Site icon Vistara News

Caste Census Report : ನವೆಂಬರ್‌ನಲ್ಲಿ ಜಾತಿ ಗಣತಿ ವರದಿ ಸ್ವೀಕರಿಸುವೆನೆಂದ ಸಿದ್ದರಾಮಯ್ಯ; ಎಚ್‌ಡಿಕೆ ವಿರುದ್ಧ ವಾಗ್ದಾಳಿ

cm siddaramaiah

ಬೆಂಗಳೂರು: ಈ ದೇಶದಲ್ಲಿ ಮೊದಲು ಜಾತಿಗಣತಿ ಮಾಡಲು ಆದೇಶ ಮಾಡಿದ್ದು ನಮ್ಮ ಸರ್ಕಾರ. ನಾನೇ ಮೊದಲು ಆದೇಶವನ್ನು ಮಾಡಿ ವರದಿಯನ್ನು ನೀಡಲು ಹೇಳಿದ್ದೆ. ವರದಿ ಸಿದ್ಧವಾಗುವ ಹೊತ್ತಿಗೆ ರಾಜ್ಯದಲ್ಲಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಸಿಎಂ ಆಗಿದ್ದರು. ಆದರೆ, ಅವರು ವರದಿಯನ್ನು ಬಿಡುಗಡೆ ಮಾಡಲಿಲ್ಲ. ವರದಿಯನ್ನು ಬಿಡುಗಡೆ ಮಾಡಲು ತಯಾರಿ ನಡೆಸಿದ್ದ ಆಗಿನ ಸಚಿವ ಪುಟ್ಟರಂಗ ಶೆಟ್ಟಿ ಅವರನ್ನು ಸಂಪುಟದಿಂದ ಕೈಬಿಡುವುದಾಗಿ ಎಚ್‌ಡಿಕೆ ಹೆದರಿಸಿದ್ದರು. ಆದರೆ, ನಾನು ಈಗ ನವೆಂಬರ್‌ನಲ್ಲಿ ಜಾತಿ ಗಣತಿ ವರದಿಯನ್ನು (Caste Census Report) ಸ್ವೀಕಾರ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದರು.

ವಸಂತ ನಗರದ ದೇವರಾಜು ಅರಸು ಭವನದಲ್ಲಿ ಕಾಳಿದಾಸ ಹೆಲ್ತ್ ಆ್ಯಂಡ್ ಎಜುಕೇಶನ್ ಟ್ರಸ್ಟ್‌ನಿಂದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಸ್ಕಾಲರ್‌ಶಿಪ್ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮೇಲೆ ವಾಗ್ದಾಳಿ ನಡೆಸಿದರು. ಆಗ ವರದಿಯನ್ನು ಸಚಿವ ಪುಟ್ಟರಂಗ ಶೆಟ್ಟಿ ಅವರು ಸಂಪುಟ ಸಭೆಯಲ್ಲಿ ಮಂಡಿಸಲು ಮುಂದಾದಾಗ ಅವರನ್ನು ಕುಮಾರಸ್ವಾಮಿ ತಡೆದರು ಎಂದು ಆರೋಪಿಸಿದರು.

ಆಗ ಸಚಿವರಾಗಿದ್ದ ಪುಟ್ಟರಂಗ ಶೆಟ್ಟಿ ಅವರು ವರದಿ ಬಿಡುಗಡೆಗೆ ಎಲ್ಲ ತಯಾರಿಯನ್ನು ಮಾಡಿಕೊಂಡಿದ್ದರು. ಆದರೆ, ಅವರಿಗೆ ಕರೆ ಮಾಡಿದ ಆಗಿನ ಸಿಎಂ ಎಚ್‌.ಡಿ. ಕುಮಾರಸ್ವಾಮಿ, ವರದಿಯನ್ನು ಸಂಪುಟಕ್ಕೆ ತಂದರೆ ಸಚಿವ ಸ್ಥಾನದಿಂದ ತೆಗೆದು ಬಿಡುತ್ತೇನೆ ಎಂದು ಎಚ್ಚರಿಸಿದ್ದರು. ಹೀಗೆ ಪುಟ್ಟರಂಗ ಶೆಟ್ಟರನ್ನು ಅವರು ಹೆದರಿಸಿ ಬಿಟ್ಟರು ಎಂದು ಸಿಎಂ ಸಿದ್ದರಾಮಯ್ಯ ವಿವರಿಸಿದರು.

ಈಗ ಹಿಂದುಳಿದ ವರ್ಗಗಳ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ನವೆಂಬರ್‌ನಲ್ಲಿ ವರದಿ ನೀಡುವುದಾಗಿ ಹೇಳಿದ್ದಾರೆ. ನಾವು ಈಗ ಆ ವರದಿಯನ್ನು ಸ್ವೀಕಾರ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳುವ ಮೂಲಕ ಜಾತಿಗಣತಿ ವರದಿಯನ್ನು ಸ್ವೀಕಾರ ಮಾಡಿ ಬಿಡುಗಡೆ ಮಾಡುವುದಾಗಿ ಹೇಳಿದರು.

