ಬೆಂಗಳೂರು: ಈ ಹಿಂದೆ ಬಸವರಾಜ ಬೊಮ್ಮಾಯಿ (Basavaraj Bommai) ನೇತೃತ್ವದ ಬಿಜೆಪಿ ಸರ್ಕಾರ ನೀಡಿದ್ದ ಕೋಟ್ಯಂತರ ರೂಪಾಯಿ ಅನುದಾನದಲ್ಲಿ ಬಿಜೆಪಿ ಶಾಸಕರ ಕ್ಷೇತ್ರದಿಂದ ಅನುದಾನವನ್ನು ವಾಪಸ್ ಪಡೆದಿರುವ ಸರ್ಕಾರ ತಮ್ಮದೇ ಪಕ್ಷದ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ (Constituency of Congress MLAs) ವರ್ಗಾಯಿಸಿದೆ. ಇದೇ ವೇಳೆ ಆರ್.ಆರ್. ನಗರಕ್ಕೆ ನೀಡಲಾಗಿದ್ದ 126 ಕೋಟಿ ರೂಪಾಯಿ ಅನುದಾನವನ್ನೂ ವಾಪಸ್ ಪಡೆದು ಆದೇಶವನ್ನು ಹೊರಡಿಸಲಾಗಿರುವುದನ್ನು ಶಾಸಕ ಮುನಿರತ್ನ (MLA Muniratna) ತೀವ್ರವಾಗಿ ಖಂಡಿಸಿದ್ದಾರೆ. ನಾನು ಕ್ಷೇತ್ರದ ಅನುದಾನ ಕೊಡಿ ಅಂತ ಸಿಎಂ ಸಿದ್ದರಾಮಯ್ಯ ಬಳಿ ಹೋಗಲ್ಲ. ಡಿಸಿಎಂ ಡಿ.ಕೆ. ಶಿವಕುಮಾರ್ (Deputy CM DK Shivakumar) ಅವರ ಬಳಿ ಹೋಗುತ್ತೇನೆ. ಅವರೇ ನಮಗೆ ಬೆಂಗಳೂರಿನ ಸಿಎಂ ಎಂದು ಹೇಳಿದ್ದಾರೆ. ಅನುದಾನಕ್ಕಾಗಿ ಡಿಸಿಎಂ ಕಾಲನ್ನು ಬೇಕಿದ್ದರೂ ಹಿಡಿಯುತ್ತೇನೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಮುನಿರತ್ನ, ಡಿಸಿಎಂ ಅವರೇ ಬೆಂಗಳೂರಿನ ಸಿಎಂ. ಹೀಗಾಗಿ ಅವರ ಬಳಿಯೇ ಹೋಗುತ್ತೇನೆ. ನಾನು ಶಾಸಕನಾದರೆ, ಡಿ.ಕೆ. ಸುರೇಶ್ ಅವರು ಸಂಸದರಾಗಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಅಕ್ರಮ ಆಗಿದೆ ಅಲ್ವಾ? ಇಬ್ಬರ ವಿರುದ್ಧವೂ ತನಿಖೆಯಾಗಲಿ. ಬುಧವಾರ ಎರಡು ಗಂಟೆಗೆ ಬರುತ್ತೇನೆ. ಎಲ್ಲಿದ್ದಾರೆ ಅಂತ ಹೇಳಲಿ, ಹೋಗಿ ಅವರ ಕಾಲು ಹಿಡಿಯುತ್ತೇನೆ. ನನ್ನ ಕ್ಷೇತ್ರದ ಅನುದಾನಕ್ಕೆ ನಾನು ಹೋಗಿ ಕಾಲು ಹಿಡಿಯುತ್ತೇನೆ ಎಂದು ಹೇಳಿದರು.
