ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM siddaramaiah) ಅವರ ಸರ್ಕಾರದಲ್ಲಿ ಮಗ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಹಸ್ತಕ್ಷೇಪ ಹೆಚ್ಚಾಗಿದ್ದು, ವರ್ಗಾವಣೆ ದಂಧೆ ನಡೆಯುತ್ತಿದೆ ಎಂಬ ಆರೋಪಕ್ಕೆ ಪೂರಕವಾಗಿ ವಿಡಿಯೊ ಸಾಕ್ಷಿಯೊಂದು ಲಭ್ಯವಾಗಿದೆ. ಇದರ ಬೆನ್ನಿಗೇ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ (HD Kumaraswamy) ಸುದ್ದಿಗೋಷ್ಠಿ ನಡೆಸಿ ಸಿಎಂ ವಿರುದ್ಧ ಹರಿಹಾಯ್ದಿದ್ದಾರೆ. ಮಾನ – ಮರ್ಯಾದೆ ಇದ್ದರೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ ಎಂದು ಆಗ್ರಹಿಸಿದ್ದಾರೆ.
ಈ ಸರ್ಕಾರ ಬಂದ ದಿನದಿಂದ ಭ್ರಷ್ಟಾಚಾರ ನಡೆಯುತ್ತಿದೆ ಎಂದು ನಾನು ಹೇಳುತ್ತಾ ಬಂದಿದ್ದೇನೆ. ಇಡೀ ಕ್ಯಾಬಿನೆಟ್ ಮತ್ತು ಸಣ್ಣಪುಟ್ಟ ನಾಯಕರು ಸಹ ನನ್ನ ವಿರುದ್ಧ ಮಾತನಾಡಿದ್ದರು. ಸಿಎಂ ಕಚೇರಿಯಲ್ಲಿ ಶಾಸಕರ ಬಳಿಯೇ 30 ಲಕ್ಷ ರೂಪಾಯಿಯನ್ನು ಬಹಿರಂಗವಾಗಿ ಕೇಳುತ್ತಿದ್ದಾರೆ ಎಂದೆ. ವೈಎಸ್‌ಟಿ ಮತ್ತು ಎಸ್ಎಸ್‌ಟಿ ಬಗ್ಗೆ ಹೇಳಿದೆ. ಆದರೆ, ಬಹಳ ಲಘುವಾಗಿ ಕಾಂಗ್ರೆಸ್ ನಾಯಕರು ಪ್ರತಿಕ್ರಿಯೆ ನೀಡಿದರು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.
ಆಗ ವಿಜಯೇಂದ್ರ ಮೇಲೆ ಆರೋಪ ಮಾಡಿದಿರಿ, ಈಗ ಏನ್ ಹೇಳ್ತೀರಿ?
ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಅವರ ಪುತ್ರ ವಿಜಯೇಂದ್ರ ಅವರದ್ದೇ ಅಧಿಕಾರ ಎಂದು ಆಗ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಒಂದು ಹೇಳಿಕೆಯನ್ನು ಕೊಟ್ಟರು. ವಿಜಯೇಂದ್ರ ಅವರದ್ದೇ ಎಲ್ಲ ಅಧಿಕಾರ ಎಂದು ಅವರು ಆರೋಪ ಮಾಡಿದ್ದರು. ಅವರು ವರ್ಗಾವಣೆ ದಂಧೆಯಲ್ಲಿ ತೊಡಿಗಿದ್ದಾರೆ ಎಂದು ಹೇಳಿದ್ದರು. ಈಗ ಏನು ಹೇಳುತ್ತಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.
ಇದಕಿಂತಲೂ ಇನ್ನೇನು ಸಾಕ್ಷಿ ಬೇಕು ಸಿದ್ದರಾಮಯ್ಯ ಅವರೇ? ಮಾನ ಮರ್ಯಾದೆ ಇದ್ದರೆ ಮೊದಲು ರಾಜೀನಾಮೆ ಕೊಡಿ. 99.999 ಪರಸೆಂಟ್‌ನಷ್ಟು ಎಚ್.ಡಿ. ಕುಮಾರಸ್ವಾಮಿ ಹೇಳೋದು ಸುಳ್ಳು. ಅವರ ಹೇಳಿಕೆಗೆ ಉತ್ತರ ಕೊಡಬೇಕಿಲ್ಲ ಎಂದು ಹೇಳಿದ್ದೀರಿ. ಇದಕ್ಕಿಂತಲೂ ನಿಮಗೆ ಏನು ಪ್ರೂಫ್ ಬೇಕು ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.
