Site icon Vistara News

BY Vijayendra: ರಾಜ್ಯ ಬಿಜೆಪಿ ನಾಯಕರ ಅಸಮಾಧಾನ ಸರಿಪಡಿಸುತ್ತೇವೆ: ವಿಜಯೇಂದ್ರಗೆ ಅಮಿತ್‌ ಶಾ ಭರವಸೆ

BY Vijayendra meets Amit Shah

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BJP state president BY Vijayendra) ಅವರು ಗುರುವಾರ (ಡಿಸೆಂಬರ್‌ 21) ಗೃಹ ಸಚಿವ ಅಮಿತ್ ಶಾ (Home Minister Amit Shah) ಅವರನ್ನು ಭೇಟಿ ಮಾಡಿ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಲೋಕಸಭೆ ಕೊಠಡಿಯಲ್ಲಿ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ ಬಿವೈವಿ, ರಾಜಕೀಯ ವಿದ್ಯಮಾನಗಳ (Political Phenomenon) ಬಗ್ಗೆ ಚರ್ಚೆ ನಡೆಸಿದ್ದಾರೆ. ಕೋರ್‌ ಕಮಿಟಿಯಲ್ಲಿ ಕೆಲವು ಬದಲಾವಣೆಯನ್ನು ಮಾಡುವಂತೆ ಸೂಚನೆ ನೀಡಿರುವ ಅಮಿತ್‌ ಶಾ, ಕೆಲವು ರಾಜ್ಯ ನಾಯಕರ ಅಸಮಾಧಾನಗಳನ್ನು ಗಮನಿಸಿದ್ದು, ಮುಂದಿನ ದಿನಗಳಲ್ಲಿ ಅದನ್ನೆಲ್ಲ ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.

ಒಟ್ಟು 18 ನಿಮಿಷಗಳ ಕಾಲ ಚರ್ಚೆ ಅಮಿತ್‌ ಶಾ ಜತೆಗೆ ಬಿ.ವೈ. ವಿಜಯೇಂದ್ರ ಚರ್ಚೆ ಮಾಡಿದ್ದಾರೆ. ಈ ವೇಳೆ ಅಮಿತ್‌ ಶಾ ಅವರು ಕೆಲವು ಸೂಚನೆಗಳನ್ನು ನೀಡಿದ್ದಾರೆ. ರಾಜ್ಯದಲ್ಲಿ ಸಂಘಟನೆಯನ್ನು ಬಲಪಡಿಸುವುದರ ಜತೆಗೆ ಲೋಕಸಭಾ ಚುನಾವಣೆಯನ್ನು ಗೆಲ್ಲಬೇಕು. ಈ ದೃಷ್ಟಿಯಿಂದ ಪದಾಧಿಕಾರಿಗಳ ನೇಮಕವನ್ನು ಆದಷ್ಟು ಬೇಗ ಮಾಡಬೇಕು. ಕೇಂದ್ರದ ಯೋಜನೆ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು. ವಿಕಸಿತ ಭಾರತವನ್ನು ಸರಿಯಾದ ರೀತಿಯಲ್ಲಿ ಪ್ರಚಾರ ಮಾಡಬೇಕು. ಕೇಂದ್ರದ ಯೋಜನೆಯನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಬೂತ್ ಮಟ್ಟದಿಂದ ಹಿಡಿದು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಹೇಳಿದ್ದಾರೆ.

