Site icon Vistara News

BJP-JDS Alliance: ಮೈತ್ರಿಯಿಂದ ಬಿಜೆಪಿ, ಜೆಡಿಎಸ್‌ಗೆ ಲಾಭ ಆಗಬಹುದೇ? ಕಾಂಗ್ರೆಸ್‌ಗೆ ಫುಲ್‌ ಲಾಸ್‌ ಆಗುತ್ತಾ?

BJP JDS Alliance

ಬೆಂಗಳೂರು: ಇದುವರೆಗೆ ಜಾತ್ಯತೀತತೆಯ ಹೆಸರಿನಲ್ಲಿ ತನ್ನ ಅಸ್ಮಿತೆಯನ್ನು (Secular Identity) ಕಂಡುಕೊಂಡಿದ್ದ ಹಳೆ ಮೈಸೂರು ಭಾಗದ ಪ್ರಬಲ ರಾಜಕೀಯ ಶಕ್ತಿ ಜೆಡಿಎಸ್‌ (Janata Dal Secular) ಈಗ ತನ್ನ ಮೂಲ ಸಿದ್ಧಾಂತಕ್ಕೆ ವಿರುದ್ಧವಾಗಿ ಬಿಜೆಪಿ ಜತೆ ಮೈತ್ರಿ (Alliance with BJP) ಮಾಡಿಕೊಂಡಿದೆ. ಎನ್‌ಡಿಎ ಮಿತ್ರ ಕೂಟದ ಭಾಗವಾಗಿ ಸೇರ್ಪಡೆಗೊಂಡಿದೆ. ಈ ಹಿಂದೆ ಅದು 2018ರಲ್ಲಿ ಕಾಂಗ್ರೆಸ್‌ ಜತೆ ಮೈತ್ರಿ (Alliance with Congress) ಮಾಡಿಕೊಂಡಿದ್ದರೂ ಅದು ಚುನಾವಣೋತ್ತರ ಮತ್ತು ಸಾಂದರ್ಭಿಕ ರಾಜಕೀಯ ಮೈತ್ರಿಯಾಗಿತ್ತು. ಆದರೆ, ಈ ಬಾರಿ ಮಾಡಿಕೊಂಡಿರುವುದು ಚುನಾವಣಾಪೂರ್ವ ಮತ್ತು ಉದ್ದೇಶಪೂರ್ವಕ ಮೈತ್ರಿ (BJP-JDS Alliance). ಹೀಗಾಗಿ ಇದು ಸಿದ್ಧಾಂತ ಮತ್ತು ರಾಜಕೀಯ ಲೆಕ್ಕಾಚಾರದಲ್ಲಿ ಸ್ಪಷ್ಟ ಸ್ಥಾನಾಂತರ ಎಂದು ಧಾರಾಳವಾಗಿ ಹೇಳಬಹುದು.

ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿಗೆ ದೂರಗಾಮಿ ದೃಷ್ಟಿ, ಉದ್ದೇಶ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಈಗಿನ ಪ್ರಮುಖ ಉದ್ದೇಶ ಇರುವುದು 2024ರ ಲೋಕಸಭಾ ಚುನಾವಣೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಹಿನ್ನಡೆ ಅನುಭವಿಸಿರುವ ಬಿಜೆಪಿ ಮತ್ತು ಜೆಡಿಎಸ್‌ಗಳಿಗೆ ಲೋಕಸಭಾ ಚುನಾವಣೆಯಲ್ಲೂ ಹೊಡೆತ ಬೀಳಬಹುದು ಎಂಬ ಭಯವಿದೆ. ಅದಕ್ಕಿಂತಲೂ ಹೆಚ್ಚಾಗಿ ಬಿಜೆಪಿಗೆ ತಾನು ಕಳೆದ ಲೋಕಸಭಾ ಚುನಾವಣೆಯಲ್ಲಿ ಗಳಿಸಿಕೊಂಡ 28ರಲ್ಲಿ 25+1 ಸ್ಥಾನಗಳನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಜೆಡಿಎಸ್‌ಗೂ ಅಷ್ಟೇ. ಕಳೆದ ಬಾರಿ ಒಂದು ಸ್ಥಾನ ಗೆದ್ದಿರುವುದನ್ನು ಉಳಿಸಿಕೊಳ್ಳಲಾಗದಿದ್ದರೆ ಎಂಬ ಭಯವಿದೆ. ಹೀಗಾಗಿ ಒಂದು ಹೊಸ ಕಾಂಬಿನೇಷನ್‌ ಮೂಲಕ ಜನರ ಬಳಿಗೆ ಹೋಗುವ ಪ್ರಯತ್ನವಾಗಿ ಮೈತ್ರಿ ನಡೆದಿದೆ.