ಪ್ರಬಲ ಸಮುದಾಯಕ್ಕಾಗಿ ಜಾತಿ ಗಣತಿಗೆ ಸರ್ಜರಿ?

ಮುಂದಿನ ಲೋಕಸಭಾ ಚುನಾವಣೆಗೆ (Lok Sabha Election 2024) ತಂತ್ರ-ಪ್ರತಿತಂತ್ರಗಳನ್ನು ಹೆಣೆಯಲಾಗುತ್ತಿದೆ. ರಾಷ್ಟ್ರ ರಾಜಕೀಯದಲ್ಲಿ ಈ ಬಗ್ಗೆ ಬಿಜೆಪಿ ವರ್ಸಸ್‌ ಇಂಡಿಯಾ ಒಕ್ಕೂಟ ಎಂದು ಬಿಂಬಿತವಾಗಿರುವ ಈ ಹೊತ್ತಿನಲ್ಲಿ ಮಹಿಳಾ ಮೀಸಲಾತಿ (Womens Reservation) ಅಸ್ತ್ರವನ್ನು ಕಮಲ ಪಡೆ ಪ್ರಯೋಗ ಮಾಡಿದೆ. ಇದಕ್ಕೆ ಪ್ರತ್ಯಸ್ತ್ರವಾಗಿ “ಜಾತಿ ಗಣತಿ” ವರದಿಯನ್ನು (Caste Census Report) ಪ್ರಯೋಗಿಸಲು ಕಾಂಗ್ರೆಸ್‌ ಸೇರಿದಂತೆ ಇಂಡಿಯಾ ಒಕ್ಕೂಟ ಸದಸ್ಯ ರಾಜ್ಯಗಳು ಮುಂದಾಗಿವೆ. ಹೀಗಾಗಿ ಶೀಘ್ರದಲ್ಲಿಯೇ ಅಂದರೆ ಲೋಕಸಭಾ ಚುನಾವಣೆ ಒಳಗೆ ಈ ವರದಿ ಸ್ವೀಕಾರಕ್ಕೆ ಸೂಚನೆ ನೀಡಲಾಗಿದೆ. ಇದೀಗ ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ (State Congress Government) ಇಕ್ಕಟ್ಟು ತಂದಿಟ್ಟಿದೆ. ಒಂದು ವೇಳೆ ಈ ಜಾತಿ ಗಣತಿ ವರದಿ ಜಾರಿಯಾದರೆ ಕರ್ನಾಟಕದ ಮಟ್ಟಿಗೆ ಲೋಕಸಭಾ ಚುನಾವಣೆಯಲ್ಲಿ ಪೆಟ್ಟು ತಿನ್ನಬೇಕಾದೀತು ಎಂಬ ಭಯ ಕಾಡಿದೆ. ಪ್ರಬಲ ಸಮುದಾಯಗಳಾದ ಲಿಂಗಾಯತ ಹಾಗೂ ಒಕ್ಕಲಿಗರ (Lingayat and Vokkaliga communities) ವಿರೋಧವನ್ನು ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಆತಂಕದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ವರದಿ ಪರಿಷ್ಕರಣೆ ಮಾಡಿ ಬಿಡುಗಡೆ ಮಾಡಲು ಸೂಚನೆ ನೀಡಿದೆ. ಈ ಸೂಚನೆಯಲ್ಲಿಯೂ ಕೆಲವು ಪ್ರಶ್ನಾರ್ಥಕ ಚಿಹ್ನೆಯನ್ನು ಇಟ್ಟಿದೆ!

ಹೌದು. ಯಾವ ಯಾವ ಜಾತಿಯಲ್ಲಿ ಎಷ್ಟು ಜನರು ಇದ್ದಾರೆ? ಅವರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ (Social and Economic status) ಏನಿದೆ? ಹಿಂದುಳಿದ ವರ್ಗಗಳು (Backward Classes) ಎಲ್ಲೆಲ್ಲಿ, ಎಷ್ಟು ಜನರಿದ್ದಾರೆ? ಎಷ್ಟು ಜನರಿಗೆ ಉದ್ಯೋಗ ಸಿಕ್ಕಿದೆ? ಅವರ ಸಾಮಾಜಿಕ ಸ್ಥಿತಿಗತಿಗಳು ಏನು ಎಂಬುದನ್ನು ಅರಿತು ಅವರಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ಸಂಬಂಧ ಈ ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರ ಜಾತಿ ಗಣತಿ ವರದಿಯನ್ನು ಸಿದ್ಧ ಮಾಡಲು ಸೂಚಿಸಿತ್ತು. ಇದನ್ನು ಕಾಂತರಾಜು ನೇತೃತ್ವದ ಸಮಿತಿಯು ರಾಜ್ಯಾದ್ಯಂತ ಅಧ್ಯಯನ ನಡೆಸಿ ವರದಿಯನ್ನು ಸಿದ್ಧಪಡಿಸಿತ್ತು. ಆದರೆ, ವರದಿ ಸಲ್ಲಿಸುವ ವೇಳೆಗೆ ಸಿದ್ದರಾಮಯ್ಯ ಸರ್ಕಾರದ ಅವಧಿ ಪೂರ್ಣಗೊಂಡಿತ್ತು. ಮುಂದೆ ಬಂದ ಕುಮಾರಸ್ವಾಮಿ ನೇತೃತ್ವದ ಸರ್ಕಾರವಾಗಲೀ ಇಲ್ಲವೇ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವಾಗಲೀ ಈ ವರದಿ ಸ್ವೀಕಾರಕ್ಕೆ ಮನಸ್ಸು ಮಾಡಲಿಲ್ಲ. ಹಿಂದೇಟು ಹಾಕಿ ಅದನ್ನು ಹಾಗೇಯೇ ಇಟ್ಟರು.

ಈಗ ಮತ್ತೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿದ್ದರಿಂದ ಜಾತಿ ಗಣತಿ ಚರ್ಚೆಯು ಮುನ್ನೆಲೆಗೆ ಬಂದಿದೆ. ಅಲ್ಲದೆ, ಜಾತಿ ಗಣತಿ ವರದಿ ಸ್ವೀಕಾರಕ್ಕೆ ಒತ್ತಡಗಳೂ ಬಂದಿವೆ. ಇದರ ಹಿಂದೆ ಪ್ರಬಲ ಸಮುದಾಯಗಳಾದ ಲಿಂಗಾಯತ ಹಾಗೂ ಒಕ್ಕಲಿಗರ ವಿರೋಧಕ್ಕೆ ಗುರಿಯಾಗುವ ಆತಂಕದಲ್ಲಿ ಈಗ ಹಿಂದೇಟು ಹಾಕಲಾಗುತ್ತಿದೆ ಎನ್ನಲಾಗಿದೆ. ಇದಕ್ಕಾಗಿ ವರದಿಯನ್ನು ಪರಿಷ್ಕರಣೆ ಮಾಡಿ ಸಲ್ಲಿಸಲು ಸರ್ಕಾರ ಸೂಚನೆ ನೀಡಿದೆ.

ಈಗ ನೀಡಲಾಗಿರುವ ವರದಿಯಲ್ಲಿರುವ ಜಾತಿಗಳ ಅಂಕಿ-ಅಂಶಗಳನ್ನು ಬದಲಾವಣೆ ಮಾಡಲು ಸೂಚನೆ ನೀಡಿದೆ. ಈ ಮೂಲಕ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದವರ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳಲು ಈ ಪ್ಲ್ಯಾನ್‌ ಮಾಡಲಾಗಿದೆ ಎಂದು ಹೇಳಲಾಗಿದೆ. ಇಲ್ಲಿ ಕೇಂದ್ರ ಸರ್ಕಾರ ಮಂಡನೆ ಮಾಡಿರುವ ಮಹಿಳಾ ಮೀಸಲಾತಿಯಷ್ಟೇ ಪ್ರಭಾವಶಾಲಿಯಾಗಿ ಲೋಕಸಭಾ ಚುನಾವಣೆಯಲ್ಲಿ “ಜಾತಿ ಗಣತಿ” ಅಸ್ತ್ರವನ್ನು ಪ್ರಯೋಗಿಸಲು ಈ ಸಿದ್ಧತೆಗಳು ನಡೆಯುತ್ತಿವೆ.

ಆಗಲೇ ಸೋರಿಕೆಯಾಗಿದ್ದ ವರದಿ!