45 ಕೋಟಿ ರೂಪಾಯಿ ಎಲ್ಲಿಂದ ಬಂತು? ವರ್ಗಾವಣೆಯಿಂದ ಮಾಡಿದ ಹಣ ಅಲ್ಲವೇ? ಯತೀಂದ್ರ ಸಭೆ ಮಾಡುತ್ತಿರಬೇಕಾದರೆ ಕರೆ ಮಾಡಿದ್ದು ಯಾರು? ಯಾರನ್ನು ಅಪ್ಪ ಅಂದು ಕರೆದರು. ವಿವೇಕಾನಂದ ಯಾರು? ಫೋನ್ ಕೊಡು ಮಹಾದೇವ್‌ಗೆ ಎಂದು ಹೇಳಿದ್ದು ಯಾರು? ನಾಲ್ಕೈದು ಲಿಸ್ಟ್ ಅಂದರೆ ಅದು ಯಾವ ಲಿಸ್ಟ್? ಆಶ್ರಯ ಮನೆಗಳ ಲಿಸ್ಟಾ? ಇವರು ಸೂಪರ್ ಸಿಎಂ ಅಂತ ಹೇಳ್ತೀರಾ ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.
ಮಹದೇವನನ್ನು ಯಾವ ಕೆಲಸಕ್ಕೆ ಇಟ್ಟುಕೊಂಡಿದ್ದೀರಿ?
ಸಬ್ ರಿಜಿಸ್ಟ್ರಾರ್ ಅನ್ನು ಕಾನೂನಿಗೆ ವಿರುದ್ಧವಾಗಿ ನಿಮ್ಮ ಕಚೇರಿಗೆ ಹಾಕಿಸಿಕೊಂಡಿದ್ದೀರಿ. ನಾವೆಲ್ಲ ಸುಳ್ಳುಗಾರರು. ನೀವು ಪ್ರಮಾಣಿಕರಲ್ಲವೇ? ಅದಕ್ಕೆ ನಿಮಗೆ ಹೇಳುತ್ತಿದ್ದೇವೆ. ಆರ್. ಮಹದೇವನನ್ನು ವಿಶೇಷ ಕರ್ತವ್ಯ ಅಧಿಕಾರಿಯಾಗಿ ನೇಮಿಸಿಕೊಂಡಿದ್ದೀರಿ. ಯಾವ ಕೆಲಸಕ್ಕೆ ಇಟ್ಟುಕೊಂಡಿದ್ದೀರಿ. ನಾನು ಹೇಳಿದ್ದು ಮಾತ್ರ ಆಗಬೇಕು ಅಂತ ಹೇಳಿದಿರಿ. ಹಾಗಾದರೆ ಯಾವ ಲಿಸ್ಟ್ ಅದು? ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.
ಮಾನ – ಮರ್ಯಾದೆ ಇದೆಯಾ ನಿಮಗೆ ಅಂತ ವಿಪಕ್ಷದಲ್ಲಿ ಇದ್ದು ಕೇಳುತ್ತಿದ್ದಿರಿ. ಈಗ ನಿಮಗೆ ಒಬ್ಬರಿಗೆ ಮಾನ ಮರ್ಯಾದೆ ಇರೋದು? ನಾಲ್ಕು ಗೋಡೆ ಮಧ್ಯೆ ಏನು ನಡೆಯುತ್ತಿದೆ. ಅಧಿಕಾರ ಕೊಟ್ಟಿರುವುದು ಲೂಟಿ ಮಾಡಿ ಅಂತ ಅಲ್ಲ. ಮರ್ಯಾದೆ ಬೀದಿ ಬೀದಿಯಲ್ಲಿ ಹರಾಜು ಆಗುತ್ತಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.