Congress BJP JDS

ಈ ಮೈತ್ರಿ ಜಾತಿ ಲೆಕ್ಕಚಾರವನ್ನು ಬದಲಾವಣೆ ಮಾಡುತ್ತಾ?

ಎಲ್ಲರಿಗೂ ತಿಳಿದಿರುವಂತೆ ಬಿಜೆಪಿ ಮತ್ತು ಜೆಡಿಎಸ್‌ಗೆ ಒಂದು ಬದಲಾದ ಜಾತಿಯ ತಳಪಾಯವಿದೆ. ಬಿಜೆಪಿಗೆ ಲಿಂಗಾಯತರು ಮತ್ತು ಜೆಡಿಎಸ್‌ಗೆ ಒಕ್ಕಲಿಗರೇ ಬಹುದೊಡ್ಡ ಬೆಂಬಲಿಗರು. ಇವೆರಡು ರಾಜ್ಯದಲ್ಲಿ ಅತ್ಯಂತ ಬಲಿಷ್ಠ, ಶಕ್ತಿಶಾಲಿ ಮತ್ತು ಜನಸಂಖ್ಯೆಯಲ್ಲೂ ನಂಬರ್‌ 1 ಮತ್ತು 2ನೇ ಸ್ಥಾನದಲ್ಲಿರುವ ಸಮುದಾಯಗಳು.

ಕಳೆದ ವಿಧಾನಸಭಾ ಚುನಾವಣೆಯ ಮತ ಲೆಕ್ಕಾಚಾರವನ್ನು ಗಮನಿಸುವುದಾದರೆ ಬಿಜೆಪಿ ಮತ್ತು ಜೆಡಿಎಸ್‌ಗಳು ಈ ಸಮುದಾಯದ ಸಿಂಹಪಾಲು ಮತಗಳನ್ನು ಪಡೆದಿವೆ. ಇದೀಗ ಈ ಎರಡೂ ಪಕ್ಷಗಳು ಒಂದಾದರೆ, ಎರಡು ಸಮುದಾಯಗಳ ಮತಗಳು ಇನ್ನಷ್ಟು ಕ್ರೋಢೀಕರಣಗೊಂಡರೆ ಅದು ಕಾಂಗ್ರೆಸ್‌ ವಿರುದ್ಧ ಅಜೇಯ ಶಕ್ತಿಯಾಗಿ ನಿಲ್ಲಬಹುದು. ಬಿಜೆಪಿಯ ಲಿಂಗಾಯತ ಶಕ್ತಿ ಮತ್ತು ಜೆಡಿಎಸ್‌ನ ಒಕ್ಕಲಿಗ ಶಕ್ತಿಯನ್ನು ಮೀರಲು ಕಾಂಗ್ರೆಸ್‌ಗೆ ನೆರವಾಗಿದ್ದು, ಕುರುಬರು, ಮುಸ್ಲಿಮರು ಮತ್ತು ದಲಿತರು. ಪರಿಶಿಷ್ಟ ಪಂಗಡದ ಮತದಲ್ಲೂ ಕಾಂಗ್ರೆಸ್‌ ಕತ್ತುಕತ್ತಿನ ಹಣಾಹಣಿ ಹೊಂದಿದೆ.

Congress BJP JDS

ಪ್ರಾದೇಶಿಕ ರಾಜಕಾರಣದ ಮೇಲೆ ಏನು ಪರಿಣಾಮ?

