Site icon Vistara News

Caste Census Report : ಮೋದಿ ಅಸಮಾಧಾನದ ಮಧ್ಯೆ ರಾಜ್ಯದಲ್ಲಿ ಮಂಡನೆಯಾಗುತ್ತಾ ಜಾತಿಗಣತಿ ವರದಿ?

caste census repot image

ಬೆಂಗಳೂರು: ಕಾಂತರಾಜು ನೇತೃತ್ವದ ಸಮಿತಿಯಿಂದ (Committee headed by Kantharaju) 2018ರಲ್ಲಿ ಸಿದ್ಧವಾಗಿರುವ ಜಾತಿಗಣತಿ ವರದಿಯು (Caste Census Report) ರಾಜ್ಯದಲ್ಲಿ ಜಾರಿಯಾಗಲಿದೆಯೇ ಎಂಬ ಪ್ರಶ್ನೆ ಮೂಡಿದೆ. ಬಿಹಾರದಲ್ಲಿ ಈಗಾಗಲೇ ಜಾತಿಗಣತಿ ವರದಿಯನ್ನು ಅಂಗೀಕಾರ ಮಾಡಲಾಗಿದೆ. ಇದಕ್ಕೆ ವ್ಯಾಪಕ ಪರ-ವಿರೋಧ ಚರ್ಚೆಗಳು ಪ್ರಾರಂಭವಾಗಿವೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಸಹ ವರದಿ ಬಗ್ಗೆ ಆಕ್ಷೇಪಣೆಯನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ (Backward Classes Commission Chairman Jayaprakash Hegde) ಅವರು, ನವೆಂಬರ್‌ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ. ಈ ನಡುವೆ ಕಾಂಗ್ರೆಸ್‌ ಹಿರಿಯ ಮುಖಂಡರಿಂದಲೇ ವರದಿ ಅಂಗೀಕಾರಕ್ಕೆ ಒತ್ತಡಗಳು ಕೇಳಿಬಂದಿವೆ. ಆದರೆ, ಸಿಎಂ ಸಿದ್ದರಾಮಯ್ಯ (CM Siddaramaiah) ಇದರ ಬಗ್ಗೆ ಜಾಣ್ಮೆಯ ಉತ್ತರವನ್ನು ನೀಡಿದ್ದು, ಮೊದಲು ತಮ್ಮ ಬಳಿ ವರದಿ ಬರಲಿ ಎಂದು ಹೇಳಿದ್ದಾರೆ. ಹಾಗಾದರೆ, ಲೋಕಸಭೆ ಚುನಾವಣೆಗೆ ಮುನ್ನ ರಾಜ್ಯದಲ್ಲಿ ಮಂಡನೆಯಾಗಲಿದೆಯೇ? ಅಥವಾ ರಾಜ್ಯ ಸರ್ಕಾರ ಸಬೂಬು ಹೇಳುತ್ತಾ ಮುಂದೂಡಲಿದೆಯೇ ಎಂಬ ಕುತೂಹಲ ಮೂಡಿದೆ.

