ಬೆಂಗಳೂರು: ಕೊನೆಗೂ ಬಿಜೆಪಿಯ ಹಿರಿಯ ನಾಯಕ, ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shetter) ಅವರು ಬಿಜೆಪಿಗೆ ಮರು (Re joining BJP) ಸೇರ್ಪಡೆಯಾಗಿದ್ದಾರೆ. ಈ ಮೂಲಕ ಹಿರಿಯ ನಾಯಕರ ಘರ್ ವಾಪ್ಸಿ (Ghar Wapsi) ಕಾರ್ಯಕ್ಕೆ ಬಿಜೆಪಿ (BJP Karnataka) ಚಾಲನೆ ನೀಡಿದೆ. ಇನ್ನು ಶೆಟ್ಟರ್ ಅವರನ್ನು ಪಕ್ಷಕ್ಕೆ ಮರಳಿ ಕರೆ ತರುವಲ್ಲಿ ಸಾಕಷ್ಟು ಪ್ರಯತ್ನಗಳು ಈ ಮೊದಲಿನಿಂದಲೂ ನಡೆದಿದೆ ಎನ್ನಲಾಗಿದೆ. ಜತೆಗೆ ಪಕ್ಷ ಸೇರ್ಪಡೆಗೆ ಬಿಜೆಪಿ ಹೈಕಮಾಂಡ್ ಮೂರು ಆಫರ್‌ಗಳು ನೀಡಿದೆ ಎಂಬ ವಿಚಾರ ವಿಸ್ತಾರ ನ್ಯೂಸ್‌ಗೆ ತಿಳಿದುಬಂದಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಭೇಟಿಯಾಗುತ್ತಿದ್ದಂತೆ ಸುದ್ದಿಗೋಷ್ಠಿ ನಡೆಸಿ ಪಕ್ಷ ಸೇರ್ಪಡೆಯನ್ನು ಅಧಿಕೃತವಾಗಿ ಘೋಷಣೆ ಮಾಡಲಾಯಿತು. ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಾಜಿ ಸಿಎಂ, ಕೇಂದ್ರ ಸಂಸದೀಯ ಮಂಡಳಿ ಸದಸ್ಯರಾದ ಬಿ.ಎಸ್. ಯಡಿಯೂರಪ್ಪ ಅವರು ಪಕ್ಷದ ಶಾಲನ್ನು ಹೊದಿಸುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು. ಅಲ್ಲದೆ, ಶೆಟ್ಟರ್ ಅವರ ಜತೆ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಮಾತುಕತೆ ಯಶಸ್ವಿಯಾಗಿದೆ.
ಶೆಟ್ಟರ್‌ಗೆ ಬಿಜೆಪಿ ಹೈಕಮಾಂಡ್ ನಾಯಕರು ಕೊಟ್ಟ ಆ ಮೂರು ಆಫರ್ ಯಾವುವು?
1) ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಬಯಸಿದರೆ ಅವಕಾಶ ಕಲ್ಪಿಸಲಾಗುವುದು. (ಹಾವೇರಿ, ಬೆಳಗಾವಿ ಲೋಕಸಭೆ ಟಿಕೆಟ್ ಆಫರ್)
2) ರಾಜ್ಯಸಭೆ ಸದಸ್ಯರನ್ನಾಗಿ ಮಾಡಿ ಕೇಂದ್ರದಲ್ಲಿ ಮಂತ್ರಿ ಮಾಡುವ ಆಫರ್
3) ಹಿರಿತನವನ್ನು ಪರಿಗಣಿಸಿ ರಾಜ್ಯಪಾಲರನ್ನಾಗಿ ಮಾಡುವ ಭರವಸೆ
ಈ ಮೂರು ಆಫರ್‌ಗಳಲ್ಲಿ ಜಗದೀಶ್ ಶೆಟ್ಟರ್ ಅವರು ಯಾವುದನ್ನು ಆಯ್ಕೆ ಮಾಡಲಿದ್ದಾರೆ ಎಂಬುದು ಸದ್ಯದ ಕುತೂಹಲವಾಗಿದೆ. ಅವರು ಯಾವುದನ್ನು ಆಯ್ಕೆ ಮಾಡಿಕೊಂಡರೂ ಒಪ್ಪಿಗೆನೀಡುವ ಭರವಸೆಯನ್ನು ಬಿಜೆಪಿ ಹೈಕಮಾಂಡ್ ನಾಯಕರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ಸೇರಿದ್ದ ಶೆಟ್ಟರ್
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹುಬ್ಬಳ್ಳಿ – ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಮುನಿಸಿಕೊಂಡಿದ್ದ ಜಗದೀಶ್ ಶೆಟ್ಟರ್, ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದರು. ಆದರೆ, ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ವಿರುದ್ಧ ಸೋಲು ಕಂಡಿದ್ದರು. ಆದರೆ, ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ಗೆ ಲಿಂಗಾಯತ ಮತಗಳನ್ನು ತರುವಲ್ಲಿ ಶೆಟ್ಟರ್ ಯಶಸ್ವಿಯಾಗಿದ್ದರು.
ಇದನ್ನೂ ಓದಿ: Jagadish Shetter: ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ; ನವ ದೆಹಲಿಯಲ್ಲಿ ಅಧಿಕೃತ ಘೋಷಣೆ
ಲಿಂಗಾಯತ ಮುಖಂಡರನ್ನು ಕಡೆಗಣಿಸಿಲ್ಲ ಎಂಬ ಸಂದೇಶ ರವಾನೆ
ಈಗಾಗಲೇ ಕಾಂಗ್ರೆಸ್ ಸೇರಿ 9 ತಿಂಗಳು ಕಳೆದಿದ್ದರೂ ಅಲ್ಲಿ ಜಗದೀಶ್ ಶೆಟ್ಟರ್‌ಗೆ ಸೂಕ್ತ ಸ್ಥಾನಮಾನವನ್ನು ನೀಡಲಾಗಿಲ್ಲ. ವಿಧಾನ ಪರಿಷತ್‌ಗೆ ಆಯ್ಕೆ ಮಾಡಿದ್ದು ಬಿಟ್ಟರೆ ಅಲ್ಲಿ ಅವರನ್ನು ಕಾಂಗ್ರೆಸ್ ನಾಯಕರು ಸರಿಯಾಗಿ ನಡೆಸಿಕೊಂಡಿಲ್ಲ ಎಂಬ ಅಸಮಾಧಾನವನ್ನು ಶೆಟ್ಟರ್ ಹೊಂದಿದ್ದರು ಎನ್ನಲಾಗಿದೆ. ಈ ಎಲ್ಲ ಬೇಸರಗಳಿಂದ ಶೆಟ್ಟರ್ ಮರಳಿ ಗೂಡಿಗೆ ಸೇರಿದ್ದಾರೆ. ಹೀಗಾಗಿ ಅಮಿತ್ ಶಾ ಜತೆಗೆ ನಡೆದಿರುವ ಮಾತುಕತೆ ವೇಳೆ ಉನ್ನತ ಸ್ಥಾನಮಾನ ಕೊಡುವ ಬಗ್ಗೆ ಚರ್ಚೆ ನಡೆದಿದೆ. ಈಗ ಲೋಕಸಭೆ ಚುನಾವಣೆ ಇರುವುದರಿಂದ ಅವರನ್ನು ಪಕ್ಷಕ್ಕೆ ಮರಳಿ ತಂದರೆ ಬಿಜೆಪಿ ಲಿಂಗಾಯತ ಮುಖಂಡರನ್ನು ಕಡೆಗಣಿಸಿಲ್ಲ ಎಂಬ ಸಂದೇಶವನ್ನು ನೀಡದಂತೆ ಆಗುತ್ತದೆ ಎಂಬ ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಶೆಟ್ಟರ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ.