ಬೆಂಗಳೂರು: ಜನಸಂಪರ್ಕ ಸಭೆಯಲ್ಲಿದ್ದ ವೇಳೆ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಅವರು ಅಧಿಕಾರಿಗಳ ವರ್ಗಾವಣೆ ಪಟ್ಟಿ ವಿಚಾರ ಚರ್ಚೆ ಮಾಡಿದ್ದಾರೆ ಎಂಬ ವರದಿಗಳನ್ನು ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಅಲ್ಲಗಳೆದಿದ್ದಾರೆ. ಯತೀಂದ್ರ ತನ್ನ ಜತೆ ಮಾತನಾಡಿದ್ದು ವರ್ಗಾವಣೆ (Transfer scam) ಬಗ್ಗೆ ಅಲ್ಲ, ಸಿಎಸ್‌ಆರ್ ಫಂಡ್ (CSR Fund) ಬಗ್ಗೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನ ಕಾವೇರಿ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರ ನೀಡಿದ ಅವರು, ಯತೀಂದ್ರ ವರ್ಗಾವಣೆ ಬಗ್ಗೆ ಮಾತಾಡಿಲ್ಲ. ಸಿಎಸ್‌ಆರ್ ಫಂಡ್ ಬಗ್ಗೆ ಮಾತಾಡಿರೋದು ಎಂದು ಹೇಳಿದರು.
ಯತೀಂದ್ರ ಸಿದ್ದರಾಮಯ್ಯ ಅವರು ಐದು ಹೆಸರಿನ ಪಟ್ಟಿ ಕೊಟ್ಟಿದ್ದಾರಂತೆ ಎಂದು ಕೇಳಿದಾಗ, ಐದು ಹೆಸ್ರು ಅಂದ್ರೆ ವರ್ಗ ಏನಯ್ಯ? ಅದು ಸಿಎಸ್‌ಆರ್ ಲಿಸ್ಟ್, ಶಾಲೆ ಕಟ್ಟಡಗಳನ್ನು ಸಿಎಸ್‌ಆರ್ ಫಂಡ್ ನಿಂದ ರಿಪೇರಿ ಮಾಡಿಸಲಾಗುತ್ತಿದೆ. ಅದರ ಬಗ್ಗೆ ಯತೀಂದ್ರ ಹೇಳಿರುವುದು ಎಂದು ಹೇಳಿದರು.
ನನ್ನ ರಾಜಕೀಯ ಜೀವನದಲ್ಲಿ ವರ್ಗಾವಣೆ ದಂಧೆ ಮಾಡಿಲ್ಲ. ವರ್ಗಾವಣೆ ದಂಧೆ ಮಾಡಿದ್ದೇ ಹೌದಾದರೆ ರಾಜಕೀಯದಿಂದ ನಿವೃತ್ತಿ ಆಗುತ್ತೇನೆ ಎಂದು ಸವಾಲು ಹಾಕಿದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವೈಎಸ್‌ಟಿ ಟ್ಯಾಕ್ಸ್ ಮತ್ತು ಅದಕ್ಕೆ ಪುರಾವೆ ಸಿಕ್ಕಿದೆ ಎಂಬ ಆರೋಪದ ಬಗ್ಗೆ ಮಾತನಾಡಿದ ಅವರು, ಕುಮಾರಸ್ವಾಮಿ ರಾಜಕೀಯಕ್ಕೆ ಆರೋಪ ಮಾಡ್ತಾರೆ ಎಂದರು.
ಮೈಸೂರಿನಲ್ಲಿ ನಡೆದ ಜನಸಂಪರ್ಕ ಸಭೆ ವೇಳೆ ಸಿದ್ದರಾಮಯ್ಯ ಅವರು ಯತೀಂದ್ರ ಅವರಿಗೆ ಕರೆ ಮಾಡಿದ್ದರು. ಈ ವೇಳೆ ಪ್ರತ್ಯುತ್ತರ ನೀಡುವಾಗ ಒಂದು ಲಿಸ್ಟ್ ಬಗ್ಗೆ ಚರ್ಚೆಯಾಗಿತ್ತು. ಸಿಎಂ ಅವರ ವಿಶೇಷ ಅಧಿಕಾರಿಯಾಗಿರುವ ಮಹದೇವ್ ಅವರು ಪಟ್ಟಿಯಲ್ಲಿ ವಿವೇಕಾನಂದ ಎಂಬವರ ಹೆಸರನ್ನು ಹೆಚ್ಚುವರಿಯಾಗಿ ಸೇರಿಸಿದ್ದಾರೆ ಎಂಬ ಚರ್ಚೆಯ ಮೂಲಕ ಇದು ವರ್ಗಾವಣೆ ದಂಧೆಯ ಪಟ್ಟಿ ಎಂಬಂತೆ ಸುದ್ದಿಗಳು ಹರಿದಾಡಿದ್ದವು. ಈ ವಿಚಾರದಲ್ಲಿ ಕಾವೇರಿ ನಿವಾಸದಲ್ಲೇ ಇದ್ದ ಯತೀಂದ್ರ ಅವರನ್ನು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದರು.