2018ರಲ್ಲಿ ಕಾಂತರಾಜು ನೇತೃತ್ವದ ಸಮಿತಿಯು ಜಾತಿ ಗಣತಿ ವರದಿಯನ್ನು ಸಿದ್ಧಪಡಿಸಿತ್ತು. 2019ರಲ್ಲಿ ಕಾಂಗ್ರೆಸ್‌ – ಜೆಡಿಎಸ್‌ ಮೈತ್ರಿ (Congress JDS alliance) ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಈ ವರದಿಯನ್ನು ಅಂಗೀಕರಿಸಲು ಒಪ್ಪಿರಲಿಲ್ಲ. ಅಂದು ಹಿಂದುಳಿದ ವರ್ಗಗಳ ಸಚಿವರಾಗಿದ್ದ ಪುಟ್ಟರಂಗಶೆಟ್ಟಿ ಅವರಿಗೆ ಕರೆ ಮಾಡಿದ್ದ ಕುಮಾರಸ್ವಾಮಿ, ಆ ವಿಷಯವನ್ನು ಕ್ಯಾಬಿನೆಟ್‌ಗೆ ಚರ್ಚೆಗೆ ತರದಂತೆ ಸೂಚಿಸಿದ್ದರು. ಹಾಗಾಗಿ ಆ ವರದಿ ಹಾಗೆಯೇ ಉಳಿಯಿತು. ನಂತರ ಬಂದ ಮುಖ್ಯಮಂತ್ರಿಗಳ್ಯಾರೂ ಸಹ ಈ ಜಾತಿಗಣತಿ ವರದಿಯನ್ನು ಪಡೆಯಲು ಮುಂದೆ ಬರಲಿಲ್ಲ. ಆದರೆ, ಈಗ ಬಿಹಾರದಲ್ಲಿ ಜಾತಿ ಗಣತಿ ವರದಿಯನ್ನು ಅಂಗೀಕಾರ ಮಾಡಿದ್ದರಿಂದ ರಾಜ್ಯದಲ್ಲಿ ಈ ಬಗ್ಗೆ ಕೂಗು ಹೆಚ್ಚಾಗಿದೆ. ಅದಕ್ಕಿಂತ ಮೊದಲೇ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರ ಅವಧಿ ಮುಗಿಯುವುದರೊಳಗೆ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಿಯೇ ಹೋಗುವುದಾಗಿ ಹೇಳಿದ್ದರು. ಈ ಮಧ್ಯೆ ವರದಿ ಮಂಡನೆಗೆ ಮೊದಲೇ ಸೋರಿಕೆ ಆಗಿದ್ದರಿಂದ ಮೇಲ್ವರ್ಗದ ಪ್ರಬಲ ಸಮುದಾಯವರು ಸೇರಿದಂತೆ ಹಲವರಿಂದ ಜಾತಿ ಮಂಡನೆಗೆ ವಿರೋಧ ವ್ಯಕ್ತವಾಗಿದೆ. ಅಲ್ಲದೆ, ಈ ವರದಿ ಈಗ ಮಂಡನೆಯಾದರೆ ಲೋಕಸಭಾ ಚುನಾವಣೆ ಮೇಲೆ ಸಾಕಷ್ಟು ಪ್ರಭಾವ ಬೀರಲಿದೆ ಎಂದು ಹೇಳಲಾಗುತ್ತಿದ್ದು, ಅದಕ್ಕಾಗಿಯೇ ಸರ್ಕಾರ ಹಿಂದೇಟು ಹಾಕುತ್ತಿದೆ ಎಂಬ ಚರ್ಚೆಗಳೂ ಹುಟ್ಟಿಕೊಂಡಿವೆ.

caste census repot image

ಇದನ್ನೂ ಓದಿ: Old Pension Scheme : ಸರ್ಕಾರಿ ನೌಕರರಿಗೆ Good News; ಶೀಘ್ರವೇ ಹಳೆ ಪಿಂಚಣಿ ವ್ಯವಸ್ಥೆ ಜಾರಿ ಎಂದ ಮಧು ಬಂಗಾರಪ್ಪ

ವರದಿ ಅಂಗೀಕಾರಕ್ಕೆ ಹಿಂದೇಟು ಏಕೆ?

ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಅಂಗೀಕರಿಸಲು ಹಿಂದೇಟು ಏಕೆ? ವಿಪಕ್ಷಗಳ ಅಸಮಾಧಾನ ಯಾಕೆ? ಎಂಬುದನ್ನು ನೋಡುವುದಾದರೆ ವರದಿಯಲ್ಲಿನ ಅಂಕಿ-ಅಂಶಗಳು ಮೂಲ ಕಾರಣವಾಗಿದೆ. ವರದಿ ಸಲ್ಲಿಕೆಗೆ ಮೊದಲೇ ಅಂಕಿ-ಅಂಶಗಳ ಸೋರಿಕೆ ಆಗಿವೆ. ಸಿದ್ದರಾಮಯ್ಯ ಅವರು ಈ ಹಿಂದೆ ಸಿಎಂ ಆಗಿದ್ದಾಗ ಸಮಿತಿ ರಚಿಸಿ ಜಾತಿ ಗಣತಿ ವರದಿಯನ್ನು ಸಿದ್ಧಪಡಿಸಲು ಆದೇಶಿಸಲಾಗಿತ್ತು.