ಪ್ರತಿಭಟನೆಗೆ ಕೂರುತ್ತೇನೆ
ಹೊಸಕೆರೆ ಹಳ್ಳಿಯಲ್ಲಿ 56 ಎಕರೆ ಕೆರೆಯಲ್ಲಿ ಹೊಲಸು ತುಂಬಿತ್ತು. ಅಲ್ಲಿ ಪಾರ್ಕ್ ಮಾಡಲು ಅನುದಾನ ತೆಗೆದುಕೊಂಡು ಹೋಗಿದ್ದೆವು. ರಸ್ತೆ ಅಗಲೀಕರಣದ ಅನುದಾನಕ್ಕೂ ಕತ್ತರಿ ಹಾಕಲಾಗಿದೆ. ನಾನು ಪ್ರತಿಭಟನೆಗೆ ಕೂರುತ್ತೇನೆ. ಬೇರೆಯವರ ಬಗ್ಗೆ ನನಗೆ ಗೊತ್ತಿಲ್ಲ. ಬಿಜೆಪಿ ಪಕ್ಷ ಏಕಾಂಗಿ ಅಲ್ಲ. ನನಗೆ ಅನೇಕರು ಕರೆ ಮಾಡಿದ್ದಾರೆ. ಪ್ರತಿಭಟನೆಗೆ ಅನೇಕರು ಬರಬಹುದು. ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಜನತೆಯ ಪರವಾಗಿ ನಾನು ಪ್ರತಿಭಟನೆಗೆ ಕೂರುತ್ತೇನೆ. ಆ ಕ್ಷೇತ್ರದ ಜನ ನನಗೆ ಮತ ಕೊಟ್ಟಿದ್ದಾರೆ. ಅವರ ಋಣ ತೀರಿಸಲು ಸಾಧ್ಯವಿಲ್ಲ. ನಾವು ಭಿಕ್ಷುಕರು ಭಿಕ್ಷೆ ಬೇಡಿದ್ದೇವೆ, ಮತ ಹಾಕಿದ್ದಾರೆ. ಶಾಸಕರಾದವರು ಭಿಕ್ಷುಕರು. ಕೆಲವರು ಏನೋ ಅಂದುಕೊಂಡಿದ್ದಾರೆ ಎಂದು ಶಾಸಕ ಮುನಿರತ್ನ ಹೇಳಿದರು.
ಪ್ರತಿಭಟನೆ ಮಾಡಲಿ ಎಂದ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಮುನಿರತ್ನ, ನಾನು ಅವರ ಹೇಳಿಕೆಯನ್ನು ಸ್ವಾಗತ ಮಾಡುತ್ತೇನೆ. ಬಸವರಾಜ್ ಬೊಮ್ಮಾಯಿ ಅವರು ಮಾಡಿದ್ದಾರೆ ಎಂದು ಹೇಳುತ್ತಾರೆ. ಅವರು ಡಿ.ಕೆ. ಸಹೋದರರ ಕ್ಷೇತ್ರದಲ್ಲಿ ಮಾಡಲಿಲ್ಲ. ಇದು ಯುದ್ಧ ಅಲ್ಲ. ಪ್ರಜಾಪ್ರಭುತ್ವದ ದೇಶ. ನಾವು ಪ್ರಜೆಗಳಿಗೆ ಕೆಲಸ ಮಾಡಲು ಬಂದಿದ್ದೇವೆ ಎಂದು ಮುನಿರತ್ನ ತಿಳಿಸಿದರು.
ಆರ್ ಆರ್ ನಗರ ಕ್ಷೇತ್ರಕ್ಕೆ ಕೊಡಲಾಗಿದ್ದ 126 ಕೋಟಿ ರೂಪಾಯಿ ಅನುದಾನವನ್ನು ಏಕಾಏಕಿ ಕಡಿತ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಶಾಸಕರಿಗೆ ಹಂಚಿಕೆ ಮಾಡಿದ್ದಾರೆ. ನಮ್ಮ ಪಕ್ಷದ ಶಾಸಕರು ಇರುವ ಯಶವಂತಪುರಕ್ಕೆ 40 ಕೋಟಿ ರೂಪಾಯಿ ಕೊಟ್ಟಿದ್ದಾರೆ. ಬ್ಯಾಟರಾಯನ ಪುರ ಹಾಗೂ ಪುಲಕೇಶಿ ನಗರಕ್ಕೂ ಕೊಟ್ಟಿದ್ದಾರೆ. ಕೆ.ಜಿ ಹಳ್ಳಿ ಡಿ.ಜೆ ಹಳ್ಳಿ ಪ್ರಕರಣ ನಡೆದಿದ್ದು, ಅದನ್ನು ಮುಚ್ಚಿ ಹಾಕಲು ಕೊಟ್ಟಿದ್ದಾರೆ. ನಮ್ಮ ರಾಜರಾಜೇಶ್ವರಿ ನಗರ ಕ್ಷೇತ್ರದ 40 ಕೋಟಿ ಪುಲಕೇಶಿ ನಗರ ಕ್ಷೇತ್ರಕ್ಕೆ ಕೊಟ್ಟಿದ್ದಾರೆ ಎಂದು ಮುನಿರತ್ನ ಕಿಡಿಕಾರಿದರು.
