Site icon Vistara News

Lok Sabha Election 2024: ಲೋಕಸಭೆಗೆ ಸ್ಪರ್ಧಿಸಲ್ಲ, ನಾನು ಫುಟ್ಬಾಲ್‌ ಅಲ್ಲ; ಹೈಕಮಾಂಡ್‌ಗೆ ಪ್ರಕಾಶ್‌ ಹುಕ್ಕೇರಿ ವಾರ್ನಿಂಗ್‌!

Prakash Hukkeri

ಚಿಕ್ಕೋಡಿ: ರಾಜ್ಯದಲ್ಲಿ ಲೋಕಸಭಾ ಚುನಾವಣೆ (Lok Sabha Election 2024) ಬಿಸಿ ದಿನೇ ದಿನೆ ಹೆಚ್ಚಾಗುತ್ತಿದೆ. ಎಲ್ಲ ರಾಜಕೀಯ ಪಕ್ಷಗಳೂ ತಯಾರಿಯನ್ನು ನಡೆಸಿಕೊಂಡು ಬರುತ್ತಿವೆ. ಈ ನಡುವೆ ಕಳೆದ ಬಾರಿ ರಾಜ್ಯದಲ್ಲಿ ಹೀನಾಯವಾಗಿ ಸೋಲುಕಂಡಿದ್ದ ಕಾಂಗ್ರೆಸ್‌ (Congress Karnataka) ಈ ಬಾರಿ ಆಡಳಿತದಲ್ಲಿದೆ. ಹೀಗಾಗಿ ಶತಾಯಗತಾಯ 28 ಲೋಕಸಭಾ ಕ್ಷೇತ್ರಗಳಲ್ಲಿ ಕನಿಷ್ಠ 20 ಕ್ಷೇತ್ರವನ್ನು ಗೆಲ್ಲಲೇಬೇಕು ಎಂಬ ಗುರಿಯನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಗೆಲ್ಲುವ ಅಭ್ಯರ್ಥಿಗಾಗಿ ಹುಡುಕಾಟವನ್ನು ನಡೆಸಲಾಗಿದೆ. ಯಾವ ಕ್ಷೇತ್ರದಲ್ಲಿ ಯಾರನ್ನು ಕಣಕ್ಕಿಳಿಸಿದರೆ ಸೂಕ್ತ ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ. ಇದರ ಭಾಗವಾಗಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ (Chikkodi Lok Sabha constituency) ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ (Prakash Hukkeri) ಹೆಸರು ಕಾಂಗ್ರೆಸ್‌ನಿಂದ ಕೇಳಿ ಬರುತ್ತಿದೆ. ಆದರೆ, ಇದರಿಂದ ಸಿಟ್ಟಾಗಿರುವ ಅವರು, ಕಾಂಗ್ರೆಸ್ ಹೈಕಮಾಂಡ್‌ಗೆ ನೇರವಾಗಿ ಎಚ್ಚರಿಕೆ ರವಾನಿಸಿದ್ದಾರೆ. ತಾವು ಫುಟ್ಬಾಲ್‌ ಆಗಲು ಇಷ್ಟಪಡುವುದಿಲ್ಲ ಎಂದು ಕಿಡಿಕಾರಿದ್ದಾರೆ. ನಾನೇನು ಸಿಎಂಗೆ ಲಿಖಿತ ರೂಪದಲ್ಲಿ ಬರೆದು ಕೊಟ್ಟಿಲ್ಲ ಎಂದೂ ಆಕ್ರೋಶವನ್ನು ಹೊರಹಾಕಿದ್ದಾರೆ.

ಈ ಬಗ್ಗೆ ಚಿಕ್ಕೋಡಿ ತಾಲೂಕಿನ ಕೆರೂರ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಾಯವ್ಯ ಮತಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ, ಚಿಕ್ಕೋಡಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಆದರೆ, ಯಾವುದೇ ಕಾರಣಕ್ಕೂ ನಾನು ಎಂಪಿ ಸ್ಥಾನಕ್ಕೆ ಸ್ಪರ್ಧೆ ಮಾಡುವುದಿಲ್ಲ. ಯಾರು ಎಷ್ಟೇ ಒತ್ತಡ ತಂದರೂ ನಾನು ಸ್ಪರ್ಧೆ ಮಾಡುವುದಿಲ್ಲ. ನಾನು ಯಾವುದೇ ಕಾರಣಕ್ಕೂ ಫುಟ್ಬಾಲ್‌ ಆಗುವುದಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.