2013ರಲ್ಲಿ ಅಹಿಂದ ಸರ್ಕಾರ ಎಂದೇ ಬಿಂಬಿತವಾಗಿತ್ತು. ಅಲ್ಲದೆ, ಕಾಂಗ್ರೆಸ್‌ಗೆ ಅನುಕೂಲ ಆಗುವ ರೀತಿ ರಿಪೋರ್ಟ್ ತಯಾರಾಗಿದೆ ಎನ್ನುವ ಆರೋಪವೂ ಕೇಳಿಬಂದಿತ್ತು. ಪ್ರಬಲ ಸಮುದಾಯದ ನಾಯಕರಿಂದ ಈ ಬಗ್ಗೆ ಆಕ್ಷೇಪ ಕೇಳಿಬಂದಿತ್ತು. ವರದಿ ಸಿದ್ಧವಾಗುತ್ತಿರುವ ಹೊತ್ತಿನಲ್ಲಿಯೇ ಅಂಕಿ – ಅಂಶಗಳ ಸೋರಿಕೆ ಆಗಿರುವುದೇ ರಾಜಕೀಯ ಪಕ್ಷಗಳಲ್ಲಿ ಆತಂಕಕ್ಕೆ ಕಾರಣವಾಗಿತ್ತು.

ವರದಿ ಏನು ಹೇಳುತ್ತದೆ?

ಮುಸ್ಲಿಂ ಸಮುದಾಯವೇ ರಾಜ್ಯದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಇದ್ದಾರೆ. ಎರಡನೇ ಸ್ಥಾನದಲ್ಲಿ ದಲಿತರು, ಮೂರನೇ ಸ್ಥಾನದಲ್ಲಿ ಲಿಂಗಾಯತರು, ನಾಲ್ಕನೇ ಸ್ಥಾನದಲ್ಲಿ ಕುರುಬರು ಹಾಗೂ ಐದನೇ ಸ್ಥಾನದಲ್ಲಿ ಒಕ್ಕಲಿಗರು ಇದ್ದಾರೆಂದು ಮಾಹಿತಿ ಹೇಳುತ್ತದೆ. ಇದರಲ್ಲಿ ಮೀಸಲಾತಿ ಪಡೆಯುತ್ತಿರುವ ಕೆಲ ಸಮುದಾಯಗಳು ಆರ್ಥಿಕವಾಗಿ ಪ್ರಬಲವಾಗಿದ್ದಾರೆಂಬುದನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಒಂದು ವೇಳೆ ಈ ರಿಪೋರ್ಟ್ ಅಂಗೀಕಾರವಾದರೆ ಮುಂದೆ ಸ್ಥಳೀಯ ಸಂಸ್ಥೆಗಳಲ್ಲಿ ಇದೇ ರಿಪೋರ್ಟ್ ಆಧರಿಸಿ ಮೀಸಲಾತಿ ವಿಂಗಡಣೆ ಮಾಡಲಾಗುತ್ತದೆ. ಇದರಿಂದ ಕೆಲ ಸಮುದಾಯಗಳಿಗೆ ಅನ್ಯಾಯವಾಗುತ್ತದೆ ಎಂಬುದು ಕೆಲವರ ವಾದವಾಗಿದೆ. ಹೀಗಾಗಿಯೇ ಇದೊಂದು ಅವೈಜ್ಞಾನಿಕ ವರದಿ ಎಂದು ವಿಪಕ್ಷಗಳ ನಾಯಕರು ಹೇಳುತ್ತಿದ್ದಾರೆ. ಜತೆಗೆ ಪ್ರಬಲ ಸಮುದಾಯಗಳ ಸ್ವಾಮೀಜಿಗಳಿಂದಲೂ ಈ ರಿಪೋರ್ಟ್‌ಗೆ ವಿರೋಧ ವ್ಯಕ್ತವಾಗಿದೆ.

