾಡುತ್ತಿದ್ದಾರೆ. ಬೆಂಗಳೂರಿನಲ್ಲಿ 15 ದಿನಕ್ಕೊಮ್ಮೆ ಮಾತ್ರ ನೀರು ಬರುತ್ತಿದೆ. ಕಾವೇರಿ ನೀರಿಗೆ ಜನರು ಚಾತಕ ಪಕ್ಷಿಯಂತೆ ಕಾಯುದ್ದಾರೆ. ಪಾಪ ಈ ಜನ 5 ಗ್ಯಾರಂಟಿ ಸಿಕ್ಕಿದವು ಎಂದು ಸಂತೋಷವಾಗಿ ಇದ್ದಾರೆ! ಎಂದು ನೀರಿನ ಅಭಾವದ ಬಗ್ಗೆ ದೇವೇಗೌಡರು ಕಳವಳ ವ್ಯಕ್ತಪಡಿಸಿದರು.

ಇದನ್ನೂ ಓದಿ: Death Threat to Modi: ತಲ್ವಾರ್‌ ಹಿಡಿದು ಪ್ರಧಾನಿ ಮೋದಿ, ಯುಪಿ ಸಿಎಂ ಯೋಗಿಗೆ ಜೀವ ಬೆದರಿಕೆ ಒಡ್ಡಿದ್ದ ನಾಸಿರ್‌ ಸೆರೆ

ಎತ್ತಿನಹೊಳೆಯಲ್ಲಿ ನಿಮ್ಮ ಪಾತ್ರ ಏನು?

ಎತ್ತಿನಹೊಳೆ ಯೋಜನೆಯನ್ನು ಯಾರು ಮಂಜೂರು ಮಾಡಿದ್ದು? ಈ ಯೋಜನೆಗೆ ಅನುಮತಿ ಕೊಟ್ಟಿದ್ದು ಜಗದೀಶ್ ಶೆಟ್ಟರ್. ಇದರಲ್ಲಿ ನಿಮ್ಮ ಪಾತ್ರ ಏನು? ಕುಮಾರಸ್ವಾಮಿ ವಿರೋಧ ಮಾಡ್ತಾರೆ ಅಂತೀರಾ. ಅವರ ಬಗ್ಗೆ ಮಾತಾಡೋಕೆ ನಿಮಗೆ ಏನಿದೆ ನೈತಿಕತೆ? ನಿಮ್ಮ ಪಾತ್ರ ಎತ್ತಿನಹೊಳೆ ಯೋಜನೆಯಲ್ಲಿ ಏನು? ಎಂದು ದೇವೇಗೌಡರು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.

Exit mobile version