ಜಾತ್ಯತೀತ ಜನತಾದಳದ ನಿಜವಾದ ಶಕ್ತಿ ಇರುವುದು ದಕ್ಷಿಣ ಕರ್ನಾಟಕದಲ್ಲಿ. ಹಳೆ ಮೈಸೂರು ಸೀಮೆಯಲ್ಲಿ. ಇಲ್ಲಿ ಜೆಡಿಎಸ್‌ಗೆ ಪ್ರಧಾನ ಎದುರಾಳಿ, ಬಿಜೆಪಿಯಲ್ಲ, ಕಾಂಗ್ರೆಸ್‌. 2018ರ ವಿಧಾನಸಭಾ ಚುನಾವಣೆಯವರೆಗೂ ಈ ಭಾಗದಲ್ಲಿ ಬಿಜೆಪಿಗೊಂದು ಅಸ್ತಿತ್ವವೇ ಇಲ್ಲ ಎಂಬಂತಿತ್ತು. ಆದರೆ, 2019ರ ಚುನಾವಣೆ ಹಿಂದಿನ ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿತು. ನಿಜವೆಂದರೆ 2019ರ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಜತೆಯಾಗಿ ಸ್ಪರ್ಧಿಸಿದ್ದವು. ಲೆಕ್ಕಾಚಾರದ ಪ್ರಕಾರ, ಹಳೆ ಮೈಸೂರು ಪ್ರಾಂತ್ಯದಲ್ಲಿ ಮೈತ್ರಿಗೆ ದೊಡ್ಡ ಗೆಲುವುದು ಸಿಗಬೇಕಾಗಿತ್ತು. ಆದರೆ, ಗೆದ್ದಿದ್ದು ಬಿಜೆಪಿ. ಇದಕ್ಕೆ ಜನರು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯಿಂದ ಸಿಟ್ಟುಗೊಂಡು ಬಿಜೆಪಿಗೆ ಮತ ಹಾಕಿದರೋ, ನರೇಂದ್ರ ಮೋದಿಯ ಮೋಡಿಗೆ ಒಳಗಾಗಿ ಮತ ಹಾಕಿದರೋ ಸ್ಪಷ್ಟವಿಲ್ಲ. ಅಂತೂ ಬಿಜೆಪಿ ಮೂರು ಕ್ಷೇತ್ರಗಳನ್ನು ಉಳಿದು ಎಲ್ಲವನ್ನೂ ಗೆದ್ದುಕೊಂಡಿದೆ.

ಈಗಿನ ಪರಿಸ್ಥಿತಿಯನ್ನು ಅಂದರೆ 2023ರ ಚುನಾವಣೆಯ ಮತ ಲೆಕ್ಕಾಚಾರವನ್ನು ನೋಡಿದರೆ ಜೆಡಿಎಸ್‌ ಮತಗಳು ಎಲ್ಲೋ ಕಳೆದುಹೋಗಿವೆ. ಅದರ ಒಂದು ಭಾಗ ಕಾಂಗ್ರೆಸ್‌ ಕಡೆಗೆ ಹೋಗಿದ್ದರೆ ಬಿಜೆಪಿಯೂ ಪಾಲನ್ನು ಪಡೆದುಕೊಂಡಿದೆ. ಜೆಡಿಎಸ್‌ ಒಕ್ಕಲಿಗರ ಜತೆಗೆ ತನ್ನ ಜಾತ್ಯತೀತ ಟ್ಯಾಗ್‌ನ ನೆಲೆಯಲ್ಲಿ ನೆಚ್ಚಿಕೊಂಡಿದ್ದ ಮುಸ್ಲಿಮರಂತೂ ಈ ಬಾರಿ ಪೂರ್ಣವಾಗಿ ಕೈಕೊಟ್ಟಿದ್ದಾರೆ. ಒಂದು ಕಡೆ ಕಾಂಗ್ರೆಸ್‌, ಇನ್ನೊಂದು ಕಡೆ ಬಿಜೆಪಿಯ ಪ್ರವೇಶದಿಂದ ತನ್ನ ನೆಲೆಯನ್ನು ಕಳೆದುಕೊಳ್ಳುವ ಭಯದಲ್ಲಿರುವ ಜೆಡಿಎಸ್‌ಗೆ ಈ ಮೈತ್ರಿ ಬದುಕುಳಿಯುವ ತಂತ್ರ ಎನ್ನುವ ವಿಶ್ಲೇಷಣೆ ನಡೆಯುತ್ತಿದೆ.