ಪ್ರಧಾನಿ ಮೋದಿಯಿಂದಲೂ ಅಸಮಾಧಾನ

ಬಿಹಾರ ರಾಜ್ಯದಲ್ಲಿ ಆಗಿರುವ ಜಾತಿ ಗಣತಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅಸಮಾಧಾನವನ್ನು ಹೊರಹಾಕಿದ್ದಾರೆ. ಜಾತಿ ಗಣತಿಯಿಂದ ಅಲ್ಪಸಂಖ್ಯಾತರ ಹಕ್ಕು ಕಡಿಮೆ ಮಾಡಲು ಬಯಸುತ್ತಿದೆಯೇ? ನಿನ್ನೆಯಿಂದ ಕಾಂಗ್ರೆಸ್ ನಾಯಕರು ಜಿತ್ನಿ ಆಬಾದಿ ಉತ್ನಾ ಹಕ್ ಎಂದು ಹೇಳುತ್ತಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಏನು ಯೋಚಿಸುತ್ತಿರಬಹುದು? ಅವರು ಅಲ್ಪಸಂಖ್ಯಾತರು ಮೊದಲಿಗರು ಎಂದು ಹೇಳುತ್ತಿದ್ದರು. ದೇಶದ ಸಂಪನ್ಮೂಲಗಳ ಮೇಲೆ ಅವರಿಗೆ ಹಕ್ಕು ಎನ್ನುತ್ತಿದ್ದರು. ಆದರೆ, ಈಗ ಕಾಂಗ್ರೆಸ್ ಬೇರೆಯದ್ದೆ ಹೇಳುತ್ತಿದೆ. ದೇಶದ ಸಂಪನ್ಮೂಲಗಳಲ್ಲಿ ಯಾರಿಗೆ ಮೊದಲ ಹಕ್ಕು ಎಂದು ಸಮುದಾಯದ ಜನಸಂಖ್ಯೆ ನಿರ್ಧರಿಸುತ್ತದೆ ಎನ್ನುತ್ತಿದ್ದಾರೆ. ಹಾಗಾದರೆ ಕಾಂಗ್ರೆಸ್‌ನವರು ಅಲ್ಪಸಂಖ್ಯಾತರ ಹಕ್ಕುಗಳನ್ನು ಕಡಿಮೆ ಮಾಡಲು ಬಯಸುತ್ತಾರೆಯೇ? ಅಲ್ಪಸಂಖ್ಯಾತರನ್ನು ತೊಲಗಿಸಲು ಅವರು ಬಯಸುತ್ತಾರಾ? ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಹಿಂದುಗಳು ಮುಂದೆ ಬಂದು ಅವರ ಎಲ್ಲ ಹಕ್ಕುಗಳನ್ನು ತೆಗೆದುಕೊಳ್ಳಬೇಕೇ? ಇದನ್ನೆಲ್ಲ ಕೇಳಿಕೊಂಡು ಹಿರಿಯ ಕಾಂಗ್ರೆಸ್ ನಾಯಕರು ಸುಮ್ಮನೆ ಕುಳಿತಿದ್ದಾರೆ. ಇದನ್ನೆಲ್ಲಾ ನೋಡಿ ಮಾತನಾಡುವ ಧೈರ್ಯವೂ ಅವರಿಗಿಲ್ಲ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದರು.