BY Vijayendra meets Amit Shah

ಇನ್ನು ಇದೇ ವೇಳೆ ಬಿಜೆಪಿ – ಜೆಡಿಎಸ್ ಮೈತ್ರಿ ವಿಚಾರವನ್ನೂ ಚರ್ಚೆ ಮಾಡಲಾಗಿದೆ. ಬಿಜೆಪಿ – ಜೆಡಿಎಸ್ ಮೈತ್ರಿ ಕೇವಲ ಮೇಲ್ನೋಟಕ್ಕೆ ಸೀಮಿತವಾಗಬಾರದು. ಕೆಳ ಹಂತದವರೆಗೂ ಇದರ ಪರಿಣಾಮ ಬೀರಬೇಕು. ಮೈತ್ರಿಯಿಂದ ಆದಷ್ಟು ಪ್ಲಸ್ ಪಾಯಿಂಟ್ ಪಕ್ಷಕ್ಕೆ ಆಗಬೇಕು. ಸೀಟ್ ಹಂಚಿಕೆ ವಿಚಾರವನ್ನು ನಾವು ನಿರ್ಧಾರ ಮಾಡುತ್ತೇವೆ. ಎಲ್ಲವೂ ಸರಿ ಇರುತ್ತದೆ. ಎರಡು ಕಡೆಯ ಪಕ್ಷದ ಕಾರ್ಯಕರ್ತರಲ್ಲಿ ಮೈತ್ರಿಯ ಲಾಭದ ಬಗ್ಗೆ ಅರಿವು ಮೂಡಿಸಬೇಕು. ಎರಡು ಪಕ್ಷವೂ ಒಂದೇ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ ಎಂದು ಕಾರ್ಯಕರ್ತರಿಗೂ ಅನ್ನಿಸಬೇಕು ಎಂದು ಅಮಿತ್‌ ಶಾ ಇದೇ ಸಂದರ್ಭದಲ್ಲಿ ಹೇಳಿದ್ದಾರೆ ಎನ್ನಲಾಗಿದೆ.

ಕೋರ್ ಕಮಿಟಿಯಲ್ಲೂ ಕೆಲವು ಬದಲಾವಣೆಗಳನ್ನು ಮಾಡಲು ಸೂಚನೆ ನೀಡಲಾಗಿದೆ. ಜತೆಗೆ ಎಂಎಲ್‌ಸಿ ಮತ್ತು ಎಂಪಿ ಎರಡು ಚುನಾವಣೆಯಲ್ಲೂ ಒಟ್ಟಿಗೆ ಹೋಗಬೇಕು. ಈ ನಿಟ್ಟಿನಲ್ಲಿ ಮೈತ್ರಿ ಸಂಬಂಧ ಗಟ್ಟಿಯಾಗುವಂತೆ ನೋಡಿಕೊಳ್ಳಿ ಎಂದು ಅಮಿತ್‌ ಶಾ ಸೂಚನೆ ನೀಡಿದ್ದಾರೆ.

ಬಿಜೆಪಿ ನಾಯಕರ ಅಸಮಾಧಾನದ ವಿಚಾರವು ಸಹ ಇದೇ ವೇಳೆ ಪ್ರಸ್ತಾಪವಾಗಿದೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ಅಮಿತ್‌ ಶಾ, ಎಲ್ಲವನ್ನೂ ನಾನು ಗಮನಿಸುತ್ತಿದ್ದೇನೆ. ನಾವು ಅದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಮುಂದಿನ ದಿನಗಳಲ್ಲಿ ನಾವು ಅದನ್ನೆಲ್ಲ ಸರಿಪಡಿಸುವ ಕೆಲಸವನ್ನು ಮಾಡುತ್ತೇವೆ ಎಂದು ಅಮಿತ್‌ ಶಾ ಹೇಳಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಂಸದರಾದ ಪ್ರತಾಪ್ ಸಿಂಹ, ಮುನಿಸ್ವಾಮಿ ಜತೆಗಿದ್ದರು.