ಇದನ್ನೂ ಓದಿ : BJP-JDS Alliance : ಬಿಜೆಪಿ-ಜೆಡಿಎಸ್‌ ಮೈತ್ರಿಯಿಂದ ರಾಜ್ಯ ರಾಜಕಾರಣದಲ್ಲಿ ಹೊಸ ಶಕೆ ಆರಂಭ!

ಹಾಗಿದ್ದರೆ ಚುನಾವಣೆಯಲ್ಲಿ ಈ ಹೊಸ ಮೈತ್ರಿ ಮಿಂಚಬಹುದೇ?

ಒಂದು ಸರಳ ಮತ ಲೆಕ್ಕಾಚಾರವನ್ನು ನೋಡಿದರೆ ಬಿಜೆಪಿ ಮತ್ತು ಜೆಡಿಎಸ್‌ ಒಂದಾಗುವುದರಿಂದ ಕಾಂಗ್ರೆಸ್‌ಗೆ ದೊಡ್ಡ ಹೊಡೆತ ಇದ್ದೇ ಇದೆ. ರಾಜ್ಯದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲೇ ಏನಾದರೂ ಮೈತ್ರಿ ನಡೆದಿದ್ದರೆ ಆಗಿನ ಜೆಡಿಎಸ್‌-ಬಿಜೆಪಿಯ ಒಟ್ಟು ಮತಗಳನ್ನು ಗಮನಿಸಿದರೆ ಈ ಅಂಶ ಸ್ಪಷ್ಟವಾಗುತ್ತದೆ. ಅಂದರೆ, ಬಿಜೆಪಿ ಅಭ್ಯರ್ಥಿ ನಿಂತಲ್ಲಿ ಜೆಡಿಎಸ್‌ನ ಎಲ್ಲ ಮತಗಳು ಅದಕ್ಕೆ ಶಿಫ್ಟ್‌ ಆಗಿದ್ದರೆ, ಜೆಡಿಎಸ್‌ ಕಣದಲ್ಲಿದ್ದಾಗ ಬಿಜೆಪಿಯ ಎಲ್ಲ ಮತಗಳು ಅದಕ್ಕೆ ಸಿಕ್ಕಿದ್ದರೆ ಕಾಂಗ್ರೆಸ್‌ನ ಬಲ ಈಗಿನ 135ರಿಂದ 90ಕ್ಕೆ ಇಳಿಯುತ್ತಿತ್ತು.

#image_title

ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೇನೆಂದರೆ 2019ರ ಲೋಕಸಭಾ ಚುನಾವಣೆಯ ಹೊತ್ತಿಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿಯಲ್ಲಿದ್ದವು. ಅವುಗಳ ಒಟ್ಟು ಮತ ಲೆಕ್ಕಾಚಾರ, ಕ್ಷೇತ್ರವಾರು ಹೊಂದಾಣಿಕೆಯನ್ನು ಗಮನಿಸಿದ್ದರೆ ಈ ಮೈತ್ರಿ ಗೌರವ ತರುವ ಸ್ಥಾನಗಳನ್ನಾದರೂ ಗೆಲ್ಲಬೇಕಿತ್ತು. ನಿಜವೆಂದರೆ, ಅದರ ಮತ ಲೆಕ್ಕಾಚಾರದ ಆಧಾರದಲ್ಲಿ ಹೇಳುವುದಾದರೆ ಒಟ್ಟು 224 ಕ್ಷೇತ್ರಗಳ ಪೈಕಿ 152ರಲ್ಲಿ ಮುನ್ನಡೆಯಲ್ಲಿ ಇರಬೇಕಾಗಿತ್ತು. ಆದರೆ, ಅವೆರಡೂ ಸೇರಿ ಮುನ್ನಡೆಯಲ್ಲಿದ್ದದ್ದು ಕೇವಲ 47 ಸ್ಥಾನಗಳಲ್ಲಿ ಮಾತ್ರ! ಅಂದರೆ ಎಲ್ಲ ಲೆಕ್ಕಾಚಾರಗಳನ್ನು ಮೀರಿ ಬಿಜೆಪಿ ಅಂದು ಗೆಲುವು ಸಾಧಿಸಿತ್ತು.