ಜಾತಿಗಣತಿ ವರದಿ ಬಿಡುಗಡೆ ಆಗಲಿ: ಬಸವರಾಜ ರಾಯರೆಡ್ಡಿ

ಜಾತಿಗಣತಿ ವರದಿ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಬಸವರಾಜ ರಾಯರೆಡ್ಡಿ ವಿಸ್ತಾರ ನ್ಯೂಸ್ ಜತೆಗೆ ಮಾತನಾಡಿದ್ದು, ಈ ಹಿಂದೆ ಸಿದ್ದರಾಮಯ್ಯ ಅವರು ಇದ್ದ ಕಾಲದಲ್ಲಿ ಜಾತಿಗಣತಿ ಮಾಡಲು ಕಾಂತರಾಜ್ ನೇತೃತ್ವದಲ್ಲಿ ಆಯೋಗವನ್ನು ನೇಮಕ ಮಾಡಲಾಗಿತ್ತು. ಅವರು ಕೂಡ ರಿಪೋರ್ಟ್‌ ಸಲ್ಲಿಕೆ ಮಾಡಿದ್ದರು. ಆದರೆ, ಸೆಕ್ರೆಟರಿ ಸಹಿ ಮಾಡಿರಲಿಲ್ಲ ಎಂಬ ಕಾರಣಕ್ಕೆ ಅದು ಸ್ವೀಕಾರ ಆಗಿಲ್ಲ. ಅಷ್ಟರಲ್ಲಿ ಆ ಸರ್ಕಾರದ ಅವಧೊ ಕೂಡ ಮುಗಿದು ಹೋಯ್ತು ಮುಂದೆ ಬಂದ ಸರ್ಕಾರ ಕೂಡ ವರದಿ ಬಿಡುಗಡೆ ಮಾಡಲಿಲ್ಲ. ಈಗ ಜಾತಿಗಣತಿ ವರದಿಯನ್ನು ಸಿಎಂ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಬೇಕೆಂದು ಒತ್ತಾಯ ಮಾಡುತ್ತೇನೆ. ಶೋಷಣೆಗೆ ಒಳಗಾಗಿರುವ ಜನರು ಎಲ್ಲ ವರ್ಗದಲ್ಲೂ ಇದ್ದಾರೆ. ಅಂಥವರಿಗೆ ಸಹಾಯ ಆಗಬೇಕು. ಈ ಹಿನ್ನೆಲೆಯಲ್ಲಿ ವರದಿ ಬಿಡುಗಡೆ ಮಾಡಬೇಕು ಎಂದು ಹೇಳಿದ್ದಾರೆ.

ಜಾಣ್ಮೆಯ ಉತ್ತರ ಕೊಟ್ಟ ಸಿಎಂ ಸಿದ್ದರಾಮಯ್ಯ

ಜಾತಿಗಣತಿ ವರದಿ ಬಗ್ಗೆ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ನಮಗೆ ಮೊದಲು ವರದಿಯನ್ನು ಕೊಡಬೇಕಲ್ವಾ? ಶಾಶ್ವತ ಹಿಂದುಳಿದ ಆಯೋಗವು ಈ ಹಿಂದೆ ಎಚ್.ಡಿ. ಕುಮಾರಸ್ವಾಮಿ ಅವರು ಸಿಎಂ ಇದ್ದಾಗ ವರದಿಯನ್ನು ತಯಾರು ಮಾಡಿದ್ದರು. ಆದರೆ, ಅವರು ವರದಿಯನ್ನು ಸ್ವೀಕಾರ ಮಾಡಿರಲಿಲ್ಲ. ಈಗ ಅಧ್ಯಕ್ಷರ ಬದಲಾವಣೆ ಆಗಿದೆ. ಈಗ ಅಧ್ಯಕ್ಷರ ಬದಲಾವಣೆ ಆಗಿದೆ. ಇದರಲ್ಲಿ ಒಂದು ಡಿಫೆಕ್ಟ್ ಇದೆ. ಆಗ ಸೆಕ್ರೆಟರಿ ಸಹಿ ಮಾಡಲಿಲ್ಲ. ಈಗಿದ್ದ ಸೆಕ್ರೆಟರಿ ಬಳಿ ಸಹಿ ಮಾಡಿಸಿ ಕೊಡಬೇಕು. ಈಗ ಇರುವ ಅಧ್ಯಕ್ಷರು ಅದನ್ನು ತಂದು ಕೊಡಬೇಕು. ಅವರು ಬಿಜೆಪಿ ನೇಮಕ ಮಾಡಿರುವ ಅಧ್ಯಕ್ಷರು, ಈಸ್ ದಿಸ್ ಪಾಸಿಬಲ್?‌ ಎಂದು ಪ್ರಶ್ನೆ ಮಾಡಿದ್ದಾರೆ.