ಕಾಂತರಾಜು ಅವರು 2018ರಲ್ಲಿ ವರದಿಯನ್ನು ಸಿದ್ಧಪಡಿಸಿದ್ದರು. ಆ ಸಲ್ಲಿಕೆ ಮಾಡುವ ವೇಳೆ ಸರ್ಕಾರ ಬದಲಾಗಿತ್ತು. ಈ ವೇಳೆ ವರದಿಯ ಕೆಲವು ಅಂಶಗಳೂ ಸೋರಿಕೆಯಾಗಿದ್ದವು. ಆ ಸೋರಿಕೆಯಾಗಿದ್ದ ಅಂಶಗಳ ಪ್ರಕಾರ ರಾಜ್ಯದಲ್ಲಿ ಮುಸ್ಲಿಂ ಸಮುದಾಯದವರು ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳಲ್ಲಿ ದಲಿತ, ಲಿಂಗಾಯತ, ಕುರುಬ ಸಮುದಾಯದವರು ಬರುತ್ತಾರೆ. ಅದರ ನಂತರದಲ್ಲಿ ಒಕ್ಕಲಿಗ ಸಮುದಾಯದವರು ಬರುತ್ತಾರೆ. ಹೀಗಾಗಿ ಒಂದು ವೇಳೆ ಈ ವರದಿಯನ್ನು ಯಥಾವತ್ತಾಗಿ ಸ್ವೀಕಾರ ಮಾಡಿದರೆ ರಾಜಕೀಯವಾಗಿ ಹಾಗೂ ಇನ್ನಿತರ ಕ್ಷೇತ್ರದಲ್ಲಿ ಪ್ರಬಲವಾಗಿರುವ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯವರ ವಿರೋಧವನ್ನು ಕಟ್ಟಿಕೊಳ್ಳಬೇಕು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಎರಡೂ ಸಮುದಾಯ ಹೆಚ್ಚಿನ ಪಾಲು ಮಂದಿ ಕಾಂಗ್ರೆಸ್‌ ಬೆನ್ನಿಗೆ ನಿಂತಿದ್ದರಿಂದ ಸಂಪೂರ್ಣ ಬಹುಮತ ಬರಲು ಕಾರಣವಾಯಿತು. ಈಗ ಎದುರು ಹಾಕಿಕೊಂಡರೆ ಲೋಕಸಭೆಯಲ್ಲಿ ರಾಜ್ಯದಲ್ಲಿ ಟಾರ್ಗೆಟ್‌ 20 ಕ್ಷೇತ್ರಗಳನ್ನು ಗೆಲ್ಲುವ ಗುರಿ ಕಷ್ಟವಾಗುತ್ತದೆ ಎಂಬ ಆತಂಕವನ್ನು ಸಿಎಂ ಸಿದ್ದರಾಮಯ್ಯ (Cm Siddaramaiah) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ (Deputy CM DK Shivakumar) ಹೊಂದಿದ್ದಾರೆ. ಇದಕ್ಕಾಗಿಯೇ ವರದಿ ಪರಿಷ್ಕರಣೆ ಮಾಡಿ ನವೆಂಬರ್‌ನಲ್ಲಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: Labour Department : ಸಿಎಂ ಕಚೇರಿ – ಕಾರ್ಮಿಕ ಸಚಿವರ ವಾರ್;‌ ಅಧಿಕಾರಿಗಳ ವರ್ತನೆಗೆ ಅʼಸಂತೋಷʼ!

ಪರಿಷ್ಕರಣೆ ಆದರೆ ಯಾವ ವರದಿ?

ಒಂದು ವೇಳೆ ಮಾಹಿತಿಯನ್ನು ಸಂಗ್ರಹ ಮಾಡಲು ಹೋದರೆ ಮತ್ತೆ ಕನಿಷ್ಠ ಎಂದರೂ ಇನ್ನೆರಡು ವರ್ಷಗಳು ಬೇಕಾಗುತ್ತವೆ. ಅಲ್ಲದೆ, ರಾಜ್ಯಾದ್ಯಂತ ಓಡಾಡಿ ಮಾಹಿತಿ ಸಂಗ್ರಹಿಸಲು ಹಣಕಾಸು ಸೌಲಭ್ಯ ಬೇಕಾಗುತ್ತದೆ. ಆದರೆ, ಈ ಬಗ್ಗೆ ಸರ್ಕಾರ ಮೌನ ವಹಿಸಿದೆ. ಅಲ್ಲದೆ, ಈ ರಿಪೋರ್ಟ್ ಅಂಗೀಕಾರ ಮಾಡುವುದರಿಂದ ಆಗುವ ಸಾಧಕ – ಬಾಧಕಗಳ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಇನ್ನು ಹಾಗೂ ಹೀಗೂ ಏನೋ ಒಂದು ಅಧ್ಯಯನ ಮಾಡಿ ವರದಿಯನ್ನು ಪರಿಷ್ಕರಣೆ ಮಾಡಿದರೂ ಈ ವರದಿಗೆ ಏನೆಂದು ಕರೆಯುವುದು? ಕಾಂತರಾಜು ವರದಿ ಎಂದೋ? ಅಥವಾ ಜಯಪ್ರಕಾಶ್‌ ಹೆಗ್ಡೆ ವರದಿ ಎಂದೋ? ಇಲ್ಲವೇ ಕಾಂತರಾಜು – ಜಯಪ್ರಕಾಶ್‌ ಹೆಗ್ಡೆ ವರದಿ ಎಂದೋ? ಎಂಬ ಗೊಂದಲಗಳೂ ಈಗ ಕಾಡುತ್ತಿವೆ.

Exit mobile version