ಮುಂಬಯಿ: ಮಹಾರಾಷ್ಟ್ರ ವಿಕಾಸ ಅಘಾಡಿ (ಎಂವಿಪಿ) ಸರಕಾರದಿಂದ ಮುನಿಸಿಕೊಂಡು ದೂರ ಹೋಗಿರುವ, 21 ಶಾಸಕರನ್ನೂ ಜತೆಗೆ ಕಟ್ಟಿಕೊಂಡು ಹೋಗಿರುವ ಏಕನಾಥ ಶಿಂಧೆ ಅವರ ಜತೆ ಮಾತನಾಡಿ ಸಮಸ್ಯೆ ಸರಿಪಡಿಸಿಕೊಳ್ಳಲು ಮಹಾ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಂಗಳವಾರ ರಾತ್ರಿ ಪ್ರಯತ್ನಿಸಿದ್ದಾರೆ.
ಗುಜರಾತ್‌ನ ಸೂರತ್‌ನ ರೆಸಾರ್ಟ್‌ನಲ್ಲಿ ಬೀಡು ಬಿಟ್ಟಿರುವ ಏಕನಾಥ್ ಶಿಂಧೆ ಅವರೊಂದಿಗೆ ಉದ್ಧವ್ ಠಾಕ್ರೆ ದೂರವಾಣಿ ಕರೆ ಮಾಡಿ 10 ನಿಮಿಷ ಮಾತನಾಡಿದ್ದಾರೆ. ಆದರೆ ಯಾವುದೇ ರಾಜಿ ತೀರ್ಮಾನಕ್ಕೆ ಬರಲು ವಿಫಲರಾಗಿದ್ದಾರೆ.
ಇದುವೆಗೂ ಏಕನಾಥ್ ಶಿಂಧೆ ಅವರು ಅನ್ಯ ಪಕ್ಷದ ಜತೆಗೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ. ಯಾವುದೇ ಕಾಗದ ಪತ್ರಕ್ಕೆ ಸಹಿ ಹಾಕಿಲ್ಲ ಎಂಬುದನ್ನು ಮುಖ್ಯಮಂತ್ರಿ ಠಾಕ್ರೆ ತಿಳಿಸಿದ್ದಾರೆ. ಬಿಜೆಪಿ ಜತೆಗಿನ ಶಿವಸೇನೆಯ ಹಳೆಯ ಮೈತ್ರಿಯನ್ನು ಮರು ಸ್ಥಾಪಿಸುವಂತೆ ಏಕನಾಥ್ ಶಿಂಧೆ ಒತ್ತಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದಕ್ಕೆ ಠಾಕ್ರೆ ಒಪ್ಪಿಲ್ಲ. ಹೀಗಾಗಿ ಯಾವುದೇ ಪರಿಹಾರವೂ ಮೂಡಿಲ್ಲ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ರಾಜಕೀಯ ಬಿರುಗಾಳಿಗೆ ಕಾರಣವಾಗಿರುವ ಏಕನಾಥ್ ಶಿಂಧೆ ಯಾರು?
ಎಂವಿಪಿ ಸರಕಾರದ ಕಾರ್ಯವೈಖರಿಯ ಬಗ್ಗೆ ಶಿವಸೇನೆ ಶಾಸಕರಲ್ಲಿ ಅಸಮಾಧಾನವಿದೆ. ಹಿಂದುತ್ವವೇ ಪ್ರಧಾನ ಆಶಯವಾಗಿರುವ ಶಿವಸೇನೆಯ ಶಾಸಕರು ಬಿಜೆಪಿ ಜತೆಗೆ ಮರಳಲು ಕಾತರರಾಗಿದ್ದಾರೆ ಎಂದು ಬಿಜೆಪಿ ಹೇಳಿಕೊಂಡಿದೆ. ಎಂವಿಪಿ ಸರಕಾರವನ್ನು ಉರುಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಎನ್‌ಸಿಪಿ, ಕಾಂಗ್ರೆಸ್ ಆರೋಪಿಸಿವೆ.
ಆದರೆ ಈ ಸರಕಾರ ಉರುಳಿಸಲು ಶಿಂಧೆ ಯಶಸ್ವಿ ಆಗುತ್ತಾರೋ ಇಲ್ಲವೋ ಎಂಬ ಬಗ್ಗೆ ಅನುಮಾನವಿದೆ. ಶಿಂಧೆ ಬಳಿ ಈಗ ಇರುವ ಶಾಸಕರ ಸಂಖ್ಯೆ ಸುಮಾರು 21. ಆದರೆ ಸರಕಾರ ಬೀಳಲು ಕನಿಷ್ಠ 37 ಶಾಸಕರಾದರೂ ಬೆಂಬಲ ಹಿಂದೆಗೆದುಕೊಳ್ಳಬೇಕು. ಬಂಡಾಯ ವಿಫಲಗೊಂಡಲ್ಲಿ ಶಿಂಧೆ ಜತೆಗೆ ಉಳಿದ ಶಾಸಕರೂ ಅನರ್ಹತೆ ಶಿಕ್ಷೆಗೆ ಈಡಾಗುವುದು ಖಚಿತ.
ಇದನ್ನೂ ಓದಿ: ವಿಸ್ತಾರ TOP 10 NEWS | ಅಘಾಡಿ ಸರ್ಕಾರ ಪಲ್ಟಿ ಸುದ್ದಿಯಿಂದ ದಿಗಂತ್ ಗಾಯದವರೆಗಿನ ಪ್ರಮುಖ ಸುದ್ದಿಗಳು