ನವೆಂಬರ್‌ನಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿ

ಬಿಹಾರದಲ್ಲಿ ಜಾತಿ ಗಣತಿ ವರದಿ ಬಿಡುಗಡೆಯಾದ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೊಂದು ಗಣತಿಯ ವರದಿ ಮಂಡನೆಗೆ ಹಿಂದುಳಿದ ಆಯೋಗದ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ ಸಿದ್ಧತೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ 2015ರಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಲಾಗಿತ್ತು. ಹಿಂದುಳಿದ ವರ್ಗಗಳ ಆಯೋಗದಿಂದ ಈ ಸಮೀಕ್ಷೆಯನ್ನು ನಡೆಸಲಾಗಿತ್ತು. ಈಗ ಈ ವರದಿಯನ್ನು ನವೆಂಬರ್‌ನಲ್ಲಿ ಸಲ್ಲಿಸಲು ಅವರು ಮುಂದಾಗಿದ್ದಾರೆ.

ಇದನ್ನೂ ಓದಿ: Kuruba Conference: ಬೆಳಗಾವಿಯಲ್ಲಿ ಬೃಹತ್‌ ಕುರುಬ ಸಮಾವೇಶದ ಮೂಲಕ ಸಿದ್ದರಾಮಯ್ಯ ಮತ್ತೊಮ್ಮೆ ಶಕ್ತಿ ಪ್ರದರ್ಶನ

ವಿಸ್ತಾರ ನ್ಯೂಸ್‌ಗೆ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಪ್ರತಿಕ್ರಿಯೆ ನೀಡಿದ್ದು, ನವೆಂಬರ್‌ನಲ್ಲೇ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡುತ್ತೇವೆ. ಈ ಹಿಂದೆ ಸಲ್ಲಿಕೆ ಮಾಡಿದ್ದಾಗ ಕೆಲವೊಂದಿಷ್ಟು ಬದಲಾವಣೆ ಮಾಡಬೇಕಿತ್ತು. ಹಿಂದಿನ ಸರ್ಕಾರದಲ್ಲಿ ಸಮಸ್ಯೆ ಇತ್ತು. ಈಗ ಅಂತಹ ಸಮಸ್ಯೆ ಕಂಡು ಬರುತ್ತಿಲ್ಲ. ಇದೇ ತಿಂಗಳಲ್ಲಿ ಸಮೀಕ್ಷೆ ವರದಿ ಸಲ್ಲಿಕೆ ಮಾಡುತ್ತೇವೆ. ವರದಿ ಸಲ್ಲಿಕೆಗೆ ಸರ್ಕಾರದಿಂದ ಅನುಮತಿ ಪಡೆಯುವ ಅವಶ್ಯಕತೆ ಇಲ್ಲ. ಇದು ಆಯೋಗದ ಜವಾಬ್ದಾರಿಯಾಗಿದೆ. ಹೀಗಾಗಿ ಸಲ್ಲಿಕೆ ಮಾಡುತ್ತೇವೆ ಎಂದು ಜಯಪ್ರಕಾಶ್‌ ಹೆಗ್ಡೆ ಹೇಳಿದ್ದಾರೆ.

