ಬೆಂಗಳೂರು: ರಾಜ್ಯ ಬಿಜೆಪಿ ಎದುರಿಸುತ್ತಿದ್ದ ಎರಡು ಮುಜುಗರದ ಪ್ರಶ್ನೆಗಳಲ್ಲಿ ಒಂದಕ್ಕೆ ಉತ್ತರ ಸಿಕ್ಕಿದೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ (BJP State President) ಬಿ.ವೈ. ವಿಜಯೇಂದ್ರ (BY Vijayendra) ಅವರನ್ನು ನೇಮಕ ಮಾಡಲಾಗಿದೆ. ಇದೀಗ ಎರಡನೇ ಪ್ರಶ್ನೆ ಎದ್ದು ನಿಂತಿದೆ. ರಾಜ್ಯ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ (Opposition leader in Assembly) ಯಾರನ್ನು ನೇಮಿಸಬಹುದು ಎಂಬ ಕುತೂಹಲ ಎಲ್ಲ ಕಡೆ ಇದೆ.
ರಾಜ್ಯಾಧ್ಯಕ್ಷರಾಗುತ್ತಿದ್ದಂತೆಯೇ ಬಿ.ವೈ ವಿಜಯೇಂದ್ರ ಅವರು, ಮುಂದಿನ ಶುಕ್ರವಾರದ ಒಳಗೆ ಸದನ ನಾಯಕನ ಆಯ್ಕೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದರು. ಶುಕ್ರವಾರದಂದು ಬಿಜೆಪಿ ಶಾಸಕಾಂಗ ಪಕ್ಷ ಸಭೆ ನಡೆಯಲಿದ್ದು, ಅದರಲ್ಲಿ ಕೇಂದ್ರದ ವೀಕ್ಷಕರ ಸಮ್ಮುಖದಲ್ಲಿ ಪ್ರತಿಪಕ್ಷ ನಾಯಕ ಎನ್ನುವುದು ತೀರ್ಮಾನವಾಗಲಿದೆ ಎಂದು ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷತೆ ಹುದ್ದೆಗೆ ಲಿಂಗಾಯತರನ್ನು ನೇಮಕ ಮಾಡಿರುವುದರಿಂದ ವಿರೋಧ ಪಕ್ಷದ ನಾಯಕನ ಹುದ್ದೆ ಒಂದೋ ಒಕ್ಕಲಿಗರಿಗೆ ಒಲಿಯಲಿದೆ. ಇಲ್ಲವೇ ಇತರ ಹಿಂದುಳಿದ ವರ್ಗ (ಒಬಿಸಿ)ಕ್ಕೆ ಸೇರಿದ ಶಾಸಕರಿಗೆ ಸಿಗಲಿದೆ ಎಂಬ ಲೆಕ್ಕಾಚಾರವಿದೆ.
ವಿರೋಧ ಪಕ್ಷದ ನಾಯಕನಾಗುವ ದೊಡ್ಡ ಅವಕಾಶವನ್ನು ಬಸವರಾಜ ಬೊಮ್ಮಾಯಿ (Basavaraja Bommai) ಮತ್ತು ಆರಗ ಜ್ಞಾನೇಂದ್ರ ಅವರು ಕಳೆದುಕೊಂಡಿದ್ದಾರೆ. ಬಸವರಾಜ ಬೊಮ್ಮಾಯಿ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಈ ಅವಕಾಶ ಅವರಿಗೆ ಕೊಡುವುದು ಕಷ್ಟ. ಆರಗ ಜ್ಞಾನೇಂದ್ರ ಅವರು ಒಕ್ಕಲಿಗರಾದರೂ ಶಿವಮೊಗ್ಗ ಜಿಲ್ಲೆಯವರು. ಬಿಜೆಪಿ ರಾಜ್ಯಾಧ್ಯಕ್ಷತೆ ಮತ್ತು ವಿರೋಧ ಪಕ್ಷದ ನಾಯಕ ಎರಡೂ ಸ್ಥಾನಗಳನ್ನು ಒಂದೇ ಜಿಲ್ಲೆಗೆ ಕೊಡುವುದು ಸಾಧ್ಯವೇ ಇಲ್ಲ. ಹೀಗಾಗಿ ಅವರು ಅವಕಾಶ ಮಿಸ್ ಮಾಡಿಕೊಳ್ಳಲಿದ್ದಾರೆ.