BY Vijayendra meets Amit Shah

ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ ವಿಜಯೇಂದ್ರ

ಇದಕ್ಕೂ ಮೊದಲು ಅಂದರೆ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಿ.ವೈ. ವಿಜಯೇಂದ್ರ ಭೇಟಿ ಮಾಡಿ ಮಾತನಾಡಿದರು. ರಾಜ್ಯ ರಾಜಕೀಯ ವಿಚಾರ ಮತ್ತು ಲೋಕಸಭಾ ಚುನಾವಣಾ ತಯಾರಿ ಬಗ್ಗೆ ಈ ವೇಳೆ ವಿಜಯೇಂದ್ರ ಅವರು ಪ್ರಧಾನಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಬಿ.ವೈ. ವಿಜಯೇಂದ್ರ ಟ್ವೀಟ್

ಅಮಿತ್‌ ಶಾ ಅವರ ಭೇಟಿ ಬಳಿಕ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿರುವ ಬಿ.ವೈ. ವಿಜಯೇಂದ್ರ, ಭೇಟಿ ವೇಳೆ ಶಾ ಅವರು ಸ್ಫೂರ್ತಿ ತುಂಬುವ ಮಾತುಗಳನ್ನು ಆಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.

“ಮಾನ್ಯ ಅಮಿತ್ ಶಾ ಜೀ,
“ರಾಷ್ಟ್ರಭಕ್ತಿ-ಪಕ್ಷನಿಷ್ಠೆ ನಿಮ್ಮ ಧ್ಯೇಯ, ಬದ್ಧತೆ, ಆತ್ಮ ವಿಶ್ವಾಸ, ಗುರಿ ಮುಟ್ಟುವ ಛಲ, ಗೆಲುವಿನ ರಣತಂತ್ರ ನಿಮ್ಮ ಶಕ್ತಿ. ಇದು ನಮ್ಮಂಥ ಯವಕರಿಗೆ ನಿತ್ಯ ಸ್ಫೂರ್ತಿ”

ಇಂದು ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವರಾದ ಅಮಿತ್‌ ಶಾ ಅವರನ್ನು ಭೇಟಿಯಾಗಿ ಪಂಚರಾಜ್ಯ ಚುನಾವಣೆಯ ಬಿಜೆಪಿ ಗೆಲುವಿನ ಸಾಧನೆಗಾಗಿ ಆತ್ಮೀಯ ಅಭಿನಂದನೆ ಸಲ್ಲಿಸಿ ಆಶೀರ್ವಾದ ಪಡೆಯಲಾಯಿತು.

ಇದನ್ನೂ ಓದಿ: BJP JDS Alliance: ಬಿಜೆಪಿ ಜೆಡಿಎಸ್‌ ಮೈತ್ರಿಯಲ್ಲಿ 24+4 ಫಾರ್ಮುಲಾ? ಆ 4 ಕ್ಷೇತ್ರ ಯಾವುದು?

ಪಕ್ಷ ಸಂಘಟನೆಯ ಅವಕಾಶಗಳನ್ನು ಕಲ್ಪಿಸಿ ಆರಂಭದಿಂದಲೂ ನನಗೆ ಮಾರ್ಗದರ್ಶನ ನೀಡುತ್ತಿರುವ ಅಮಿತ್ ಶಾ ಜೀ ಅವರು ನನ್ನ ಸಾಮರ್ಥ್ಯದ ಮೇಲೆ ಅಪರಿಮಿತ ನಂಬಿಕೆಯನ್ನಿರಿಸಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸುವ ಮಹತ್ವದ ನಿರ್ಣಯದಲ್ಲಿ ಭಾಗಿಯಾಗಿದ್ದು, ನನ್ನ ಜೀವನದಲ್ಲಿ ಎಂದೂ ಮರೆಯಲಾಗದ ಮಹತ್ವದ ಘಟ್ಟ. ಈ ನಿಟ್ಟಿನಲ್ಲಿ ಅವರ ಇಂದಿನ ಉತ್ತೇಜನ ಪೂರ್ಣ ಮಾತುಗಳು ನನ್ನಲ್ಲಿ ಹನುಮನ ಶಕ್ತಿ – ಭೀಮನ ಛಲ ನೆನಪಿಸುವ ಸಂಕಲ್ಪ ತೊಡಿಸಿದೆ” ಎಂದು ವಿಜಯೇಂದ್ರ ಬರೆದುಕೊಂಡಿದ್ದಾರೆ.

Exit mobile version