ಈಗ ಸಿದ್ದರಾಮಯ್ಯ ಸರ್ಕಾರದ ಪೋಸ್ಟರ್ ಸಹ ಹಾಕಲಿ
ದೀಪಾವಳಿ ಹಬ್ಬದ ಬಳಿಕ ಮಾಧ್ಯಮಗಳಿಗೆ ದಿನಕೊಂದು ಸುದ್ದಿ ಸಿಗುತ್ತಿದೆ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ವಿದ್ಯುತ್ ಕದ್ದಿದ್ದಾರೆ ಎಂದು ಕಾಂಗ್ರೆಸ್‌ನವರು ಆರೋಪ ಮಾಡಿದರು. ಅದರ ಹೊಣೆಯನ್ನು ನಾನು ತೆಗೆದುಕೊಳ್ಳುತ್ತೇನೆಂದು ಬಹಿರಂಗವಾಗಿ ಹೇಳಿದ್ದೇನೆ. ಆದರೂ ನಮ್ಮ ಕಚೇರಿ ಕಾಂಪೌಂಡ್‌ಗೆ ಪೋಸ್ಟರ್ ಹಾಕಿದರು. ಇದೊಂದು ಚಾಳಿ ಶುರು ಮಾಡಿಕೊಂಡಿದ್ದಾರೆ. ತೆಲಂಗಾಣದಲ್ಲೂ ಪೋಸ್ಟರ್ ಹಾಕಿ ಬಂದರು. ಈಗ ಚುನಾವಣೆಗೆ ಸೂಟ್‌ಕೇಸ್ ತಗೊಂಡು ಹೋಗುತ್ತಿದ್ದಾರೆ. ಈಗ ಸಿದ್ದರಾಮಯ್ಯ ಸರ್ಕಾರದ ಪೋಸ್ಟರ್ ಸಹ ಹಾಕಲಿ ಎಂದು ಎಚ್.ಡಿ. ಕುಮಾರಸ್ವಾಮಿ ಸವಾಲು ಹಾಕಿದರು.
ಇದನ್ನೂ ಓದಿ: Karnataka Live News : ಯತೀಂದ್ರ ವರ್ಗಾವಣೆ ದಂಧೆ; ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ಪಟ್ಟು
ಏನಿದು ಪ್ರಕರಣ?
ಮೈಸೂರು ತಾಲೂಕಿನ ಕೀಳನಪುರ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿದ್ದ ವೇಳೆ ಸಿದ್ದರಾಮಯ್ಯ ಅವರಿಂದ ಬಂದ ಫೋನ್ ಕರೆಗೆ ಉತ್ತರಿಸುವ ವೇಳೆ ಯತೀಂದ್ರ ಸಿದ್ದರಾಮಯ್ಯ ಎಡವಟ್ಟು ಮಾಡಿಕೊಂಡಿದ್ದಾರೆ. ಸಾರ್ವಜನಿಕರ ಮುಂದೆಯೇ ತಾನು ನೀಡಿದ ಲಿಸ್ಟ್ ಬಗ್ಗೆ ಅವರು ತಂದೆಯ ಜತೆ ಮಾತುಕತೆ ನಡೆಸಿದ್ದರು. ಫೋನ್ ಮಾಡಿ ಮಾತನಾಡಿದ ಯತೀಂದ್ರ, ತಾನು ನೀಡಿದ ಲಿಸ್ಟ್ ಬಗ್ಗೆ ಮಾತನಾಡಿದ್ದಾರೆ. ಸಿದ್ದರಾಮಯ್ಯ ಅವರು ವಿವೇಕಾನಂದರ ಹೆಸರು ಎತ್ತಿದ್ದು, ಇದಕ್ಕೆ ಯಾರು ಎಂದು ಯತೀಂದ್ರ ಅವರು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಬೇರೊಂದು ಲಿಸ್ಟ್ ನೀಡಿದ ಬಗ್ಗೆ ಅಸಮಾಧಾನಗೊಂಡ ಯತೀಂದ್ರ, ನಾನು ಕೊಟ್ಟಿರುವುದೇ ಐದು ಅಂತ ಹೇಳಿ ಮಹದೇವರಿಗೆ ಫೋನ್ ನೀಡುವಂತೆ ಸಿದ್ದರಾಮಯ್ಯಗೆ ಸೂಚಿಸಿದ್ದರು. ಬಳಿಕ ಮಹದೇವ್ ಜೊತೆ ಮಾತನಾಡಿದ ಯತೀಂದ್ರ, ʼಮಹದೇವ್ ಯಾಕೆ ಯಾವ್ದ್ಯಾವುದು ಕೊಡ್ತಾ ಇದ್ದೀರಿ? ಮತ್ತೆ ಇದೆಲ್ಲ ಯಾರು ಕೊಡ್ತಿರೋದುʼ ಅಂತ ಪ್ರಶ್ನೆ ಮಾಡಿದ್ದಾರೆ. ʼಅದೆಲ್ಲ ಬೇಡ. ನಾನು ಯಾವುದು ನಾಲ್ಕೈದು ಕೊಟ್ಟಿದ್ದೇನೋ ಅಷ್ಟೇ ಮಾತ್ರ ಮಾಡಿʼ ಅಂತ ಯತೀಂದ್ರ ಅವರು ಮಹದೇವರಿಗೆ ಸೂಚಿಸಿದ್ದಾರೆ. ಈ ವಿಡಿಯೊ ಈಗ ಪ್ರತಿಪಕ್ಷಗಳಿಗೆ ದೊಡ್ಡ ಅಸ್ತ್ರವಾಗಿದೆ.