ಬೆಂಗಳೂರು: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಕುರಿತು ತಾವು ಆಡಿರುವ ಮಾತಿಗೆ ಬದ್ಧನಾಗಿದ್ದೇನೆ ಎಂದಿರುವ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ, ಸಮಾಜವನ್ನು ಒಡೆಯುತ್ತಿರುವುದು ಬಿಜೆಪಿ ಎಂದಿದ್ದಾರೆ. ರಾಜ್ಯ ಜೆಡಿಎಸ್ ಕಚೇರಿ ಜೆ.ಪಿ. ಭವನದಲ್ಲಿ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಎಚ್.ಡಿ. ಕುಮಾರಸ್ವಾಮಿ ಮಾತನಾಡಿದರು.
ಕಳೆದ ಮೂರು ದಿನಗಳ ಹಿಂದೆ ಮಾಧ್ಯಮಗಳಿಗೆ ಕೊಟ್ಟ ಪ್ರತಿಕ್ರಿಯೆ ಬಗ್ಗೆ ಸಮಾಜದಲ್ಲಿ ಒಬ್ಬೊಬ್ಬರೂ ಅವರದೇ ಆದ ವಿಶ್ಲೇಷಣೆ ನೀಡುತ್ತಿದ್ದಾರೆ. ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ನಾನು ಜಾತಿ ಹೆಸರಲ್ಲಿ ರಾಜಕಾರಣ ಮಾಡಿಲ್ಲ. ಸಾರ್ವಜನಿಕರ ಅಹವಾಲು ಕೇಳುವಾಗ ನಿನ್ನ ಜಾತಿ ಯಾವುದು ಅಂತ ಕೇಳಿಲ್ಲ. ನಮ್ಮ ಕುಟುಂಬ ಮೊದಲಿನಿಂದಲೂ ನಾಡಿನ ಎಲ್ಲಾ ಸಮಾಜದ ಬಗ್ಗೆ ಗೌರವದಿಂದ ನಡೆದುದಕೊಂಡಿದ್ದೇವೆ.
ನನ್ನ ಹೇಳಿಕೆಗೆ ನಾನು ಬದ್ದವಾಗಿದ್ದೇನೆ. ನಾನು ಹೇಳಿದ ಹಿನ್ನೆಲೆಯನ್ನು ಸ್ಪಷನೆ ಕೊಟ್ಟಿದ್ದೇನೆ. ಬ್ರಾಹ್ಮಣ, ದಲಿತ ಯಾವುದೇ ಸಮಾಜಕ್ಕೆ ಅವಮಾನ ಮಾಡುವ ಹಿನ್ನೆಲೆಯಿಂದ ನಾನು ಬಂದಿಲ್ಲ. ಈ ದೇಶದಲ್ಲಿ ಯಾರು ಬೇಕಾದರೂ ಸಿಎಂ, ಶಾಸಕರು ಆಗಬಹುದು. ಯಾವ ಯಾವ ಹಿನ್ನೆಲೆಯಲ್ಲಿ ಎಂಪಿ, ಶಾಸಕರಿದ್ದಾರೆ ಅನ್ನೋದು ಗೊತ್ತಿದೆ. ಜನಾಭಿಪ್ರಾಯಕ್ಕೆ ನಾವು ತಲೆಬಾಗಲೇಬೇಕು. ಪ್ರಜಾಪ್ರಭುತ್ವ, ಸಂವಿಧಾನದ ಚೌಕಟ್ಟನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ.