ಟ್ವೀಟ್‌ ಮಾಡಿರುವ ಬಿ.ಕೆ. ಹರಿಪ್ರಸಾದ್

ಕಾಂತರಾಜ್ ವರದಿ ಜಾರಿ ಮಾಡಲು ಸರ್ಕಾರಕ್ಕೆ ‌ಒತ್ತಾಯ ಮಾಡಿರುವ ಬಿ.ಕೆ. ಹರಿಪ್ರಸಾದ್, ಹಿಂದುಳಿದ ವರ್ಗಗಳ ಜಾತಿ ವರದಿಯನ್ನು ಬಹಿರಂಗಪಡಿಸುವ ದಿಟ್ಟತನ ತೋರಬೇಕು ಎಂದು ಟ್ವೀಟ್ ಮಾಡಿ ಒತ್ತಡ ಹೇರಿದ್ದಾರೆ.

ಹರಿಪ್ರಸಾದ್‌ ಟ್ವೀಟ್‌ನಲ್ಲೇನಿದೆ?

“ಜಾತಿ ಗಣತಿ ಬಹಿರಂಗ ಪಡಿಸುವ ಕುರಿತು ಹಾಗೂ ಹಿಂದುಳಿದ ವರ್ಗಗಳಿಗೆ ಆಗಿರುವ ಅನ್ಯಾಯದ ವಿರುದ್ಧ ನಮ್ಮ ನಾಯಕರಾದ ರಾಹುಲ್‌ ಗಾಂಧಿ ಅವರು ಧ್ವನಿ ಎತ್ತಿದ್ದಾರೆ.

ಬಿಹಾರ ಸರ್ಕಾರದಂತೆ ಕರ್ನಾಟಕ ಸರ್ಕಾರವೂ ಕೂಡ ರಾಜ್ಯದಲ್ಲಿ ಈಗಾಗಲೇ ಸಿದ್ಧವಾಗಿರುವ ಹಿಂದುಳಿದ ವರ್ಗಗಳ ಜಾತಿ ವರದಿಯನ್ನು ಬಹಿರಂಗಪಡಿಸುವ ದಿಟ್ಟತನ ತೋರಬೇಕಿದೆ.

“ಇಂಡಿಯಾ” ಮೈತ್ರಿಕೂಟದ ಆಡಳಿತವಿರುವ ಬಿಹಾರ ರಾಜ್ಯದಲ್ಲಿ ಅಲ್ಲಿನ ಸರ್ಕಾರ ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡಿ ಐತಿಹಾಸಿಕ ನಡೆ ತೋರಿದ್ದು, ಅಭಿನಂದನೀಯ.

ಹಿಂದುಳಿದ, ಶೋಷಿತವೂ ಸೇರಿದಂತೆ ಎಲ್ಲ ವರ್ಗಗಳ ಉನ್ನತಿ ಹಾಗೂ ಅಭಿವೃದ್ಧಿಗೆ ಜಾತಿಗಣತಿ ವರದಿ ಸಹಾಯ ಮಾಡುತ್ತದೆ ಎಂಬ ವೈಜ್ಞಾನಿಕ ಧೋರಣೆ ಕಾಂಗ್ರೆಸ್ ಪಕ್ಷದ್ದಾಗಿದೆ” ಎಂದು ಬಿ.ಕೆ. ಹರಿಪ್ರಸಾದ್‌ ಟ್ವೀಟ್‌ ಮೂಲಕ ಹೇಳಿದ್ದಾರೆ.