ಯತೀಂದ್ರ ಬೆಂಬಲಕ್ಕೆ ನಿಂತ ಡಿ.ಕೆ. ಶಿವಕುಮಾರ್
ಈ ನಡುವೆ, ಕಾವೇರಿ ನಿವಾಸಕ್ಕೆ ಆಗಮಿಸಿ ಸಿಎಂ ಸಿದ್ದರಾಮಯ್ಯ ಅವರ ಜತೆ ಚರ್ಚೆ ಮಾಡಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಅವರು, ಕೊನೆಗೆ ಯತೀಂದ್ರ ಸಿದ್ದರಾಮಯ್ಯ ಪರವಾಗಿ ಬ್ಯಾಟಿಂಗ್ ಮಾಡಿದರು.
ʻʻಯತೀಂದ್ರ ಅವರು ಕೆಡಿಪಿ ಸದ್ಯಸರಿದ್ದಾರೆ, ಆಶ್ರಯ ಸಮಿತಿ ಅಧ್ಯಕ್ಷರಾಗಿದ್ದಾರೆ. ತಂದೆಯವರು ಸಿಎಂ ಆಗಿರುವುದರಿಂದ ಅವರ ಪರವಾಗಿ ಜನ ಸಂಪರ್ಕ ಸಭೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸ್ಕೂಲ್ ವಿಚಾರವಾಗಿ ಮಾತನಾಡಿದ್ದಾರೆ. ಇದನ್ನು ವರ್ಗಾವಣೆ ದಂಧೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಯಾವ ವರ್ಗಾವಣೆಯೂ ಇಲ್ಲʼʼ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಶಾಸಕರಿಗೆ ಫಲಾನುಭವಿಗಳನ್ನು ಆಯ್ಕೆ ಮಾಡುವ ಅವಕಾಶ ಇರುತ್ತದೆ. ಇವರು ಒಂದು ಪಟ್ಟಿ ಕೊಟ್ಟಿದ್ದಾರೆ. ಅದನ್ನು ಬದಲಾಯಿಸಿರುವ ಬಗ್ಗೆ ಮಾಹಿತಿ ತಿಳಿದಾಗ ಬದಲಾಯಿಸಬೇಡಿ ಎಂದು ಹೇಳಿದ್ದಾರೆ. ಇದರಲ್ಲಿ ಲಂಚ ಎಲ್ಲಿ ಕೇಳಿದ್ದಾರೆ, ವರ್ಗಾವಣೆ ದಂಧೆ ಎಲ್ಲಿದೆ. ಸುಮ್ಮನೆ ಪ್ರಚಾರಕ್ಕಾಗಿ ಏನೇನೋ ಹೇಳುತ್ತಿದ್ದಾರೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು.
ಕುಮಾರಸ್ವಾಮಿ ಅವರು ತುಂಬಾ ಹತಾಶರಾಗಿದ್ದಾರೆ. ಕುಮಾರಸ್ವಾಮಿ ಅವರಿಗೆ ದಂಧೆ ನಡೆಸಿ ಅನುಭವ ಇದೆ. ಹಾಗಾಗಿ ಹಾಗೆಲ್ಲ ಟ್ವೀಟ್ ಮಾಡಿದ್ದಾರೆ, ಮಾಡಲಿ ಬಿಡಿ ಎಂದು ಹೇಳಿದರು ಡಿ.ಕೆ. ಶಿವಕುಮಾರ್.
ನಾನು ಬೆಳಗ್ಗೆ ಜಿಮ್ ಮಾಡ್ತಾ ಇರುವಾಗ ವಿಡಿಯೋ ನೋಡಿದೆ. ಯತೀಂದ್ರ ಎಲ್ಲಿ ವರ್ಗಾವಣೆ ಬಗ್ಗೆ ಮಾತಾಡಿದ್ದಾರೆ ಹೇಳಿ ಎಂದು ಹೇಳಿದರು ಡಿ.ಕೆ.ಶಿವಕುಮಾರ್. ʻʻಅದು ಹೋಗ್ಲಿ.. ಒಬ್ಬ ಮಾಜಿ ಶಾಸಕ ನಾಲ್ಕೈದು ಜನರ ವರ್ಗಾವಣೆ ಕೇಳಿದ್ರೆ ಏನ್ ತಪ್ಪು..?ʼʼ ಎಂದು ಅವರು ಪ್ರಶ್ನಿಸಿದರು.