ಒಕ್ಕಲಿಗರಾದರೆ ಎರಡು ಆಯ್ಕೆ
ಒಂದು ವೇಳೆ ಈ ಬಾರಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಒಕ್ಕಲಿಗರಿಗೆ ನೀಡುವುದೇ ಹೌದಾದರೆ ಪ್ರಮುಖವಾಗಿ ಸ್ಪರ್ಧೆಯಲ್ಲಿ ಮೇಲ್ನೋಟಕ್ಕೆ ಕಾಣುವವರು ಮಾಜಿ ಡಿಸಿಎಂಗಳಾದ ಆರ್ ಅಶೋಕ್ (R Ashok) ಮತ್ತು ಡಾ. ಸಿ.ಎನ್. ಅಶ್ವತ್ಥನಾರಾಯಣ (Dr. CN Ashwathnarayana). ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆರ್. ಅಶೋಕ್ ಅವರನ್ನು ಬೆಂಬಲಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಒಂದು ಹಂತದಲ್ಲಿ ಬಿಜೆಪಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬಿಟ್ಟು ಕೊಡಬಹುದಾ ಎಂಬ ಚರ್ಚೆಯೂ ನಡೆದಿತ್ತು. ಆದರೆ, ಜೆಡಿಎಸ್ನ ಕೋರ್ ಕಮಿಟಿ ಅಧ್ಯಕ್ಷರಾಗಿರುವ ಜಿ.ಟಿ. ದೇವೇಗೌಡ ಅವರು ಯಾವ ಕಾರಣಕ್ಕೂ ಇಂಥ ಸಾಧ್ಯತೆಗಳಿಲ್ಲ ಎಂದಿದ್ದಾರೆ.
ಒಂದು ವೇಳೆ ಒಕ್ಕಲಿಗರಿಗೆ ಬೇಡ, ಇತರ ಹಿಂದುಳಿದ ವರ್ಗಗಳ ನಾಯಕರಿಗೆ ಈ ಅವಕಾಶ ನೀಡೋಣ ಎಂಬ ತೀರ್ಮಾನಕ್ಕೆ ಬಂದರೆ ಕಾರ್ಕಳದ ಶಾಸಕ ಸುನಿಲ್ ಕುಮಾರ್ (V Sunil Kumar) ಅವರು ಅವಕಾಶ ಪಡೆದುಕೊಳ್ಳುವ ಸಾಧ್ಯತೆ ಇದೆ.
ನಾನೂ ಆಕಾಂಕ್ಷಿ ಎಂದ ಡಾ. ಸಿ.ಎನ್. ಅಶ್ವತ್ಥ ನಾರಾಯಣ
ಈ ನಡುವೆ, ವಿರೋಧಪಕ್ಷದ ನಾಯಕನ ಹುದ್ದೆಗೆ ನಾನೂ ಆಕಾಂಕ್ಷಿ ಎಂದಿದ್ದಾರೆ ಮಾಜಿ ಡಿಸಿಎಂ ಹಾಗೂ ಮಲ್ಲೇಶ್ವರ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು. ಮೈಸೂರಿನಲ್ಲಿ ಮಾತನಾಡಿದ ಅವರು, ರಾಜ್ಯಾಧ್ಯಕ್ಷ ಸ್ಥಾನದ ನೇಮಕ ಆಗಿದೆ. ಸೂಕ್ತವಾದ ವ್ಯಕ್ತಿಯನ್ನು ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡುತ್ತಾರೆ. ವಿಧಾನ ಸಭೆಯಲ್ಲಿರುವ 66 ಜನ ಶಾಸಕರಿದ್ದಾರೆ. ಎಲ್ಲರೂ ವಿರೋಧ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದಾರೆ. ನಾನೂ ಕೂಡ ಆಕಾಂಕ್ಷಿಯಾಗಿದ್ದೇನೆ ಎಂದರು.