ಡಿ.ಕೆ. ಸುರೇಶ್ ಅವರು ನಮ್ಮ ಕ್ಷೇತ್ರದ ಸಂಸದರಾಗಿದ್ದಾರೆ. ಪ್ರತಿ ವರ್ಷ ಅನುದಾನ ಕೊಟ್ಟಿದ್ದರೆ ಈವರೆಗೆ 10 ಕೋಟಿ ರೂಪಾಯಿ ಅನುದಾನ ಕೊಡಬಹುದಿತ್ತು. ಆದರೆ, ಬಸ್ ನಿಲ್ದಾಣವೊಂದಕ್ಕೆ ಹಾಗೂ ಒಂದು ಶಾಲೆಗೆ 35 ಲಕ್ಷ ರೂಪಾಯಿ ಅನುದಾನವನ್ನು ಮಾತ್ರ ಕೊಟ್ಟಿದ್ದಾರೆ. ಯಾವುದೇ ಅನುದಾನ ಕೊಟ್ಟಿಲ್ಲ. ಈಗ ನಮ್ಮ ಕ್ಷೇತ್ರದ ಅನುದಾನವನ್ನು ಬೇರೆ ಕಡೆಗೆ ಹಂಚಿಸಿದ್ದಾರೆ. ನಮ್ಮ ಕ್ಷೇತ್ರಕ್ಕೆ ಇಷ್ಟು ಅನುದಾನ ತಂದಿದ್ದೇವೆ ಅಂತ ಹೇಳಿಕೊಳ್ಳಬಹುದಿತ್ತು. ಆದರೆ, ಇದೇ ಮೊದಲ ಬಾರಿಗೆ ಇತಿಹಾಸದಲ್ಲಿ ಈ ರೀತಿ ಮಾಡಿದ್ದಾರೆ ಎಂದು ಮುನಿರತ್ನ ಆಕ್ರೋಶವನ್ನು ಹೊರಹಾಕಿದರು.
ಬುಧವಾರ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೂ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ಕೂರುತ್ತೇನೆ. ಬಳಿಕ ತೆಲಂಗಾಣಕ್ಕೆ ತೆರಳುತ್ತೇನೆ. ಅಲ್ಲಿನ ಒಂದು ಕ್ಷೇತ್ರವನ್ನು ನನಗೆ ಉಸ್ತುವಾರಿ ವಹಿಸಲಾಗಿದೆ. ಹೀಗಾಗಿ ಅಲ್ಲಿಗೆ ಹೋಗುತ್ತಿದ್ದೇನೆ ಎಂದು ಶಾಸಕ ಮುನಿರತ್ನ ಹೇಳಿದರು.
ಇದನ್ನೂ ಓದಿ: Karnataka Politics : ಬಿಜೆಪಿ ಶಾಸಕರ ಅನುದಾನ ಕಿತ್ತು ಕಾಂಗ್ರೆಸ್ ಸದಸ್ಯರಿಗೆ ಕೊಟ್ಟ ಸರ್ಕಾರ! ಇದೆಂಥ ದ್ವೇಷ!
ಚುನಾವಣೆ ಮೊದಲೇ ಕಾಂಗ್ರೆಸ್‌ಗೆ ಹೋಗಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಶಾಸಕ ಮುನಿರತ್ನ, ಬಂದು ಬಿಡಿ ಬಂದು ಬಿಡಿ ಅಂದರೆ ಎಲ್ಲಿಗೆ ಹೋಗಲಿ? ನಾನು ಬಿಜೆಪಿಯಲ್ಲಿ ಇದ್ದೇನೆ. ಬಿಜೆಪಿ ಬಿಟ್ಟು ನಾನು ಎಲ್ಲೂ ಹೋಗಲ್ಲ. ಯಾರು ಇರ್ತಾರೋ, ಇಲ್ಲವೋ ಗೊತ್ತಿಲ್ಲ. ಕೊನೇವರೆಗೂ ನಾನು ಬಿಜೆಪಿಯಲ್ಲೇ ಇರುತ್ತೇನೆ. 66 ಜನ ನಾವು ವಿರೋಧ ಪಕ್ಷದ ನಾಯಕರು. ಎಲ್ಲರೂ ವಿಪಕ್ಷ ನಾಯಕರಾಗಿಯೇ ಕೆಲಸ ಮಾಡುತ್ತೇವೆ. ವಿಪಕ್ಷ ನಾಯಕನ ಆಯ್ಕೆ ಮಾಡದ ವಿಚಾರವಾಗಿ ಮಾಜಿ ಸಿಎಂ ಸದಾನಂದ ಗೌಡ ಅವರು ವಿರೋಧ ಮಾಡಿರುವ ಬಗ್ಗೆ ನನ್ನ ವಿರೋಧ ಇದೆ. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರನ್ನು ಕೆಳಗೆ ಇಳಿಸುವಾಗ ಅವರಿಗೆ ವಿರೋಧ ಇರಲಿಲ್ಲವಾ? ಆಗ ಯಾಕೆ ಪ್ರಶ್ನೆ ಮಾಡಲಿಲ್ಲ ಎಂದು ಶಾಸಕ ಮುನಿರತ್ನ ಕೇಳಿದ್ದಾರೆ.