ಈ ಹಿಂದೆ ಸಚಿವ ಸ್ಥಾನವನ್ನು ಬಿಟ್ಟು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇನೆ. ಸದ್ಯ ವಿಧಾನ ಪರಿಷತ್ ಸದಸ್ಯನಾಗಿ ಕಾರ್ಯವನ್ನು ಮಾಡುತ್ತಿದ್ದೇನೆ. ಐದು ವರ್ಷಗಳ ಕಾಲ ಎಂಎಲ್ಸಿ ಸ್ಥಾನದ ಅಧಿಕಾರ ಅವಧಿ ಇದೆ. ಮತ್ತೆ ಲೋಕಸಭಾ ಚುನಾವಣೆಗೆ ಸ್ಪರ್ಧೆ ಎಂಬುದು ಫುಟ್ಬಾಲ್‌ ಮ್ಯಾಚ್ ಅಲ್ಲ. ನಾನು ಯಾವುದೇ ಕಾರಣಕ್ಕೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಸಿಎಂ ಸಿದ್ದರಾಮಯ್ಯ ನನಗೆ ಸ್ಪರ್ಧೆ ಮಾಡು ಎಂದು ಹೇಳಿದರೂ ನಾನು ಮಾಡುವುದಿಲ್ಲ. ನಾನೇನು ಸಿಎಂಗೆ ಲಿಖಿತ ರೂಪದಲ್ಲಿ ಬರೆದು ಕೊಟ್ಟಿಲ್ಲ ಎಂದು ಪ್ರಕಾಶ್ ಹುಕ್ಕೇರಿ ತಿರುಗೇಟು ನೀಡಿದ್ದಾರೆ.

ಹೈಕಮಾಂಡ್‌ ನನ್ನ ಮೇಲೆ ಒತ್ತಡ ತರಬಾರದು!

ಇನ್ನು ಇದೇ ವೇಳೆ ಕಾಂಗ್ರೆಸ್‌ ಹೈಕಮಾಂಡ್‌ ಮೇಲೂ ಗುಡುಗಿದ ಪ್ರಕಾಶ್ ಹುಕ್ಕೇರಿ, ಯಾವುದೇ ಕಾರಣಕ್ಕೂ, ಯಾವುದೇ ಪರಿಸ್ಥಿತಿ ಬಂದರೂ ನಾನು ಮಾತ್ರ ಲೋಕಸಭೆಗೆ ಸ್ಪರ್ಧೆ ಮಾಡುವುದಿಲ್ಲ. ಕಾಂಗ್ರೆಸ್ ಹೈಕಮಾಂಡ್ ಕೂಡಾ ನನ್ನ ಮೇಲೆ ಒತ್ತಡ ಮಾಡಬಾರದು ಎಂದು ಹೇಳಿದ್ದಾರೆ.

ಇದನ್ನೂ ಓದಿ: Divided Nation: ದೇಶ ವಿಭಜನೆ ಮಾತಿಗೆ ಉಲ್ಟಾ ಹೊಡೆದ ಡಿ.ಕೆ. ಸುರೇಶ್‌; ಹಾಗೆ ಹೇಳೇ ಇಲ್ಲವಂತೆ!

ಗೆಲ್ಲುವ ಅಭ್ಯರ್ಥಿಗಾಗಿ ಕಾಂಗ್ರೆಸ್‌ ಹುಡುಕಾಟ!

ಈ ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿಗಾಗಿ ಕಾಂಗ್ರೆಸ್‌ ಹುಡುಕಾಟ ನಡೆಸುತ್ತಿದೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದರಾಗಿ ಬಿಜೆಪಿಯಿಂದ ಅಣ್ಣಾ ಸಾಹೇಬ್‌ ಜೊಲ್ಲೆ ಇದ್ದಾರೆ. ಇವರಿಗೆ ಪ್ರತಿಸ್ಪರ್ಧಿಯಾಗಿ ಅಷ್ಟೇ ಪ್ರಬಲರಾಗಿರುವ ಹಾಗೂ ಆ ಭಾಗದಲ್ಲಿ ಜನಪ್ರಿಯತೆ ಹೊಂದಿರುವ ವ್ಯಕ್ತಿಯಾದರೆ ಗೆಲುವು ಸುಲಭವಾಗುತ್ತದೆ. ತೀವ್ರ ಪೈಪೋಟಿಯನ್ನೂ ನೀಡಬಹುದಾಗಿದ್ದು, ಗೆಲ್ಲುವ ಸಾಧ್ಯತೆಗಳೂ ಹೆಚ್ಚು ಇರಲಿದೆ. ಹೀಗಾಗಿ ಇಲ್ಲಿ ಈ ಹಿಂದೆ ಸ್ಪರ್ಧೆ ಮಾಡಿದ್ದ ಪ್ರಕಾಶ್‌ ಹುಕ್ಕೇರಿ ಅವರನ್ನು ಕಣಕ್ಕಿಳಿಸಿದರೆ ಹೇಗೆ ಎಂಬ ಚರ್ಚೆ ಒಂದು ಸುತ್ತು ನಡೆದಿದೆ ಎಂದು ಹೇಳಲಾಗಿದೆ. ಆದರೆ, ಈಗ ಪ್ರಕಾಶ್‌ ಹುಕ್ಕೇರಿ ಉಲ್ಟಾ ಹೊಡೆದಿದ್ದು, ತಾವು ಯಾವುದೇ ಕಾರಣಕ್ಕೂ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಚಿಕ್ಕೋಡಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದು ಸದ್ಯದ ಕುತೂಹಲವಾಗಿದೆ.

Exit mobile version