ʻʻವಿಧಾನಸಭೆಯಲ್ಲಿ ಬಿಜೆಪಿ ಕಾನೂನಾತ್ಮಕವಾಗಿ ವಿರೋಧ ಪಕ್ಷ. ನಮ್ಮಲ್ಲೇ ಬೇಕಾದಷ್ಟು ನಾಯಕರಿದ್ದಾರೆ.
ಜೆಡಿಎಸ್ ಜತೆ ಮೈತ್ರಿ ಆಗಿರಬಹುದು. ಅಂದ ಮಾತ್ರಕ್ಕೆ ಅವರಿಗೆ ವಿರೋಧ ಪಕ್ಷದ ನಾಯಕ ಸ್ಥಾನ ಕೊಡಬೇಕು ಅಂತ ಏನೂ ಇಲ್ಲʼʼ ಎಂದು ಅಶ್ವತ್ಥನಾರಾಯಣ ಹೇಳಿದರು.
ಇದನ್ನೂ ಓದಿ: BY Vijayendra : ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ; ‘ವಿಶ್ವಾಸ’ ನಡೆಗೆ ಮುಂದಾದ ಬಿಎಸ್ವೈ ಈಗ ಫುಲ್ ಆ್ಯಕ್ಟಿವ್!
ಒಕ್ಕಲಿಗ ಪ್ರತಿಪಕ್ಷ ನಾಯಕ: ಸಿ.ಟಿ. ರವಿ ಹೇಳುವುದೇನು?
ಬಿಜೆಪಿ ರಾಜ್ಯಾಧ್ಯಕ್ಷತೆ ಲಿಂಗಾಯತ ನಾಯಕರಿಗೆ ಒಲಿದ ಬಳಿಕ ಪ್ರತಿಪಕ್ಷ ನಾಯಕನಾಗಿ ಒಕ್ಕಲಿಗರಿಗೆ ಅವಕಾಶ ಸಿಗಬಹುದು ಎಂಬ ಅಭಿಪ್ರಾಯಕ್ಕೆ ಅವರು ಹೇಳಿದ್ದು ಹೀಗೆ: ʻʻಕಾಂಗ್ರೆಸ್ ಅನ್ನು ಕಟ್ಟಿ ಹಾಕುವ ನಾಯಕ ಬೇಕು. ಜಾತಿ ಮೇಲೆ ಆಯ್ಕೆ ಮಾಡೋದು ತಾತ್ಕಾಲಿಕ ಗೆಲುವು ಕೊಡಬಹುದು. ಆದರೆ ಸೈದ್ಧಾಂತಿಕ ವಿಚಾರಕ್ಕೆ ಪೆಟ್ಟು ಆಗಬಹುದು. ಜಾತಿ ಮೇಲೆ ಯಾವುದೇ ಹುದ್ದೆ ಕೊಡಬಾರದು. ಪಕ್ಷದ ಸಿದ್ದಾಂತ, ಬದುಕಿನ ಸಿದ್ದಾಂತ ಆದರೆ ಜಾತಿವಾದ ಕೆಟ್ಟದಾಗುತ್ತದೆ. ಕಾಂಗ್ರೆಸ್ ಅನ್ನ ಸದನದಲ್ಲಿ ಕಟ್ಟಿ ಹಾಕೋ, ಕಾವಲುಗಾರ ಇರೋ ರೀತಿ ಒಬ್ಬ ನಾಯಕ ವಿಪಕ್ಷ ನೀಡಬೇಕು.