ನಾನು ಕೆಲವೊಂದು ವೈಯಕ್ತಿಕ ಟೀಕೆ ಮಾಡಿದ್ದಾನೆ. ಯಾವುದೇ ಸಮಾಜಕ್ಕೆ ಟೀಕೆ ಮಾಡಿಲ್ಲ. ಗಾಂಧೀಜಿ, ಶಿವಾಜಿಯನ್ನು ಕೊಂದ ವರ್ಗ ಎಂದು ನಾನು ಹೇಳಿದ್ದು. ಬೆಳಗಾವಿ ಯಾವ ಪರಿಸ್ಥಿತಿಯಿದೆ ಅನ್ನೋದನ್ನ ನೋಡಿ ಹೇಳಿದ್ದು. ಯಾವುದೇ ಸಮಾಜಕ್ಕೆ ನೋವು ಉಂಟು ಮಾಡುವ ಉದ್ದೇಶವಿರಲಿಲ್ಲ. ನಾಡಿನ ಜನ ಎಚ್ಚರಿಕೆಯಿಂದ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಜಾಗೃತಿ ಮೂಡಿಸಲು ನೀಡಿದ ಹೇಳಿಕೆಯದು ಎಂದು ತಮ್ಮ ಹೇಳಿಕೆಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡರು. ಸಾವರ್ಕರ್, ಟಿಪ್ಪು ವಿಚಾರದಿಂದ ರಾಜ್ಯವು ಸಂಘರ್ಷದಿಂದ ಕೂಡಿದೆ. ಕುವೆಂಪು ಹೇಳಿದ ಸರ್ವಜನಾಂಗದ ಶಾಂತಿಯ ತೋಟ ಉಳಿಯಬೇಕು. ಬಿಜೆಪಿಯ ಘಟಾನುಘಟಿ ನಾಯಕರು ಹೇಳಿಕೆ ಕೊಟ್ಟಿದ್ದಾರೆ.
ಕಳೆದ ಮೂರು ವರ್ಷದಲ್ಲಿ ಬಿಜೆಪಿ ಬಂದ ಮೇಲೆ ನಡೆದ ಘಟನೆ ಗಮನಿಸಿ. ಕರ್ನಾಟಕಕ್ಕೂ ಗೋಡ್ಸೆ, ಸಾವರ್ಕರ್‌ಗೂ ಏನು ಸಂಬಂಧ? ಸುವರ್ಣ ವಿಧಾನಸೌಧದಲ್ಲಿಯೂ ಕೂಡ ಸಾವರ್ಕರ್ ಫೋಟೊ ಹಾಕಲಾಗಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಸಮಾಜವನ್ನು ಒಡೆಯೋಕೆ ಹೋಗ್ತಿದ್ದೀರಿ. ಮೀಸಲಾತಿ ವಿಚಾರದಲ್ಲಿ ಗೊಂದಲ ಸೃಷ್ಟಿ ಮಾಡಿದ್ದೀರ. ಮೂಗಿಗೆ ತುಪ್ಪ ಸವರದೇ, ತಲೆಗೆ ತುಪ್ಪ ಸವರಿದ್ದಾರೆ ಎಂದರು.
ಪ್ರಲ್ಹಾದ್ ಜೋಷಿಯವರು ಸಿಎಂ ಆಗಬಾರದು ಎಂದಿಲ್ಲ. ಆದ್ರೆ ಅವರ ಡಿಎನ್‌ಎ ಹಿನ್ನೆಲೆ ಏನು ಅಂತ ನಾನು ಹೇಳ್ತಿದ್ದೇನೆ. ಜಗದೀಶ್ ಶೆಟ್ಟರ್ ರನ್ನ ಮೋದಿ ಕಾರ್ಯಕ್ರಮದ ವೇದಿಕೆ ಮೇಲೆ ಕೂರಿಸಿಲ್ಲ. ಯಡಿಯೂರಪ್ಪ ಮೈತ್ರಿ ಸರ್ಕಾರ ತೆಗೆದು ಸಿಎಂ ಆದವರು. ಕಷ್ಟ ಪಟ್ಟು ಸಿಎಂ ಆದ ಬಿಎಸ್‌ವೈರನ್ನ ಯಾವ ರೀತಿ ನಡೆಸಿಕೊಂಡ್ರಿ. ಅವರನ್ನು ದೆಹಲಿ ಹೈಕಮಾಂಡ್, ಆರ್‌ಎಸ್‌ಎಸ್ ಯಾವ ರೀತಿ ನಡೆಸಿಕೊಂಡಿದ್ದಾರೆ ಗೊತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: Brahmin CM: ಪ್ರಲ್ಹಾದ ಜೋಶಿ ಸಿಎಂ ಸ್ಥಾನಕ್ಕೆ ಅರ್ಹ ಅಭ್ಯರ್ಥಿ: ಜಾತಿ ಆಧಾರದಲ್ಲಿ ಟೀಕೆ ಸರಿಯಲ್ಲ ಎಂದ ಬ್ರಾಹ್ಮಣ ಮಹಾಸಭಾ