ಈ ಬಾರಿ ಮೈತ್ರಿಯ ಮೇಲೆ ಎರಡೂ ಪಕ್ಷಗಳಿಗೆ ವಿಶ್ವಾಸವಿದೆ. ಜೆಡಿಎಸ್‌ ಐದು ಕ್ಷೇತ್ರಗಳನ್ನು ಕೇಳಿದೆ ಎಂಬ ಮಾತಿದೆ. ಆ ಮೂಲಕ ತನ್ನ ಸ್ಥಾನ ಸಂಖ್ಯೆಯನ್ನು ಅದು ಒಂದರಿಂದ ಐದಕ್ಕೆ ಏರಿಸಿಕೊಳ್ಳುವ ಚಿಂತನೆಯಲ್ಲಿದೆ. ಬಿಜೆಪಿ ಕೆಲವು ಕ್ಷೇತ್ರಗಳನ್ನು ಬಿಟ್ಟುಕೊಡಬೇಕಾದೀತು. ಆದರೂ ಜಂಟಿಯಾಗಿ ಎಲ್ಲವನ್ನೂ ಗೆಲ್ಲಬೇಕು ಎನ್ನುವುದು ಅದರ ತಂತ್ರ.

ಇದನ್ನೂ ಓದಿ : BJP-JDS Alliance: ಅವ್ರು ಗೆಲ್ಲಲ್ಲ; ತುಮಕೂರಿನಲ್ಲಿ ದೇವೇಗೌಡ್ರ ಸ್ಪರ್ಧೆಗೆ ಹಾಲಿ ಬಿಜೆಪಿ ಸಂಸದ ಬಸವರಾಜ್‌ ತೀವ್ರ ವಿರೋಧ

ಈ ಎಲ್ಲ ತಂತ್ರಗಳು ಸಫಲವಾಗಬೇಕು ಎಂದರೆ ಬಿಜೆಪಿ ಮತ್ತು ಜೆಡಿಎಸ್‌ನ ಸಾಮಾನ್ಯ ಕಾರ್ಯಕರ್ತರು ಪರಸ್ಪರ ಬೆಸೆದುಕೊಳ್ಳುವ ವಾತಾವರಣ ಸೃಷ್ಟಿಯಾಗಬೇಕು. ಸದ್ಯಕ್ಕೆ ಬಹುತೇಕ ನಾಯಕರು ಈ ಮೈತ್ರಿಯನ್ನು ಒಪ್ಪಿಕೊಂಡಿದ್ದಾರೆ. ಅದು ಕಾರ್ಯಕರ್ತರ ಹಂತದಲ್ಲಿ ರೆಪ್ಲಿಕೇಟ್‌ ಆದಾಗ ಬಿಜೆಪಿ ಮತ್ತು ಜೆಡಿಎಸ್‌ ಅಂದುಕೊಂಡದ್ದು ಸಾಕಾರವಾಗುತ್ತದೆ. ಸಾಧ್ಯವಾಗದೆ ಇದ್ದರೆ ಈ ಬಾರಿ ಮುಸ್ಲಿಮರು ಸಾರಾಸಗಟಾಗಿ ಕಾಂಗ್ರೆಸ್‌ ಕಡೆ ಹೋದಂತೆ ಶಿಫ್ಟ್‌ ಆಗುವ ಅಪಾಯವಿದೆ.

Exit mobile version