ʻʻಯತೀಂದ್ರ ಆಶ್ರಯ ಸಮಿತಿ ಅಧ್ಯಕ್ಷರಾಗಿದ್ದಾರೆ, ಜನ ಸಂಪರ್ಕ ಸಭೆ ನಡೆಸಿದ್ದಾರೆ. ಸಿಎಸ್ ಆರ್ ಫಂಡ್ ವಿಚಾರವಾಗಿ ಮಾತನಾಡಿದ್ದಾರೆ. ಸ್ಕೂಲ್ ಗಳ ವಿಚಾರವಾಗಿ ಮಾತನಾಡಿದ್ದಾರೆ. ಎಲ್ಲಿ ಅಧಿಕಾರಿಗಳ ವರ್ಗಾವಣೆ ಬಗ್ಗೆ ಮಾತನಾಡಿದ್ದಾರೆ ಯತೀಂದ್ರʼʼ ಎಂದು ಕೇಳಿದ ಅವರು, ಅವರ ಬಗ್ಗೆ ಮಾತಾಡಿ ಯತೀಂದ್ರ ಅವರನ್ನು ದೊಡ್ಡವರನ್ನಾಗಿ ಮಾಡುತ್ತಿದ್ದಾರೆ, ನಮ್ಮ ಹುಡುಗ ಲೀಡರ್ ಆಗ್ಲಿ ಬಿಡಿ ಎಂದರು.
ʻʻಸಿಎಂಗೆ ನಲವತ್ತು ವರ್ಷಗಳ ರಾಜಕಾರಣದ ಅನುಭವವಿದೆ. ಬಿಜೆಪಿ- ದಳದವರ ಮಾತು ಕೇಳಬೇಕು ಎಂದಿಲ್ಲ. ಪ್ರತಿಪಕ್ಷದವರು ಹತಾಶರಾಗಿದ್ದಾರೆ, ಏನಾದರೂ ಮಾಡಿ ಗಮನ ಬೇರೆ ಕಡೆ ಸೆಳೆಯಬೇಕುʼʼ ಎಂದು ಹೇಳಿದರು ಡಿ.ಕೆ. ಶಿವಕುಮಾರ್.
ಇದನ್ನೂ ಓದಿ: Yathindra Siddaramaiah : ಯತೀಂದ್ರ ಸಿದ್ದರಾಮಯ್ಯ ಲಿಸ್ಟ್ ತಿದ್ದಿದ ಮಹದೇವ್ ಯಾರು!?
ʻʻನನ್ನ ಕ್ಷೇತ್ರದಲ್ಲಿ ನಾನು ಹೋಗಲ್ಲ ಆಗಲ್ಲ.. ನನ್ನ ಸಹೋದರ ಅಟೆಂಡ್ ಮಾಡ್ತಾರೆ. ಸ್ಥಳೀಯರು ಮನೆ ಬೇಕು ಅಂತ ಕೇಳ್ತಾರೆ… ನಾನು ಸಹಿ ಹಾಕಿ ನೋಡಿ ಲಿಸ್ಟ್ ಮಾಡಿ ಕಳಿಸುತ್ತೇನೆ. ಒಬ್ಬ ಮಾಜಿ ಶಾಸಕರಾಗಿ ಅವರ ಕ್ಷೇತ್ರದಲ್ಲಿ ನಾಲ್ಕು ಜನ ಅಧಿಕಾರಿಗಳು ಬೇಕು ಎಂದು ಕೇಳುವುದರಲ್ಲಿ ತಪ್ಪೇನಿದೆ?ʼʼ ಎಂದು ಅವರು ಪ್ರಶ್ನಿಸಿದರು.
ಕುಮಾರಸ್ವಾಮಿ ಅವರು ಅದೇ ಧ್ಯಾನದಲ್ಲಿದ್ದಾರೆ. ಅವರ ಅನುಭವ, ಅವರ ಆಚಾರ, ವಿಚಾರದಲ್ಲಿ ಅವರಿದ್ದಾರೆ ಎಂದು ಹೇಳಿದರು.