ಬಿಹಾರ ಸಿಎಂಗೆ ನನ್ನ ಧನ್ಯವಾದ

ಈ ಬಗ್ಗೆ ನವದೆಹಲಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್, ಬಿಹಾರದಲ್ಲಿ ಜಾತಿ ಸಮೀಕ್ಷೆಯನ್ನು ಬಿಡುಗಡೆ ಮಾಡಲಾಗಿದೆ. ಅದಕ್ಕಾಗಿ ಅಲ್ಲಿನ ಸಿಎಂ ನಿತೀಶ್ ಕುಮಾರ್ ಮತ್ತು ಲಾಲೂ ಪ್ರಸಾದ್ ಯಾದವ್ ಅವರಿಗೆ ಧನ್ಯವಾದವನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ಜಾತಿಗಣತಿ ಮೂಲಕ ಜನರಿಗೆ ಹಕ್ಕು ಸಿಗಲಿದೆ. ರಾಹುಲ್ ಗಾಂಧಿ ಅವರದ್ದು ಜಾತಿ ಗಣತಿ ಆಗಬೇಕು ಎನ್ನುವ ಆಶಯ ಇತ್ತು. ಕರ್ನಾಟಕದಲ್ಲೂ ಸಮೀಕ್ಷೆ ಮಾಡಿದೆ. ಅದನ್ನು ಬಹಿರಂಗ ಮಾಡಬೇಕು. ತಪ್ಪು – ಒಪ್ಪುಗಳು ಏನೇ ಇರಬಹುದು. ಅನುಷ್ಠಾನಕ್ಕೆ ತರಲು ಸಾಧ್ಯವಾಗುತ್ತದೆಯೋ? ಇಲ್ಲವೋ? ಎಂಬುದು ಗೊತ್ತಿಲ್ಲ. ಸಾರ್ವಜನಿಕರ ಹಣ ಖರ್ಚು ಮಾಡಿದೆ. ಅದನ್ನು ಬಹಿರಂಗ ಮಾಡಬೇಕು. ಚರ್ಚೆಗೆ ಅವಕಾಶ ನೀಡಬೇಕು.

ರಾಜ್ಯದಲ್ಲಿ ಯಾವಾಗ ಬಿಡುಗಡೆ ಮಾಡುತ್ತಾರೆಯೋ ಅದನ್ನು ಸರ್ಕಾರ ಕೇಳಬೇಕು. ಪಕ್ಷದ ಸದಸ್ಯನಾಗಿ ಬಿಡುಗಡೆ ಮಾಡಬೇಕು ಎನ್ನುವುದು ನನ್ನ ಆಶಯ. ಯಾವುದೇ ಜಾತಿ ಒತ್ತಡ ಹೇರಲಿ, ಮೊದಲು ಬಿಡುಗಡೆ ಮಾಡಬೇಕು. ಆಮೇಲೆ ಯಾರಿಗಾದರೂ ಅನ್ಯಾಯವಾದರೆ ಸರಿ ಮಾಡಬಹುದು. ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದಿಂದ ಸಿಎಂ ಆಗಿದ್ದಾರೆ. ನಮ್ಮ ನಾಯಕ ರಾಹುಲ್ ಗಾಂಧಿ ಅವರೇ ಜಾತಿಗಣತಿ ಆಗಬೇಕು ಎಂದಿದ್ದಾರೆ. ಹೀಗಾಗಿ ನಾವು ಅವರ ಹೇಳಿಕೆಯನ್ನು ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Karnataka Politics : ಬಿಜೆಪಿಗೆ ಚಿಲುಮೆ ತಂದ ಸಂಕಟ! ರಾಜ್ಯ ಸರ್ಕಾರದಿಂದ ಮತ್ತೊಂದು ತನಿಖಾಸ್ತ್ರ

ಜಾತಿ ಗಣತಿಯನ್ನು ಬಿಡುಗಡೆ ಮಾಡಬೇಕು ಎಂಬ ನನ್ನ ಹೇಳಿಕೆಯಲ್ಲಿ ಸಿದ್ದರಾಮಯ್ಯ ಅವರನ್ನು ಪ್ರತ್ಯಕ್ಷ ಹಾಗೂ ಪರೋಕ್ಷ ಟಾರ್ಗೆಟ್ ಮಾಡುವುದು ಏನಿಲ್ಲ ಎಂದು ಬಿ.ಕೆ. ಹರಿಪ್ರಸಾದ್‌ ಹೇಳಿದ್ದಾರೆ.

Exit mobile version